ನಿರಹಂಕಾರಿ, ಬುದ್ಧಿ, ಸಾಮರ್ಥ್ಯ, ಅಷ್ಟಸಿದ್ಧಿಗಳ ನಿಧಿ ಹನುಮಂತ; ಡಾ.ಭಾಗ್ಯಜ್ಯೋತಿ ಕೋಟಿಮಠ ಬರಹ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿರಹಂಕಾರಿ, ಬುದ್ಧಿ, ಸಾಮರ್ಥ್ಯ, ಅಷ್ಟಸಿದ್ಧಿಗಳ ನಿಧಿ ಹನುಮಂತ; ಡಾ.ಭಾಗ್ಯಜ್ಯೋತಿ ಕೋಟಿಮಠ ಬರಹ

ನಿರಹಂಕಾರಿ, ಬುದ್ಧಿ, ಸಾಮರ್ಥ್ಯ, ಅಷ್ಟಸಿದ್ಧಿಗಳ ನಿಧಿ ಹನುಮಂತ; ಡಾ.ಭಾಗ್ಯಜ್ಯೋತಿ ಕೋಟಿಮಠ ಬರಹ

Hanuman Jayanthi 2025 Special: ಹನುಮ ಎಂದರೆ ಶಕ್ತಿ. ಹನುಮ ಎಂದರೇ ಬುದ್ಧಿ., ಹನುಮ ಎಂದರೆ ಶ್ರೇಷ್ಠತೆ, ಹನುಮ ಎಂದರೆ ನಿರಹಂಕಾರಿ. ಹೀಗೆ ಹನುಮನ ಗುಣಗಳ ಬಗ್ಗೆ ಡಾ ಭಾಗ್ಯಜ್ಯೋತಿ ಕೋಟಿಮಠ ಅವರು ವಿವರಿಸಿದ್ದಾರೆ.

ರಾಮನ ಭಂಟ ಹನುಮಂತನಲ್ಲಿ ಯಾವೆಲ್ಲಾ ಗುಣಗಳಿದ್ದವು ಎಂಬುದನ್ನು ಡಾ ಭಾಗ್ಯಜ್ಯೋತಿ ಕೋಟಿಮಠ ಅವರು ವಿವರಿಸಿದ್ದಾರೆ
ರಾಮನ ಭಂಟ ಹನುಮಂತನಲ್ಲಿ ಯಾವೆಲ್ಲಾ ಗುಣಗಳಿದ್ದವು ಎಂಬುದನ್ನು ಡಾ ಭಾಗ್ಯಜ್ಯೋತಿ ಕೋಟಿಮಠ ಅವರು ವಿವರಿಸಿದ್ದಾರೆ

Hanuman Jayanthi 2025 Special: ಹಿಂದೂ ಧರ್ಮದಲ್ಲಿ ಎಲ್ಲ ದೇವರು, ದೇವತೆಗಳಿಗೂ ಪೂಜ್ಯನೀಯ ಸ್ಥಾನ ನೀಡಿ ಗೌರವಿಸಲಾಗುತ್ತದೆ. ಕೋಟಿ ದೇವತೆಗಳು ಹಿಂದೂ ಧರ್ಮದಲ್ಲಿದ್ದರೂ ಹೆಚ್ಚು ಪ್ರಾಮುಖ್ಯ ಪಡೆಯುವವನು, ಹೆಚ್ಚು ಭಕ್ತರನ್ನು ಹೊಂದಿದವನು ವಾಯುಪುತ್ರ ಆಂಜನೇಯ. ಹನುಮ ದೇವರು ಅಷ್ಟಸಿದ್ಧಿಗಳ ಒಡೆಯ. ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರ-ತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷ ಸಾಮರ್ಥ್ಯ. ಇದನ್ನು ಪ್ರಮುಖವಾಗಿ ಎಂಟು ಸಿದ್ಧಿಗಳೆಂದು ಪರಿಗಣಿಸಿದ್ದಾರೆ.

ಎಂಟು ಸಿದ್ಧಿಗಳಿವು

  • ಅಣಿಮಾ-ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು.
  • ಲಘಿಮಾ-ಅತಿ ಕಡಿಮೆ (ಭಾರರಹಿತ) ಹಗುರಾಗುವದು.
  • ಮಹಿಮಾ-ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು.
  • ಗರಿಮಾ-ಅತಿ (ಅನಂತದಷ್ಟು) ಭಾರವಾಗಿರುವದು.
  • ಪ್ರಾಪ್ತಿ-ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು.
  • ಪ್ರಾಕಾಮ್ಯ-ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು.
  • ಈಶತ್ವ-ಎಲ್ಲದರ ಮೇಲೆ ಸಂಪೂರ್ಣ ಒಡೆತನ ಹೊಂದುವದು.
  • ವಶಿತ್ವ-ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು.

ಇವುಗಳನ್ನೆಲ್ಲ ಜಯಿಸಿದ ಹನುಮನಿಗೆ ಎಳ್ಳಷ್ಟೂ ಅಹಂಕಾರ ಇರಲಿಲ್ಲ.

ಪುರಾಣ ಕಥೆಗಳಲ್ಲಿ ಹನುಮಂತನು ದೇವರ ಅವತಾರ ಹಾಗೂ ಪವಾಡದ ವ್ಯಕ್ತಿತ್ವವುಳ್ಳವನಾದರೂ, ಹನುಮಂತನ ಜೀವನವನ್ನು ಗಮನಿಸಿದಾಗ ಕಂಡುಬರುವ ಅಂಶವೆಂದರೆ ಆಂಜನೇಯನ ವ್ಯವಸ್ಥಾಪಕತೆ, ತನ್ನ ಉದ್ದೇಶಗಳನ್ನು ಹೇಗೆ ಪೂರೈಸಬೇಕೆಂದು ತಿಳಿದಿಲ್ಲವಾದರೂ ಮಾನವ ಸಂಪನ್ಮೂಲಗಳನ್ನು ಹೇಗೆ ಬಳಸಬೇಕೆಂದು ಆಂಜನೇಯನಿಗೆ ತಿಳಿದಿತ್ತು. ಈ ರೀತಿಯಲ್ಲಿ ಆಂಜನೇಯನ ರೀತಿ-ನೀತಿಗಳು ಇಂದಿನ ವಾಸ್ತವ ಬದುಕಿಗೆ ಹತ್ತಿರವಾಗುತ್ತವೆ.

