ಭೀಷ್ಮ ದ್ವಾದಶಿ: ದೀರ್ಘಾಯುಷ್ಯ ಕರುಣಿಸುವ 5 ದಿನಗಳ ವಿಶಿಷ್ಟ ಹಬ್ಬವಿದು, ದಿನಾಂಕ, ಆಚರಣೆ ವಿಧಾನದ ವಿವರ ಇಲ್ಲಿದೆ
ಮಾಘ ಶುದ್ದ ಅಷ್ಟಮಿಯಂದು ಭೀಷ್ಮಾಚಾರ್ಯರು ದೇಹ ತ್ಯಾಗ ಮಾಡುತ್ತಾರೆ. ಅದಾದ ಐದನೇ ದಿನದ ದ್ವಾದಶಿಯಂದು ಭೀಷ್ಮ ದ್ವಾದಶಿ ಆಚರಣೆ ಇದೆ. ದೇಹ ತ್ಯಾಗಕ್ಕೆ ಮೊದಲು ಶರಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಉಪದೇಶ ಮಾಡಿದ್ದರು. (ಬರಹ: ಸತೀಶ್ ಎಸ್.)

ಮಾಘ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು 'ಭೀಷ್ಮ ದ್ವಾದಶಿ' ವ್ರತವನ್ನು ಆಚರಿಸಬೇಕು. ಪಿತಾಮಹ ಭೀಷ್ಮರನ್ನು ಸ್ಮರಿಸುವ ಮೂಲಕ ಕೆಲವರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಈ ದಿನದಂದು ತಿಲ ಸ್ನಾನ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತದೆ. ನದಿ ತೀರದಲ್ಲಿ ವಿಷ್ಣುವಿನ ಪೂಜೆಯಿಂದ ನಿರೀಕ್ಷಿತ ಫಲಗಳು ದೊರೆಯುತ್ತವೆ. ತಿಲದಿಂದ (ಎಳ್ಳು) ತಯಾಸಿದ ಆಹಾರ ಪದಾರ್ಥವನ್ನು ನೇವೈದ್ಯವಾಗಿ ಅರ್ಪಿಸಬೇಕು.
ಭೀಷ್ಮ ಪಿತಾಮಹರು ಇಚ್ಛಾಮರಣಿಗಳು. ತಮ್ಮ ಮನದ ಆಸೆಯಂತೆ ಶರಶಯ್ಯೆಯಲ್ಲಿ ಇದ್ದ ಭೀಷ್ಮರು ಪೌರಾಣಿಕ ಹಿನ್ನೆಲೆಯ ಪ್ರಕಾರ ಮಾಘ ಶುದ್ದ ಅಷ್ಟಮಿಯ ತಿಥಿಯಂದು ತಮ್ಮ ದೇಹ ತ್ಯಾಗ ಮಾಡುತ್ತಾರೆ. ಆದರೆ ಇದನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಆದ್ದರಿಂದಲೇ ಭೀಷ್ಮಅಷ್ಟಮಿ ಮತ್ತು ಭೀಷ್ಮದ್ವಾದಶಿ ಎಂಬ ಹೆಸರುಗಳು ಬಂದಿವೆ. ಇದೇ ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಉಪದೇಶ ಮಾಡಿದ್ದು.
ಈ ವರ್ಷ ಭೀಷ್ಮ ದ್ವಾದಶಿ ತಿಥಿಯು ಫೆಬ್ರುವರಿ 9, ಭಾನುವಾರ ಬಂದಿದೆ. ಮಹಾಭಾರತದ ಯುದ್ದದಲ್ಲಿ ಭೀಷ್ಮರು ಕೌರವನ ಆಶಯ ಮತ್ತು ಅವರಿಗೆ ಕೊಟ್ಟ ಮಾತಿಗೆ ಕಟ್ಟು ಬಿದ್ದು ದುರ್ಯೋಧನನ ಪರವಾಗಿ ನಿಲ್ಲುತ್ತಾರೆ. ಮನಸ್ಸಿಲ್ಲದ ಮನಸ್ಸಿನಿಂದ ಪಾಂಡವರ ವಿರುದ್ದವಾಗಿ ಯುದ್ಧವನ್ನು ಮಾಡುತ್ತಾರೆ. ಅಪ್ರತಿಮ ಪರಾಕ್ರಮದ ನಡುವೆಯೂ ಪಾಂಡವರಿಗೆ ಭೀಷ್ಮರನ್ನು ಸೋಲಿಸುವುದು ಅಸಾಧ್ಯವಾಗುತ್ತದೆ. ಕಾರಣವೆಂದರೆ ಭೀಷ್ಮರು ಬಯಸಿದಾಗ ಮಾತ್ರ ಮರಣ ಬರುವ ವರವೊಂದು ಅವರಿಗೆ ಇತ್ತು. ಆದರೆ ಸ್ತ್ರೀಯರ ಜೊತೆಯಲ್ಲಿ ಯುದ್ದ ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಭೀಷ್ಮರು ಮಾಡಿದ್ದರು. ಈ ವಿಚಾರವು ಪಾಂಡವರಿಗೆ ತಿಳಿಯುತ್ತದೆ.
