ಪಂಜಾಬ್‌ ಅಮೃತಸರದ ಸ್ವರ್ಣಮಂದಿರ ನಿರ್ಮಿಸಿದವರು ಯಾರು? ಗೋಲ್ಡನ್ ಟೆಂಪಲ್ ಕುರಿತು ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಂಜಾಬ್‌ ಅಮೃತಸರದ ಸ್ವರ್ಣಮಂದಿರ ನಿರ್ಮಿಸಿದವರು ಯಾರು? ಗೋಲ್ಡನ್ ಟೆಂಪಲ್ ಕುರಿತು ಇಲ್ಲಿದೆ ಮಾಹಿತಿ

ಪಂಜಾಬ್‌ ಅಮೃತಸರದ ಸ್ವರ್ಣಮಂದಿರ ನಿರ್ಮಿಸಿದವರು ಯಾರು? ಗೋಲ್ಡನ್ ಟೆಂಪಲ್ ಕುರಿತು ಇಲ್ಲಿದೆ ಮಾಹಿತಿ

Golden Temple: ಸಿಖ್‌ ಸಮುದಾಯದ ಪವಿತ್ರ ಸ್ಥಳ ಪಂಜಾಬ್‌ನ ಅಮೃತಸರ ದೇವಾಲಯವನ್ನು ಸಿಖ್ ಧರ್ಮದ ಐದನೇ ಗುರು ಅರ್ಜನ್ ದೇವ್‌ಜಿ ನಿರ್ಮಿಸಿದ್ದಾರೆ. ಇಲ್ಲಿ ಸಿಖ್ಖರು ಮಾತ್ರವಲ್ಲದೆ ಎಲ್ಲಾ ಧರ್ಮದವರೂ ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಬೆಳಗಿನಿಂದ ಸಂಜೆವರೆಗೂ ಬರುವ ಭಕ್ತರಿಗೆ ಉಚಿತ ಅನ್ನಸಂತರ್ಪಣೆ ಮಾಡಲಾಗುತ್ತದೆ.

ಸಿಖ್ಖರ ಪ್ರಮುಖ ಪವಿತ್ರ ಯಾತ್ರಾ ಸ್ಥಳ ಪಂಜಾಬ್‌ ಅಮೃತಸರದ ಸ್ವರ್ಣಮಂದಿರ
ಸಿಖ್ಖರ ಪ್ರಮುಖ ಪವಿತ್ರ ಯಾತ್ರಾ ಸ್ಥಳ ಪಂಜಾಬ್‌ ಅಮೃತಸರದ ಸ್ವರ್ಣಮಂದಿರ (PC: Twitter, goldentempleamritsar)

ಭಾರತದ ಪ್ರಮುಖ ದೇವಾಲಯಗಳಲ್ಲಿ ಪಂಜಾಬ್‌ ಅಮೃತ್‌ಸರದ ಗೋಲ್ಡನ್‌ ಟೆಂಪಲ್‌ ಕೂಡಾ ಒಂದು. ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.  ಇದು ಸಿಖ್ ಧರ್ಮದ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಈ  ಗೋಲ್ಡನ್ ಟೆಂಪಲನ್ನು ಶ್ರೀ ಹರ್ಮಂದಿರ್ ಸಾಹಿಬ್ ಎಂದೂ ಕರೆಯುತ್ತಾರೆ. ಸ್ವರ್ಣಮಂದಿರದ ಬಳಿ ಇರುವ ಕೊಳವನ್ನು ಅಮೃತ ಸರೋವರ ಎಂದು ಕರೆಯಲಾಗುತ್ತದೆ. ಇಲ್ಲಿ ಸ್ನಾನ ಮಾಡುವವರಿಗೆ ಆಧ್ಯಾತ್ಮಿಕ ಪ್ರಯೋಜನಗಳು ದೊರಕುತ್ತವೆ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ಪವಿತ್ರ ಸ್ಥಳಕ್ಕೆ ಸಿಖ್‌ ಸಮುದಾಯದವರು ಮಾತ್ರವಲ್ಲದೆ ಇತರ ಧರ್ಮದವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ದೇವಾಲಯದ ಸಮುಚ್ಚಯಕ್ಕೆ ಕಾಲಿಟ್ಟ ತಕ್ಷಣ ಬೇರೆಲ್ಲೂ ಕಾಣದ ಪ್ರಶಾಂತತೆಯ ಅನುಭವವಾಗುತ್ತದೆ. ಪ್ರತಿದಿನ ತಿರುಪತಿಗೆ ಅನೇಕ ಭಕ್ತರು ನಿಯಮಿತವಾಗಿ ಭೇಟಿ ನೀಡುವಂತೆಯೇ ಈ ಗುರುದ್ವಾರಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಅಮೃತಸರದ ಈ ಪವಿತ್ರ ಗೋಲ್ಡನ್ ಟೆಂಪಲ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂತ ಹಜರತ್ ಮಿಯಾನ್ ಮಿರ್ ಯಾರು?

