ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Jyeshtha Month: ಗಂಗಾ ದಸರಾ, ನಿರ್ಜಲ ಏಕಾದಶಿ ಸೇರಿದಂತೆ ಜ್ಯೇಷ್ಠ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತ, ಹಬ್ಬಗಳಿವು

Jyeshtha Month: ಗಂಗಾ ದಸರಾ, ನಿರ್ಜಲ ಏಕಾದಶಿ ಸೇರಿದಂತೆ ಜ್ಯೇಷ್ಠ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತ, ಹಬ್ಬಗಳಿವು

ಜ್ಯೇಷ್ಠ ಮಾಸ ಆರಂಭವಾಗಿದೆ. ಕಳೆದ ವೈಶಾಖ ಮಾಸದಂದು ಅನೇಕ ವ್ರತ, ಪೂಜೆಗಳನ್ನು ಆಚರಿಸಲಾಗಿತ್ತು. ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸಕ್ಕೆ ಕೂಡಾ ಬಹಳ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ಕೂಡಾ ಕೆಲವೊಂದು ಹಬ್ಬ, ವ್ರತಗಳನ್ನು ಆಚರಿಸಲಾಗುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಗಂಗಾ ದಸರಾ, ನಿರ್ಜಲ ಏಕಾದಶಿ ಸೇರಿದಂತೆ ಜ್ಯೇಷ್ಠ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತ, ಹಬ್ಬಗಳಿವು
ಗಂಗಾ ದಸರಾ, ನಿರ್ಜಲ ಏಕಾದಶಿ ಸೇರಿದಂತೆ ಜ್ಯೇಷ್ಠ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತ, ಹಬ್ಬಗಳಿವು

ಜೇಷ್ಠ ಮಾಸದ ಶುಕ್ಲ ಪಕ್ಷದ ಶುದ್ಧ ದಶಮಿಯಂದು ಗಂಗಾವತಾರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳ ಭಾನುವಾರ ಅಂದರೆ ಜೂನ್ 16ನೆಯ ದಿನಾಂಕ ಇದನ್ನು ಆಚರಿಸಲಾಗುತ್ತದೆ. ಇದಕ್ಕೆ ದಶಹರ ಎಂಬ ಹೆಸರು ಇದೆ. ಅಂದರೆ 10 ರೀತಿಯ ಯೋಗಗಳು ಇರುತ್ತವೆ. 10 ರೀತಿಯ ಯೋಗಗಳಲ್ಲಿ ಈ ದಿನದಂದು ದಶಮಿ ತಿಥಿ, ಹಸ್ತ ನಕ್ಷತ್ರ, ವೃಷಭದಲ್ಲಿ ರವಿ ಗ್ರಹ ಇರುತ್ತದೆ, ಇದನ್ನು ಆನಂದ ಯೋಗ ಎಂದು ಕರೆಯುತ್ತೇವೆ.