ಮಹಾಭಾರತ ಯುದ್ಧದಲ್ಲಿ ಭೀಷ್ಮರ ಶಸ್ತ್ರತ್ಯಾಗ
ನೇರ ಯುದ್ದದಿಂದ ಭೀಷ್ಮರನ್ನು ಕೊಲ್ಲಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾದ ನಂತರ ಮತ್ತೊಂದು ಆಲೋಚನೆಯನ್ನು ಪಾಂಡವರು ಮಾಡುತ್ತಾರೆ. ಧರ್ಮರಾನು ಸತ್ಯ, ಧರ್ಮ ಮತ್ತು ನ್ಯಾಯದ ಪಕ್ಷಪಾತಿ. ಅಧರ್ಮದಿಂದ ಯುದ್ದವನ್ನು ಮಾಡಲು ಒಪ್ಪುವುದಿಲ್ಲ. ಆ ಸಂದರ್ಭದಲ್ಲಿ ಭೀಷ್ಮರು ಯುದ್ದಮಾಡುವ ಸಂದರ್ಭದಲ್ಲಿ ಅವರ ಎದುರು ಶಿಖಂಡಿಯನ್ನು ನಿಲ್ಲಿಸಬೇಕೆಂಬ ಯೋಜನೆಯು ರೂಪುಗೊಂಡಿತು. ಅದರಂತೆ ಯುದ್ದ ಮಾಡುವ ವೇಳೆ ಪಾಂಡವರು ಶಿಖಂಡಿಯನ್ನು ಭೀಷ್ಮ ಪಿತಾಮರ ಮುಂದೆ ನಿಲ್ಲಿಸುತ್ತಾರೆ. ಇದನ್ನು ಕಂಡ ಭೀಷ್ಮರು ಮುಗುಳ್ನಕ್ಕು ತಮ್ಮ ಶಸ್ತ್ರಾಸ್ತ್ರಗಳನ್ನು ಬಳಸದೆ ಬದಿಗೆ ಇರಿಸುತ್ತಾರೆ.
ಭೀಷ್ಮರನ್ನು ಯಾರೊಬ್ಬರೂ ಸೋಲಿಸಲು ಸಾಧ್ಯವಿಲ್ಲವೆಂದು ಶ್ರೀಕೃಷ್ಣನ ಆದಿಯಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದ್ದರಿಂದ ಮನದಲ್ಲಿ ನೋವುಂಡ ಅರ್ಜುನನು ತಡಮಾಡದೆ ಈ ಅವಕಾಶವನ್ನು ಬಳಸಿಕೊಂಡು ಭೀಷ್ಮ ಪಿತಾಮಹರ ಮೇಲೆ ಬಾಣಪ್ರಯೋಗ ಮಾಡುತ್ತಾನೆ. ಆದರೆ ಗೌರವಾನ್ವಿತ ಮತ್ತು ಪೂಜನೀಯ ಭೀಷ್ಮರ ದೇಹವು ನೆಲದ ಮೇಲೆ ಮಣ್ಣಿನ ಮೇಲೆ ಬೀಳಬಾರದೆಂಬ ಕಾರಣದಿಂದ ಅರ್ಜುನನು ಬಾಣಗಳ ಸುರಿಮಳೆಯಿಂದ ಬಾಣಗಳ ಹಾಸಿಗೆಯನ್ನೇ ಸಿದ್ದಪಡಿಸುತ್ತಾನೆ. ಗಾಯಗೊಂಡ ಭೀಷ್ಮರು ಶರಶಯ್ಯೆಯ ಮೇಲೆ ಮಲಗುತ್ತಾರೆ. ಆದರೆ ಆ ಕ್ಷಣವು ದಕ್ಷಿಣಾಯನ ಆದ್ದರಿಂದ ಪಿತಾಮಹರು ಪ್ರಾಣತ್ಯಾಗ ಮಾಡಲು ಇಚ್ಚಿಸುವುದಿಲ್ಲ.
