Varamahalaxmi Festival 2023: ಲಕ್ಷ್ಮೀಪೂಜೆಯಿಂದ ಐಶ್ವರ್ಯದ ಜೊತೆಗೆ ದೀರ್ಘಾಯುಷ್ಯ: ಲಕ್ಷ್ಮೀ ಶೋಭಾನೆ ಕೃತಿಯ ಪರಿಚಯ ಇಲ್ಲಿದೆ
Lakshmi Shbhane: 'ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು' ಎನ್ನುವ ಅಪರೂಪದ ಫಲಶ್ರುತಿ ಇರುವ ಕೃತಿ ಲಕ್ಷ್ಮೀ ಶೋಭಾನೆ. ಲಕ್ಷ್ಮೀದೇವಿಯ ಗುಣವರ್ಣನೆ ಮತ್ತು ಅಧ್ಯಾತ್ಮದಲ್ಲಿ ಲಕ್ಷ್ಮೀಯ ಪ್ರಾಮುಖ್ಯ ವಿವರಿಸುವ ಈ ಅಪರೂಪದ ಕೃತಿಯನ್ನು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪರಿಚಯಿಸಿದ್ದಾರೆ ಜ್ಯೋತಿಷಿ ಎಚ್.ಸತೀಶ್.
ಕನ್ನಡ ಸಾಹಿತ್ಯಕ್ಕೆ ದಾಸ ಪರಂಪರೆ ಮಹತ್ವದ ಕೊಡುಗೆಯನ್ನು ನೀಡಿದೆ. ದಾಸರು ಬರೆಯದ ವಿಚಾರಗಳೇ ಇಲ್ಲ. ದಾಸ ಸಾಹಿತ್ಯದಲ್ಲಿ ಬಾಳಿನ ರೀತಿ-ನೀತಿ, ಜೀವನ ಮಾರ್ಗ ಬೋಧನೆ ಅಷ್ಟೇ ಏಕೆ ಹಾಸ್ಯವು ಒಳಗೊಂಡಿದೆ. ದಾಸ ಸಾಹಿತ್ಯದ ತಿರುಳನ್ನು ಸರಿಯಾಗಿ ಅರಿತರೆ ಅದು ನಮ್ಮ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತದೆ. ವಾದಿರಾಜ ತೀರ್ಥರು ದಾಸ ಸಾಹಿತ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಹಲವು ಕೊಡುಗೆಗಳನ್ನು ಕೊಟ್ಟವರು.
ವ್ಯಾಸರಾಯರ ಶಿಷ್ಯರಾದ ವಾದಿರಾಜತೀರ್ಥರ ಜೀವಿತಾವದಿ ದೊರೆತಿರುವ ಮೂಲಗಳ ಪ್ರಕಾರ ಕ್ರಿಶ 1480 ರಿಂದ 1600. ದಾಸಸಾಹಿತ್ಯದಲ್ಲಿ ಇವರ ಕೊಡುಗೆ ಮಹತ್ವಪೂರ್ಣವಾದುದು. ಇವರು ಸೋದೆ ಮಠಾಧಿಪತಿಗಳಾಗಿದ್ದವರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಇವರ ಕವಿತಾ ಫೌಡಿಮೆಯನ್ನು ತಿಳಿದ ಶ್ರೀಕೃಷ್ಣದೇವರಾಯನು 'ಪ್ರಸಂಗಾಭರಣ ತೀರ್ಥ' ಎಂಬ ಬಿರುದಿನ ಜೊತೆ ಉನ್ನತ ಗೌರವವನ್ನು ನೀಡಿದ್ದ. ಇವರ ಕೀರ್ತನೆಗಳು ಶ್ರೀಹರಿಯ ಮೇಲಿನ ಭಕ್ತಿಯನ್ನು ಬಿಂಬಿಸುವುದಲ್ಲದೆ ಸರಳ ಕನ್ನಡದ ಮೂಲಕ ಗಹನ ವಿಚಾರಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿವೆ. ಉಡುಪಿಯ ಅಷ್ಟ ಮಠಗಳ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದವರೂ ಇವರೇ.
