ಧನುರ್ಮಾಸದ ವೈಶಿಷ್ಟ್ಯ ಏನು: ಈ ಬಾರಿ ಲಕ್ಷ್ಮೀ ಪೂಜೆ, ಕಾಲ ಭೈರವಾಷ್ಟಮಿ ಪೂಜೆ ಸೇರಿ ಏನೆಲ್ಲಾ ವ್ರತಗಳನ್ನು ಆಚರಿಸಬಹುದು?
Dhanurmasa 2024: ಪ್ರತಿ ವರ್ಷ ಡಿಸೆಂಬರ್ 16 ರಿಂದ ಮರುವರ್ಷ ಜನವರಿ ಸಂಕ್ರಾಂತಿ ಹಿಂದಿನ ದಿನದವರೆಗೂ ಧನುರ್ಮಾಸವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ವಿವಿಧ ವ್ರತ, ಪೂಜೆಗಳನ್ನು ಮಾಡುವುದರಿಂದ ವಿಶೇಷ ಫಲ ದೊರೆಯಲಿದೆ. ಧನುರ್ಮಾಸದಲ್ಲಿ ಲಕ್ಷ್ಮೀ ಪೂಜೆ, ಕಾಲ ಭೈರವಾಷ್ಟಮಿ ಪೂಜೆಯನ್ನೂ ಮಾಡಲಾಗುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಧನುರ್ಮಾಸ 2024: ಪ್ರತಿ ವರ್ಷ ಡಿಸೆಂಬರ್ 16 ರಿಂದ ಧನುರ್ಮಾಸ ಪೂಜೆಯು ಆರಂಭವಾಗಿ ಜನವರಿಯ 13 ವರೆಗೂ ಮುಂದುವರೆಯುತ್ತದೆ. ಇದು ದಕ್ಷಿಣಾಯನದ ಕೊನೆಯ ದಿನವಾಗಿರುತ್ತದೆ. ಧನುರ್ಮಾಸದ ಸಮಯದಲ್ಲಿ ಶ್ರೀಸುಬ್ರಹ್ಮಣ್ಯಸ್ವಾಮಿಯ ಪೂಜೆ ಮಾತ್ರವಲ್ಲದೆ ಮಹಾಲಕ್ಷ್ಮಿ, ಶಿವಪಾರ್ವತಿ, ಗುರುವರ್ಯರು, ಶ್ರೀವಿಷ್ಣು, ಶ್ರೀ ಕಾಲಭೈರವಸ್ವಾಮಿಯ ಪೂಜೆಗೆ ಸಹ ಆದ್ಯತೆ ನೀಡಲಾಗಿದೆ.
ಡಿಸೆಂಬರ್ 18 ರಂದು ಸಂಕಷ್ಟಹರ ಚತುರ್ಥಿ
ಡಿಸೆಂಬರ್ 18, ಬುಧವಾರ ಹಗಲು 11.40 ರವರೆಗು ತದಿಗೆ ಇರುತ್ತದೆ. ಆನಂತರ ಚೌತಿ ಆರಂಭವಾಗುತ್ತದೆ. ಈ ದಿನ ಸಂಕಷ್ಟಹರ ಚತುರ್ಥಿ ಪೂಜೆ ಮಾಡಬೇಕಾಗುತ್ತದೆ. ಧನುರ್ಮಾಸವಾದರೂ ಈ ಪೂಜೆಯನ್ನು ಸಂಜೆಯ ವೇಳೆ ಮಾಡಬೇಕಾಗುತ್ತದೆ. ಕಾರಣ ಈ ವ್ರತವು ಮುಗಿಯುವುದೇ ಚಂದ್ರನಿಗೆ ಅರ್ಘ್ಯವನ್ನು ನೀಡಿದಾಗ. ಆ ದಿನನ ರಾತ್ರಿ 9.10ಕ್ಕೆ ಚಂದ್ರೋದಯ ಆಗಲಿದೆ. ಗಣಪತಿಗೆ ಚೌತಿಯ ರೀತಿ ಬುಧವಾರವೂ ಬಲು ಶ್ರೇಷ್ಠ. ಬುಧವಾರವು ಹಸಿರು ಸಸ್ಯವರ್ಗವನ್ನೂ ಸೂಚಿಸುತ್ತದೆ. ಆದ್ದರಿಂದ ಈ ದಿನದಂದು ಗಣಪತಿಗೆ 21 ಗರಿಕೆಗಳನ್ನು ಅರ್ಪಿಸುವುದರಿಂದ ಜೀವನದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ ಎಂದ ನಂಬಿಕೆ ಇದೆ.
