Shani Pradosh: ಆಗಸ್ಟ್ 31ಕ್ಕೆ ವಿಶೇಷ ಶನಿ ಪ್ರದೋಷ; ಶ್ರಾವಣ ಮಾಸದ ಈ ದಿನ ಪೂಜೆಯಿಂದ ಸಿಗುವ ಶುಭಫಲಗಳನ್ನು ತಿಳಿಯಿರಿ
ಶ್ರಾವಣ ಮಾಸದ ಕಡೆಯ ಶನಿವಾರವೇ ಶನಿ ಪ್ರದೋಷ ಕೂಡ ಇದೆ. ಈ ವಿಶೇಷ ದಿನದಂದು ಈಶ್ವರಿಗೆ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ. ಈ ದಿನ ಶಿವನ ಭಕ್ತರಿಗೆ ಇರುವ ಪ್ರಯೋಜನಗಳನ್ನು ತಿಳಿಯಿರಿ.
ಶ್ರಾವಣ ಮಾಸದಲ್ಲಿನ ಶನಿ ಪ್ರದೋಷ (Shani Pradosha) ತುಂಬಾ ವಿಶೇಷ ಎಂದು ಕೆಲ ಶಾಸ್ತ್ರಗಳು ಹೇಳುತ್ತವೆ. ಆಗಸ್ಟ್ ತಿಂಗಳ 31 ರಂದು ಪ್ರದೋಷವಿದೆ. ಅಂದು ಶ್ರಾವಣ ಮಾಸದ ಕಡೆಯ ಶನಿವಾರ. ಪ್ರಮುಖವಾಗಿ ಅಂದು ಪುಷ್ಯ ನಕ್ಷತ್ರವಿದೆ. ಪುಷ್ಯ ನಕ್ಷತ್ರವು ಶನಿವಾರದಂದು ಬಂದಿರುವುದು ವಿಶೇಷವಾಗಿದೆ. ಈ ದಿನ ಪ್ರದೋಷ ಪೂಜೆ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಲಯಕಾರಕನಾದ ಶಿವನು ಅತಿ ಕೋಪಿ. ಅಂತಹ ಶಿವನು ಸಹ ಎಲ್ಲವನ್ನೂ ಮರೆತು ಸಂತೋಷದಿಂದ ಕಾಲ ಕಳೆಯುತ್ತಾನೆ. ಆ ದಿನವೇ ಈ ಪ್ರದೋಷದ ದಿನ. ಶಿವನ ಭಕ್ತರಿಗೆ ತೊಂದರೆ ಮಾಡಿದವರು ಹೆಚ್ಚಿನ ಕಷ್ಟ ನಷ್ಟಗಳನ್ನು ಜೀವನದಲ್ಲಿ ಅನುಭವಿಸುತ್ತಾರೆ. ಕಾರಣ ಶಿವನು ತನ್ನ ಭಕ್ತರ ಪರಾಧೀನ. ಶಿವನಿಂದನೆಗಿಂತ ಶಿವನ ಭಕ್ತರನ್ನು ನೋಯಿಸಿದರೆ ಶಿವನಿಗೆ ಸಿಟ್ಟು ಬರುತ್ತದೆ. ತನ್ನ ಆರಾಧನೆ ಅಥವಾ ತಪಸ್ಸನ್ನು ಮೆಚ್ಚಿದ ಶಿವನು ನೀಡಿದ ವರಗಳು ವಿಶೇಷವಾದವುಗಳು.
ರಾವಣ ಆಗಿರಬಹುದು, ಬಸ್ಮಾಸುರ ಆಗಿರಬಹುದು, ಚಂಡ ಪ್ರಚಂಡರೇ ಆಗಿರಬಹುದು, ತನ್ನ ಭಕ್ತರು ಕೇಳಿದ್ದನ್ನು ಇಲ್ಲವೆನ್ನದೆ ನೀಡುವ ದೈವ ಶಿವನೊಬ್ಬನೆ. ಅಂತಹ ಶಿವನು ಸಂತೋಷದಲ್ಲಿ ಇದ್ದಾಗ ಅವನನ್ನು ಪೂಜೆ ಮಾಡಿದಾಗ ಶುಭಫಲಗಳು ಒಲಿಯುವುದು ಶತಸಿದ್ಧ. ಪ್ರದೋಷ ಪೂಜೆಯನ್ನು ಮಾಡಿದರೆ ದೊರೆಯುವ ಶುಭಫಲಗಳ ಬಗ್ಗೆ ಕತೆಯೊಂದಿದೆ. ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ ಶನಿವಾರದಂದು ಪ್ರದೋಷ ಪೂಜೆಯ ಬಗ್ಗೆ ತಿಳಿಸುತ್ತಾರೆ.
ಶನಿ ಪ್ರದೋಷ ಪೂಜೆಯ ಹಿಂದಿನ ಕಾರಣ
ಮಿಥಿಲ ಎಂಬುದು ಒಂದು ನಗರ. ಆ ನಗರದಲ್ಲಿ ಹಣಕಾಸಿನ ತೊಂದರೆ ಇಲ್ಲದೆ, ಧನಿಕನೊಬ್ಬನು ಜೀವನ ನಡೆಸಿರುತ್ತಾನೆ. ತನ್ನ ಸುತ್ತಮುತ್ತಲ ಮತ್ತು ಆತ್ಮೀಯ ಜನರು ಕಷ್ಟದಿಂದ ಜೀವನ ನಡೆಸುವುದು ಇವನಿಗೆ ಇಷ್ಟವಾಗದ ವಿಚಾರವಾಗಿರುತ್ತದೆ. ಆದ್ದರಿಂದ ಹಣಕಾಸಿನ ಸಹಾಯ ಮಾಡುವ ಬುದ್ಧಿ ಇವನಿಗಿರುತ್ತದೆ. ಇಷ್ಟಾದರೂ ಈ ದಂಪತಿಗಳಿಗೆ ಸಂತಾನ ಭಾಗ್ಯ ವಿರುವುದಿಲ್ಲ. ಕೆಲವರ ಸಲಹೆಯಂತೆ ಶಿವನ ದರ್ಶನವನ್ನು ಮಾಡಲು ಕಾಶಿಗೆ ದಂಪತಿ ಆಗಮಿಸುತ್ತಾರೆ.
ಕಾಶಿನಗರದ ತುಂಬಾ ಸಾಧುಸಂತರ ದಂಡೇ ಇರುತ್ತದೆ. ಇವರ ಮಧ್ಯೆ ಗಂಗಾ ನದಿಯ ದಡದಲ್ಲಿ ವಿಶೇಷವಾದ ತೇಜಸ್ಸಿನಿಂದ ಕೂಡಿದ ಸಾಧು ಒಬ್ಬನು ದೇವರ ಜ್ಞಾನದಲ್ಲಿ ಮಗ್ನನಾಗಿರುತ್ತಾನೆ. ಆತನಿಗೆ ನಮಸ್ಕರಿಸಿ ಸಾಧುವು ಎಚ್ಚರವಾಗುವವರೆಗೂ ಅಲ್ಲಿಯೇ ಕುಳಿತಿರುತ್ತಾರೆ. ಇವರನ್ನು ಕಂಡ ಸಾಧು ನನ್ನ ಬಳಿ ಈ ರೀತಿ ಕುಳಿತಿರುವ ನೀವು ಯಾರು, ನನ್ನಿಂದ ನಿಮಗೆ ಆಗಬೇಕಾಗಿರುವ ಕೆಲಸ ಯಾವುದು ಎಂದು ಕೇಳುತ್ತಾನೆ. ಆಗ ದಂಪತಿ ತಮಗೆ ಸಂತಾನ ದೊರೆಯುವ ವ್ರತವೊಂದನ್ನು ತಿಳಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಸಾಧುವು ಶನಿಪ್ರದೋಷವನ್ನು ಮಾಡಿದರೆ ನಿಮ್ಮ ಪಾಪಕರ್ಮಗಳು ಮರೆಯಾಗಿ ಒಳ್ಳೆಯ ಸಂತಾನ ಲಭಿಸುತ್ತದೆ ಎಂದು ತಿಳಿಸಿ ಮರೆಯಾಗುತ್ತಾನೆ.