ಜೂನ್‌ 16ಕ್ಕೆ ಗಂಗಾ ದಸರಾ

ಸಾಮಾನ್ಯವಾಗಿ ಎಲ್ಲಾ ರೀತಿಯ ಹತ್ತು ಅಂಶಗಳು ನಮಗೆ ದೊರೆಯುವುದಿಲ್ಲ. ಈ ದಿನದಂದು ಗಂಗಾಪೂಜೆಯನ್ನು ಮಾಡಿದರೆ ಎಲ್ಲಾ ರೀತಿಯ ಕಷ್ಟ ನಷ್ಟಗಳು ದೂರವಾಗುತ್ತವೆ ಎಂದು ಧಾರ್ಮಿಕ ಗ್ರಂಥಗಳಿಂದ ತಿಳಿದುಬರುತ್ತದೆ. ಗಂಗಾಪೂಜೆ ಮಾಡಲು ಸಾಧ್ಯವಿಲ್ಲದವರು ಈ ಮೇಲ್ಕಂಡ ದಿನದಂದು ಬೆಳಗ್ಗೆ 10 ಗಂಟೆ ಒಳಗೆ ಬಳಿ ಇರುವ ಯಾವುದೇ ನದಿಯಲ್ಲಿ ಪುಣ್ಯ ಸ್ನಾನ ಮಾಡಬಹುದು. ಇಂದಿನ ಪುಣ್ಯ ಸ್ನಾನದಿಂದ ಚರ್ಮದ ರೋಗಗಳು ಬಹುತೇಕ ಗುಣಮುಖವಾಗುತ್ತದೆ ಎಂಬ ನಂಬಿಕೆ ಇದೆ. ಪೂರ್ವ ದಿಕ್ಕಿಗೆ ಮುಖ ಮಾಡಿ ಸೂರ್ಯನಿಗೆ ನದಿಯ ನೀರಿನಿಂದ ಸೂರ್ಯನಿಗೆ ಮೂರು ಬಾರಿ ಅರ್ಘ್ಯವನ್ನು ನೀಡಬೇಕು. ಆನಂತರ ಆಚರಣೆಯಲ್ಲಿ ತಪ್ಪುಗಳಾದಲ್ಲಿ ಕ್ಷಮಿಸಿ ಎಂದು ಬೇಡುತ್ತಾ ನಾಲ್ಕನೆಯ ಬಾರಿ ಅರ್ಘ್ಯವನ್ನು ನೀಡಬೇಕು.

ಈ ದಿನ ಗಂಗಾಪೂಜಾ ನಂತರ ಗೋದಾವನವನ್ನು ಮಾಡಬಹುದು. ದೀಪವನ್ನು ಹತ್ತಿಸಿ ನೀರಿನಲ್ಲಿ ಬಿಡುವುದರಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಈ ದಿನದಂದು ಯಾವುದೇ ಮಂತ್ರಗಳನ್ನು ಸುಲಭವಾಗಿ ಸಿದ್ಧಿಸಿಕೊಳ್ಳಬಹುದು. ದಂಪತಿಯನ್ನು ಮನೆಗೆ ಆಹ್ವಾನಿಸಿ ದಂಪತಿಯ ಪೂಜೆ ಮಾಡಿ ಭೋಜನವನ್ನು ಬಡಿಸಿ, ಕೈಲಾದಷ್ಟು ದಕ್ಷಿಣ ತಾಂಬೂಲಗಳನ್ನು ಕೊಟ್ಟು ಸತ್ಕರಿಸಬೇಕು. ಇದರಿಂದ ಕುಟುಂಬದಲ್ಲಿ ಅವಿವಾಹಿತರಿದ್ದಲ್ಲಿ ವಿವಾಹ ನಿಶ್ಚಯವಾಗುತ್ತದೆ. ಹಾಗೆಯೇ ಒಳ್ಳೆಯ ಸಂತಾನ ಪ್ರಾಪ್ತಿಯಾಗುತ್ತದೆ. ಕುಟುಂಬದಲ್ಲಿ ಇದ್ದ ಹಣದ ತೊಂದರೆ ಕಡಿಮೆಯಾಗುತ್ತದೆ. ವಿವಿಧ ರೀತಿಯ ಭೋಜನ ತಯಾರಿಸಿ ಬಂಧು ಮಿತ್ರರೊಂದಿಗೆ ಪೂಜೆ ಮಾಡಬಹುದು.

