ರಾಮಾನುಜಾಚಾರ್ಯ ಜಯಂತಿ 2024; ವಿಶಿಷ್ಟಾದ್ವೈತ ತತ್ವದ ಮೂಲಕ ಮೋಕ್ಷದ ಮಾರ್ಗ ತಿಳಿಸಿದ ಸಮಾನತೆಯ ಸಂತ, ಕರ್ನಾಟಕದೊಂದಿಗೆ ಆಪ್ತ ಒಡನಾಟ
ಶ್ರೀ ರಾಮಾನುಜಾಚಾರ್ಯರು ವಿಷ್ಣುವಿನ ಆರಾಧಕರು, ತತ್ವಜ್ಞಾನಿ, ವಿಧ್ವಾಂಸರಾಗಿದ್ದವರು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವುದರ ಜೊತೆಗೆ ಸಮಾಜದಲ್ಲಿ ಸಮಾನತೆಯನ್ನು ಸಾರಿದರು. ಈ ವರ್ಷ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಮೇ 12 ರಂದು ಆಚರಿಸಲಾಗುತ್ತಿದೆ.
ಭರತ ಭೂಮಿ ಕಂಡ ಆಚಾರ್ಯತ್ರಯರಲ್ಲಿ ರಾಮಾನುಜಾಚಾರ್ಯರು ಒಬ್ಬರು. ವಿಷ್ಣುವಿನ ಆರಾಧಕರಾಗಿದ್ದ ರಾಮಾನುಜಾಚಾರ್ಯರು ಹಿಂದೂ ಧರ್ಮದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರು. ಸಮಾಜದಲ್ಲಿದ್ದ ಅಸ್ಪ್ರಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಮಹಿಮರು. 11ನೇ ಶತಮಾನದಲ್ಲಿ ಸುಮಾರು 1017ನೇ ಇಸವಿಯ ಆಸುಪಾಸಿನಲ್ಲಿ ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಲಕ್ಷ್ಮಣ ಅಥವಾ ಇಳಯ ಪೆರುಮಲ್ ಎಂಬುದು ಅವರ ಜನ್ಮನಾಮವಾಗಿತ್ತು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸಾರಿದ ಮಹಾನ್ ಗುರುವಾಗಿ, ತತ್ವಜ್ಞಾನಿಯಾಗಿ ಅವರು ಬಾಳಿದರು. ಉತ್ತರ ಮತ್ತು ದಕ್ಷಿಣ ಭಾರತದ ವೈಷ್ಣವ ಪಂಥವನ್ನು ಒಗ್ಗೂಡಿಸಿದರು. ವಿಷ್ಣುವಿನ ಆರಾಧನೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಬಲಗೊಳಿಸಿದರು. ತಮ್ಮ ಸುದೀರ್ಘ 120 ವರ್ಷಗಳ ಜೀವನದಲ್ಲಿ ವಿಷ್ಣುವನ್ನು ಪೂಜಿಸುವುದು ಮೋಕ್ಷವನ್ನು ಪಡೆಯಲು ಇರುವ ಏಕೈಕ ಮಾರ್ಗ ಎಂದು ಹೇಳಿದರು.
ರಾಮಾನುಜಾಚಾರ್ಯರ ಜನನ
ಪಶ್ಚಿಮ ಮದ್ರಾಸಿನಿಂದ ಸುಮಾರು 25 ಕಿಮೀ ದೂರದಲ್ಲಿರುವ ಶ್ರೀಪೆರಂಬದೂರು ಎಂಬ ಹಳ್ಳಿಯಲ್ಲಿ 1017 ರಲ್ಲಿ ರಾಮಾನುಜಾಚಾರ್ಯರು ಜನಿಸಿದರು. ತಂದೆ ಕೇಶವ ಸೋಮಯಾಜಿ ಮತ್ತು ತಾಯಿ ಕಾಂತಿಮತಿ. ರಾಮಾನುಜಾಚಾರ್ಯರು 1033 ರಲ್ಲಿ ರಶಾಂಬಲರನ್ನು ಮದುವೆಯಾದರು. ಮದುವೆಯಾದ ಕೆಲ ದಿನಗಳಲ್ಲೇ ಅವರ ತಂದೆಯ ದೇಹಾಂತ್ಯವಾಯಿತು. ಹಾಗಾಗಿ ಸಂಸಾರದ ನೌಕೆ ದೂಡಲು ಅವರು ತಮ್ಮ ತಾಯಿ ಮತ್ತು ಮಡದಿಯೊಂದಿಗೆ ಕಾಂಚಿಪುರಂಗೆ ಬಂದು ನೆಲೆಸಿದರು. 30 ವರ್ಷದವರೆಗೆ ಸಾಂಸಾರಿಕ ಜೀವನ ನಡೆಸಿದ ರಾಮಾನುಜರು ನಂತರ ಅದರಿಂದ ವಿಮುಕ್ತರಾದರು.
