ಹೆಬ್ಬೆರಳಿನಲ್ಲಿ ಸುರುಳಿಯಾಕಾರದ ರೇಖೆಗಳು ತಟ್ಟೆಯಂತೆ ಒಂದರ ಮೇಲೆ ಒಂದರಂತೆ ಇವೆಯೇ; ನೀವು ಭಾರಿ ಅದೃಷ್ಟವಂತರು
ಹಲವರ ಕೈಯಲ್ಲಿನ ಹೆಬ್ಬೆರಳಿನಲ್ಲಿ ಸುರುಳಿಯಾಕಾರದ ರೇಖೆಗಳು ತಟ್ಟೆಯಂತೆ ಒಂದರ ಮೇಲೆ ಒಂದರಂತೆ ಇರುತ್ತವೆ. ನಿಮ್ಮ ಹೆಬ್ಬೆರಳಿನಲ್ಲಿ ಹೀಗೆ ಇದ್ದರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟ ಹೇಗಿರುತ್ತೆ ಎಂಬುದನ್ನು ತಿಳಿಯಿರಿ.

ಕೆಲವರ ಹೆಬ್ಬೆರಳಿನಲ್ಲಿ ಸುರುಳಿಯಾಕಾರದ ರೇಖೆಗಳು ತಟ್ಟೆಯಂತೆ ಒಂದರ ಮೇಲೆ ಒಂದು ಇರುತ್ತದೆ. ತಟ್ಟೆಯನ್ನು ಜೋಡಿಸಿರುವಂತೆ ನಾವು ಕಾಣಬಹುದು. ಇಂತಹವರು ಯಾವುದೇ ವಿಚಾರದಲ್ಲಿಯೂ ದೃಢವಾದ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಒಳ್ಳೆಯ ವಿದ್ಯೆ ಇರುತ್ತದೆ. ವಿಶೇಷವಾದ ಬುದ್ಧಿವಂತಿಕೆ ಇರುತ್ತದೆ. ಆದರೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ತಾವೇ ಮಾಡಿದ ತಪ್ಪಿಗೆ ತೊಂದರೆ ಅನುಭವಿಸುತ್ತಾರೆ. ಅದೃಷ್ಟವೆಂದರೆ ಇವರಿಗೆ ಸಹಾಯ ಮಾಡಲು ಆತ್ಮೀಯರ ದಂಡೆ ಇರುತ್ತದೆ. ಕೆಲವೊಮ್ಮೆ ಇವರ ತಪ್ಪು ನಿರ್ಧಾರಗಳನ್ನು ಬೇರೆಯವರು ಒಪ್ಪಿಕೊಳ್ಳುತ್ತಾರೆ. ಉತ್ತಮ ಹಣವನ್ನು ಸಂಪಾದಿಸುವ ಆಸೆ ಇರುತ್ತದೆ.
ಈ ರೀತಿ ಹೆಬ್ಬೆರಳಿನಲ್ಲಿ ಇದ್ದರೆ ಹಣದ ಕೊರತೆ ಇಲ್ಲದೆ ಹೋದರು ನಿರೀಕ್ಷೆಯಂತೆ ಇವರಿಗೆ ವರಮಾನ ದೊರೆಯುವುದಿಲ್ಲ. ದಾಂಪತ್ಯ ಜೀವನದಲ್ಲಿ ಎಲ್ಲರಿಗೂ ಇವರು ಮಾದರಿಯಾಗುತ್ತಾರೆ. ಆಪತ್ತಿನಲ್ಲಿ ಇದ್ದವರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಉನ್ನತ ಅಧಿಕಾರಿಗಳಾಗಿದ್ದಲ್ಲಿ ಕಾರ್ಮಿಕರ ಮೇಲೆ ಅನಗತ್ಯ ಕೆಲಸದ ಒತ್ತಡವನ್ನು ಹೇರುತ್ತಾರೆ. ಇವರ ಕುಟುಂಬದಲ್ಲಿ ಹೆಣ್ಣು ಮಕ್ಕಳ ಮಾತು ಮೇಲಾಗುತ್ತದೆ. ಹೆಣ್ಣುಮಕ್ಕಳ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಶತಪ್ರಯುತ್ನ ಮಾಡುತ್ತಾರೆ. ಇವರ ಮಾತಿನಲ್ಲಿ ತಾಯಿಯ ಮಮತೆ ಎದ್ದು ಕಾಣುತ್ತದೆ. ಎಲ್ಲರನ್ನೂ ತಮ್ಮ ಮಾತಿನ ಮೋಡಿಗೆ ಸಿಲುಕಿಸುತ್ತಾರೆ.