ನಿರ್ಜಲ ಏಕಾದಶಿ ಆಚರಣೆ

ಇದರ ನಂತರದ ದಿನವೇ ಏಕಾದಶಿ. ಈ ಏಕಾದಶಿಯನ್ನು ನಿರ್ಜಲ ಏಕಾದಶಿ ಎಂದು ಕರೆಯುತ್ತೇವೆ. ಈ ದಿನ ನೀರನ್ನು ಕುಡಿಯದೆ ಇರಬೇಕು ಎಂಬ ಮಾತಿದೆ. ಆದರೆ ಅದು ಸಾಧ್ಯವಾಗದ ವಿಚಾರ. ಆದ್ದರಿಂದ ಎರಡು ಹೊತ್ತು ಫಲಹಾರವನ್ನು ಸೇವಿಸಬಹುದು. ವಯೋವೃದ್ದರೂ ಮತ್ತು ಆರೋಗ್ಯ ಸರಿ ಇಲ್ಲದವರು ಬೆಳಗಿನ ವೇಳೆ ಎಂದಿನಂತೆ ಊಟವನ್ನು ಮಾಡಬಹುದು. ಆದರೆ ಸಂಜೆಯ ವೇಳೆ ಫಲಹಾರವನ್ನು ಸ್ವೀಕರಿಸಬಹುದು. ಈ ದಿನ ಕುಲದೇವರ ಪೂಜೆಯನ್ನು ಮಾಡಿ ಉದಕಕುಂಭವನ್ನು ದಾನ ನೀಡಬೇಕು. ಇದರಿಂದ ಹೆಚ್ಚಿನ ಮಟ್ಟದಲ್ಲಿ ಶುಭ ಫಲಗಳು ದೊರೆಯುತ್ತವೆ. ಕೆಲವರು ಈ ಮೇಲಿನ ಆಚರಣೆಗಳನ್ನು ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ ಎರಡರಲ್ಲಿಯೂ ಆಚರಿಸುತ್ತಾರೆ.

ದ್ವಾದಶಿಯ ದಿನದಂದು ತ್ರಿವಿಕ್ರಮನ ಪೂಜೆ ಮಾಡಿದರೆ ಯಜ್ಞ ಯಾಗಾದಿಗಳನ್ನು ಮಾಡಿದ ಫಲವು ದೊರೆಯುತ್ತದೆ. ನಂತರ ಬರುವ ಹುಣ್ಣಿಮೆಯನ್ನು ಫಲ ಪೂರ್ಣಿಮಾ ಎಂದು ಕರೆಯುತ್ತೇವೆ. ಹೆಸರೇ ತಿಳಿಸಿರುವಂತೆ ಈ ದಿನದಂದು ಮಾಡುವ ಪೂಜೆಯಿಂದ ವಿಶೇಷ ಫಲಗಳು ದೊರೆಯುತ್ತವೆ. ಕೆಲವು ಪ್ರಾಂತ್ಯಗಳಲ್ಲಿ ಈ ದಿನದಂದು ಕೊಡೆ, ಬೀಸಣಿಗೆ ಮತ್ತು ಪಾದರಕ್ಷೆಗಳನ್ನು ದಾನ ಮಾಡುತ್ತಾರೆ. ಇದರಿಂದ ವಿಶೇಷ ಅಧಿಕಾರ ಪ್ರಾಪ್ತಿಯಾಗುತ್ತದೆ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ಸೌಹಾರ್ದಯುತ ಸಂಬಂಧ ಏರ್ಪಡುತ್ತದೆ. ಈ ದಿನ ಉಪವಾಸ ಮಾಡಬಾರದು.

ದಂಪತಿ ಸಂಜೆ ವೇಳೆ ಶ್ರೀ ಸತ್ಯನಾರಾಯಣ ಪೂಜೆ ಮಾಡಿದರೆ ಕುಟುಂಬದಲ್ಲಿನ ತೊಂದರೆ ದೂರವಾಗುವುದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುವುದು. ರವೆಯಿಂದ ಮಾಡಿದ ಸಜ್ಜಿಗೆ ಮತ್ತು ಬಾಳೆಹಣ್ಣು ಇಲ್ಲವೇ ಮಾವಿನ ಹಣ್ಣನ್ನು ಮನೆಗೆ ಆಗಮಿಸಿರುವ ಭಕ್ತಾದಿಗಳಿಗೆ ನೀಡುವುದರಿಂದ 7 ಜನ್ಮದ ಪಾಪ ಕರ್ಮಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.