Zodiac Signs: ಗ್ರಹಗಳ ಶಾಂತಿಯಿಂದ ಸುಖಜೀವನ; ಬದುಕಿನಲ್ಲಿ ಯಶಸ್ಸು ಮತ್ತು ಸಮೃದ್ಧಿಗಾಗಿ ಈ ಸಲಹೆಗಳನ್ನು ಪಾಲಿಸಿ
ಪ್ರತಿಯೊಂದು ರಾಶಿಗೂ ತನ್ನದೇ ಆದ ವೈಶಿಷ್ಟ್ಯಗಳು ಮತ್ತು ಗುಣಲಕ್ಷಣಗಳಿರುತ್ತವೆ. ಆದರೆ ಕೆಲವೊಮ್ಮೆ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾದರೆ ಜೀವನದಲ್ಲಿ ಸುಖಶಾಂತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವುಗಳ ಶಾಂತಿ ಮಾಡಿದರೆ ನೆಮ್ಮದಿಯ ಜೀವನ ದೊರೆಯುತ್ತದೆ. 12 ರಾಶಿಗಳ ಜನರು ಯಶಸ್ಸು ಮತ್ತು ಸಮೃದ್ಧಿಗಾಗಿ ಈ ಸಲಹೆಗಳನ್ನು ಪಾಲಿಸಿ.

ಮೇಷ: ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತಹ ಕೆಲಸ ಕಾರ್ಯಗಳಲ್ಲಿ ತೊಡಗಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮೊದಲು ಗುರುಗಳ ಅನುಗ್ರಹವನ್ನು ಪಡೆಯಬೇಕು. ತಮ್ಮ ಹಿರಿಯರ ಆದೇಶ ಅಥವಾ ಸಹಕಾರದಂತೆ ನಡೆದುಕೊಂಡಲ್ಲಿ ಯಾವುದೇ ಹಿನ್ನೆಡೆ ಎದುರಾಗುವುದಿಲ್ಲ. ದಿಡೀರನೆಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ ಇವರು ಅವಶ್ಯಕವಾಗಿ ಹರಿಗ್ರೀವ ಸ್ತೋತ್ರವನ್ನು ಪಠಿಸಬೇಕು ಆರುದ್ರ ನಕ್ಷತ್ರವು ಇರುವ ದಿನದಂದು ಬೆಳಗಿನ ವೇಳೆ ನಾಗ ದೇವರಿಗೆ ಪೂಜೆ ಸಲ್ಲಿಸಬೇಕು ಓಡಾಡಲು ತೊಂದರೆ ಇರುವವರು ಸಹಾಯ ಮಾಡಬೇಕು ಕಪ್ಪು ನಾಯಿಗೆ ಆಹಾರ ನೀಡಬೇಕು ಇದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವುದಲ್ಲದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.
ವೃಷಭ: ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ವೃಷಭ ಲಗ್ನ ಅಥವ ರಾಶಿಯವರು ನಿಧಾನಿಗಳಾಗುತ್ತಾರೆ. ಬೇರೆಯವರ ಸಹಾಯ ಅಥವಾ ಸಹಕಾರ ಇವರಿಗೆ ಅತಿ ಉಪಯುಕ್ತ. ಕನಿಷ್ಠ ಪಕ್ಷ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸ್ಪೂರ್ತಿಯ ಅಗತ್ಯತೆ ಇರುತ್ತದೆ. ನಿಮ್ಮಲ್ಲಿ ಒಂದು ರೀತಿಯ ಜಡತ್ವ ಮನೆ ಮಾಡಿರುತ್ತದೆ. ನಿಮ್ಮ ಆಪ್ತರಲ್ಲಿ ಸಹ ಚುರುಕುತನ ಕಂಡು