ಕನ್ನಡ ಸುದ್ದಿ  /  ಜೀವನಶೈಲಿ  /  Driving Tips: ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ; ಇಂಥ ಪರಿಸ್ಥಿತಿಗಳಲ್ಲಿ ಎಂದಿಗೂ ಓವರ್‌ ಟೇಕ್‌ ಸಾಹಸ ಬೇಡ..!

Driving Tips: ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ; ಇಂಥ ಪರಿಸ್ಥಿತಿಗಳಲ್ಲಿ ಎಂದಿಗೂ ಓವರ್‌ ಟೇಕ್‌ ಸಾಹಸ ಬೇಡ..!

Driving Tips: ವಾಹನ ಚಲಾಯಿಸುವಾಗ ತಾಳ್ಮೆ ಇದ್ದಷ್ಟೂ ಒಳ್ಳೆಯದು. ಆದರೆ ಕೆಲವು ಸಂದರ್ಭಗಳಲ್ಲಿ ನಾವು ವಾಹನಗಳನ್ನು ಓವರ್‌ ಟೇಕ್ ಮಾಡಿ ಮುಂದೆ ಸಾಗುವ ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಯಾವೆಲ್ಲ ಸಂದರ್ಭಗಳಲ್ಲಿ ಇಂಥಾ ತಪ್ಪುಗಳನ್ನು ಮಾಡಬಾರದು..? ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಓವರ್‌ ಟೇಕ್‌ ಮಾಡುವ ವಾಹನ ಸವಾರರಿಗೆ ಒಂದಿಷ್ಟು ಕಿವಿಮಾತು
ಓವರ್‌ ಟೇಕ್‌ ಮಾಡುವ ವಾಹನ ಸವಾರರಿಗೆ ಒಂದಿಷ್ಟು ಕಿವಿಮಾತು (PC: Unsplash)

Driving Tips: ನಿಧಾನವೇ ಪ್ರಧಾನ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿದೆ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡಾ. ಆದರೆ ಒಮ್ಮೊಮ್ಮೆ ನಮ್ಮ ಅಚಾತುರ್ಯದ ಕೆಲಸಗಳಿಂದ ರಸ್ತೆ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಎಷ್ಟೇ ಕಾಳಜಿ ವಹಿಸಿದರೂ ಸಹ ನಮ್ಮ ಸಣ್ಣ ನಿಷ್ಕಾಳಜಿಯು ಭಾರೀ ದೊಡ್ಡ ಮಟ್ಟದಲ್ಲಿ ದಂಡ ತೆರವುವಂತೆ ಮಾಡಿ ಬಿಡಿಬಹುದು. ಅದರಲ್ಲೂ ನೀವು ವಾಹನ ಚಲಾಯಿಸುವ ಸಂದರ್ಭದಲ್ಲಿ ಓವರ್ ಟೇಕ್ ಮಾಡುವಾಗ ನೂರು ಬಾರಿ ಯೋಚಿಸಬೇಕು.

ಟ್ರೆಂಡಿಂಗ್​ ಸುದ್ದಿ

ವೇಗವಾಗಿ ಸಾಗಬೇಕು ಎಂಬ ಯೋಚನೆಯು ಜೀವಕ್ಕೆ ಸಂಚಕಾರ ತರುವಂತೆ ಇರಬಾರದು. ಸರ್ಕಾರದ ಅಂಕಿ ಅಂಶಗಳ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಪ್ರತಿ ದಿನ 462 ಮಂದಿ ರಸ್ತೆ ಅಪಘಾತದಿಂದಲೇ ಜೀವ ತೆರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಅಮೆರಿಕ ಹಾಗೂ ಚೀನಾವನ್ನು ಹೊರತುಪಡಿಸಿದರೆ ಭಾರತದಲ್ಲೇ ಅತೀ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಜೀವ ಚೆಲ್ಲುತ್ತಿದ್ದಾರೆ. ಯಾವುದೋ ಒಂದು ಕ್ಷಣದ ಅವಸರವು ಜೀವವನ್ನೇ ನುಂಗಿ ಬಿಡಬಹುದು. ಅದರಲ್ಲೂ ರಸ್ತೆಯಲ್ಲಿ ಸಂಚರಿಸುವ ಸಂದರ್ಭಗಳಲ್ಲಿ ಕೆಲವರಿಗೆ ಓವರ್‌ ಟೇಕ್‌ ಮಾಡುವ ಅಭ್ಯಾಸವಿರುತ್ತದೆ. ಮುಂದೆ ಯಾವ ವಾಹನ ಬರಬಹುದು..? ಓವರ್ ಟೇಕ್ ಮಾಡಲು ಈ ರಸ್ತೆ ಯೋಗ್ಯವಾಗಿದೆಯೇ..? ನನ್ನ ಮುಂದಿರುವ ಗಾಡಿಯ ಸವಾರ ನಾವು ಓವರ್‌ ಟೇಕ್‌ ಮಾಡಲು ಅನುವು ಮಾಡಿಕೊಡುತ್ತಾನೆಯೇ..? ಈ ಯಾವ ಲೆಕ್ಕಾಚಾರವನ್ನೂ ಮಾಡದೇ ಕೆಲವರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಹೀಗಾಗಿ ಓವರ್‌ ಟೇಕ್‌ ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ನೀವು ಯಾವೆಲ್ಲಾ ರೀತಿ ಯೋಚಿಸಬೇಕು..? ಎಲ್ಲೆಲ್ಲಿ ಓವರ್‌ ಟೇಕ್‌ ಸಾಹಸಕ್ಕೆ ಕೈ ಹಾಕಬಾರದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

