2025 ಹನುಮಂತನ ವರ್ಷ: ಅದೃಷ್ಟ ಸಂಖ್ಯೆ 9 ಹೊಂದಿರುವವರರು ತುಂಬಾ ಶಕ್ತಿವಂತರು; ರಂಗಸ್ವಾಮಿ ಮೂಕನಹಳ್ಳಿ ಬರಹ
ವಾಯುಪುತ್ರ ಹನುಮಂತ ಮತ್ತು 2025ರ ಇಸವಿಗೆ ಅವಿನಾಭಾವ ಸಂಬಂಧವಿದೆ. 2025 ಅನ್ನು ಕೂಡಿದರೆ ಸಂಖ್ಯೆ 9 ಬರುತ್ತದೆ. ಇದು ಹನುಮಂತನ ಸಂಖ್ಯೆ. ಈ ಸಂಖ್ಯೆಯ ಜನರು ಕೂಡ ತುಂಬಾ ಶಕ್ತಿವಂತರು ಎಂದು ಆರ್ಥಿಕ ತಜ್ಞ, ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿಯವರು ಉದಾಹರಣೆ ಸಹಿತ ವಿವರಿಸಿದ್ದಾರೆ.

ಆರ್ಥಿಕ ತಜ್ಞ, ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇದು 2025ನೇ ಇಸವಿ. ಈ ಸಂಖ್ಯೆಗಳನ್ನು ಕೂಡಿದರೆ ಒಟ್ಟು 9 ಆಗುತ್ತದೆ. ಒಂಬತ್ತು ನ್ಯೂಮರಾಲಜಿ ಮತ್ತು ಹಿಂದೂ ನಂಬಿಕೆಗಳ ಪ್ರಕಾರ ಹನುಮನ ಸಂಖ್ಯೆ. ಹೀಗಾಗಿ ಈ ವರ್ಷವನ್ನು ಹನುಮನ ವರ್ಷ ಎಂದು ಕೂಡ ಕರೆಯಬಹುದು. ಒಂಬತ್ತು ಸಂಖ್ಯೆಯನ್ನು ಮಂಗಳ ಗ್ರಹಕ್ಕೂ ತಳುಕು ಹಾಕಲಾಗಿದೆ. ಮಂಗಳ ಪ್ಲಾನೆಟ್ ಆಫ್ ಎನರ್ಜಿ ಮತ್ತು ಆಕ್ಷನ್. ನೀವು ಒಂಬತ್ತು ಸಂಖ್ಯೆಯಲ್ಲಿ ಜನಿಸಿದ ಜನರನ್ನು ಅಂದರೆ 9,18,27 ದಿನಾಂಕದಂದು ಜನಿಸಿದವರನ್ನು ಗಮನಿಸಿ ನೋಡಿ , ಎನರ್ಜಿ ಮತ್ತು ಆಕ್ಷನ್ ಎಂದರೇನು ಎನ್ನುವುದರ ನಿಜವಾದ ಅರ್ಥ ತಿಳಿಯುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಕೊಡಬೇಕೆಂದರೆ ನಮ್ಮ ದೇವೇಗೌಡರನ್ನು ನೋಡಿ ! 91ರ ಹರಯದಲ್ಲೂ ಕೆಲವೇ ದಿನಗಳ ಹಿಂದೆ ಅವರು ರಾಜ್ಯಸಭೆಯಲ್ಲಿ ಮಾಡಿದ ಭಾಷಣ ಕೇಳಿನೋಡಿ !
ಎಲ್ಲಾ 9 ರ ಸಂಖ್ಯೆಯಲ್ಲಿ ಜನಿಸಿದವರೂ ಮತ್ತೇಕೆ ಪ್ರಸಿದ್ದರೂ ಹಣವಂತರೂ ಆಗಿಲ್ಲ? ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಹನುಮನಂತ ಬಹು ಪರಾಕ್ರಮಿ , ಶಕ್ತಿಶಾಲಿ ಆದರೆ ಆತನಿಗೆ ತನ್ನ ಶಕ್ತಿಯ ಅರಿವಿರಲಿಲ್ಲ. ಜಾಂಬವಂತ ಇದು ನಿನ್ನಿಂದ ಸಾಧ್ಯ ಎಂದು ಹುರುದುಂಬಿಸುವವರೆಗೆ ಹನುಮಂತ ಅತ್ಯಂತ ಸಾಧಾರಣವಾಗಿದ್ದ ಎನ್ನುವುದು ಕಥೆಗಳ ಮೂಲಕ ನಮೆಗೆಲ್ಲಾ ತಿಳಿದಿದೆ. 9 ಸಂಖ್ಯೆಯ ಜನರ ಪಾಲಿಗೆ ಒಬ್ಬ ಜಾಂಬವಂತನ ಅವಶ್ಯಕತೆ ಬಹಳವಿರುತ್ತದೆ. ಒಮ್ಮೆ ಇವರಿಗೆ ತಮ್ಮ ಶಕ್ತಿಯ ಅರಿವಾದರೆ ಸಾಕು , ಇತರರಿಗಿಂತ ಬಹಳ ವೇಗವಾಗಿ ಕಾರ್ಯಸಾಧನೆಯಲ್ಲಿ ತೊಡಗುತ್ತಾರೆ.