ಗುರುವಾರ 19 ರಂದು ಹಗಲು 11.48 ರವರೆಗೆ ಚೌತಿ ಇರುತ್ತದೆ. ನಂತರ ಪಂಚಮಿ ಆರಂಭವಾಗುತ್ತದೆ. ಆ ದಿನ ಮಾರ್ಗಶೀರ್ಷ ಶ್ರೀಲಕ್ಷ್ಮಿವ್ರತವನ್ನು ಆಚರಿಸಬೇಕು. ಈ ಪೂಜೆಯನ್ನು ಸೂರ್ಯ ಮುಳುಗುವ ಮುನ್ನ ಸಂಜೆ ವೇಳೆಯಲ್ಲಿ ಮಾಡುವುದು ಒಳ್ಳೆಯದು. ಜನ್ಮ ಕುಂಡಲಿಯಲ್ಲಿ ಹಣಕಾಸಿನ ವಿಚಾರವನ್ನು ಕೇವಲ ಶುಕ್ರಗ್ರಹ ಮಾತ್ರವಲ್ಲದೆ ಗುರುಗ್ರಹವನ್ನೂ ಪರಿಗಣಿಸಬೇಕು. ಆದ್ದರಿಂದ ಧನುರ್ಮಾಸದ ಗುರುವಾರದಂದು ಶ್ರೀಮಹಾಲಕ್ಷಿಯ ಪೂಜೆ ಮಾಡುವುದರಿಂದ ಹಣಕಾಸಿನ ತೊಂದರೆ ದೂರವಾಗುತ್ತದೆ. ಧಾನ್ಯವನ್ನು ಅಳೆಯುವ ಸೇರು ಅಥವ ಪಾವಿನಲ್ಲಿ ಅದರ ಮುಕ್ಕಾಲು ಭಾಗ ಅಕ್ಕಿಯನ್ನು ಹಾಕಬೇಕು. ಅದರಲ್ಲಿ ಶ್ರೀ ಲಕ್ಷ್ಮಿಯ ವಿಗ್ರಹವನ್ನು ಇಟ್ಟು ದೇವರ ಮುಂದಿಟ್ಟು ಪೂಜೆ ಮಾಡುವುದು ವಾಡಿಕೆ. ಕೆಲವು ಭಾಗಗಳಲ್ಲಿ ಮುಂಬಾಗಿಲ ಹೊಸ್ತಿಲಿನ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಮುಖ್ಯವಾಗಿ ಹಸಿರು ಮತ್ತು ಬಿಳಿ ಬಣ್ಣದ ವಸ್ತ್ರವನ್ನು ಸೇರು ಅಥವ ಪಾವಿಗೆ ಹೊದಿಸಬೇಕು. ಮನೆಗೆ ಬರುವ ಸ್ತೀಯರಿಗೆ ವಯಸ್ಸಿನ ಮಿತಿ ಇಲ್ಲದೆ ವೀಳ್ಳೆದೆಲೆ, ಅಡಿಕೆ, ದಕ್ಷಿಣೆಯ ಸಹಿತ ಹಣ್ಣನ್ನು ಇಟ್ಟು ತಾಂಬೂಲ ನೀಡಬೇಕು. ಸಾಧ್ಯವಾದರೆ ಭೋಜನವನ್ನು ಬಡಿಸಬಹುದು. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಡಿಸೆಂಬರ್ 23 ರಂದು ಕಾಲ ಭೈರವ ಅಷ್ಟಮಿ ಪೂಜೆ
ಸೋಮವಾರ 23 ರಂದು ಹಗಲು 4.48 ರವರೆಗು ಅಷ್ಟಮಿ ತಿಥಿ ಇರುತ್ತದೆ. ಆ ದಿನವನ್ನು ಕಾಲಭೈರವಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ಕುಲದೇವರಿಗೆ ಅಕ್ಕಿ, ಬೆಲ್ಲ ಮತ್ತು ತೊಗರಿಬೇಳೆಯನ್ನು ನೀಡಬೇಕು. ಇದೇ ದಿನ ಶ್ರೀಲಕ್ಷ್ಮಿನರಸಿಂಹಸ್ವಾಮಿಗೆ ಬೆಣ್ಣೆ ನೀಡಬೇಕು. ಶ್ರೀ ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸಬೇಕು. ಸೂರ್ಯೋದಯದ ವೇಳೆ ಶ್ರೀ ಕಾರಭೈರವನಿಗೆ ಪೂಜೆ ಸಲ್ಲಿಸಿದಲ್ಲಿ ಅಪಮೃತ್ಯು ಪರಿಹಾರ ವಾಗುತ್ತದೆ. ಅಲ್ಲದೆ ಎದುರಾಗುವ ಕಷ್ಟಗಳು ದೂರಾಗುತ್ತದೆ. ಇದಲ್ಲದೆ ಉತ್ತಮ ಆರೋಗ್ಯವನ್ನು ಗಳಿಸಬಹುದು. ಗುರುವಾರ 26 ರಂದು ಏಕಾದಶಿ ಇದ್ದು ಮಾರ್ಗಶೀರ್ಷ ಶ್ರೀಲಕ್ಷ್ಮಿವ್ರತವಿದೆ. ಏಕಾದಶಿ ಆದರೂ ಸಹ ಈ ದಿನ ಉಪವಾಸ ಮಾಡಬಾರದು.