ತಮ್ಮ ಎಂಟನೆಯ ವಯಸ್ಸಿನಲ್ಲಿ ಮನೆತೊರೆದು ಸನ್ಯಾಸದೀಕ್ಷೆಯನ್ನು ಪಡೆದ ವಾದಿರಾಜರು ಒಟ್ಟಾರೆ 112 ವರ್ಷಗಳ ತುಂಬು ಜೀವನ ನಡೆಸಿದವರು. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಮಠ ಮತ್ತು ಬೃಂದಾವನವಿದೆ. ಇವರ ಜನ್ಮಸ್ಥಳ ಉಡುಪಿ ಜಿಲ್ಲೆಗೆ ಸೇರಿದ ಹೂವಿನಕೆರೆ ಎಂಬ ಗ್ರಾಮ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ. ಹಯವದನ ಎಂಬ ಅಂಕಿತನಾಮದಲ್ಲಿ ಅಸಂಖ್ಯಾತ ದೇವರನಾಮಗಳು, ಕೀರ್ತನೆಗಳ್ಳು, ಸುಳಾದಿ, ಉಗಾಭೋಗ ಮತ್ತ ವೃತ್ತನಾಮಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಬಹು ಮುಖ್ಯವಾದವು ವೈಕುಂಠ ವರ್ಣನೆ, ಸ್ವಪ್ನಗದ್ಯ, ಲಕ್ಷ್ಮಿ ಶೋಭಾನೆ ಹಾಡು, ಕೀಚಕ ವಧ, ಕೇಶವನಾಮ, ಗುಂಡಕ್ರಿಯೆ ಇನ್ನೂ ಮುಂತಾದವುಗಳು.
ಕನ್ನಡಿಗರು ಮೆಚ್ಚಿಕೊಂಡ ಲಕ್ಷ್ಮೀ ಶೋಭಾನೆ
ಈ ಪೈಕಿ 'ಲಕ್ಷೀ ಶೋಭಾನೆ' ಪದವು ಕರ್ನಾಟಕದಲ್ಲಿ ಎಲ್ಲರೂ ಒಪ್ಪುವ, ಲಕ್ಷ್ಮೀಯನ್ನು ಒಲಿಸಿಕೊಡುವ ಕೃತಿ ಎಂದು ಜನರ ಮೆಚ್ಚುಗೆ ಪಡೆದಿದೆ. ಈ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುವಂತೆ ಲಕ್ಷ್ಮೀ ಅನುಗ್ರಹಿಸುತ್ತಾಳೆ ಎಂದು ಆಸ್ತಿಕರು ನಂಬುತ್ತಾರೆ. ಸ್ವಯಂ ವಾದಿರಾಜ ತೀರ್ಥರೇ ಲಕ್ಷ್ಮಿ ಶೋಭಾನೆ ಹಾಡಿನ ಬಗ್ಗೆ ಹೇಳುತ್ತಾ 'ಇಂತು ಸ್ವಪ್ನದಲ್ಲಿ ಶ್ರೀಮನ್ನಾರಾಯಣನೇ ಕೊಂಡಾಡಿಸಿಕೊಂಡ' ಎಂದು ಹೇಳುತ್ತಾರೆ. ಅಂದರೆ ಈ ಹಾಡುಗಳು ಸ್ವಪ್ನದಲ್ಲಿ ಸೃಷ್ಟಿಯಾದದ್ದು ಎಂದು ಹೇಳಲಾಗಿದೆ. ಈ ಹಾಡು ಸೃಷ್ಟಿಯಾದ ಹಿಂದೆ ಒಂದು ಸೊಗಸಾದ ಘಟನೆ ಇದೆ ಎಂದು ಕಥೆಗಳು ಹೇಳುತ್ತವೆ. ಆ ಕಥೆ ಹೀಗಿದೆ.