ಬರುವುದಿಲ್ಲ. ಆದರೆ ತಾಯಿಯವರ ಆಶೀರ್ವಾದವೇ ನಿಮಗೆ ಶ್ರೀರಕ್ಷೆಯಾಗುತ್ತದೆ. ಮಹಿಳೆಯರ ಸಹಾಯದಲ್ಲಿ ಯಾವುದೇ ತೊಂದರೆ ಉಂಟಾಗದು. ವಯೋವೃದ್ಧರಿಗೆ ಆಹಾರದ ವ್ಯವಸ್ಥೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ನಿಮ್ಮ ಜನ್ಮಸ್ಥಳದಲ್ಲಿರುವ ಹೆಣ್ಣುದೇವರ ದೇವಸ್ಥಾನಕ್ಕೆ ಅಕ್ಕಿ. ಬೇಳೆ, ಬೆಲ್ಲ ನೀಡಿದಲ್ಲಿ ಯಶಸ್ವೀ ಜೀವನ ನಿಮ್ಮದಾಅಗುತ್ತದೆ. ರುದ್ರವನ್ನು ಜಪಿಸಿದರೆ ಅಥವಾ ಕೇಳಿದರೆ ನಿರೀಕ್ಷಿತ ಲಾಭ ದೊರೆಯುತ್ತದೆ. ಪ್ರತಿದಿನ ಮುಂಜಾನೆಯ ವೇಳೆಯಲ್ಲಿ ಶ್ರೀ ದತ್ತಾತ್ರೇಯರ ಮೂಲ ಮಂತ್ರವನ್ನು ಜಪಿಸಿ. ನಿಮ್ಮ ಧರ್ಮ ಗುರುಗಳ ಆಶೀರ್ವಾದ ಪಡೆದು ನಿಮ್ಮ ಕೆಲಸ ಕಾರ್ಯಗಳನ್ನು ಆರಂಭಿಸಿ.
ಮಿಥುನ: ಯಾವುದೇ ವಿಚಾರದಲ್ಲಿಯೂ ನೀವು ದೃಢವಾದ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಇರುವ ಸಂದೇಹದ ಬುದ್ಧಿಯಿಂದ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ಆದರೆ ನಿಮ್ಮಲ್ಲಿ ಹಠ ಮತ್ತು ಛಲದ ಗುಣವಿರುತ್ತದೆ. ಇದರಿಂದ ನಿರೀಕ್ಷಿತ ಯಶಸ್ಸನ್ನು ಗಳಿಸುವಿರಿ. ಶ್ರೀ ಸೂರ್ಯದೇವನಿಗೆ ಕೆಂಪು ಹೂವಿನಿಂದ ಪೂಜೆಯನ್ನು ಸಲ್ಲಿಸಿದರೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಕುಟುಂಬದಲ್ಲಿರುವ ಹಿರಿಯ ವ್ಯಕ್ತಿಗಳಿಗೆ ಗೋಧಿ ಅಥವಾ ರವೆಯಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ಅವರ ಆಶೀರ್ವಾದವನ್ನು ಪಡೆಯಬೇಕು. ಇದರಿಂದ ಹೆಚ್ಚಿನ ಅನುಕೂಲತೆ ದೊರೆಯುತ್ತದೆ. ಪುಟ್ಟ ಮಕ್ಕಳಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ನೀಡುವುದರಿಂದ ಮನಸ್ಸಿನ ದುಗುಡವು ಮರೆಯಾಗುತ್ತದೆ. ಗುರುಗಳ ಸನ್ನಿಧಾನದಲ್ಲಿ ಅನ್ನದಾನದ ವ್ಯವಸ್ಥೆ ಮಾಡಿದಲ್ಲಿ ನಿಮಗೆ ಆತ್ಮೀಯರಿಂದ ಸಹಾಯ ಸಹಕಾರ ದೊರೆಯುತ್ತದೆ. ಇದರಿಂದ ಕುಟುಂಬದಲ್ಲಿನ ಮನಸ್ತಾಪವು ಕೊನೆಗೊಳ್ಳುತ್ತದೆ. ಸಾಧ್ಯವಾದಷ್ಟು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸದೇ ಇರುವುದು ಒಳ್ಳೆಯದು.