ರಾಮಾನುಜಾಚಾರ್ಯರಿಗೆ ವಿಷ್ಣು ದರ್ಶನ
ರಾಮಾನುಜಾಚಾರ್ಯರ ಗುರು ಯಾದವಪ್ರಕಾಶರು. ಗುರುವಿನ ಮುಖಾಂತರ ಅವರು ಸಾಕಷ್ಟು ಅಧ್ಯಯನ ನಡೆಸಿದರು. ನಂತರ ರಾಮಾನುಜರಿಗೆ ಸಾಕ್ಷಾತ್ ವಿಷ್ಣುವಿನ ದರ್ಶನವಾಯಿತು. ಪ್ರತಿನಿತ್ಯ ವಿಷ್ಣುವನ್ನು ಆರಾಧಿಸಲು ಪ್ರಾರಂಭಿಸಿದರು. ಕಂಚಿಯ ವರದರಾಜ ದೇವಸ್ಥಾನದಲ್ಲಿ ಅರ್ಚಕರಾದರು. ನಂತರ ಮೊಕ್ಷ ಸಾಧನೆಯ ಮಾರ್ಗ ಹಿಡಿದರು. ಮುಂದೆ ರಂಗನಾಥ ದೇವಸ್ಥಾನದಲ್ಲೂ ಸಹ ತಮ್ಮ ಕೆಲಸ ಮುಂದುವರಿಸಿದರು. ಉಪನಿಷತ್ ಸಿದ್ಧಾಂತದಲ್ಲಿ ಬರುವ ದೇವರು ಮತ್ತು ಆತ್ಮದ ಆರಾಧನೆಯು ಅತ್ಯಗತ್ಯವಾಗಿದೆ ಎಂದು ಅಲ್ಲಿ ಅವರು ಬೋಧನೆ ಮಾಡಲು ಪ್ರಾರಂಭಿಸಿದರು. ಹಾಗಾಗಿ ಅವರ ಬೋಧನೆಯಲ್ಲಿ ವೈಷ್ಣವ ಮತ್ತು ಭಾಗವತಗಳು ಎರಡನ್ನೂ ಕಾಣಬಹುದು. 20 ವರ್ಷಗಳ ನಂತರ ಅವರು ಪುನಃ ಶ್ರೀರಂಗಂಗೆ ಮರಳಿದರು. ಮತ್ತೆ ಅಲ್ಲಿ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರಿದರು. ತಮ್ಮ ಸಿದ್ಧಾಂತವನ್ನು ಪ್ರಸಾರ ಮಾಡಲು ಅವರು 74 ಕೇಂದ್ರಗಳನ್ನು ಸ್ಥಾಪಿಸಿದರು. 120ನೇ ವಯಸ್ಸಿನಲ್ಲಿ ನಿಧನರಾದರು.
ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಗೆ ಭಾಷೆಯನ್ನು ಬರೆದರು. ಉಪನಿಷತ್‌ಗಳನ್ನು ಅರ್ಥಮಾಡಿಕೊಳ್ಳುವ ಎಲ್ಲಾ ವಿಧಾನಗಳನ್ನು ವಿವರವಾಗಿ ವಿವರಿಸಿದರು. ಬ್ರಹ್ಮ–ಸೂತ್ರಗಳಿಗೆ ಶ್ರೀ ಭಾಷ್ಯ, ಭಗವದ್ಗೀತೆ ಭಾಷ್ಯ ಎಂದು ಕರೆಯಲ್ಪಡುವ ವ್ಯಾಖ್ಯಾನಗಳನ್ನು ಬರೆದರು. ವೇದಾಂತಗಳಿಗೆ ಅವರ ಕೊಡುಗೆ ಅಪಾರ. ಮೋಕ್ಷ ಸಾಧನೆಗೆ ದೇವರ ಆರಾಧನೆ ಎಷ್ಟು ಅಗತ್ಯವಾಗಿದೆ ಎಂದು ಹೇಳಿದರು. ಮನುಷ್ಯ, ಆತ್ಮ ಮತ್ತು ಪರಮಾತ್ಮ ಈ ಮೂರು ಬೇರೆ ಬೇರೆ ಎಂದು ಹೇಳಿದರು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸಾರಲು ದೇಶ ಪರ್ಯಟನೆ ಮಾಡಿದರು.