ಸಾವಿನ ನೋವು ಮರೆಸಿ, ಸಂಭ್ರಮ ಉಳಿಸಿದ ಹಾಡು
ವಾದಿರಾಜ ತೀರ್ಥರು ದೇಶ ಪರ್ಯಟನೆ ಮಾಡುತ್ತಾ ಊರಿಗೆ ಬರುತ್ತಾರೆ. ಆಗ ಅಲ್ಲಿ ವಿವಾಹ ಕಾರ್ಯ ನಡೆಯುತ್ತಿರುತ್ತದೆ. ವಿವಾಹವೆಂದರೆ ಸಡಗರ ಸಂಭ್ರಮಕ್ಕೆ ಕೊರತೆ ಇರುವುದಿಲ್ಲ. ಈ ಮಧ್ಯೆ ವರನು ಧರಿಸಿದ್ದ ಪೇಟದಲ್ಲಿ ವಿಷದ ಹಾವೊಂದು ಅವಿತಿರುತ್ತದೆ. ವರನನ್ನು ಆ ಸರ್ಪವು ಕಚ್ಚಿಬಿಡುತ್ತದೆ. ದೇಹಕ್ಕೆ ವಿಷ ಏರಿ ಆತನು ದೇಹ ತ್ಯಾಗ ಮಾಡುತ್ತಾನೆ. ವರ ಮತ್ತು ವಧುವಿನ ಕಡೆಯ ಜನರು ಭೀತಿಯಿಂದ ವರ್ತಿಸಲು ಆರಂಭಿಸುತ್ತಾರೆ. ಆಗ ಅಲ್ಲಿ ನೆರೆದವರಲ್ಲಿ ಒಬ್ಬರು ವಾದಿರಾಜ ತೀರ್ಥರ ಬಗ್ಗೆ ತಿಳಿಸಿ ಅವರಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಹೇಳುತ್ತಾರೆ. ಎಲ್ಲರೂ ವಾದಿರಾಜನನ್ನು ಭೇಟಿ ಮಾಡಿ ತಮಗೆ ಎದುರಾಗಿರುವ ಆ ದುರವಸ್ಥೆಯ ಬಗ್ಗೆ ಹೇಳುತ್ತಾರೆ.
ಆಗ ವಾದಿರಾಜರು ಎಲ್ಲರಿಗೂ ಧೈರ್ಯವನ್ನು ತುಂಬುತ್ತಾ ನನ್ನ ಬಳಿ ಒಂದು ಪರಿಹಾರವಿದೆ. ಅದನ್ನು ನೀಡುತ್ತೇನೆ. ಎದುರಾಗಿರುವ ಈ ದುಸ್ಥಿತಿ ದೂರವಾಗುತ್ತದೆ. ಮಾತ್ರವಲ್ಲ ಈ ದಂಪತಿಗಳು ಬಹುಕಾಲರವರೆಗೆ ಸಂತೋಷದಿಂದ ಜೊತೆಯಾಗಿ ಜೀವನ ನಡೆಸುತ್ತಾರೆ ಎಂದು ಹೇಳುತ್ತಾರೆ. ಆದರೆ ಆ ಪರಿಹಾರವು ಗ್ರಂಥದ ರೂಪದಲ್ಲಿ ಇದೆ ಎನ್ನುತ್ತಾರೆ. ಎಲ್ಲರೂ ಅವರು ಕೊಡುವ ಪರಿಹಾರಕ್ಕಾಗಿ ಕಾಯುತ್ತಿರುವ ವೇಳೆ ವಾದಿರಾಜರು ತಾವು ರಚಿಸಿದ್ದ ಗ್ರಂಥವನ್ನು ನೀಡುತ್ತಾರೆ. ಆ ಗ್ರಂಥ ಬೇರೆ ಯಾವುದು ಅಲ್ಲ ಶ್ರೀ ಲಕ್ಷ್ಮಿ ಶೋಭಾನೆ ಹಾಡು. ಇದನ್ನು ಪಠಣೆ ಮಾಡಿದಾಗ ದೈವಾನುಗ್ರಹದಿಂದ ವರನಿಗೆ ಪುನರ್ಜನ್ಮ ದೊರೆಯುತ್ತದೆ ಎಂದು ಹೇಳುತ್ತಾರೆ . ವರ ಮತ್ತು ವಧುವಿನ ಕಡೆಯವರು ಹೆಚ್ಚಿನ ಆಸ್ಥೆಯಿಂದ ಮತ್ತು ಆಸಕ್ತಿಯಿಂದ ಭಕ್ತಿಯಿಂದ ಈ ಹಾಡಿನ ಪಾರಾಯಣ ಮಾಡುತ್ತಾರೆ. ಆ ತಕ್ಷಣವೇ ಆವರನಿಗೆ ಮರು ಜೀವ ಬರುತ್ತದೆ. ಒಮ್ಮೆ ಅಸುನೀಗಿದ್ದ ಬಾಲಕನನ್ನು ನೀರನ್ನು ಚುಮುಕಿಸಿ ಬದುಕಿಸಿದ್ದ ವಾದಿರಾಜರು, ಲಕ್ಷ್ಮಿ ಶೋಭಾನೆ ಹಾಡಿನ ಪರಿಚಯವನ್ನು ಮತ್ತು ಅದರಿಂದ ದೊರೆವ ಶುಭಫಲಗಳನ್ನು ಎಲ್ಲವರಿಗೂ ಅರ್ಥಮಾಡಿಸಲು ಪಾರಾಯಣ ಮಾಡಲು ಹಾಡಿನ ರೂಪದ ಈ ಗ್ರಂಥವನ್ನು ನೀಡುತ್ತಾರೆ.
ಲಕ್ಷ್ಮೀ ಸ್ವಯಂವರದ ವರ್ಣನೆ
ಈ ಹಾಡಿನ ಉದ್ದಕ್ಕೂ ಶ್ರೀ ಲಕ್ಷ್ಮಿಯ ಸ್ವಯಂವರದ ಆಚರಣೆ ವರ್ಣಿತವಾಗಿದೆ. ಅಸುರರು ಮತ್ತು ಸುರರ ನಡುವೆ ಇದ್ದ ನಾರಾಯಣನನ್ನು ವರಿಸುವ ಪರಿಯನ್ನು ಇದರಲ್ಲಿ ವರ್ಣಿಸಲಾಗಿದೆ. ಇಂದಿಗೂ ಸಹ ಲಕ್ಷ್ಮಿ ಸೋಬಾನೆ ಹಾಡನ್ನು ಪಾರಾಯಣ ಮಾಡಿದ್ದೆ ಆಗಲಿ ಅವಿವಾಹಿತರಿಗೆ ವಿವಾಹವಾಗುತ್ತದೆ. ವಿವಾಹಿತರಿಗೆ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತವೆ. ಕೇವಲ ಇದಲ್ಲದೆ ದಾರಿದ್ರವು ತೊಲಗಿ ಹಣದ ಅನುಕೂಲವಾಗುತ್ತದೆ. ಒಟ್ಟಾರೆ ಸಕಲೈಶ್ವರ್ಯಗಳು ಇದರಿಂದ ಲಭಿಸುತ್ತವೆ.
ಯಾವುದೇ ವ್ಯಕ್ತಿಯ ಜೀವನವು ಸುಭಿಕ್ಷವಾಗಿ ಇರಬೇಕು ಎಂದರೆ ಹಲವರ ಹಾರೈಕೆ ಮುಖ್ಯ ವಾಗುತ್ತದೆ. ಮದುವೆಯ ಮನೆಯಲ್ಲಿ ಶ್ರೀ ಲಕ್ಷ್ಮಿ ಶೋಭಾನೆ ಹಾಡನ್ನು ಹೇಳಿದರೆ ಚಿಕ್ಕವರಿಗೆ ಮುಖ್ಯವಾಗಿ ವಧು ವರರಿಗೆ ಆಶೀರ್ವಾದವಾಗುತ್ತದೆ. ವಯಸ್ಸಿನಲ್ಲಿ ದೊಡ್ಡವರಾದವರಿಗೆ ಬಹು ಮುಖ್ಯ ಗ್ರಂಥದ ಪಾರಾಯಣದಂತಿರುತ್ತದೆ. ಈ ಕಾರಣದಿಂದಾಗಿ ಪ್ರತಿಯೊಬ್ಬರು ಶ್ರೀ ಲಕ್ಷ್ಮಿ ಶೋಭನ ಹಾಡಿನಿಂದ ನಿರೀಕ್ಷಿತ ಯಶಸ್ಸನ್ನು ಅತಿ ಶೀಘ್ರವಾಗಿ ಪಡೆಯುತ್ತಾರೆ. ಈ ಗ್ರಂಥದ ಉದ್ದಕ್ಕೂ ಲಕ್ಷ್ಮಿ ಮತ್ತು ನಾರಾಯಣರಿಗೆ ಶುಭವನ್ನು ಕೋರುವುದೇ ಆಗುತ್ತದೆ. ದೇವರಿಗೆ ಶುಭ ಕೋರಿದರೆ ಅವನು ನಮ್ಮನ್ನು ಕೈಬಿಡುವುದಿಲ್ಲ.
ಲಕ್ಷ್ಮೀ ಶೋಭಾನೆಯ ಪ್ರಾರ್ಥನಾ ಪದ್ಯಗಳು
ಕೃತಿಯ ಆರಂಭದ ಪಲ್ಲವಿಯಲ್ಲಿ ಬರುವ ಸುಬಗ, ಸುಗುಣ, ತ್ರಿವಿಕ್ರಮ, ಸುರಪ್ರಿಯ ಇವೆಲ್ಲವೂ ಭಗವಾನ್ ನಾರಾಯಣನನ್ನು ಕುರಿತದ್ದೆ ಆಗಿದೆ. ಪ್ರಾರ್ಥನೆಯ ಬಗ್ಗೆ ಇರುವ ಕೆಳಕಂಡ ಸಾಲುಗಳನ್ನು ಗಮನಿಸಿ.
"ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ | ಪಕ್ಷಿವಾಹನ್ನಗೆರಗುವೆ | ಪಕ್ಷಿವಾಹನ್ನಗೆರಗುವೆ ಅನುದಿನ | ರಕ್ಷಿಸಲಿ ನಮ್ಮ ವಧುವರರ"
ಈ ಮೇಲಿನನ ಸಾಲುಗಳಲ್ಲಿ ಲಕ್ಷ್ಮೀ ಮತ್ತು ನಾರಾಯಣ ಎಂಬ ಪದಗಳು ಯಾರನ್ನು ಸೂಚಿಸುತ್ತದೆ ಎಂಬುದು ತಿಳಿಯುತ್ತದೆ. ಅಂದರೆ ವಧು-ವರರನ್ನು ಲಕ್ಷ್ಮೀನಾರಾಯಣರು ಕಾಪಾಡಲಿ ದೇವರಲ್ಲಿ ಬೇಡುತ್ತೇವೆ. ಆದರೆ ಪಕ್ಷಿವಾಹನ್ನಗೆರಗುವೆ ಎಂಬ ಪದವು ಎರಡು ಬಾರಿ ಬರುತ್ತವೆ. ಒಂದು ಗರುಡವಾಹನ ಮತ್ತೊಂದು ವಾಯುವಾಹನ. ಇಂಥ ಪದಗಳು ಹಲವಾರು ಬಾರಿ ಬರುತ್ತವೆ. ಆದ್ದರಿಂದ ವಾದಿರಾಜರ ಗ್ರಂಥಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಮಾತು.
ವರಮಹಾಲಕ್ಷ್ಮೀ ಪೂಜೆ ಆಗಲಿ ಅಥವ ಶುಕ್ರವಾರದಂದು ಮಾಡುವ ಪೂಜೆ ಆಗಲಿ ಹೂ, ಕುಂಕುಮ ಅಥವ ಅರಿಷಿಣ ಮುಂತಾದ ಮಂಗಳದ್ರವ್ಯಗಳಿಂದ ಪೂಜೆ ಮಾಡುವುದಲ್ಲದೆ, ಚಿನ್ನಾಭರಣಗಳನ್ನು ಸಹ ಸಮರ್ಪಿಸುತ್ತೇವೆ. ಇದನ್ನು ಶ್ರೀ ಲಕ್ಶ್ಮೀ ಶೋಭನದ ಹಾಡಿನಲ್ಲಿಯೂ ಇದನ್ನು ಕಾಣಬಹುದು. ಈ ಸಾಲುಗಳನ್ನು ಗಮನಿಸಿ.