ಬೇಜನ್ ದಾರುವಾಲಾ ಎನ್ನುವ ಜ್ಯೋತಿಷಿ ಇವತ್ತಿಗೆ ಇಲ್ಲ. ಆದರೆ ಆತನನ್ನು ನಾನು ಬಹಳ ನಂಬಿ ಫಾಲೋ ಮಾಡಿಕೊಂಡು ಬಂದಿದ್ದೇನೆ. ಪಾಶ್ಚಾತ್ಯರ ನಡೆನುಡಿಯನ್ನು ಪೂರ್ಣವಾಗಿ ನನ್ನದಾಗಿಸಿಕೊಂಡು , ಭಾರತೀಯ ಎಂದ್ದದ್ದೆಲ್ಲಾ ಮೂಢನಂಬಿಕೆ ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿಕೊಂಡಿದ್ದ ನನಗೆ ಬದುಕಿನ ಬೇರೆ ದಾರಿಯನ್ನು ತೋರಿಸಿದ್ದು ದಾರುವಾಲಾ. ಈ ನಂಬಿಕೆ ಎನ್ನುವುದು ಬಹಳ ಮುಖ್ಯ ಕಣ್ರೀ. ನಂಬಿ ಕೆಟ್ಟವರಿಲ್ಲ ಎಂದು ದಾಸರು ಹೇಳಿದ್ದು ಅದಕ್ಕೆ ಇರಬೇಕು. ನಂಬಿಕೆ ಎಂದರೆ ಸುಮ್ಮನೆ ಕಾಟಾಚಾರಕ್ಕೆ ನಂಬುವುದಲ್ಲ. ಪೂರ್ಣ ಮನಸ್ಸಿನಿಂದ ನಂಬುವುದು. ಆಚಾರ , ವಿಚಾರಗಳನ್ನು ಪಾಲಿಸುವುದು ಮಾಡಬೇಕು. ಆಗ ನಂಬಿಕೆಯ ನಿಜವಾದ ಬಲದ ಅನಾವರಣವಾಗುತ್ತದೆ.
2025 ರ ಸಮಯದಲ್ಲೂ ಇದೇನಿದು ಇವನದು ಕಂದಾಚಾರದ ಮಾತು ಎಂದು ಈ ವೇಳೆಗೆ ನೀವು ಅಂದುಕೊಂಡಿದ್ದರೆ , ಸ್ವಲ್ಪ ನಿಧಾನಿಸಿ. ಈ ಅಗಾಧ ಬ್ರಹ್ಮಾಂಡದಲ್ಲಿ ನಾನು ಎನ್ನುವ ನಾನು ಅದೆಷ್ಟು ನಿಕೃಷ್ಟ ಎನ್ನುವ ಅರಿವು ಮಾಡಿಕೊಳ್ಳಲು ಪ್ರಯತ್ನಿಸಿ. ಇದರ ಅರಿವಾದ ಮೇಲೆ ಸ್ವಲ್ಪ ಸುತ್ತಮುತ್ತಲಿನ ಸಮಾಜವನ್ನು , ಜನರನ್ನು ಗಮನಿಸಿ. ಅದೇಕೆ ಕೆಲವರಿಗೆ ಕಷ್ಟ ಜಾಸ್ತಿ? ಅದೇಕೆ ಕೆಲವರಿಗೆ ಏನೇ ಮಾಡಿದರೂ ಯಶಸ್ಸು ಕೈ ಹತ್ತುವುದಿಲ್ಲ? ಅದೇಕೆ ಕೆಲವರಿಗೆ ಬದುಕು ಹೂವಿನ ಹಾದಿ? ಇದಕ್ಕೆ ಕರ್ಮಫಲ ಎನ್ನದೆ ಬೇರಾವ ಹೆಸರನ್ನು ನೀವು ಇಡಬಲ್ಲಿರಿ?
ತುಂಬು ನಿಷ್ಠೆಯಿಂದ ಹನುಮನ ನೆನೆಯಿರಿ , ಸಾಧ್ಯವಾದರೆ ಪ್ರತಿ ದಿನ ಹನುಮಾನ್ ಚಾಲೀಸಾ ಓದುವ ಪ್ರಯತ್ನ ಮಾಡಿ. ಮಹಾನ್ ರಾಮಭಕ್ತ ಹನುಮಾನ್ ಸ್ಮರಣೆಯಿಂದ ಎಲ್ಲಾ ಕಷ್ಟಗಳೂ ಪರಿಹಾರವಾಗುತ್ತದೆ. ನಾನೂ ನಂಬರ್ ನೈನ್ ಎಂದು ಹೇಳಿಕೊಳ್ಳಲು ನನಗೆ ಅಪರಿಮಿತ ಆನಂದವಾಗುತ್ತಿದೆ. ನಿತ್ಯ ಹನುಮಾನ್ ಚಾಲೀಸಾ ಓದುತ್ತೇನೆ. ಆ ಹನುಮನ ಒಂದಂಶ ನಮ್ಮೆಲ್ಲರಲ್ಲೂ ಇರುತ್ತದೆ. ಅದನ್ನು ಉದ್ದೀಪನ ಗೊಳಿಸುವ ಜಾಂಬವಂತ ನಮ್ಮ ಪಾಲಿಗೆ ಸಿಗಬೇಕು. ಇಲ್ಲವೇ ಸ್ವಸಾಮರ್ಥ್ಯದ ಅರಿವು ಮೂಡಬೇಕು. ಸಂಕಟ ನಿವಾರಕ ಹನುಮ ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ. ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು.