ಯಜ್ಞ ಮೂರ್ತಿ ಮತ್ತು ರಾಮಾನುಜಾಚಾರ್ಯರ ನಡುವೆ 16 ದಿನಗಳ ಕಾಲ ನಿರಂತರ ವಾದ ಮತ್ತು ಪ್ರತಿವಾದಗಳು ನಡೆದವು. ಕೊನೆಯಲ್ಲಿ ಯಜ್ಞ ಮೂರ್ತಿ ಸೋಲನ್ನು ಒಪ್ಪಿಕೊಂಡು ರಾಮಾನುಜರ ವೇದಾಂತವನ್ನು ಒಪ್ಪಿಕೊಂಡರು. ಅರುಲಾಲ ಪೆರುಮಾಳ್ ಎಂಪೆರುಮನಾರ್ ಎಂದು ಹೆಸರು ಬದಲಾಯಿಸಿಕೊಂಡುರು. ನಂತರ ಅವರು ಜ್ಞಾನ ಸಾರ ಮತ್ತು ಪ್ರಮೇಯ ಸಾರವನ್ನು ರಚಿಸಿದರು. ರಾಮಾನುಜರು ವೇದ ವ್ಯಾಸರ ಭೋದಾಯನ ವೃತ್ತಿಯನ್ನು ಸಂಪೂರ್ಣವಾಗಿ ಅರಿತಿದ್ದರು. ಅವರು ವೇದಾಂತ ಸಂಗ್ರಹಂ ಬರೆದರು. ಜೊತೆಗೆ ವೇದಾಂತ ದೀಪಂ, ಗೀತ ಭಾಷ್ಯಂ ಸಹ ಬರೆದರು. ರಾಮಾನುಜರು ನಿತ್ಯಂ ಎಂದ ಹೆಸರಿನ ಗ್ರಂಥವನ್ನು ರಚಿಸಿದರು.
ಕರ್ನಾಟಕ ಮತ್ತು ರಾಮಾನುಜಾಚಾರ್ಯರ ಒಡನಾಟ
ರಾಮಾನುಜಾಚಾರ್ಯರು ಸುಮಾರು 12 ವರ್ಷಗಳ ಕಾಲ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿದ್ದರು. ಅಲ್ಲಿ ಅವರು ತಮ್ಮ ವಿಶಿಷ್ಟಾದ್ವೈತವನ್ನು ಪ್ರಚಾರ ಮಾಡಿದರು. ಇಂದಿಗೂ ಮೇಲುಕೋಟೆಯು ವೈಷ್ಣವ ಸಂಪ್ರದಾಯದ ಕೇಂದ್ರವಾಗಿದೆ.
ಹೈದರಾಬಾದ್‌ನಲ್ಲಿದೆ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ
11ನೇ ಶತಮಾನದ ಮಹಾನ್ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್‌ನಲ್ಲಿದೆ. ಇದನ್ನು ಸಮಾನತೆಯ ಪ್ರತಿಮೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಸಮಾನತೆಯನ್ನು ಸಾರಿದವರು ಶ್ರೀ ರಾಮಾನುಜಾಚಾರ್ಯರು. ಅವರನ್ನು ಗುರು, ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಇಂದಿಗೂ ಪೂಜಿಸಲಾಗುತ್ತದೆ. ಅವರು ಭೋದಿಸಿದ ವಿಶಿಷ್ಟಾದ್ವೈತ ಸಿದ್ಧಾಂತವು ಇಂದಿಗೂ ಭಾರತದ ಜನಪ್ರಿಯ ಅಧ್ಯಾತ್ಮ ಮಾರ್ಗವಾಗಿ ಪ್ರಕಾಶಿಸುತ್ತಿದೆ.
ಬರಹ: ಅರ್ಚನಾ ವಿ.ಭಟ್