1. ಸೇತುವೆಗಳು: ಸೇತುವೆ ಮೇಲೆ ವಾಹನ ಚಲಾಯಿಸುವಾಗ ಎಂದಿಗೂ ಓವರ್‌ ಟೇಕ್‌ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಏಕೆಂದರೆ ಎದುರಿನಿಂದ ಮತ್ತೊಂದು ಗಾಡಿ ಬಂತು ಎಂದರೆ ಒಂದೋ ನೀವು ಕೆಳಗೆ ನದಿಗೆ ಹಾರಬೇಕು ಅಥವಾ ಆ ಗಾಡಿಗೆ ಡಿಕ್ಕಿ ಹೊಡೆಯಬೇಕು. ಇವು ಎರಡೂ ಜೀವಕ್ಕೆ ಅಪಾಯಕಾರಿಯಾದ ಆಯ್ಕೆಯೇ ಆಗಿರುವುದರಿಂದ ಎಂದಿಗೂ ಸೇತುವೆಗಳಲ್ಲಿ ಓವರ್ ಟೇಕ್ ಧೈರ್ಯ ಒಳ್ಳೆಯದಲ್ಲ.

2. ರಸ್ತೆಯ ತಿರುವುಗಳು : ನೀವು ವಾಹನ ಚಲಾಯಿಸುವುದರಲ್ಲಿ ಎಷ್ಟೇ ಅನುಭವ ಹೊಂದಿದ್ದರೂ ಸಹ ರಸ್ತೆಯ ತಿರುವುಗಳಲ್ಲಿ ಯಾವಾಗ ಯಾವ ವಾಹನ ಬರಬಹುದು ಎಂಬುದನ್ನು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ. ಹೀಗಾಗಿ ನೀವು ರಸ್ತೆಯ ತಿರುವುಗಳಲ್ಲಿ ಎಂದಿಗೂ ಓವರ್ ಟೇಕ್ ಮಾಡಲು ಹೋಗಲೇಬೇಡಿ.

3. ಪರ್ವತ ಪ್ರದೇಶಗಳು : ರಸ್ತೆಯ ತಿರುವುಗಳಂತೆಯೇ ಪರ್ವತ ಪ್ರದೇಶಗಳು ಕೂಡ ಓವರ್ ಟೇಕ್ ಮಾಡಲು ಸೂಕ್ತವಾದ ಜಾಗವಲ್ಲ. ಇಲ್ಲಿ ರಸ್ತೆಗಳು ಕಡಿದಾಗಿ ಇರುವುದರಿಂದ ಎದುರಿನಿಂದ ವಾಹನಗಳು ಬಂದು ಬಿಟ್ಟರೆ ಪಾರಾಗಲು ನಿಮಗೆ ಜಾಗ ಇರುವುದಿಲ್ಲ.

4. ಚೂಪಾದ ಇಳಿಜಾರುಗಳು : ಪರ್ವತಗಳ ಕಡಿದಾದ ರಸ್ತೆಗಳಂತೆಯೇ ಚೂಪಾದ ಇಳಿಜಾರು ಪ್ರದೇಶಗಳಲ್ಲಿಯೂ ಓವರ್ ಟೇಕ್ ಸಾಹಸವನ್ನು ಪ್ರಯತ್ನಿಸಲು ಹೋಗಬಾರದು. ಇಲ್ಲಿ ನಿಮಗೆ ವಾಹನವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಥಹ ಸ್ಥಳಗಳಲ್ಲಿ ತಾಳ್ಮೆ ಕಾಯ್ದುಕೊಳ್ಳುವುದೇ ಉತ್ತಮ ಆಯ್ಕೆಯಾಗಿದೆ.