ಕಟಕ: ನಿಮ್ಮಲ್ಲಿ ಗೆಲ್ಲುವ ಛಲವಿರುತ್ತದೆ. ಒಳ್ಳೆಯ ಬುದ್ದಿ ಇರುತ್ತದೆ. ಆದರೆ ಆಡುವ ಮಾತಿನ ಮೇಲೆ ಹಿಡಿತವಿರುವುದಿಲ್ಲ. ನಿಮ್ಮಿಂದ ಆಗುವ ತಪ್ಪುಗಳಿಗೆ ಬೇರೆಯವರನ್ನು ನಿಂದಿಸುವಿರಿ. ಇದರಿಂದ ನಿಮ್ಮೊಡನೆ ಒಳ್ಳೆಯ ಮನಸ್ಥಿತಿಯ ಜನರಿದ್ದರು ಅವರಿಂದ ನಿಮಗೆ ಯಾವುದೇ ಸಹಾಯ ದೊರೆಯುವುದಿಲ್ಲ. ಈ ಕಾರಣದಿಂದಾಗಿ ಪ್ರತಿ ಬುಧವಾರ ವಿಷ್ಣು ಸಹಸ್ರನಾಮವನ್ನು ಹೇಳಿಕೊಳ್ಳಿ, ಇಲ್ಲವಾದಲ್ಲಿ ಕೇಳುವುದರಿಂದಲೂ ಶುಭ ಫಲಗಳನ್ನು ಪಡೆಯಬಹುದು. ನಯವಾದ ಮಾತು ಕತೆಯಿಂದ ಮತ್ತು ಆತ್ಮೀಯರ ಮೇಲೆ ನವಿರಾದ ಒತ್ತಡವನ್ನು ಹೇರುವುದರಿಂದ ಮಾತ್ರ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಕೆಲಸ ಕಾರ್ಯಗಳಲ್ಲಿ ಬೇರೆಯವರಿಂದ ತೊಂದರೆ ಉಂಟಾದಲ್ಲಿ ಅಮಾವಾಸ್ಯೆಯ ದಿನದಂದು ಶ್ರೀ ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿಸಿ. ಶಿವನ ದೇಗುಲಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದಲೂ ಶುಭಫಲಗಳನ್ನು ಪಡೆಯಬಹುದಾಗಿದೆ. ಕುಟುಂಬದ ಮತ್ತು ಮನೆತನದ ಹಿರಿಯರನ್ನು ಗೌರವ ಭಾವದಿಂದ ನೋಡಿಕೊಳ್ಳಿರಿ. ಮಕ್ಕಳಿಗೆ ಕಡಲೆ ಬೇಳೆ ಮತ್ತು ಕೇಸರಿ ಯಿಂದ ಕೂಡಿದ ಸಿಹಿ ತಿಂಡಿಯನ್ನು ನೀಡಿರಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.
ಸಿಂಹ: ನಿಮ್ಮ ಮುಖದ ಮೇಲೆ ಸಿಡುಕಿನ ಭಾವನೆ ಇರುತ್ತದೆ. ನೋಡುಗರಿಗೆ ಒರಟುತನದಿಂದ ಕಾಣುವಿರಿ. ಆದರೆ ನಿಮ್ಮ ಮನಸ್ಸು ಮಗುವಿನಂತೆ ಇರುತ್ತದೆ. ಹಠವಾದಿಗಳು. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಜನರು ನಿಮ್ಮ ಮೇಲಿನ ಗೌರವದಿಂದಾಗಿ ನಿಮಗೆ ಸಹಾಯ ಮಾಡಲು ತಾವಾಗಿಯೇ ಬರುತ್ತಾರೆ. ಆದರೂ ನಿಮ್ಮ ಮನಸ್ಸಿಗೆ ಸರಿ ಎನಿಸುವ ಕೆಲಸ ಕಾರ್ಯಗಳು ಮಾತ್ರ ಆಯ್ಕೆ ಮಾಡುವಿರಿ. ಶ್ರೀಅನ್ನಪೂರ್ಣೇಶ್ವರಿಯ ಪೂಜೆಯನ್ನು ಮಾಡುವುದರಿಂದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಲಭಿಸುತ್ತದೆ. ಶನಿವಾರಗಳ ದಿನ ಬೆಳಗಿನ ವೇಳೆ ಶ್ರೀ ಆಂಜನೇಯನ ಪೂಜೆಯನ್ನು ಮಾಡಿರಿ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಹಾಯ ಮಾಡಿರಿ. ಬಡದಂಪತಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಕಪ್ಪು ಬಣ್ಣದ ದಿರಿಸುಗಳನ್ನು ಧರಿಸಬೇಡಿರಿ. ವದಂತಿಗಳನ್ನು ನಂಬಿದಲ್ಲಿ ಜೀವನದಲ್ಲಿ ದೊಡ್ಡ ಆಪತ್ತಿಗೆ ಒಳಗಾಗುವಿರಿ. ನಿಮ್ಮ ವಿದ್ಯಾ ಬುದ್ಧಿಗೆ ತಕ್ಕಂತಹ ಕೆಲಸಗಳನ್ನು ಮಾತ್ರ ಆಯ್ಕೆ ಮಾಡಿರಿ.
