ಫೆಂಗ್‌ಶೂಯಿ ಸಲಹೆಗಳು: ಪ್ರತಿದಿನ ಬಳಸುವ ಪೊರಕೆಯನ್ನು ಎಲ್ಲಿ ಇಡಬೇಕು, ಯಾವ ರೀತಿ ಇಡಬೇಕು? ಇಲ್ಲಿದೆ ಮಾಹಿತಿ
Feng Shui Tips: ಮನೆಯನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಲು ನಾವು ಬಳಸುವ ಪೊರಕೆಗೆ ಕೂಡಾ ಫೆಂಗ್‌ಶೂಯಿಯಲ್ಲಿ ಕೆಲವೊಂದು ನಿಯಮಗಳಿವೆ. ಪೊರಕೆಯನ್ನು ಎಲ್ಲಿ ಬೇಕೆಂದರೆ ಅಲ್ಲಿ, ಹೇಗೆ ಬೇಕೆಂದರೆ ಹಾಗೆ ಇಟ್ಟರೆ ಮನೆಯಲ್ಲಿ ಸಂತೋಷಕ್ಕಿಂತ, ನಕಾರಾತ್ಮಕತೆ ಹೆಚ್ಚಾಗುತ್ತದೆ.
ಫೆಂಗ್ ಶೂಯಿ ಸಲಹೆಗಳು: ಭಾರತದಲ್ಲಿ ವಾಸ್ತುಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದೇ ರೀತಿ ಚೀನಾದಲ್ಲಿ ಫೆಂಗ್‌ಶೂಯಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಭಾರತೀಯರು ಕೂಡಾ ಫೆಂಗ್‌ಶೂಯಿಯನ್ನು ಅನುಸರಿಸುತ್ತಾರೆ. ಫೆಂಗ್‌ಶೂಯಿಗೆ ಸಂಬಂಧಿಸಿದ ವಸ್ತುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ವಾಸ್ತು ಅಥವಾ ಫೆಂಗ್‌ಶೂಯಿ ನಿಯಮಗಳನ್ನು ಅನುಸರಿಸುವುದರಿಂದ ಖಂಡಿತ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
ಮನೆಯನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ
ಫೆಂಗ್ ಶೂಯಿ ನಿಯಮಗಳನ್ನು ಅನುಸರಿಸಬೇಕಾದರೆ, ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸಬೇಕೆಂದರೆ ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಅಗತ್ಯ. ಮನೆಯಲ್ಲಿ ಕೊಳಕುತನ ಇದ್ದರೆ ಅದು ನಕಾರಾತ್ಮಕ ಶಕ್ತಿಗೆ ಆಹ್ವಾನ ನೀಡಿದಂತೆ ಎಂದು ನಂಬಲಾಗಿದೆ. ಇದರಿಂದಾಗಿ ಯಾವುದೇ ವ್ಯಕ್ತಿಯು ಜೀವನದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಆಂತರಿಕ ಕಲಹದ ಪರಿಸ್ಥಿತಿ ಕೂಡಾ ಉಂಟಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ನಾವು ಮನೆಯನ್ನು ಸ್ವಚ್ಚಗೊಳಿಸಲು ಪೊರಕೆಯನ್ನು ಬಳಸುತ್ತೇವೆ. ಪೊರಕೆಯನ್ನು ಉಪಯೋಗಿಸಿದ ನಂತರ ಕೆಲವರು ಅದನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಆದರೆ ಹೀಗೆ ನೀವು ಪೊರಕೆಯನ್ನು ಇಡುವ ರೀತಿ ಕೂಡಾ ಬಹಳ ಮುಖ್ಯವಾದದು, ನೀವು ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ಪೊರಕೆಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ. ಮನೆಯಲ್ಲಿ ಪೊರಕೆಗಳನ್ನು ಹೇಗೆ ಇಡಬೇಕು ಎಂಬುದರ ಬಗ್ಗೆ ಫೆಂಗ್ ಶೂಯಿಯಲ್ಲಿ ಕೆಲವೊಂದು ವಿಚಾರಗಳನ್ನು ತಿಳಿಸಲಾಗಿದೆ. ಪೊರಕೆಯನ್ನು ಎಂದಿಗೂ ಪಾದಗಳಿಂದ ಮುಟ್ಟಬಾರದು ಎಂದು ನಂಬಲಾಗಿದೆ. ಇದಲ್ಲದೆ, ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇಡುವುದು ಸಹ ಮುಖ್ಯವಾಗಿದೆ.
ಫೆಂಗ್ ಶೂಯಿಯಲ್ಲಿ ಪೊರಕೆ ಇಡುವ ನಿಯಮಗಳನ್ನು ತಿಳಿಯೋಣ
- ಫೆಂಗ್ ಶೂಯಿ ಪ್ರಕಾರ, ಪೊರಕೆಯನ್ನು ತೆರೆದ ಜಾಗದಲ್ಲಿ ಬಿಡಬಾರದು. ಈ ರೀತಿಯ ಪೊರಕೆಯನ್ನು ಇಟ್ಟುಕೊಳ್ಳುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.
- ಊಟದ ಮನೆಯಲ್ಲಿ ಪೊರಕೆ ಇಡಬಾರದು ಎಂಬ ನಂಬಿಕೆ ಇದೆ. ಊಟದ ಹಾಲ್‌ನಲ್ಲಿ ಪೊರಕೆ ಇಡುವುದು ಧಾನ್ಯಗಳು ಮತ್ತು ಸಂಪತ್ತಿನ ಶುದ್ಧೀಕರಣವನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ.
- ಇದಲ್ಲದೆ, ರಾತ್ರಿ ಅಥವಾ ಮುಸ್ಸಂಜೆ ಗುಡಿಸುವುದು ತಪ್ಪಿಸಬೇಕು. ಇದರಿಂದ ಮನೆಯ ಐಶ್ವರ್ಯ ಹಾಳಾಗುತ್ತದೆ ಎಂಬ ನಂಬಿಕೆ ಇದೆ.
- ಫೆಂಗ್ ಶೂಯಿ ಪ್ರಕಾರ, ಪೊರಕೆಯನ್ನು ಮನೆಯ ಹೊರಗೆ ಅಥವಾ ಟೆರೇಸ್ ಮೇಲೆ ಇಡಬಾರದು. ಇದಲ್ಲದೆ ಅಡುಗೆಮನೆಯಲ್ಲಿ ಅಥವಾ ಈಶಾನ್ಯ ಮೂಲೆಯಲ್ಲಿ ಪೊರಕೆ ಇಡುವುದನ್ನು ನಿಷೇಧಿಸಲಾಗಿದೆ.
- ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಯಾವಾಗಲೂ ಪೊರಕೆಯನ್ನು ಎಲ್ಲರಿಗೂ ಕಾಣುವಂತೆ ಇಡಬಾರದು. ಆದ್ದರಿಂದ ಅದನ್ನು ಮನೆಯ ಸದಸ್ಯರು ಹೆಚ್ಚಿಗೆ ಓಡಾಡದ ಸ್ಥಳದಲ್ಲಿ ಇಡಬಹುದು.
- ಯಾರಿಗೂ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿಲ್ಲದೆ ಪೊರಕೆಯಿಂದ ಹೊಡೆಯಬಾರದು. ಪೊರಕೆಯನ್ನು ಮನೆಯ ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಸೂಕ್ತವೆಂದು ಫೆಂಗ್‌ಶೂಯಿ ಹೇಳುತ್ತದೆ.
- ಪೊರಕೆಯನ್ನು ಎಂದಿಗೂ ಲಂಬವಾಗಿ ಇಡಬಾರದು. ಅದನ್ನು ನೆಲದ ಮೇಲೆ ಮಲಗಿಸಿ ಇಡಬೇಕು. ಎಲ್ಲೆಂದರಲ್ಲಿ , ನಿಮಗೆ ಇಷ್ಟ ಬಂದಂತೆ ಪೊರಕೆಯನ್ನು ಇಡುವುದರಿಂದ ಬಡತನ ಉಂಟಾಗುತ್ತದೆ ಎಂದು ನಂಬಲಾಗಿದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.