5. ಸಿಗ್ನಲ್‌ಗಳಲ್ಲಿ ರಸ್ತೆ ಬದಲಿಸಬೇಕಾದ ವಾಹನಗಳು ಇದ್ದಾಗ : ಉದಾಹರಣೆಗೆ ನೀವು ಸಿಗ್ನಲ್‌ನಲ್ಲಿ ನಿಂತಿದ್ದೀರಿ ಎಂದುಕೊಳ್ಳೋಣ. ನಿಮ್ಮ ವಾಹನ ಸಿಗ್ನಲ್ ಬಿಟ್ಟೊಡನೆಯೇ ನೇರವಾಗಿ ಹೋಗಬೇಕು. ಆದರೆ ನಿಮ್ಮ ಮುಂದಿರುವ ವಾಹನ ಬಲಕ್ಕೆ ತಿರುಗಬೇಕು ಎಂಬ ಸ್ಥಿತಿಯಿದ್ದಾಗ ಸಿಗ್ನಲ್ ಬಿಟ್ಟ ಕೂಡಲೇ ಆ ವಾಹನವನ್ನು ಹಿಂದೆ ಹಾಕಬೇಕು ಎಂಬ ಯೋಚನೆ ಬೇಡ.

6. ಮುಂದಿನ ರಸ್ತೆ ಕಾಣದೇ ಇದ್ದಾಗ : ನಿಮ್ಮ ಎದುರು ಯಾವುದೋ ಭಾರೀ ವಾಹನ ಇದೆ ಎಂದುಕೊಳ್ಳೋಣ. ಆಗ ನಿಮಗೆ ಮುಂದಿನ ರಸ್ತೆ ಸರಿಯಾಗಿ ಕಾಣುವುದಿಲ್ಲ. ಹೀಗಾಗಿ ಇಂಥಾ ಸಂದರ್ಭಗಳಲ್ಲಿ ನೀವು ಓವರ್ ಟೇಕ್ ಮಾಡಲು ಹೋಗಬಾರದು. ಎದುರಿನಿಂದ ದಿಢೀರನೇ ವಾಹನ ಬಂದು ಬಿಟ್ಟರೆ ಅಪಘಾತವಾಗುವ ಸಾಧ್ಯತೆ ದಟ್ಟವಾಗಿರುತ್ತದೆ.

7. ಮಳೆ ಬರುತ್ತಿದ್ದಾಗ : ಮಳೆಗಾಲದ ಸಂದರ್ಭದಲ್ಲಿ ರಸ್ತೆ ಹೆಚ್ಚು ಜಾರುತ್ತಿರುತ್ತದೆ. ಹೀಗಾಗಿ ವಾಹನಗಳನ್ನು ಓವರ್‌ ಟೇಕ್‌ ಮಾಡುವಾಗ ನಿಮಗೆ ನಿಮ್ಮ ವಾಹನವು ನಿಯಂತ್ರಣಕ್ಕೆ ಬಾರದೇ ಹೋಗಬಹುದು.

8. ವೇಗವಾಗಿ ಚಲಿಸುತ್ತಿರುವ ಕಾರನ್ನು ಹಿಂಬಾಲಿಸುತ್ತಿದ್ದಾಗ :ಅತ್ಯಂತ ವೇಗವಾಗಿ ಚಲಿಸುತ್ತಿರುವ ಕಾರನ್ನು ಎಂದಿಗೂ ಓವರ್ಟೇಕ್ ಮಾಡಲು ಹೋಗಬೇಡಿ.

9. ಕಿರಿದಾದ ರಸ್ತೆಗಳು : ರಸ್ತೆಗಳು ಕಿರಿದಾಗಿ ಇದ್ದಾಗ ನೀವು ಓವರ್‌ ಟೇಕ್‌ ಮಾಡಿದ ಸಂದರ್ಭದಲ್ಲಿ ಮುಂಬದಿಯಿಂದ ವಾಹನ ಬಂದು ಬಿಟ್ಟರೆ ನಿಮಗೆ ಅಪಾಯದಿಂದ ಪಾರಾಗಲು ಹೆಚ್ಚಿನ ಅವಕಾಶ ಸಿಗುವುದಿಲ್ಲ. ಹೀಗಾಗಿ ಇಂಥಹ ಸಂದರ್ಭಗಳಲ್ಲಿ ನೀವು ಓವರ್‌ ಟೇಕ್‌ ಮಾಡದಿರುವುದೇ ಒಳ್ಳೆಯದು.