ಸಾಧುವಿನ ಸಲಹೆಯಂತೆ ಶನಿ ಪ್ರದೋಷವನ್ನು ಮಾಡಿದ ನಂತರ ಧನಿಕ ದಂಪತಿಗೆ ಸಂತಾನ ಲಭಿಸುತ್ತದೆ. ಆನಂತರ ಪ್ರತಿಯೊಂದು ಪ್ರದೋಷದ ದಿನವೂ ಶಿವನ ಪೂಜೆಯನ್ನು ಮಾಡಿ, ಅಲ್ಲದೆ ತಮ್ಮ ಮನಸ್ಸಿಗೆ ಇಷ್ಟವೆನಿಸುವ ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯುತ್ತಾರೆ. ಇದೇ ರೀತಿಯಲ್ಲಿ ದಶರಥ ಮಹಾರಾಜನ ಬಗ್ಗೆಯೂ ಕಥೆಯೊಂದಿದೆ. ಪ್ರಜೆಗಳನ್ನು ಪಾಲಿಸುವುದರಲ್ಲಿ ದಶರಥನಿಗೆ ಸಮಾನವಾದಂತಹ ಬೇರೊಬ್ಬ ರಾಜನಿರುವುದಿಲ್ಲ. ತನ್ನ ಪ್ರಜೆಗಳನ್ನು ತನ್ನ ಮಕ್ಕಳೆಂದೇ ಭಾವಿಸಿ, ಪ್ರೀತಿ ವಿಶ್ವಾಸದಿಂದ ಕಾಪಾಡುತ್ತಿರುತ್ತಾನೆ. ಆದರೆ ಅನಿರೀಕ್ಷಿತವಾಗಿ ರಾಜ್ಯಕ್ಕೆ ಸತತವಾಗಿ ವಿಪತ್ತುಗಳು ಎದುರಾಗುತ್ತವೆ.
ಆಗ ಯೋಚನೆಗಳಾದ ದಶರಥ ಮಹಾರಾಜನು ತಮ್ಮ ಕುಲಗುರುವಿನಲ್ಲಿ ಇದರ ಬಗ್ಗೆ ವಿಚಾರಿಸುತ್ತಾನೆ. ಇದಕ್ಕೆ ಕಾರಣ ಶನಿದೇವನಂದು ತಿಳಿದು ಬರುತ್ತದೆ. ಆಗ ಕುಲ ಗುರುಗಳು ಶನಿಕಾಟದಿಂದ ತಪ್ಪಿಸಿಕೊಳ್ಳಲು ಏಕೈಕ ಮಾರ್ಗವೆಂದರೆ ಶನಿವಾರದಂದು ಬರುವ ಶನಿಪ್ರದೋಷದ ದಿನ ಪರಮೇಶ್ವರ ಮತ್ತು ಶಿವನ ಕುಟುಂಬವನ್ನು ಮನಸಾರೆ ಪೂಜಿಸುವುದು. ಈ ಮಾತನ್ನು ಕೇಳಿದ ದಶರಥನು ತನ್ನ ಕುಲ ಗುರುಗಳ ಸಹಾಯದಿಂದ ಅವರ ಉಪಸ್ಥಿತಿಯಲ್ಲಿ ಭಯ ಭಕ್ತಿಗಳಿಂದ ಪ್ರದೋಷ ಪೂಜೆಯನ್ನು ಆಚರಿಸುತ್ತಾನೆ. ಆನಂತರ ತನ್ನ ಸಾಮ್ರಾಜ್ಯಕ್ಕೆ ಒದಗಿದ ಎಲ್ಲಾ ಆತಂಕಗಳು ದೂರಮಾಡಲು ಶಕ್ತ್ಯನಾಗುತ್ತಾನೆ. ಇದೇ ರೀತಿ ಶನಿಪ್ರದೋಷದಂದು ಶುಭ ಪೂಜೆಯನ್ನು ಮಾಡಿದಂತೆ ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಕಷ್ಟ ನಷ್ಟಗಳು ಸುಲಭವಾಗಿ ದೂರವಾಗುತ್ತವೆ.