ಕನ್ಯಾರಾಶಿಗೆ ಗುರುಬಲ ವಿಚಾರ; ಈ ರಾಶಿಯವರಿಗೆ ಗುರುಬಲ ಹೇಗಿದೆ? ಪಾದಗಳನ್ನು ಅನುಸರಿಸಿ ಲೆಕ್ಕಾಚಾರ ಮಾಡುವುದು ಹೇಗೆ?
ಜೀವನದಲ್ಲಿ ಸುಖ, ಸಂತೋಷದಿಂದ ಇರಲು ಗ್ರಹಗತಿಗಳು ಒಳ್ಳೆ ಸ್ಥಾನದಲ್ಲಿರಬೇಕು. ಹಾಗೇ ಗುರುವಿನ ಆಶೀರ್ವಾದ ಕೂಡಾ ಬಹಳ ಮುಖ್ಯ. ಆದರೆ ಪ್ರತಿಯೊಬ್ಬರಿಗೂ ಗುರು ಬಲ ದೊರೆಯುವುದು ಸುಲಭದ ಮಾತಲ್ಲ. ಇಂದು ಕನ್ಯಾರಾಶಿ ಹಾಗೂ ಗುರುಬಲದ ಬಗ್ಗೆ ತಿಳಿಯೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಕನ್ಯಾ ರಾಶಿಯಲ್ಲಿ ಬಹಳಷ್ಟು ಮಂದಿ ಜನಿಸುತ್ತಾರೆ. ಪ್ರತಿಯೊಬ್ಬರು ಈ ಗುರುಬಲದಿಂದ ಶುಭ ಫಲಗಳನ್ನು ಪಡೆಯುವುದು ಅಸಾಧ್ಯವಾಗುತ್ತದೆ. ಕೆಲವರಿಗೆ ಅತ್ಯುತ್ತಮ ಫಲಗಳು ದೊರೆಯುತ್ತವೆ. ಇನ್ನೂ ಕೆಲವರಿಗೆ ಸಾಧಾರಣ ಮಟ್ಟದ ಫಲಗಳು ದೊರೆತೆರೆ. ಹಲವರಿಗೆ ಶುಭ ಫಲ ದೊರೆಯುವುದೇ ಇಲ್ಲ. ಇದಕ್ಕೆ ಕಾರಣವೆಂದರೆ ನಕ್ಷತ್ರಗಳು. ಕನ್ಯಾ ರಾಶಿಯಲ್ಲಿ ಉತ್ತರ ನಕ್ಷತ್ರದ 2, 3 ಮತ್ತು 4 ನೇ ಪಾದ, ಹಸ್ತ ನಕ್ಷತ್ರದ ನಾಲ್ಕು ಪಾದಗಳು ಮತ್ತು ಚಿತ್ತ ನಕ್ಷತ್ರದ ಎರಡು ಪಾದಗಳು ಬರುತ್ತದೆ. ಈ ನಕ್ಷತ್ರಗಳ ಪಾದಗಳನ್ನು ಅನುಸರಿಸಿ ಗುರುಬಲದ ಲೆಕ್ಕಾಚಾರವನ್ನು ಮಾಡಬೇಕು. ಸರಳವಾದ ಶಾಂತಿ, ಪೂಜೆ, ದಾನ, ಧರ್ಮದಿಂದ ಗುರುಬಲದಿಂದ ಶುಭಫಲಗಳನ್ನು ಪಡೆಯಬಹುದು. ಕನ್ಯಾ ರಾಶಿಯಲ್ಲಿ ಜನಿಸಿರುವ ಪ್ರತಿಯೊಬ್ಬರು ಶ್ರೀ ಅನ್ನಪೂರ್ಣೇಸ್ವರಿ ದೇವಿಯ ಪೂಜೆಯನ್ನು ಮಾಡಬೇಕು.
ಉತ್ತರ ನಕ್ಷತ್ರದ ನಾಲ್ಕನೇ ಪಾದದಲ್ಲಿ ಜನಿಸಿದವರಿಗೆ ಉತ್ತಮ ಫಲಗಳು ದೊರೆಯುತ್ತವೆ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಶ್ರೀ ಗುರುಗಳ ಪೂಜೆ ಮಾಡುವುದು ಅತ್ಯವಶ್ಯಕ. ತೆಗೆದುಕೊಳ್ಳುವ ನಿರ್ಣಯಗಳನ್ನು ಬದಲಾಯಿಸದೆ ಮುಂದುವರೆದರೆ ಯಾವುದೇ ತೊಂದರೆ ಎದುರಾಗುವುದಿಲ್ಲ.