10. ರಸ್ತೆ ಜಾರುವುದು : ಮಳೆ ಬಂದಾಗ, ರಸ್ತೆಯಲ್ಲಿ ನೀರು ಚೆಲ್ಲಿದಾಗ, ವಾಹನ ಆಯಿಲ್‌ಗಳು ಸೋರಿಕೆಯಾದ ಸಂದರ್ಭಗಳಲ್ಲಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾರಿದ ಅನುಭವವಾಗುತ್ತದೆ. ಈ ಸಂದರ್ಭಗಳಲ್ಲಿ ವಾಹನ ಕೂಡಲೇ ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಹೀಗಾಗಿ ಇಂಥ ರಸ್ತೆಗಳು ಎಷ್ಟೇ ವಿಶಾಲವಾಗಿದ್ದರೂ ಸಹ ಓವರ್ ಟೇಕ್ ಮಾಡಲೇಬಾರದು.

11. ವೇಗವಾಗಿ ವಾಹನ ಚಲಾಯಿಸುವ ಚಾಲಕರು : ವಾಹನವನ್ನು ಅತೀ ವೇಗವಾಗಿ ಚಲಾಯಿಸುವ ಚಾಲಕರ ಜೊತೆ ಈ ಓವರ್‌ ಟೇಕ್‌ ಆಟ ಆಡಲೇಬಾರದು. ಇವರು ನೀವು ಓವರ್‌ ಟೇಕ್‌ ಮಾಡಲು ಯತ್ನಿಸಿದಂತೆಲ್ಲಾ ವಾಹನದ ವೇಗವನ್ನು ಹೆಚ್ಚಿಸುತ್ತಾರೆ. ಇದರಿಂದ ಅಪಾಯದ ಸಾಧ್ಯತೆಯೇ ಹೆಚ್ಚು.

12. ರಾತ್ರಿ ವಾಹನ ಚಲಾಯಿಸುವ ಸಂದರ್ಭಗಳಲ್ಲಿ : ರಾತ್ರಿ ವೇಳೆ ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕತೆಯಿಂದ ಇರಬೇಕು. ರಾತ್ರಿ ವೇಳೆ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ಇಂಥ ಸಂದರ್ಭಗಳಲ್ಲಿ ವೇಗವಾಗಿ ವಾಹನ ಚಲಾಯಿಸುವುದು ಹಾಗೂ ಓವರ್ ಟೇಕ್ ಮಾಡುವುದು ಇಂತಹ ಕೆಲಸಗಳನ್ನು ಮಾಡಲೇಬಾರದು.

ತಡವಾದರೂ ಆಗಬೇಕು ಎಂದುಕೊಂಡ ಕೆಲಸವನ್ನು ಮಾಡಿ ಮುಗಿಸಬಹುದು. ಸೇರಬೇಕು ಎಂದುಕೊಂಡಿದ್ದ ಜಾಗವನ್ನು ಕೊಂಚ ತಡವಾಗಿಯಾದರೂ ಸೇರಿಕೊಳ್ಳಬಹುದು. ಆದರೆ ಒಮ್ಮೆ ಪ್ರಾಣ ಪಕ್ಷಿ ಹಾರಿ ಹೋಯಿತೆಂದರೆ ಮುಂದೆ ಎಲ್ಲವೂ ಶೂನ್ಯ. ಒಂದು ಸಣ್ಣ ಅಚಾತುರ್ಯ ಬದುಕನ್ನೇ ಕೊನೆಗಾಣಿಸಿ ಬಿಡಬಾರದು. ಹೀಗಾಗಿ ವಾಹನದ ಮೇಲೆ ಕುಳಿತುಕೊಂಡಾಗ ಮೊದಲು ನೀವು ತಾಳ್ಮೆಯನ್ನು ತಂದುಕೊಳ್ಳಬೇಕು. ನಿಮಗಾಗಿ ಒಂದು ಪುಟ್ಟ ಕುಟುಂಬ ಕಾಯುತ್ತಿದೆ ಎಂಬುದು ನಿಮ್ಮ ಗಮನದಲ್ಲಿರಬೇಕು. ಈ ಎಲ್ಲಾ ಜಾಗರೂಕತೆಗಳನ್ನು ಪಾಲಿಸುವ ಮೂಲಕ ನಿಮ್ಮ ಜೀವವನ್ನು ಕಾಪಾಡಿಕೊಳ್ಳಿ. ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ.