ಇಂದು ಘಾಟಿ ತೇರು, ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಮಧ್ಯಾಹ್ನ 12ಕ್ಕೆ; ನಾಗಾರಾಧನೆಗೂ ತುಳುಷಷ್ಠಿ ವಿಶೇಷ
Ghati Subramanya Teru: ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವ ಸಂಭ್ರಮ. ಸರಳವಾಗಿ ಹೇಳಬೇಕು ಎಂದರೆ, ಇಂದು ಘಾಟಿ ತೇರು. ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಮಧ್ಯಾಹ್ನ 12ಕ್ಕೆ ಇದ್ದು, ನಾಗಾರಾಧನೆಗೂ ತುಳುಷಷ್ಠಿ ವಿಶೇಷ.
ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ ಇಂದು (ಜನವರಿ 5). ಪ್ರತಿ ವರ್ಷ ಕಿರುಷಷ್ಠಿ ಅಥವಾ ತುಳುಷಷ್ಠಿಯಂದು ಸುಬ್ರಹ್ಮಣ್ಯಸ್ವಾಮಿ ತೇರು ನಡೆಯವುದು ವಾಡಿಕೆ. ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಪೂರ್ವಭಾವಿಯಾಗಿ ನಿನ್ನೆಯೇ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಇಂದು ರಥೋತ್ಸವಕ್ಕೆ ಭಕ್ತರು ಸಿದ್ಧತೆ ನಡೆಸಿದ್ದಾರೆ. ರಾಜ್ಯದ ನಾನಾಭಾಗಗಳಿಂದ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರು ಆಗಮಿಸುತ್ತಿರುವುದು ವಿಶೇಷ.
ಇಂದು ಘಾಟಿ ತೇರು, ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವದ ಮುಹೂರ್ತ
ಕಿರುಷಷ್ಠಿಯ ದಿನವಾದ ಇಂದು (ಜನವರಿ 5) ಮಧ್ಯಾಹ್ನ 12.10 ರಿಂದ 12.20ರ ಶುಭ ಮುಹೂರ್ತದಲ್ಲಿ ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಬ್ರಹ್ಮರಥೋತ್ಸವ ನಡೆಯಲಿದೆ. ರಥೋತ್ಸವಕ್ಕಾಗಿ ದೇವಾಲಯದಲ್ಲಿ ಸಿದ್ಧತೆ ಪ್ರಾರಂಭವಾಗಿವೆ. ರಥೋತ್ಸವದ ಅಂಗವಾಗಿ ಜ.5ರಂದು ಬೆಳಗಿನ ಜಾವ ಸ್ವಾಮಿಗೆ ವಿವಿಧ ಅಭಿಷೇಕ ನಂತರ ವಿಶೇಷ ಅಲಂಕಾರ ನಡೆಯಲಿದೆ. ಮಹಾಮಂಗಳಾರತಿ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಘಾಟಿ ತೇರಿಗೆ ಶುಭ ಚಾಲನೆ ಸಿಕ್ಕ ಬಳಿಕ, ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಶ್ರದ್ಧಾ ಭಕ್ತಿಯಿಂದ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುತ್ತಾರೆ. ಈಗಾಗಲೇ ರಥದ ಅಲಂಕಾರ ಕೂಡ ಪೂರ್ಣಗೊಂಡಿದೆ.
ಅಂಕುರಾರ್ಪಣೆ ಕಾರ್ಯಕ್ರಮಕ್ಕೆ ಐದೂವರೆ ದಶಕದ ಇತಿಹಾಸ
ದೊಡ್ಡಬಳ್ಳಾಪುರದ ದೇವಾಂಗ ಸಮುದಾಯದವರು ದೇವಾಂಗ ಮಂಡಲಿ ನೇತೃತ್ವದಲ್ಲಿ ಸುಮಾರು 58 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅಂಕುರಾರ್ಪಣೆ ಕಾರ್ಯಕ್ರಮವು ಶ್ರೀ ಸುಬ್ರಹ್ಮಣ್ಯಸ್ವಾಮಿ ತೇರಿಗೆ ನಾಂದಿ ಎಂದು ಬಿಂಬಿಸಲ್ಪಟ್ಟಿದೆ.ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತದೆ.
ರಥೋತ್ಸವದ ನಿಮಿತ್ತ ದೊಡ್ಡಬಳ್ಳಾಪುರದ ದೇವಾಂಗ ಮಂಡಲಿ ಹಾಗೂ ದೇವಾಲಯದಿಂದ ಅಂಕುರಾರ್ಪಣೆ ಸೇವೆ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ (ಜನವರಿ 3) ನಡೆಯಿತು. ಅಂಕುರಾರ್ಪಣೆಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ನಾಗದೇವತೆ ರೂಪದ ಸುಬ್ರಹ್ಮಣ್ಯ ಹಾಗೂ ಆಯುಧ ವಾಹನಗಳ ಚಿತ್ರವಿರುವ ಧ್ವಜಕ್ಕೆ ದೇವಾಲಯದ ಅರ್ಚಕ ವೃಂದ ಪೂಜೆ ಸಲ್ಲಿಸಿ ಧ್ವಜ ಸ್ತಂಭದ ಮೇಲೆ ಪ್ರತಿಷ್ಟಾಪಿಸಿದೆ. ಭಕ್ತಾದಿಗಳು ಧ್ವಜಕ್ಕೆ ಪುಷ್ಪ ಸಮರ್ಪಣೆ ಮಾಡಿ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಅದಾಗಿ, ಸುಬ್ರಹ್ಮಣ್ಯಸ್ವಾಮಿಗೆ ಮಹಾಮಂಗಳಾರತಿ ನಡೆಯಿತು.
ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯುವುದರಿಂದ ಕುಜ ದೋಷ, ಸರ್ಪ ದೋಷ ದೂರವಾಗುತ್ತದೆ ಎಂಬ ನಂಬಿಕೆ ಇದೆ. ರಾಹು–ಕೇತು ಸಮಸ್ಯೆಗಳಿಂದ ಮುಕ್ತಿ ಪಡೆದು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ದೇವಾಲಯದಲ್ಲಿ ಸರ್ಪ ರೂಪದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿಯ ಮೂರ್ತಿಗಳು ಏಕಶಿಲೆಯಲ್ಲಿರುವುದನ್ನು ಕಾಣಬಹುದು.