ಕನ್ಯಾ: ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಉತ್ತಮ ವಿದ್ಯೆ ಇರುತ್ತದೆ. ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಆದರೆ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ನಿಮ್ಮಿಂದ ಆಗುವ ತಪ್ಪಿಗೂ ಬೇರೆಯವರನ್ನು ಟೀಕಿಸುವಿರಿ. ಇದರಿಂದ ನಿಮ್ಮಿಂದ ಜನರು ದೂರ ಉಳಿಯುವ ಸಾಧ್ಯತೆಗಳಿವೆ. ಬೇರೊಬ್ಬರ ಮಾತನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುವಿರಿ. ಇದರಿಂದಾಗಿ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಗುರುಚರಿತ್ರೆ ಪಾರಾಯಣದಿಂದ ಪ್ರತಿಯೊಬ್ಬರ ಜೊತೆ ವಿಶ್ವಾಸದಿಂದ ಬೆರೆಯುವ ಮನಸಾಗುತ್ತದೆ. ಪುನರಾವರ್ತಿತ ಕೆಲಸ ಕಾರ್ಯಗಳಿಂದ ಬೇಸರಗೊಳ್ಳುವಿರಿ. ಆದ್ದರಿಂದ ಆತ್ಮೀಯರ ಸಹಾಯದ ಅವಶ್ಯಕತೆ ಇರುತ್ತದೆ. ಶ್ರೀ ಲಕ್ಷ್ಮಿಯ ಪೂಜೆ ಮಾಡುವುದರಿಂದ ಹಣದ ತೊಂದರೆ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಅಲ್ಲದೆ ಸ್ತ್ರೀಯರಿಂದ ಸಹಾಯ ಸಹಕಾರ ಲಭಿಸುತ್ತದೆ. ಅವಶ್ಯಕತೆ ಇದ್ದವರಿಗೆ ಕೆಂಪು ಬಟ್ಟೆಯನ್ನು ದಾನ ನೀಡಿದರೆ ಕೋಪದ ಗುಣ ಕಡಿಮೆ ಆಗುತ್ತದೆ. ಬಡ ದಂಪತಿಗಳಿಗೆ ಹಣದ ಸಹಾಯ ಮಾಡುವುದರಿಂದ ಜೀವನದಲ್ಲಿನ ಬದಲಾವಣೆಗಳು ಅಪೇಕ್ಷಿಸಿದ ಮಾದರಿಯಲ್ಲಿ ಇರುತ್ತದೆ.