ಸಂತ ಹಜರತ್ ಮಿಯಾನ್ ಮಿರ್, ಗೋಲ್ಡನ್ ಟೆಂಪಲ್‌ನ ಅಡಿಪಾಯ ಹಾಕಿದವರು ಎಂದು ಹೇಳಲಾಗುತ್ತದೆ. ಗೋಲ್ಡನ್ ಟೆಂಪಲ್ ಅನ್ನು ಸಿಖ್ ಧರ್ಮದ ಐದನೇ ಗುರು ಅರ್ಜನ್ ದೇವ್ ಜಿ ನಿರ್ಮಿಸಿದ್ದಾರೆ. ಹಿಂದೂ-ಮೊಘಲ್ ವಾಸ್ತುಶೈಲಿಯಲ್ಲಿ ಈ ಸ್ವರ್ಣಮಂದಿರವನ್ನು ಕಟ್ಟಲಾಗಿದೆ. ದೇವಾಲಯವನ್ನು ನಿರ್ಮಿಸುವ ಮೊದಲು ಗುರುನಾನಕರು ಇಲ್ಲಿ ಧ್ಯಾನ ಮಾಡುತ್ತಿದ್ದರು. ಭಗವಾನ್ ಬುದ್ಧ ಕೂಡಾ ಈಗ ದೇವಾಲಯ ಇರುವ ಸ್ಥಳದಲ್ಲಿ ಸ್ವಲ್ಪ ಕಾಲ ತಂಗಿದ್ದು ಧ್ಯಾನ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಆ ಸಮಯದಲ್ಲಿ, ಈ ದೇವಾಲಯದ ಸಂಪೂರ್ಣ ಪ್ರದೇಶವು ದಟ್ಟವಾದ ಅರಣ್ಯವಾಗಿತ್ತು.

ಚಿನ್ನದ ಲೇಪನವು ಈ ಗುರುದ್ವಾರದ ವಿಶೇಷ ಆಕರ್ಷಣೆಯಾಗಿದೆ. ಈ ದೇಗುಲದ ಸುತ್ತಲೂ 24 ಕ್ಯಾರೆಟ್ ಚಿನ್ನದ ಲೇಪನ ಮಾಡಲಾಗಿದೆ. ಆದ್ದರಿಂದ ಇದನ್ನು ಸ್ವರ್ಣಮಂದಿರ ಎಂದು ಕರೆಯುತ್ತಾರೆ. ಮೊದಲಿಗೆ ಮಹಾರಾಜ ರಂಜಿತ್ ಸಿಂಗ್ ಈ ದೇವಾಲಯಕ್ಕೆ ಚಿನ್ನದ ಲೇಪನ ಮಾಡಿಸಿದರು . ಆರಂಭದಲ್ಲಿ 162 ಕೆಜಿ ಚಿನ್ನದ ಲೇಪನದಿಂದ ಕೆಲಸ ಆರಂಭವಾಯಿತು. 90ರ ದಶಕದಲ್ಲಿ 500 ಕೆಜಿ ಚಿನ್ನದ ಲೇಪನವನ್ನು ದೇವಸ್ಥಾನಕ್ಕೆ ಸೇರಿಸಲಾಯಿತು ಎನ್ನಲಾಗಿದೆ.

ವಿಶ್ವದಲ್ಲೇ ಅತಿ ದೊಡ್ಡ ಲಂಗರ್ ಸೇವೆ ನೀಡುವ ದೇವಾಲಯ

ಈ ಗೋಲ್ಡನ್ ಟೆಂಪಲ್‌ನಲ್ಲಿ ಪ್ರತಿದಿನ ಬರುವ ಭಕ್ತರಿಗಾಗಿ ಉಚಿತ ಅನ್ನ ಸಂತರ್ಪಣೆ ಮಾಡಲಾಗುತ್ತದೆ.  ಇದು ವಿಶ್ವದಲ್ಲೇ ಅತಿ ದೊಡ್ಡ ಲಂಗರ್ (ಅಡುಗೆ ಮನೆ) ಸೇವೆಯನ್ನು ನೀಡುವ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಗೆ ಬರುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಾರೆ.  ಪ್ರತಿದಿನ 50,000ರಿಂದ 1 ಲಕ್ಷ ಭಕ್ತರು ಇಲ್ಲಿ ಉಚಿತವಾಗಿ ಊಟ ಮಾಡುತ್ತಾರೆ. ಇಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ. 

ಇತರ ಧಾರ್ಮಿಕ ಸ್ಥಳಗಳಿಗಿಂತ ಈ ದೇವಾಲಯದ ಪ್ರವೇಶದ್ವಾರ ಭಿನ್ನವಾಗಿದೆ. ದೇವರ ಬಳಿಗೆ ಬರುವ ಭಕ್ತರು ಅಹಂಕಾರ, ದ್ವೇಷ ತೊರೆಯಬೇಕು. ಪ್ರತಿಯೊಬ್ಬರೂ ಈ ರೀತಿ ನಡೆದುಕೊಂಡರೆ ದೇವರು ಅವರನ್ನು ಆಶೀರ್ವದಿಸುತ್ತಾನೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಜಾತಿ, ಧರ್ಮ, ವಯಸ್ಸಿನ ಹಂಗಿಲ್ಲದೆ ಈ ಸ್ವರ್ಣಮಂದಿರದಲ್ಲಿ ಯಾರು ಬೇಕಾದರೂ ಸ್ವಯಂ ಸೇವಕರಾಗಬಹುದು.

ಅಮೃತಸರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗೋಲ್ಡನ್ ಟೆಂಪಲ್ ಬಳಿ ಇದೆ. ಅಲ್ಲಿಂದ ನೀವು ಕ್ಯಾಬ್ ಸಹಾಯದಿಂದ ಹರ್ಮಂದಿರ್ ಸಾಹಿಬ್ ತಲುಪಬಹುದು. ಅಮೃತ್‌ಸರದಲ್ಲಿ ರೈಲು ನಿಲ್ದಾಣ, ಬಸ್‌ ನಿಲ್ದಾಣ ಕೂಡಾ ಇದ್ದು ಅಲ್ಲಿಂದ ಕ್ಯಾಬ್‌ ಮೂಲಕ ಹೋಗಬಹುದು. ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿಮೀ ದೂರದಲ್ಲಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.