"ರನ್ನದ ಮೊಲೆಗಟ್ಟು ಚಿನ್ನಾಭರಣಗಳ | ಚೆನ್ನೆ ಮಹಲಕ್ಷುಮಿ ಧರಿಸಿದಳೆ | ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ | ಮನ್ನೆಯ ವಧುವರರ ಸಲಹಲಿ"
ಅಂದರೆ ರತ್ನ ಮುತ್ತಿನಿಂದ ಕೂಡಿದ , ಆಕರ್ಷಕ ಬಟ್ಟೆ ಧರಿಸಿದ, ಚಿನ್ನದ ಆಭರಣಗಳನ್ನು ಧರಿಸಿದ ಮಹಾಲಕ್ಷ್ಮೀಯು ಈ ಮನೆಯ ವಧು-ವರರನ್ನು ಸಲಹಲಿ ಎಂಬುದೇ ಇದರ ಅರ್ಥ. ಈ ಕಾರಣದಿಂದಾಗಿ ಶ್ರೀ ಲಕ್ಷ್ಮೀ ಪೂಜೆ ಮಾಡುವ ವೇಳೆ ಸಾಂಕೇತಿಕವಾಗಿಯಾದರೂ ಆಭರಣವನ್ನು ಸಮರ್ಪಿಸಬೇಕು. ಕಮಲದ ಹೂವಿನಿಂದ ಪೂಜೆಮಾಡುತ್ತೇವೆ. ಇದರ ಬಗ್ಗೆಯೂ ಶ್ರೀ ಲಕ್ಶ್ಮೀ ಶೋಭನದ ಹಾಡಿನಲ್ಲಿಯೂ ಇದನ್ನು ಕಾಣಬಹುದು. ಈ ಸಾಲುಗಳನ್ನು ಗಮನಿಸಿ.
"ಎಂದೆಂದೂ ಬಾಡದ ಅರವಿಂದ ಮಾಲೆಯ | ಇಂದಿರೆ ಪೊಳೆವ ಕೊರಳಲ್ಲಿ | ಇಂದಿರೆ ಪೊಳೆವ ಕೊರಳಲ್ಲಿ ಧದಿಸಿದಳೆ ಅವ | ಳಿಂದು ವಧುವರರ ಸಲಹಲಿ"
ಕಮಲದ ಹೂವನ್ನು ಧರಿಸಿದ ಶ್ರೀಲಕ್ಷ್ಮಿಯು ಈ ವಧೂವರರನ್ನು ಕಾಪಾಡಲಿ ಎಂಬುದು ಇದರ ಅರ್ಥ. ಆದ್ದರಿಂದಲೇ ಕಮಲದ ಹೂವಿನ ಪೂಜೆ ಅತಿ ಮುಖ್ಯ. ಇದರಿಂದ ದಂಪತಿಗಳಿಗೂ ಒಳ್ಳೆಯದು. ಪೂಜೆಗೆ ಕುಳಿತ ಹೆಣ್ಣುಮಕ್ಕಳು ನಿಜಕ್ಕೂ ದೈವಸ್ವರೂಪವೇ ಆಗಿರುತ್ತಾರೆ. ಗಂಡಸರು ಸಹ ಉತ್ತರೀಯವನ್ನು ಹೊದ್ದಿರುತ್ತಾರೆ. ವಧು ವರರು ಸಹ ಉತ್ತರೀಯವನ್ನು ಹೊದ್ದಿರುತ್ತಾರೆ. ಇದರ ಬಗ್ಗೆ ಈ ಸಾಲುಗಳಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
"ದೇವಾಂಗ ಪಟ್ಟೆಯ ಮೇಲು ಹೊದ್ದಿಕೆಯ | ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ | ಸೇವಕ ಜನರ ಸಲಹಲಿ"