ತುಲಾ: ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ನಿಮ್ಮ ಈ ಸಂದೇಹದ ಬುದ್ಧಿಯಿಂದ ಬಂಧು ಬಳಗದವರು ನಿಮ್ಮಿಂದ ದೂರ ಉಳಿಯುತ್ತಾರೆ. ಪ್ರತಿದಿನವೂ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳಿಕೊಳ್ಳುವುದರಿಂದ ಅಥವಾ ಕೇಳುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ಇದರಿಂದ ನಿಮ್ಮ ಕ್ರಿಯಾಶೀಲ ಬುದ್ಧಿಯು ಚುರುಕಾಗುತ್ತದೆ. ಹುಣ್ಣಿಮೆಯ ದಿನದಂದು ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿದರೆ, ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಕಡಿಮೆಯಾಗುತ್ತವೆ. ನಿಮ್ಮ ಸೋದರ ಮಾವನನ್ನು ವಿಶ್ವಾಸದಿಂದ ಕಾಣುವುದು ಬಹು ಮುಖ್ಯ. ನಿಮ್ಮ ತಂದೆಯವರಿಗೆ ಅವರ ಅವಶ್ಯಕತೆಗಳನ್ನು ಅರಿತುಕೊಂಡು ಪೂರೈಸಿದರೆ ನಿಮ್ಮ ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ಆತುರಕ್ಕೆ ಒಳಗಾಗದೆ ಸೂಕ್ಷ್ಮವಾಗಿ ಅವಲೋಕಿಸಿದರೆ ನಿಮ್ಮ ತಪ್ಪು ಒಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಪ್ರತಿದಿನವೂ ಯೋಗ ಧ್ಯಾನದಲ್ಲಿ ತಲ್ಲೀನರಾದರೆ ನಿಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು.
ವೃಶ್ಚಿಕ: ತಪ್ಪು ಹಾದಿಯಲ್ಲಿ ನಡೆದರು ನಿಮ್ಮ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಒಂದ ರೀತಿಯ ಜಡತ್ವ ನೆಲೆಸಿರುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸದೆ ಅವಶ್ಯಕತೆಗಳನ್ನು ಮುಂದೂಡುವಿರಿ ತಪ್ಪು ನಿಮ್ಮಲ್ಲಿದ್ದರೂ ಬೇರೆಯವರನ್ನು ಸಿಡುಕಿನಿಂದ ಕಾಣುವಿರಿ. ಇದರಿಂದಾಗಿ ನಿಮ್ಮ ಆತ್ಮೀಯರ ಸಹಾಯ ಸಹಕಾರವು ನಿಮಗೆ ದೊರೆಯುವುದಿಲ್ಲ. ಆದರೆ ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ನಿಮ್ಮಲ್ಲಿನ ಕೋಪ ತಾಪಗಳು ಕಡಿಮೆಯಾಗುತ್ತವೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವ ಸಾಧ್ಯತೆಗಳಿರುತ್ತವೆ. ಶ್ರೀ ಹನುಮಾನ್ ಚಾಲೀಸವನ್ನು ಹೇಳಿಕೊಳ್ಳುವುದರಿಂದ ಸತ್ಯಾಸತ್ಯಗಳ ಪರಾಮರ್ಶೆ ಮಾಡಲು ಸಾಧ್ಯವಾಗುತ್ತದೆ. ಇಂದ್ರಾಕ್ಷಿ ಸ್ತೋತ್ರವನ್ನು ಜಪಿಸುವುದರಿಂದ ಕುಟುಂಬದ ಸ್ತ್ರೀಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಮೂಡುತ್ತದೆ. ಇದರಿಂದ ಮುಖ್ಯವಾಗಿ ಸಕಾರಾತ್ಮಕ ಧೋರಣೆ ತಾಳಲು ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳಿಗೆ ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡುವುದರಿಂದ ಜೀವನದ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ ನಿಮ್ಮ ಆದಾಯವು ಹೆಚ್ಚುತ್ತದೆ.