ಉತ್ತರ ನಕ್ಷತ್ರದ 2ನೇ ಪಾದದಲ್ಲಿ ಜನನ
ಉತ್ತರ ನಕ್ಷತ್ರದ ಎರಡನೇ ಪಾದದಲ್ಲಿ ಜನಿಸಿರುವವರು ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನ ಪಡಲೇಬೇಕಾಗುತ್ತದೆ. ಇವರು ತಮ್ಮ ಮಾತಿನಿಂದ ಜನರ ವಿರೋಧ ಎದುರಿಸುತ್ತಾರೆ. ಇದರಿಂದ ತಮ್ಮ ಮಾತನ್ನು ಹತೋಟಿಯಲ್ಲಿ ಇಟ್ಟುಕೊಂಡಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಆತುರದಲ್ಲಿ ಕೆಲಸ ಕಾರ್ಯದಲ್ಲಿ ಮುಂದುವರೆದರೆ ಅಪಜಯ ಖಂಡಿತ. ಇವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ ಮಾಡಿದಷ್ಟು ಒಳ್ಳೆಯದಾಗುತ್ತದೆ. ತಮ್ಮ ಕುಲದ ಹೆಣ್ಣು ದೇವರಿಗೆ ಮಡಿಲು ತುಂಬ ಪದಾರ್ಥಗಳನ್ನು ನೀಡಬೇಕು.
ಉತ್ತರ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದವರಿಗೆ ಮಧ್ಯಮ ಗತಿಯ ಫಲಗಳು ದೊರೆಯಲಿವೆ. ತಮ್ಮ ಮನದಲ್ಲಿ ಇರುವ ಯಾವುದೇ ವಿಚಾರವನ್ನು ಆತ್ಮೀಯರಲ್ಲಿ ಹೇಳಿಕೊಂಡಲ್ಲಿ ಉತ್ತಮ ಸಲಹೆ ದೊರೆಯುತ್ತದೆ. ಇವರು ಯಾವುದೇ ಕೆಲಸವನ್ನು ಏಕಾಂಕಿಯಾಗಿ ಮಾಡಿದರೆ ಜಯಶೀಲರಾಗುವುದಿಲ್ಲ. ಇವರ ಆತ್ಮೀಯ ಸ್ನೇಹಿತರೊಬ್ಬರು ಇವರಿಂದ ದೂರ ಉಳಿಯುತ್ತಾರೆ. ಶ್ರೀ ವಿಷ್ಣುವಿನ ದೇವಸ್ಥಾನಕ್ಕೆ ಬೆಣ್ಣೆಯನ್ನು ನೀಡುವುದರಿಂದ ಇವರಿಗೆ ಶುಭಫಲಗಳು ದೊರೆಯುತ್ತವೆ. ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ನೀಡುವ ಮೂಲಕ ಶುಭಫಲಗಳನ್ನು ಪಡೆಯಬಹುದು. ಇವರ ಭವಿಷ್ಯ ಇವರ ಕೈಯಲ್ಲಿ ಅಡಗಿರುತ್ತದೆ.
ಹಸ್ತಾ ನಕ್ಷತ್ರದ ಮೊದಲನೇ ಮತ್ತು ನಾಲ್ಕನೆ ಪಾದದಲ್ಲಿ ಜನಿಸಿರುವವರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ವಾಹನ ಚಾಲನೆ ಮಾಡುವ ವೇಳೆ ಅಥವಾ ಮನೆಯಲ್ಲಿ ನೆಲಕ್ಕೆ ಬಿದ್ದು ಪೆಟ್ಟಾಗುವ ಸಂಭವವಿರುತ್ತದೆ. ಆದರೆ ಜೀವನದ ಎಲ್ಲಾ ಕೆಲಸ ಕಾರ್ಯಗಳು ನೆರವೇರಲಿವೆ. ಆತ್ಮಶಕ್ತಿಯು ವಿಶೇಷವಾದ್ದರಿಂದ ಯಾರನ್ನೂ ಇವರು ಅವಲಂಬಿಸುವುದಿಲ್ಲ. ಸೋಲಿನ ವೇಳೆ ರೋಷದಿಂದ ವರ್ತಿಸಿ ಹಟದಿಂದ ಗೆಲುವು ಸಾಧಿಸುತ್ತಾರೆ. ಇವರ ಮನಸ್ಸಿನ ಎಲ್ಲಾ ಆಶೋತ್ತರಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸದಾಕಾಲ ಚುರುಕುತನದಿಂದ ವರ್ತಿಸುವ ಇವರಿಗೆ ಯಾವುದೇ ಕೆಲಸ ಅಸಾಧ್ಯವೆನಿಸುವುದಿಲ್ಲ. ಆದರೆ ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತಾರೆ. ಬುದ್ಧಿವಂತಿಕೆಯಿಂದ ನಯವಾಗಿ ಮಾತನಾಡಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ.