ಅಂದರೆ ಶುಭ್ರವಾದ ಮೇಲುಹೊದಿಕೆಯನ್ನು ಧರಿಸಿದ ಮಾತೆಯು ಮನೆಯ ವಧೂವರರನ್ನು ಸಲಹಲಿ ಎಂಬುದೇ ಇದರ ಅರ್ಥ. ಇದೇ ರೀತಿಯ ಸಾಲುಗಳನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸುವ ಶ್ರೀಸೂಕ್ತದಲ್ಲಿ ಸಹ "ಶುಭ್ರವಸ್ತ್ರೋತ್ತರೀಯ" ಎಂಬ ಪದದಲ್ಲಿ ಕಾಣುತ್ತೇವೆ. ಆದ್ದರಿಂದಲೇ ಮೇಲುಹೊದಿಕೆ ಇಲ್ಲದೇ ಪೂಜೆ ಮಾಡಬಾರದು. ಇದೇ ರೀತಿ ಮಂತ್ರಮುಖೇನ ದಿನನಿತ್ಯದ ಪೂಜೆಯಲ್ಲಿಯೂ ವಸ್ತ್ರವನ್ನು ಸಮರ್ಪಿಸುತ್ತೇವೆ.
ಹಿಂದಿನ ದಿನಗಳಲ್ಲಿ ಶಾಸ್ತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಈಗಿನ ದಿನಗಳಲ್ಲಿ ಶಾಸ್ತ್ರಾಕ್ಕಾಗಿ ಎಂದು ಮಾಡುತ್ತಾರೆ. ಶ್ರೀ ಲಕ್ಶ್ಮೀ ಶೋಭನದ ಹಾಡಿನಲ್ಲಿಯೂ ಶಾಸ್ತ್ರದ ಆಚರಣೆ ಬಿಡಬಾರದೆಂಬ ಸಾಲುಗಳು ಬರುತ್ತವೆ. ಈ ಸಾಲುಗಳನ್ನು ಗಮನಿಸಿ.
"ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ | ಬೇಕೆಂಬ ನ್ಯಾಯವ ತಿಳಿದುಕೊ | ಬೇಕೆಂಬ ನ್ಯಾಯವ ತಿಳಿದುಕೊ ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ | ಲುಕ್ಕನೆಂಬೋದು ಸಲಹಲಿಕೆ"
ಇದರ ಅರ್ಥ ಒಮ್ಮೆ ಮಾಡಿದ ಶಾಸ್ತ್ರದ ನಿರ್ಣವನ್ನು ಎಂದಿಗೂ ಬದಲಿಸಬಾರದು ಮತ್ತು ಬಿಡಬಾರದು. ವಿವಾಹವು ಓಲಗ ಮತ್ತು ಡೋಲಿನ ನಾದವಿಲ್ಲದೆ ನಡೆಯುವುದಿಲ್ಲ. ಇದನ್ನು ಕರೆಯುವುದೇ ಮಂಗಳವಾದ್ಯ. ವಧುವಿನ ಆಗಮನದಿಂದ ಹಿಡಿದು ಗೃಹಪ್ರವೇಶ ಶಾಸ್ತ್ರದವರೆಗೂ ಇದರ ಅವಶ್ಯಕತೆ ಇರುತ್ತದೆ. ಶ್ರೀ ಲಕ್ಶ್ಮೀ ಶೋಭನದ ಹಾಡಿನಲ್ಲಿಯೂ ಇದರ ಬಗ್ಗೆ ವ್ಯಾಖ್ಯಾನವಿದೆ. ಈ ಸಾಲುಗಳನ್ನು ಗಮನಿಸಿ
"ಕೊಂಬು ಚೆಂಗಹಳೆಗಳು ತಾಳ ಮದ್ದಳೆಗಳು | ತಂಬಟೆ ಭೇರಿ ಪಟಹಗಳು | ಭೊಂ ಭೊಂ ಎಂಬ ಶಂಖ ಡೊಳ್ಳುಮೌರಿಗಳು | ಅಂಬುಧಿಯ ಮನೆಯಲೆಸೆದವು"
