Ganesh Story for Kids: ಭಾದ್ರಪದ ಶುಕ್ಲ ಚೌತಿಯಂದು ಚಂದಿರನ ನೋಡಬಾರದು ಏಕೆ? ಗಣಪತಿ ಏಕದಂತ ಆದ ವೃತ್ತಾಂತ ತಿಳಿಯಿರಿ- ಓದಿ ಗಣೇಶನ ಕಥೆಗಳು-ganesh chaturthi 2024 why ganapati become yakadanta what is the reason we shouldnt see moon on the day of chauthi sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesh Story For Kids: ಭಾದ್ರಪದ ಶುಕ್ಲ ಚೌತಿಯಂದು ಚಂದಿರನ ನೋಡಬಾರದು ಏಕೆ? ಗಣಪತಿ ಏಕದಂತ ಆದ ವೃತ್ತಾಂತ ತಿಳಿಯಿರಿ- ಓದಿ ಗಣೇಶನ ಕಥೆಗಳು

Ganesh Story for Kids: ಭಾದ್ರಪದ ಶುಕ್ಲ ಚೌತಿಯಂದು ಚಂದಿರನ ನೋಡಬಾರದು ಏಕೆ? ಗಣಪತಿ ಏಕದಂತ ಆದ ವೃತ್ತಾಂತ ತಿಳಿಯಿರಿ- ಓದಿ ಗಣೇಶನ ಕಥೆಗಳು

Ganesh Chaturthi 2024: ಗಣೇಶ ಹಬ್ಬಕ್ಕೆ ಇನ್ನೆರಡೇ ದಿನ ಬಾಕಿ. ಈ ವರ್ಷ ಸೆಪ್ಟೆಂಬರ್ 7 ರಂದು ಚೌತಿ ಇದೆ. ಈ ಹೊತ್ತಿನಲ್ಲಿ ಭಾದ್ರಪದ ಶುಕ್ಲದ ಚೌತಿಯಂದು ಚಂದಿರನ ನೋಡಬಾರದು ಏಕೆ? ಗಣಪತಿ ಏಕದಂತ ಆದ ವೃತ್ತಾಂತವೇನು ಎಂಬಿತ್ಯಾದಿ ಗಣೇಶನ ಕಥೆ ತಿಳಿಯಿರಿ, ನಿಮ್ಮ ಮಕ್ಕಳಿಗೆ ಗಣಪತಿಯ ಕಥೆ ತಿಳಿಸಿ (ಬರಹ: ಎಚ್. ಸತೀಶ್‌, ಜ್ಯೋತಿಷಿ)

ಗಣಪತಿ ಏಕದಂತ ಆದ ವೃತ್ತಾಂತ ತಿಳಿಯಿರಿ
ಗಣಪತಿ ಏಕದಂತ ಆದ ವೃತ್ತಾಂತ ತಿಳಿಯಿರಿ (PC: Canva)

Lord Ganesh Story for Kids: ಗಣೇಶ ಚತುರ್ಥಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಗಣಪತಿ ಹುಟ್ಟಿದ ದಿನವನ್ನು ಗಣೇಶ ಚೌತಿ ಎಂದು ಆಚರಿಸಲಾಗುತ್ತದೆ.ಈ ಬಾರಿ ಸೆಪ್ಟೆಂಬರ್ 7, ಶನಿವಾರ ಗಣೇಶನ ಹಬ್ಬವಿದೆ. ಚೌತಿ ಹಬ್ಬ ಎಂದರೆ ಭಾರತದಲ್ಲಿ ಭಕ್ತಿ, ಭಾವದ ಜೊತೆಗೆ ಸಂಭ್ರಮವೂ ಜೊತೆಯಾಗುತ್ತದೆ. ಹಲವರು ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸುತ್ತಾರೆ. ಬೀದಿಗೊಂದು ಗಣಪ ಮೂರ್ತಿ ಇಟ್ಟು 10 ದಿನಗಳ ಕಾಲ ಪೂಜೆ, ಪುನಸ್ಕಾರದ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.

