ಪುತ್ತೂರು ದೇವರಮಾರು ಗದ್ದೆಯಲ್ಲಿ ಡಿ 28ರಂದು ಧರ್ಮಸಂಗಮ, ಡಿ 29ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ, ಎರಡು ದಿನಗಳ ಕಾರ್ಯಕ್ರಮ ವಿವರ
Srinivasa Kalyanotsava 2024: ಪುತ್ತೂರು ದೇವರಮಾರು ಗದ್ದೆಯಲ್ಲಿ ಡಿ 28ರಂದು ಧರ್ಮಸಂಗಮ, ಡಿ 29ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಆಯೋಜಿಸಿರುವ ಎರಡು ದಿನಗಳ ಪೂರ್ಣ ಕಾರ್ಯಕ್ರಮ ವಿವರ ಇಲ್ಲಿದೆ.
Srinivasa Kalyanotsava 2024: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಡಿಸೆಂಬರ್ 28, 29ರಂದು ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ತನ್ನಿಮಿತ್ತವಾಗಿ ಧರ್ಮ ಸಂಗಮ ಕೂಡ ನಡೆಯಲಿದ್ದು, ಭಜನೆ, ನಾಟಕ ಮತ್ತು ಶ್ರೀ ಹರಿ ಗಾನಾಮೃತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಸುಮಾರು 1 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದ್ದು, ಸುಮಾರು 50,000 ಚದರ ಅಡಿಯ ಸಭಾಂಗಣ, ಅನ್ನಪ್ರಸಾದ ವಿತರಣೆ ಪ್ರತ್ಯೇಕ 20000 ಚದರ ಅಡಿಯ ಪೆಂಡಾಲ್ ನಿರ್ಮಾಣ ನಡೆಯುತ್ತಿದೆ. ಡಿ.29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ರಾತ್ರಿ ಸಮಯ ಭಕ್ತರಿಗೆ ಪುತ್ತೂರು ವ್ಯಾಪ್ತಿಯಲ್ಲಿ ಮನೆಗೆ ತೆರಳಲು ಅರುಣ ಸಾರಥಿ ಆಟೋ ರಿಕ್ಷಾ ಸಂಘದ ವತಿಯಿಂದ ಉಚಿತ ರಿಕ್ಷಾ ಸೇವೆ ಮಾಡಲಾಗಿದೆ. ಡಿ.29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶ್ರೀ ದೇವರಿಗೆ ವಿವಿಧ ಸೇವೆ ಮಾಡಲು ಅವಕಾಶವಿದೆ. ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್ 27 ರಂದು ಸಂಜೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಪುತ್ತೂರು ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆ ತನಕ ಮೆರವಣಿಗೆ ಇರಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಡಿಸೆಂಬರ್ 28 ರಂದು ಧರ್ಮ ಸಂಗಮ - ಧಾರ್ಮಿಕ ಸಭೆ
ಡಿಸೆಂಬರ್ 28 ರಂದು ಸಂಜೆ 4 ಗಂಟೆಗೆ ಬೊಳುವಾರು ಬಳಿ ಶ್ರೀದೇವರನ್ನು ಬರಮಾಡಿಕೊಂಡು ವೈಭವದ ಬೃಹತ್ ಶೋಭಾಯಾತ್ರೆ ಮೂಲಕ ದೇವರಮಾರುಗದ್ದೆಗೆ ಕರೆದೊಯ್ಯಲಾಗುತ್ತದೆ. ಸಂಜೆ 5.30 ರಿಂದ ಈಶಮಂಟಪಕ್ಕೆ ಶ್ರೀದೇವಿ, ಶ್ರೀಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಸ್ವಾಗತಿಸುವುದು, ನಂತರ ವೈದಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ಗಂಟೆಯಿಂದ ಧರ್ಮಸಂಗಮ ಧಾರ್ಮಿಕ ಸಭೆ ನಡೆಯಲಿದೆ. ಅದರಲ್ಲಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಇಲ್ಲಿನ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ವಿಟ್ಲ ಶ್ರೀ ಯೋಗೀಶ್ವರ ಮಠದ ಶ್ರೀ ಯೋಗೀ ಶ್ರದ್ಧಾನಂದಾ ಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀ ಕೃಷ್ಣ ಗುರೂಜಿ, ಬೆಳ್ತಂಗಡಿ ಆರಿಕೋಡಿ ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ಗಾನಸಿರಿ ಡಾ ಕಿರಣ್ ಕುಮಾರ್ ಪುತ್ತೂರು ಬಳಗದಿಂದ ಭಕ್ತಿಗಾನ ಸುಧೆ ಇರಲಿದೆ. ರಾತ್ರಿ 8.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9 ಗಂಟೆಗೆ ತೆಲಿಕೆದ ಬೊಳ್ಳಿ ಡಾ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಚಾ ಪರ್ಕ ಕಲಾವಿದರಿಂದ ಪುದರ್ ದೀತಿಜಿ ತುಳು ನಾಟಕ ಪ್ರದರ್ಶನ ಇರಲಿದೆ.
ಡಿಸೆಂಬರ್ 29 ರಂದು ಶ್ರೀನಿವಾಸ ಕಲ್ಯಾಣೋತ್ಸವ
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿದೆ.
ಡಿ.29ರಂದು ಬೆಳಗ್ಗೆ 5.30 ರಿಂದ ಸುಪ್ರಭಾತ ಪೂಜಾ ಸೇವೆಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
ಮಧ್ಯಾಹ್ನ 12.30 ರಿಂದ ಮಹಾಪೂಜೆ ನಡೆಯಲಿದ್ದು, ಅದಾಗಿ ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ 2.30 ರಿಂದ ನಾಡಿನ ವಿವಿಧ ಭಜನಾ ತಂಡಗಳಿಂದ ಭಜನೋತ್ಸವ ನಡೆಯಲಿದೆ.
ಸಂಜೆ 4ರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ ನಡೆಯಲಿದೆ.
ಸಂಜೆ 6 ಗಂಟೆಯಿಂದ ಬಹುನಿರೀಕ್ಷಿತ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.