ಶನಿವಾರ 28 ರಂದು ಮಧ್ಯರಾತ್ರಿ 2.23 ರವರೆಗು ತ್ರಯೋದಶಿ ತಿಥಿ ಇರುತ್ತದೆ. ರಾತ್ರಿ 9.41ರವರೆಗೂ ಅನೂರಾಧ ನಕ್ಷತ್ರ ಇರುತ್ತದೆ. ಈ ದಿನ ಪ್ರದೋಷ ಪೂಜೆ ಮಾಡಬೇಕು. ಇದನ್ನು ಶನಿ ಪ್ರದೋಷವೆಂದೇ ಕರೆಯುತ್ತಾರೆ. ಶನಿವಾರದಂದು ಶನಿಯ ನಕ್ಷತ್ರವಾದ ಅನೂರಾಧ ನಕ್ಷತ್ರವಿದೆ. ಅಂದು ಶಿವನ ಪೂಜೆ ಮಾಡಿದವರಿಗೆ ಶನಿಯಿಂದ ತೊಂದರೆ ಇರುವುದಿಲ್ಲ ಎಂದು ಜೋತಿಷ್ಯ ಗ್ರಂಥಗಳಲ್ಲಿ ತಿಳಿಸಲಾಗಿದೆ. ಆದ್ದರಿಂದ ಇಂದಿನ ಶಿವನ ಪೂಜೆಯು ಹೆಚ್ಚು ಫಲದಾಯಕವಾಗುತ್ತದೆ. ಸೋಮವಾರ 30 ರಂದು ಅಮಾವಾಸ್ಯೆ ತಿಥಿ ಇದೆ. ಈ ದಿನ ರುದ್ರಹೋಮ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು. ಒಂದು ವೇಳೆ ಹೋಮ ಮಾಡಲು ಸಾಧ್ಯವಾಗದೆ ಹೋದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡಬಹುದು. ಇದೇ ದಿನ ಕೇತು ಜಯಂತಿ ಇದೆ. ಆದ್ದರಿಂದ ಗಣಪತಿಗೆ ಸಂಬಂಧಿಸಿದ ಹೋಮ ಮಾಡುವುದು ಬಹಳ ಒಳ್ಳೆಯದು.
ಜನವರಿ 5 (2025) ತುಳುವ ಷಷ್ಠಿ
ಭಾನುವಾರ ಜನವರಿ ತಿಂಗಳ 5 ನೆಯ ದಿನಾಂಕದಂದು ಷಷ್ಠಿತಿಥಿ ಇರುತ್ತದೆ. ಇದನ್ನು ತುಳುವ ಷಷ್ಠಿ ಎಂದು ಕರೆಯುತ್ತಾರೆ. ಈ ದಿನ ಘಾಟಿ ಸುಬ್ರಹ್ಮಣ್ಯಸ್ವಾಮಿಯ ರಥವಿರುತ್ತದೆ. ಆದ್ದರಿಂದ ಈ ದಿನ ಉಪವಾಸ ಮಾಡುವುದು ಒಳ್ಳೆಯದು. ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿ ಪಂಚಾಮೃತವನ್ನು ನೇವೇದ್ಯ ಮಾಡುವುದು ವಿಶೇಷ ಫಲ ನೀಡುತ್ತದೆ. ಡಿಸೆಂಬರ್ 10 ಶುಕ್ರವಾರ ವೈಕುಂಠ ಏಕಾದಶಿ ಇರುತ್ತದೆ. ಡಿಸೆಂಬರ್ 13, ಧನುರ್ಮಾಸದ ಕೊನೆಯ ದಿನ ಸೋಮವಾರ ಬರುತ್ತದೆ. ಈ ದಿನವನ್ನು ಬನದ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಬಹುತೇಕ ಕಡೆ ಈ ದಿನ ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದು ಕೂಡಾ ಬಹಳ ಒಳ್ಳೆಯದು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).