ಗಣೇಶ ಚತುರ್ಥಿಯ ಈ ಹೊತ್ತಿನಲ್ಲಿ ಗಣಪತಿಗೆ ಏಕದಂತನಾಗಿದ್ದು ಹೇಗೆ ಎಂಬ ಕಥೆ ತಿಳಿಯೋಣ. ನಾವೆಲ್ಲ ಅಂದುಕೊಂಡತೆ ಗಣಪತಿಗೆ ಮೊದಲಿನಿಂದಲೂ ಒಂದೇ ದಂತ ಇದ್ದಿದ್ದಲ್ಲ. ಆರಂಭದಲ್ಲಿ ಗಣಪತಿಗೆ ಎರಡು ದಂತವಿತ್ತಂತೆ. ಆಮೇಲೆ ಏಕದಂತನಾಗಿದ್ದು.

ಗಣಪತಿ ಏಕದಂತನಾದ ಕಥೆ

ಜಗತ್ತಿನ ಅಧಿಪತಿಯಾದ ಪರಶಿವನು ಗಣಪತಿಯನ್ನು ತನ್ನ ಗಣಗಳಿಗೆ ಅಧಿಪತಿಯನ್ನಾಗಿ ಮಾಡುತ್ತಾನೆ. ನಾವು ತಿಳಿದಂತೆ ಗಣಪತಿ ಬ್ರಹ್ಮಚಾರಿಯಲ್ಲ. ಬ್ರಹ್ಮ, ವಿಷ್ಣು ಆದಿಯಾಗಿ ಸಮಸ್ತ ದೇವಾನುದೇವತೆಗಳ ಸಮ್ಮುಖದಲ್ಲಿ ಪರಮೇಶ್ವರನು ಗಣಪತಿಗೆ ವಿವಾಹ ಮಾಡುತ್ತಾನೆ. ವಿನಾಯಕನ ಪತ್ನಿಯರೇ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಮಾಕಾಮ್ಯಾ, ಈಶತ್ವ ಮತ್ತು ವಶಿತ್ವ ಎಂಬ ಅಷ್ಟಸಿದ್ಧಿಗಳು. ಬ್ರಹ್ಮದೇವನು ಗಣಪತಿಗೆ ವರವೊಂದನ್ನು ನೀಡುತ್ತಾನೆ. ನಿನಗೆ ಪೂಜೆಯನ್ನು ಮಾಡಿ ಕೈಲಾದಷ್ಟೂ ಮೋದಕಗಳನ್ನು ನೇವೇದ್ಯವನ್ನಾಗಿ ಅರ್ಪಿಸಬೇಕು. ಮೋದಕಗಳ ಸಂಖ್ಯೆ ಕನಿಷ್ಠ ಪಕ್ಷ ಇಪ್ಪತ್ತೊಂದು ಆದರೆ ಒಳ್ಳೆಯದು. ಇದರಿಂದಾಗಿ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿನ ವಿಘ್ನಗಳು ದೂರವಾಗುತ್ತವೆ. ಇದರ ಜೊತೆಯಲ್ಲಿ ಗಂಧವನ್ನು ಲೇಪಿಸಿದ ಇಪ್ಪತ್ತೊಂದು ಗರಿಕೆಗಳನ್ನು ನೀಡುವುದು ಇನ್ನಷ್ಟು ಶ್ರೇಷ್ಟ. ಗಣಪತಿಯ ಪೂಜೆಯಿಂದ ಶ್ರೀವಿಷ್ಣುವು ಭಕ್ತರ ಲಾಲನೆ ಪಾಲನೆ ಮಾಡಿದರೆ , ಶ್ರೀಶಿವನು ನಿನ್ನ ಪೂಜೆಯಿಂದ ಕೆಟ್ಟವರ ಸಂಹಾರ ಮಾಡುತ್ತಾನೆ ಎಂದು ಶ್ರೀ ಬ್ರಹ್ಮದೇವನು ತಿಳಿಸುತ್ತಾನೆ. ಸ್ವಯಂ ಬ್ರಹ್ಮದೇವನೇ ಗಣಪತಿಗೆ ಮೋದಕವನ್ನು ನೀಡಿ ಸೃಷ್ಟಿ ಕಾರ್ಯವು ನಿರ್ವಿಘ್ನವಾಗಿ ನಡೆಯಲೆಂದು ಕೋರುತ್ತಾನೆ.