ಧನಸ್ಸು: ನೀವು ಕೆಲಸ ಕಾರ್ಯಗಳನ್ನು ಆರಂಭ ಮಾಡುವವರೆಗೂ ಬೇರೆಯವರಿಗೆ ಅದರ ಸುಳಿವು ದೊರೆಯುವುದಿಲ್ಲ. ಗೆಲ್ಲಬಲ್ಲೆ ಎಂಬ ಅತಿಯಾದ ವಿಶ್ವಾಸ ನಿಮ್ಮಲ್ಲಿ ಕಂಡು ಬರುತ್ತದೆ. ನಿಮ್ಮ ಕೆಲಸ ಕಾರ್ಯಗಳು ತಾವಾಗಿ ಸಹಾಯ ನೀಡಲು ಉತ್ಸುಕರಾಗಿರುತ್ತಾರೆ. ಆದರೆ ಏಕಾಂಗಿಯಾಗಿ ಕೆಲಸ ನಿರ್ವಹಿಸುವ ತೀರ್ಮಾನಕ್ಕೆ ನೀವು ಬರುವಿರಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಶನಿ ಪೀಡಾ ಪರಿಹಾರ ಸ್ತೋತ್ರವನ್ನು ಪಠಿಸುವುದರಿಂದ ನಿಮ್ಮ ಪ್ರಯತ್ನದಲ್ಲಿ ಯಶಸ್ಸು ದೊರೆಯುತ್ತದೆ. ಶಾಂತಿಯಿಂದ ಎಲ್ಲರೊಂದಿಗೆ ವರ್ತಿಸಲು ಸಾಧ್ಯವಾಗುತ್ತದೆ. ಪುಟ್ಟ ಮಕ್ಕಳಿಗೆ ತಿನ್ನಲು ಬೆಣ್ಣೆಯನ್ನು ನೀಡಿದರೆ ಪ್ರತಿಯೊಬ್ಬರ ಆತ್ಮವಿಶ್ವಾಸವನ್ನು ಗಳಿಸಬಹುದು. ಇದರಿಂದ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಉಂಟಾಗುತ್ತವೆ. ಹೆಸರುಬೇಳೆಯಿಂದ ಮಾಡಿದ ಖಾಧ್ಯವನ್ನು ಆತ್ಮೀಯರಿಗೆ ನೀಡಿದರೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಮೂಡುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಾಲು ಮೊಸರು ನೀಡುವುದರಿಂದ ಕಷ್ಟ ನಷ್ಟಗಳು ದೂರವಾಗುತ್ತವೆ.
ಮಕರ: ನಿಮ್ಮ ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಮಾಡದ ತಪ್ಪನ್ನು ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ. ಸದಾಕಾಲ ನ್ಯಾಯ ನೀತಿಯ ಬಗ್ಗೆ ಯೋಚಿಸುವಿರಿ. ಇದರಿಂದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಶ್ರೀ ದತ್ತಾತ್ರೇಯ ಮೂಲ ಮಂತ್ರವನ್ನು ಜಪಿಸಿದಲ್ಲಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಳದಿ ಬಟ್ಟೆ ಮತ್ತು ಕಡಲೆ ಬೇಳೆಯನ್ನು ನೀಡುವುದು ಹೆಚ್ಚು ಲಾಭಕರ. ಕಡಲೆ ಬೆಳೆಯಿಂದ ಮಾಡಿದ ಸಿಹಿತಿನಿಸನ್ನು ಮಕ್ಕಳಿಗೆ ನೀಡಿದಲ್ಲಿ ಮಾತಿನಿಂದ ಎಲ್ಲರ ಮನವನ್ನು ಗೆಲ್ಲಬಹುದು. ಇದರಿಂದ ಬಂದು ಬಳಗದವರ ನೆರವು ದೊರೆಯುತ್ತದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಪೂಜೆಯನ್ನು ಮಾಡಿದಿಷ್ಟು ಇವರಿಗೆ ಒಳ್ಳೆಯದು. ಇದರಿಂದ ವಿರೋಧಿಗಳು ಸ್ನೇಹ ಬೆಳೆಸುವುದಲ್ಲದೆ ಅನಿರೀಕ್ಷಿತ ಸುಖ ಫಲಗಳು ದೊರೆಯುತ್ತವೆ. ದಿಡೀರನೆ ಕೋಪಗೊಂಡರು ಬಹುಕಾಲ ನಿಲ್ಲುವುದಿಲ್ಲ. ನೀಲ ಸರಸ್ವತಿ ಸ್ತೋತ್ರವನ್ನು ಹೇಳಿಕೊಂಡರೆ ಅವಕಾಶಗಳು ದೊರೆಯುತ್ತವೆ.