ಮಾಘ ಮಾಸದ ಅಷ್ಟಮಿ ಭೀಷ್ಮರ ದೇಹ ತ್ಯಾಗ
ಸೂರ್ಯನು ತನ್ನ ಫಥವನ್ನು ಬದಲಾಯಿಸಿ ಉತ್ತರಾಯಣಕ್ಕೆ ಬರುವ ದಿನದವರೆಗೂ ಭೀಷ್ಮರು ಕಾಯುತ್ತಾರೆ. ಉತ್ತರಾಯಣ ಆರಂಭವಾದ ನಂತರ ಮಾಘ ಮಾಸದ ಅಷ್ಟಮಿಯಂದು ಭೀಷ್ಮರು ದೇಹತ್ಯಾಗ ಮಾಡುತ್ತಾರೆ. ಪ್ರಾಣತ್ಯಾಗವನ್ನು ಮಾಡುತ್ತಾರೆ. ಒಟ್ಟು ಐದುದಿನಗಳ ಕಾಲ ಇದನ್ನು ಇಂದಿಗೂ ಆಚರಿಸಲಾಗುತ್ತದೆ. ಈ ಕಾರಣದಿಂದ ಮಾಘ ಮಾಸದ ಶುಕ್ಲ ಪಕ್ಷ ದ್ವಾದಶಿ ತಿಥಿಯನ್ನು ಭೀಷ್ಮ ದ್ವಾದಶಿ ಎಂದು ಕರೆಯುತ್ತಾರೆ.
ಭೀಷ್ಮ ದ್ವಾದಶಿಯ ದಿನ ಭೀಷ್ಮ ಮತ್ತು ಭಗವಾನ್ ವಿಷ್ಟುವಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆ ದಿನ ಅರುಣೋದಯದ ವೇಳೆಯಲ್ಲಿ ಸ್ನಾನವನ್ನು ಮಾಡಬೇಕು. ಅರುಣನನ್ನು ಪೂಜಿಸಿದ ನಂತರ ಶ್ರೀಸೂರ್ಯ ಭಗವಾನ್ ಮತ್ತು ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಈ ದಿನದಂದು ಭೀಷ್ಮ ಪಿತಾಮಹರಿಗೆ ಎಳ್ಳು, ನೀರು ಮತ್ತು ಕುಶದಿಂದ (ದರ್ಭೆ) ತರ್ಪಣವನ್ನು ಬಿಡಬೇಕು. ಕೆಲವೆಡೆ ಭೀಷ್ಮರಿಗೆ ಶ್ರಾದ್ಧವನ್ನು ಮಾಡುವ ಪದ್ಧತಿ ರೂಡಿಯಲ್ಲಿದೆ. ಇವರೊಂದಿಗೆ ಕುಟುಂಬದ ಪೂರ್ವಜರನ್ನು ಸಹ ಈ ದಿನ ಸ್ಮರಿಸಲಾಗುತ್ತದೆ.
ಈ ಧಾರ್ಮಿಕ ಆಚರಣೆಗಳಿಂದ ಜೀವನದ ಕಷ್ಟಗಳು ನಿವಾರಣೆಯಾಗುತ್ತವೆ. ವಂಶದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಎಳ್ಳು ದಾನದಿಂದ ಹಿಡಿದು ಭೀಷ್ಮ ದ್ವಾದಶಿಯ ದಿನದಂದು ಎಳ್ಳಿನಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥವನ್ನು ಸೇವಿಸುವವರೆಗೆ ಎಲ್ಲಾ ವಿಧಿವಿಧಾನಗಳು ಮಂಗಳಕರವಾಗಿರುತ್ತವೆ. ಯಾವುದೇ ವಸ್ತುವನ್ನು ಅಥವಾ ಪದಾರ್ಥಗಳನ್ನು ಇಂದು ದಾನ ಮಾಡಬಹುದು. ಇದರಿಂದ ಶುಭಫಲಗಳು ದೊರೆಯುತ್ತವೆ.