ಅಂದರೆ ವಿವಾಹ ಪ್ರಾರಂಭವಾದ ವೇಳೆ ಕೊಂಬುಗಳು, ಚೆಂಗಹಳೆಗಳು, ತಾಳಗಳು, ಮದ್ದಳೆಗಳು ಮುಂತಾದ ವಾದ್ಯಗಳು ವಧುವಿನ ಮನೆಯಲ್ಲಿ ಮೊಳಗಿದವು ಎಂದು ಹೇಳಲಾಗಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರ ಮದುವೆಯಲ್ಲಿ ಸಹ ಮಂಗಳ ವಾಧ್ಯಗಳ ಸದ್ದು ಇರಬೇಕು. ದಿನನಿತ್ಯದ ಪೂಜೆಯಲ್ಲಿ ಸಹ ಘಂಟಾನಾದವು ಶುಭಸೂಚಕವಾಗಿದೆ. ಆದ್ದರಿಂದಲೇ ಶ್ರಾದ್ಧದ ದಿನ ಘಂಟಾನಾದವನ್ನೂ ಮಾಡುವುದಿಲ್ಲ. ಇವೆಲ್ಲವೂ ಶ್ರೀಹರಿಗೆ ಪ್ರಿಯವಾದವುದಾಗಿವೆ.
ವಾದಿರಾಜತೀರ್ಥರು ಲಕ್ಷ್ಮೀಶೋಭಾನೆ ಪದದ 109ನೇ ಪದ್ಯವನ್ನು ಈ ರೀತಿ ಬರೆದಿದ್ದಾರೆ.
"ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಕ್ಮೀ | ಕಾಂತನ ಕಂದನೆನಿಸಿದ | ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿ | ಪಂಥದಿ ಹೇಳಿದ ಪದವಿದು"
ಅಂದರೆ ಶ್ರೀ ಲಕ್ಶ್ಮೀ ಶೋಭನದ ಹಾಡನ್ನು ಸುಮ್ಮನೆ ಬರೆದದ್ದಲ್ಲ. ವಾದಿರಾಜರ ಕನಸಿನಲ್ಲಿ ಬಂದು ಲಕ್ಷ್ಮೀಕಾಂತ ಅಂದರೆ ಶ್ರೀಹರಿಯೆ ಕೊಂಡಾಡಿಸಿಕೊಂಡ ಎಂದು ಹೇಳಿದ್ದಾರೆ. ಆದ್ದರಿಂದ ಸ್ವಯಂ ವಾದಿರಾಜರೆ ಇದನ್ನು ಹೇಳಿಕೊಂಡಲ್ಲಿ ಮಹಾಫಲ ದೊರೆಯುವುದು ಎಂದು ತಿಳಿಸಿದ್ದಾರೆ.
ಇದು ಕೇವಲ ಶೋಭನದ ಹಾಡಲ್ಲದೆ ನಮ್ಮ ದಿನನಿತ್ಯ ಕ್ರಮದಲ್ಲಿ ಹೇಗಿರಬೇಕೆಂಬ ಸಂದೇಶವಿದೆ. ಆದ್ದರಿಂದ ಇದನ್ನು ಓದಲು ಸಾಧ್ಯವಾಗದೇ ಹೋದಲ್ಲಿ ಕನಿಷ್ಠಪಕ್ಷ ಒಂದೇ ಮನಸ್ಸಿನಿಂದ ಮತ್ತು ಒಳ್ಳೇ ಮನಸ್ಸಿನಿಂದ ಕೇಳಿದರೆ ಜೀವನದಲ್ಲಿ ಎದುರಾಗುವ ಸಕಲಾರಿಷ್ಟಗಳು ದೂರವಾಗುವುವು. ಎಲ್ಲರೂ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುವುದು.
ಬರಹ: ಎಚ್.ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಇದು ಶಾಸ್ತ್ರ ಮತ್ತು ಪ್ರಚಲಿತ ನಂಬಿಕೆಗಳನ್ನು ಆಧರಿಸಿದ ಲೇಖನ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)