ತಂದೆಯಿಂದಾಗಿ ಧೈರ್ಯ ಹೆಚ್ಚಾಗಿರುತ್ತೆ
ಕುಟುಂಬದವರಿಂದ ಇವರು ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯುತ್ತಾರೆ. ಆದ್ದರಿಂದ ಬಂಧು-ಬಳಗದವರಿಂದ ದೂರ ಉಳಿಯುತ್ತಾರೆ. ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರನ್ನೂ ಗೌರವಿಸುವುದು ಇವರ ಹೆಗ್ಗಳಿಕೆ. ಮಾತನಾಡಲು ಆರಂಭಿಸಿದರೆ ಮನದಲ್ಲಿರುವ ಎಲ್ಲಾ ವಿಚಾರವನ್ನು ಹೇಳುವ ತವಕವಿರುತ್ತದೆ. ಕೆಲವೊಮ್ಮೆ ಇವರ ಮಾತನ್ನು ಕೇಳುವವರಿಗೆ ಬೇಸರ ಉಂಟಾಗುತ್ತದೆ. ಸೋಲಿನ ವೇಳೆಯಲ್ಲಿಯೂ ಇವರು ಧೈರ್ಯ ಗೆಡುವುದಿಲ್ಲ. ಧೈರ್ಯ ಸಾಹಸದ ಗುಣ ಜನ್ಮದಿಂದಲೇ ಬಂದಿರುತ್ತದೆ. ಅಧಿಕಾರದ ಬಗ್ಗೆ ವ್ಯಾಮೋಹ ಇರುವುದಿಲ್ಲ. ಆದರೆ ತಾನಾಗಿಯೇ ದೊರೆಯುವ ಅಧಿಕಾರವನ್ನು ತಿರಸ್ಕರಿಸುವುದಿಲ್ಲ. ಉತ್ತಮ ಆದಾಯವಿರುತ್ತದೆ. ಆದರೆ ಪ್ರವಾಸ ಮಾಡುವ ಗುಣ ಮತ್ತು ಐಷಾರಾಮಿ ಜೀವನ ಇವರಿಗೆ ಇಷ್ಟವಾಗುತ್ತದೆ. ಇದರಿಂದ ಖರ್ಚುವೆಚ್ಚಗಳು ಹೆಚ್ಚುತ್ತವೆ. ಸದಾಕಾಲ ಮನೆಯನ್ನು ನವೀಕರಿಸುವುದು ಇವರ ಇಷ್ಟವಾದ ಕೆಲಸವಾಗಿರುತ್ತದೆ. ತಾಯಿಯ ಮೇಲೆ ಅಪರಿಮಿತ ಪ್ರೀತಿ ಇರುತ್ತದೆ. ತಾಯಿ ಹೇಳಿದಂತೆಯೇ ಕೇಳುವ ಬುದ್ಧಿ ಇವರದು. ತಂದೆಯವರಿಂದ ಸಹಾಯ ದೊರೆಯದೆ ಹೋದರು ತಂದೆ ಇರುವಿಕೆಯ ಧೈರ್ಯ ಇವರಲ್ಲಿ ಸದಾ ಇರುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣರಾಗುತ್ತಾರೆ. ಉತ್ತಮ ವಿದ್ಯಾಭ್ಯಾಸವಿರುತ್ತದೆ. ಆದರೆ ವಿದ್ಯಾಭ್ಯಾಸಕ್ಕಿಂತಲೂ ಅಪರಿಮಿತ ಜ್ಞಾನ ಮತ್ತು ಬುದ್ಧಿವಂತಿಕೆ ಇವರಲ್ಲಿರುತ್ತದೆ. ಶೀತದ ತೊಂದರೆಗೆ ಬೇಗನೆ ಒಳಗಾಗುತ್ತಾರೆ.
ಕೇವಲ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸುವುದರಲ್ಲಿ ನಂಬಿಕೆ ಇರುವುದಿಲ್ಲ. ಬೇರೆಯವರ ಅಥವಾ ಸ್ವಂತ ಅನುಭವದಿಂದ ಪ್ರಾಯೋಗಿಕವಾಗಿ ಪಾಠ ಕಲಿಯುತ್ತಾರೆ. ಪ್ರಯತ್ನ ಪಡದೆ ಯಾವುದೇ ವಿಚಾರದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇವರ ಮಕ್ಕಳಲ್ಲಿ ಆತುರದ ಸ್ವಭಾವವಿರುತ್ತದೆ. ಕೆಲಸ ಕಾರ್ಯಗಳು ಕ್ಲಿಷ್ಟಕರವಾದರೂ ಯೋಚಿಸದೆ ಯಶಸ್ಸನ್ನು ಗಳಿಸುವ ಯೋಜನೆ ರೂಪಿಸುತ್ತಾರೆ. ವಿದ್ಯಾರ್ಥಿಗಳು ಕಲಿಕೆಗೂ ಮುನ್ನವೇ ಉದ್ಯೋಗವನ್ನು ಗಳಿಸುತ್ತಾರೆ. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಯೂ ಎದುರಾದರೂ ತಮ್ಮ ಸಹೋದ್ಯೋಗಿಗಳನ್ನು ಟೀಕಿಸುತ್ತಾರೆ. ತಮ್ಮದೇ ತಪ್ಪಿದ್ದರು ಕಷ್ಟನಷ್ಟಕ್ಕೆ ಬೇರೆಯವರನ್ನು ಹೊಣೆ ಮಾಡುತ್ತಾರೆ.
ಎಲ್ಲರೊಡನೆ ಬೆರೆತು ಬಾಳುವ ಗುಣವಿರುತ್ತದೆ
ಸೋದರರ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಆದರೆ ಮನಸ್ತಾಪವನ್ನು ಕಡೆಗಣಿಸಿ ಇವರ ಸೋದರ ಸೋದರಿಯರು ಇವರಿಗೆ ಹಣದ ಸಹಾಯ ಮಾಡುತ್ತಾರೆ. ದಾಂಪತ್ಯ ಜೀವನವು ಸುಖ ಶಾಂತಿಗಳಿಂದ ಕೂಡಿರುತ್ತದೆ. ಇವರ ಬಾಳ ಸಂಗಾತಿಗೆ ಕ್ಷಮಾ ಗುಣವಿರುತ್ತದೆ. ಇದರಿಂದಾಗಿ ಎಲ್ಲರೊಡನೆ ಬೆರೆತು ಬಾಳುವ ಗುಣವಿರುತ್ತದೆ. ದೂರದ ಸಂಬಂಧಿಗಳಿಂದ ಪಾಲುಗಾರಿಕೆಯ ವ್ಯಾಪಾರದ ಅವಕಾಶ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸುವುದಿಲ್ಲ. ಒಂದಕ್ಕಿಂತಲೂ ಹೆಚ್ಚಿನ ಆದಾಯದ ಮೂಲವಿರುತ್ತದೆ. ಇವರಿಗೆ ಕೋಪ ಬರುವುದು ಬಹಳ ಕಡಿಮೆ. ಆದರೆ ಕೋಪಗೊಂಡಲ್ಲಿ ಉಗ್ರವಾಗಿಯೇ ವರ್ತಿಸುತ್ತಾರೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಹಸ್ತಸಾಮುದ್ರಿಕ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).