ಕುಂಭ: ನಿಮ್ಮಲ್ಲಿ ಪರೋಪಕಾರದ ಗುಣವು ವಿಶೇಷವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸವು ಉನ್ನತ ಮಟ್ಟದಲ್ಲಿ ಇರುತ್ತದೆ. ಇದರಿಂದಾಗಿ ನಿಮ್ಮಲ್ಲಿನ ಒಳ್ಳೆಯತನದ ದುರುಪಯೋಗ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಶನಿವಾರದಂದು ಶ್ರೀರಾಮ ಪಟ್ಟಾಭಿಷೇಕದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದಲ್ಲಿ ಕುಟುಂಬದಲ್ಲಿ ಒಮ್ಮತ ಮೂಡುತ್ತದೆ. ಕುಟುಂಬದ ಸದಸ್ಯರ ಸಲಹೆ ಸೂಚನೆ ದೊರೆಯುವ ಕಾರಣ ಅನಿರೀಕ್ಷಿತ ಕಷ್ಟ ನಷ್ಟಗಳಿಂದ ಪಾರಾಗುವಿರಿ. ಆತ್ಮೀಯರ ಮನೆಯ ವಿವಾಹ ಕಾರ್ಯಕ್ಕೆ ನೆರವಾಗುವುದು ಒಳ್ಳೆಯದು. ಕನಿಷ್ಠಪಕ್ಷ ಪ್ರತಿ ಭಾನುವಾರಗಳಂದು ಸೂರ್ಯ ನಮಸ್ಕಾರವನ್ನು ಮಾಡಿದರೆ ಆತ್ಮೀಯರ ನೆರವು ದೊರೆಯುತ್ತದೆ. ಇದರಿಂದ ಉತ್ತಮ ಆದಾಯ ಇರುತ್ತದೆ. ನಿಮ್ಮ ಯಾವುದೇ ಕೆಲಸ ಕಾರ್ಯಗಳು ತಂದೆ ತಾಯಿ ಆಶೀರ್ವಾದವೇ ನಿಜವಾದ ಬಲ. ಶ್ರೀ ಗುರುಗಳಿಗೆ ಹನ್ನೆರಡು ಬಾರಿ ನಮಸ್ಕಾರ ಮಾಡುವುದರಿಂದ ಹೊಸತನಕ್ಕೆ ಹೊಂದಿಕೊಂಡು ಶುಖ ಜೀವನ ನಡೆಸುವುದು ಸಾಧ್ಯವಾಗುತ್ತದೆ.
ಮೀನ: ನಿಮ್ಮ ಮನಸ್ಸು ಅತಿ ಮೃದುವಾಗಿರುತ್ತದೆ. ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಜನರ ಮಧ್ಯೆ ನೀವು ಇರುವಿರಿ. ನೀವು ಸ್ವತಂತ್ರವಾದ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಇದರಿಂದ ಜೀವನದಲ್ಲಿ ಹಿನ್ನಡೆ ಅನುಭವಿಸುವಿರಿ. ಆದರೆ ಶ್ರೀ ದುರ್ಗಾ ಪೂಜೆಯನ್ನು ಮಾಡುವುದರಿಂದ ಸೋದರಿಯ ಸಹಾಯ ಸಹಕಾರ ದೊರೆಯುತ್ತದೆ. ಅಶಕ್ತರ ಮನೆಯ ವಿವಾಹ ಕಾರ್ಯಕ್ಕೆ ಸಹಾಯ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ನಿಮ್ಮ ಜನ್ಮಸ್ಥಳದ ಗ್ರಾಮ ದೇವತೆಗೆ ಮಡಿಲು ತುಂಬುವ ಪದಾರ್ಥಗಳನ್ನು ನೀಡುವುದರಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಸೋಮವಾರ ಶ್ರೀ ಶಿವನ ಪೂಜೆಯನ್ನು ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆ ಹೆಚ್ಚುತ್ತದೆ. ಉತ್ತಮ ಆರೋಗ್ಯವು ಇರುತ್ತದೆ.

ವಿಭಾಗ