ಒಮ್ಮೆ ಗಣಪತಿಯು ತನ್ನ ಪತ್ನಿಯರಾದ ಸಿದ್ದಿ ಮತ್ತು ಬುದ್ಧಿಯರ ಜೊತೆಯಲ್ಲಿ ತನ್ನ ವಾಹನವಾದ ಮೂಷಿಕದ ಮೇಲೆ ಸಪ್ತಲೋಕಗಳನ್ನು ಸುತ್ತುತ್ತಾ ಚಂದ್ರಲೋಕಕ್ಕೆ ಬರುತ್ತಾನೆ. ಉದ್ದನೆಯ ಸೊಂಡಿಲು. ಅಗಲವಾದ ಕಿವಿಗಳು. ದಪ್ಪನಾದ ಹೊಟ್ಟೆ ಮತ್ತು ಹೊಟ್ಟೆಯನ್ನು ಸುತ್ತುವರೆದ ಹಾವು. ಇಷ್ಟಲ್ಲದೆ ಗಣೇಶನ ವಾಹನ ಸಣ್ಣ ಇಲಿ. ಚಂದ್ರನು ಇದನ್ನೇ ಗಮನಿಸುತ್ತಿದ್ದ. ಗಣಪತಿಯು ಹತ್ತಿರ ಬಂದ ತಕ್ಷಣ ಚಂದ್ರನಿಗೆ ನಗುವನ್ನು ತಡೆಯಲು ಸಾಧ್ಯವಾಗಲಿಲ್ಲ. ತನ್ನನ್ನು ತಾನೆ ಮರೆತು ಗೊಳ್ಳನೆ ನಕ್ಕುಬಿಡುತ್ತಾನೆ. ಇದರಿಂದ ಕೋಪಗೊಳ್ಳುವ ಗಣಪತಿ ತನ್ನ ಒಂದು ದಂತವನ್ನು ಮುರಿದು ಚಂದ್ರನನ್ನು ತಿವಿಯಲು ಪ್ರಯತ್ನಿಸುತ್ತಾನೆ. ತನ್ನ ತಪ್ಪಿನ ಅರಿವಾಗಿ ಚಂದ್ರನು ಮೌನವಾಗುತ್ತಾನೆ. ಆದರೆ ಗಣಪತಿಯ ಕೋಪವು ಕಡಿಮೆ ಆಗುವುದಿಲ್ಲ. ಚಂದ್ರನನ್ನು ಕುರಿತು ನಿನ್ನ ಸೌಂದರ್ಯದ ಬಗ್ಗೆ ಅಹಂಕಾರವಿದೆ. ಬಾದ್ರಪದ ಮಾಸದ ಶುದ್ಧ ಚೌತಿಯ ದಿನ ಯಾರು ನಿನ್ನನ್ನು ಕಾಣುತ್ತಾರೋ ಅವರು ಮಾಡದ ಅಪವಾದಕ್ಕೆ ಗುರಿಯಾಗಲಿ ಎಂದು ಗಣಪತಿ ಶಾಪವನ್ನು ನೀಡುತ್ತಾನೆ. ಇದನ್ನು ಕೇಳಿದ ಚಂದ್ರ ಮೋಡದ ಹಿಂದೆ ಮರೆಯಾಗುತ್ತಾನೆ.