ಬುದ್ಧಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮೊದಲು ನೆನೆಯುವಂತಹ ದೇವನು ಇವನೇ. ನಂಬಿಕೆಯ ಪ್ರಕಾರ ಈತನನ್ನು ಭಜಿಸುವುದರಿಂದ ಗ್ರಹದೋಷಗಳೂ ಸೇರಿದಂತೆ ಎಲ್ಲಾ ರೀತಿಯ ದುಷ್ಟ ಪ್ರಭಾವಗಳೂ ನಿರ್ಮೂಲನೆಗೊಳ್ಳುತ್ತವೆ ಎನ್ನಲಾಗುತ್ತದೆ.

ಹನುಮನು ಸಮುದ್ರಲಂಘನ ಮಾಡುವಾಗ ಆತನ ಶಕ್ತಿಯನ್ನು ಪರೀಕ್ಷಿಸಲು ಸುರಾಸಾ ಎಂಬ ರಾಕ್ಷಸಿಯು ಎದುರಾಗುತ್ತಾಳೆ. ಹನುಮಂತನಿಗೆ ’ನೀನು ಧೀರನಾಗಿದ್ದರೆ ನನ್ನ ಬಾಯಿಯನ್ನು ಪ್ರವೇಶಿಸಿ ಹೊರಗೆ ಬರಬೇಕು’ ಎಂದು ಹೇಳುತ್ತಾಳೆ. ಹನುಮಂತನು ಈಗ ಸಮಯವಿಲ್ಲವೆಂದರೂ, ಹಿಂತಿರುಗಿ ಬರುವಾಗ ಬಾಯಿಯನ್ನು ಪ್ರವೇಶಿಸುತ್ತೇನೆ ಎಂದರೂ ಕೇಳದಿದ್ದಾಗ, ಹನುಮಂತನು ದೊಡ್ಡದಾಗುತ್ತಾ ಹೋಗುತ್ತಾನೆ.

ಅವನಂತೆ ಸುರಾಸಾ ಕೂಡಾ ಬಾಯಿಯನ್ನು ದೊಡ್ಡದಾಗಿಸುತ್ತಾಳೆ. ಸುರಸಾ ದೊಡ್ಡ ಬಾಯಿ ಹೊಂದಿದ್ದಾಗಲೇ ಹನುಮಂತನು ಶರೀರವನ್ನು ಕಿರಿದಾಗಿಸಿ ಬಾಯಿಯಿಂದ ಹೊರಬಂದನು. ಹನುಮಂತನ ಬುದ್ಧಿವಂತಿಕೆಗೆ ಬೆರಗಾದ ಸುರಸೆಯು ಸೀತೆಯನ್ನು ನೋಡುವ ಶಕ್ತಿ ನಿನಗಿದೆ, ಜಯವಾಗಲಿ ಎಂದು ಹಾರೈಸಿದಳು. ಹೀಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ಹನುಮಂತನು ನೀವು ಸಾಗುವ ಹಾದಿಯಲ್ಲಿ ನೀವು ಯಾರಿಗಾದರೂ ತಲೆಬಾಗಬೇಕಾಗಿ ಬಂದರೂ ಅದು ನಿಮ್ಮ ಸೋಲೆಂದು ತಿಳಿದುಕೊಳ್ಳದೇ, ಗುರಿಯತ್ತ ಮುನ್ನುಗ್ಗಬೇಕು ಎನ್ನುವುದಾಗಿ ತಿಳಿಸಿಕೊಡುತ್ತಾನೆ. ಇದು ’ಅಗತ್ಯವಿದ್ದಾಗ ಶಕ್ತಿ ಪ್ರದರ್ಶಿಸಿದರೆ ಸಾಕು’ ಎಂಬುದನ್ನು ತಿಳಿಸುತ್ತದೆ.

ಎಲ್ಲಿ ಬಾಗಬೇಕು, ಎಲ್ಲಿ ಸಮರ್ಥವಾಗಿ ಕೆಲಸ ಮಾಡಬೇಕು ಎನ್ನುವುದನ್ನು ಅರಿತು ಮುಂದೆ ಹೆಜ್ಜೆ ಇಟ್ಟವರು. ಆದರೆ ಇಂದು ತಾಳ್ಮೆಯನ್ನು ತೆಗೆದುಕೊಳ್ಳದೇ ಬುದ್ಧಿಯ ಬದಲಾಗಿ ಶಕ್ತಿ ಪ್ರದರ್ಶಿಸುತ್ತಾರೆ. ಹನುಮನನ್ನು ದೇವರಾಗಿ ಪರಿಗಣಿಸಿ ಆರಾಧಿಸುವುದರ ಮೂಲಕ ಹನುಮನ ಜೀವನವನ್ನು ಅರಿತುಕೊಂಡು, ಅವನ ಗುಣಗಳನ್ನು ಸಹ ಕಲಿಯುವುದು ಒಳ್ಳೆಯದು. ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು. (ಬರಹ: ಡಾ ಭಾಗ್ಯಜ್ಯೋತಿ ಕೋಟಿಮಠ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.