ಹಸ್ತಾ ನಕ್ಷತ್ರದ 2ನೇ ಪಾದ
ಹಸ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಜನಿಸಿರುವವರು ಯಾರನ್ನು ಸುಲಭವಾಗಿ ನಂಬುವುದಿಲ್ಲ. ಇವರಿಗೆ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಬೇರೆ ದಾರಿ ಇಲ್ಲದೆ ಆತ್ಮೀಯರಿಂದ ಹಣ ಪಡೆಯುತ್ತಾರೆ. ಆದರೆ ಇವರಿಗೆ ಉತ್ತಮ ಆದಾಯ ವಿರುತ್ತದೆ. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಮಿತಿ ಇಲ್ಲದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಬಹುಕಾಲದಿಂದ ಕಾಡುತ್ತಿರುವ ರಕ್ತದ ಒತ್ತಡ ಅಥವಾ ಮಧುಮೇಹದಂಥ ತೊಂದರೆ ಇದ್ದಲ್ಲಿ ಎಚ್ಚರಿಕೆ ವಹಿಸಬೇಕು. ಶ್ರೀ ವಿಷ್ಣು ಸಹಸ್ರನಾಮ ಕೇಳುವುದರಿಂದ ಅಥವಾ ಹೇಳುವುದರಿಂದ ಶುಭಫಲಗಳು ದೊರೆಯುತ್ತವೆ. ಬಡವರಿಗೆ ವಸ್ತ್ರ ಕೊಡಿಸುವುದು ಹೆಚ್ಚು ಪ್ರಯೋಜನಕಾರಿ.
ಹಸ್ತ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿರುವವರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಾಯಿಸುತ್ತಾರೆ. ಇದರಿಂದ ಇವರ ಕೈಗೆ ಸಿಗುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ ಗುರುಗಳಲ್ಲಿ ಮತ್ತು ದೇವರಲ್ಲಿ ವಿಶೇಷ ನಂಬಿಕೆ ಇರುತ್ತದೆ. ಈ ಕಾರಣದಿಂದಾಗಿ ದೇವತಾ ಕಾರ್ಯಗಳಿಗೆ ಮತ್ತು ಮಂಗಳ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಾರೆ. ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಗೌರವದಿಂದ ಕಂಡು ಅವರ ಶುಭ ಹಾರೈಕೆಗಳನ್ನು ಪಡೆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮುಖ್ಯವಾಗಿ ಪುರುಷರು ಪತ್ನಿಯನ್ನು ಸ್ನೇಹಿತರಂತೆ ಕಾಣಬೇಕು. ಇದರಿಂದ ಮಾತ್ರ ಉತ್ತಮ ಫಲಗಳು ದೊರೆಯಲು ಸಾಧ್ಯವಾಗುತ್ತದೆ.
ಚಿತ್ತಾ ನಕ್ಷತ್ರದ ಮೊದಲನೇ ಪಾದ
ಚಿತ್ತಾ ನಕ್ಷತ್ರದ ಮೊದಲನೆಯ ಪಾದದಲ್ಲಿ ಜನಿಸಿದವರು ವಿಶೇಷ ಫಲಗಳನ್ನು ಪಡೆಯುತ್ತಾರೆ. ಇವರ ಮನಸ್ಸನ್ನು ಬದಲಾಯಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ಒಮ್ಮೆ ತೀರ್ಮಾನಿಸಿದ ಕೆಲಸ ಕಾರ್ಯಗಳನ್ನು ಎದುರಾಗುವ ಕಷ್ಟ ನಷ್ಟಗಳನ್ನು ಲೆಕ್ಕಿಸದೆ ಮುಂದುವರೆಯುತ್ತಾರೆ. ಇವರಿಗೆ ನೆರೆಹೊರೆಯವರ ಅಥವಾ ಸಹೋದ್ಯೋಗಿಗಳ ಬೆಂಬಲ ಸದಾ ದೊರೆಯುತ್ತದೆ. ಇವರು ಅಧಿಕಾರಿಗಳಲ್ಲದೇ ಹೋದರೂ ಅಧಿಕಾರಿಗಳಿಗೆ ಸಮಾನವಾದ ಸ್ಥಾನಮಾನ ಗಳಿಸುತ್ತಾರೆ. ತಾವು ಸುಖ ಸಂತೋಷದಿಂದ ಇರುವುದಲ್ಲದೆ ತನ್ನೊಡನೆ ಇರುವ ಬೇರೆಯವರನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಾರೆ.
ಚಿತ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಜನಿಸಿರುವವರು ತಮ್ಮ ತಪ್ಪಿಗೂ ಬೇರೆಯವರನ್ನು ದೂರುತ್ತಾರೆ. ಇದರಿಂದ ಇವರ ಜೀವನದಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಭಾಸವಾಗುತ್ತದೆ. ಪದೇ ಪದೇ ತೀರ್ಮಾನ ಬದಲಿಸುತ್ತಾರೆ. ಇದರಿಂದಾಗಿ ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಶ್ರೀ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಮತ್ತು ಹನುಮಾನ್ ಚಾಲೀಸಾ ಜಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