ಚಂದ್ರನಿಲ್ಲದೆ ಬಾನಿನಲ್ಲಿ ನಿಜವಾದ ಕಳೆಯೇ ಮರೆಯಾಗುತ್ತದೆ. ಸದಾಕಾಲ ಬಾನಿನಲ್ಲಿ ಅಮಾವಾಸ್ಯೆಯ ಕತ್ತಲು ಕವಿದಿರುತ್ತದೆ. ಇದರಿಂದ ಸಮಸ್ತ ಲೋಕವೂ ತೊಂದರೆಗೆ ಈಡಾಗುತ್ತದೆ. ಬೇರೆ ದಾರಿ ಕಾಣದೆ ದೇವಾನು ದೇವತೆಗಳು, ಗಂಧರ್ವ ಕಿಂಪುರುಷರು, ಋಷಿ ಮುನಿಗಳು ಭಯದಿಂದ ಇಂದ್ರನ ನೇತೃತ್ವದಲ್ಲಿ ಬ್ರಹ್ಮನನ್ನು ಕಾಣಲು ಬರುತ್ತಾರೆ. ಬ್ರಹ್ಮನು ಬಂದ ಕಾರಣವನ್ನು ಕೇಳುತ್ತಾನೆ. ಆಗ ದೇವೇಂದ್ರನು ಚಂದ್ರನು ಮಾಡಿದ ತಪ್ಪು ಮತ್ತು ಗಣಪತಿಯು ಅವನ ಮೇಲೆ ಕೋಪಗೊಂಡಿರುವುದರ ಬಗ್ಗೆ ತಿಳಿಸುತ್ತಾನೆ. ಅಲ್ಲದೆ ಗಣಪತಿ ಚಂದ್ರನಿಗೆ ಇತ್ತ ಶಾಪದ ಬಗ್ಗೆಯೂ ತಿಳಿಸುತ್ತಾನೆ.

ಸಕಲವನ್ನೂ ಅವಲೋಕಿಸಿದ ಬ್ರಹ್ಮನು ಚಂದ್ರನು ಗಣಪತಿಗೆ ಶರಣಾದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಆಗಲೂ ನಾವು ಪ್ರಯತ್ನಿಸಬಹುದಷ್ಟೇ ಎಂದು ತಿಳಿಸುತ್ತಾನೆ.

ಇದನ್ನು ತಿಳಿದ ಚಂದ್ರನು ಸ್ವತಃ ಬ್ರಹ್ಮದೇವರನ್ನು ಕಾಣಲು ಬ್ರಹ್ಮಲೋಕಕ್ಕೆ ಬರುತ್ತಾನೆ. ಬ್ರಹ್ಮನ ಅಣತಿಯಂತೆ ಚಂದ್ರನು ಗಣಪತಿಯನ್ನು ಪೂಜೆಸುತ್ತಾನೆ. ಗಣಪನಿಗೆ ಮೋದಕ ಮತ್ತು ಕಡುಬಿನ ನೇವೇದ್ಯವನ್ನು ಮಾಡುತ್ತಾನೆ. ಇದರಿಂದ ಪ್ರಸನ್ನನಾದ ಗಣಪತಿಯು ಪ್ರತ್ಯಕ್ಷನಾಗಿ ಭಾದ್ರಪದ ಮಾಸದ ಶುದ್ದ ಬಿದಿಗೆಯ ದಿನ ನಿನ್ನನ್ನು ನೋಡಿದವರು ಚೌತಿಯ ದಿನ ನಿನ್ನನ್ನು ನೋಡಿದರೂ ಯಾವುದೇ ತೊಂದರೆ ಉಂಟಾಗದು ಎಂದು ತಿಳಿಸಿ ಮರೆಯಾಗುತ್ತಾನೆ. ಇದರಿಂದ ಇಂದ್ರಾದಿ ದೇವತೆಗಳಿಗೆ ಮತ್ತು ಋಷಿಮುನಿಗಳಿಗೆ ಸಂತಸ ಉಂಟಾಗುತ್ತದೆ. ಚಂದ್ರನಿಗೆ ನೆಮ್ಮದಿ ಉಂಟಾಗುತ್ತದೆ.

(ಬರಹ: ಎಚ್. ಸತೀಶ್‌, ಜ್ಯೋತಿಷಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.