ದಕ್ಷಿಣಾಯನಕ್ಕೂ, ಉತ್ತರಾಯಣಕ್ಕೂ ಇರುವ ವ್ಯತ್ಯಾಸವೇನು? ಈ ಸಮಯವನ್ನು ಪವಿತ್ರ ಕಾಲವೆಂದು ಕರೆಯಲು ಕಾರಣವೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಕ್ಷಿಣಾಯನಕ್ಕೂ, ಉತ್ತರಾಯಣಕ್ಕೂ ಇರುವ ವ್ಯತ್ಯಾಸವೇನು? ಈ ಸಮಯವನ್ನು ಪವಿತ್ರ ಕಾಲವೆಂದು ಕರೆಯಲು ಕಾರಣವೇನು?

ದಕ್ಷಿಣಾಯನಕ್ಕೂ, ಉತ್ತರಾಯಣಕ್ಕೂ ಇರುವ ವ್ಯತ್ಯಾಸವೇನು? ಈ ಸಮಯವನ್ನು ಪವಿತ್ರ ಕಾಲವೆಂದು ಕರೆಯಲು ಕಾರಣವೇನು?

Dakshinayana: ಪ್ರತಿ ವರ್ಷ ಜನವರಿ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ಉತ್ತರಾಯಣ ಹಾಗೂ ಜುಲೈ 16 ರಿಂದ ಜನವರಿ 14 ರ ಅವಧಿಯನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಪುಣ್ಯಕಾಲ ಎಂದೂ ಕರೆಯಲಾಗುತ್ತದೆ. ದೇವತಾರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಮಂಗಳಕರ ಅವಧಿ ಎಂದೂ ಹೇಳುತ್ತಾರೆ. (ಬರಹ: ಅರ್ಚನಾ ವಿ ಭಟ್‌)

ದಕ್ಷಿಣಾಯನ, ಉತ್ತರಾಯಣಕ್ಕೂ ಇರುವ ವ್ಯತ್ಯಾಸವೇನು? ಈ ಸಮಯವನ್ನು ಪವಿತ್ರ ಕಾಲವೆಂದು ಕರೆಯಲು ಕಾರಣವೇನು?
ದಕ್ಷಿಣಾಯನ, ಉತ್ತರಾಯಣಕ್ಕೂ ಇರುವ ವ್ಯತ್ಯಾಸವೇನು? ಈ ಸಮಯವನ್ನು ಪವಿತ್ರ ಕಾಲವೆಂದು ಕರೆಯಲು ಕಾರಣವೇನು?

Karka Sankranti 2024: ಸೂರ್ಯ ದೇವನು ಕರ್ಕ ರಾಶಿಯನ್ನು ಪ್ರವೇಶಿಸುವುದರೊಂದಿಗೆ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಇದು ಪುಣ್ಯ ಗಳಿಸಲು, ಪಿತೃ ದೇವತಾರಾಧನೆ ಮಾಡಲು ಪವಿತ್ರ ಕಾಲ. ಹಾಗಾದರೆ ದಕ್ಷಿಣಾಯನ ಮತ್ತು ಉತ್ತರಾಯಣ ಎಂದರೇನು? ಇದಕ್ಕೆ ಸಂಬಂಧಿಸಿದ ಆಸಕ್ತಿಕರ ಸಂಗತಿ ಇಲ್ಲಿದೆ.

ಸೂರ್ಯನು ವರ್ಷಕ್ಕೆ ಎರಡು ಬಾರಿ ತನ್ನ ದಿಕ್ಕನ್ನು ಬದಲಾಯಿಸುತ್ತಾನೆ. ಅದನ್ನೇ ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ ಅದು ಕರ್ಕ ಸಂಕ್ರಾಂತಿ ಎಂದು ಕರೆದರೆ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ದಕ್ಷಿಣಾಯನದ ಆರಂಭವನ್ನು ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಜಾರುವ ಸಮಯ ಎಂದು ಹೇಳುತ್ತಾರೆ. ದೇವತೆಗಳಿಗೆ ಒಂದು ದಿನ ಎಂದರೆ ನಮಗೆ ಒಂದು ವರ್ಷಕ್ಕೆ ಸಮ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂದರೆ ದೇವತೆಗಳಿಗೆ ರಾತ್ರಿಯ ಆರಂಭ ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇವತೆಗಳು ನಿದ್ರೆಯಿಂದ ಏಳುವ ಸಮಯ ಅಂದರೆ ಹಗಲು ಪ್ರಾರಂಭ ಎಂದಾಗುತ್ತದೆ. ಆದ್ದರಿಂದಲೇ ಉತ್ತರಾಯಣದಲ್ಲಿ ಹಗಲಿನ ಸಮಯ ಹೆಚ್ಚಾಗಿದ್ದರೆ, ದಕ್ಷಿಣಾಯನದಲ್ಲಿ ರಾತ್ರಿಯ ಸಮಯ ಹೆಚ್ಚು.

ಉತ್ತರಾಯಣಕ್ಕೂ ದಕ್ಷಿಣಾಯನಕ್ಕೂ ಇರುವ ವ್ಯತ್ಯಾಸವೇನು?

ಸೂರ್ಯ ದೇವನು ಈಶಾನ್ಯ ದಿಕ್ಕಿನ ಸಮೀಪದಲ್ಲಿ ಉದಯಿಸುವ ಕಾಲವನ್ನು ಉತ್ತರಾಯಣ ಎಂದು ಕರೆಯುತ್ತಾರೆ. ಅದೇ ರೀತಿ ಸೂರ್ಯನು ಆಗ್ನೇಯ ದಿಕ್ಕಿನ ಸಮೀಪ ಉದಯಿಸುವ ಕಾಲವನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಸೂರ್ಯ ದೇವನ ಈ ಚಲನೆಯಲ್ಲಿನ ಬದಲಾವಣೆಯನ್ನು ಅನುಸರಿಸಿ ಉತ್ತರಾಯಣವನ್ನು ಬೇಸಿಗೆ ಕಾಲವೆಂದೂ ಮತ್ತು ದಕ್ಷಿಣಾಯನನ್ನು ಮಾನ್ಸೂನ್‌ (ಮಳೆಗಾಲ ಮತ್ತು ಚಳಿಗಾಲ) ಎಂದು ಕರೆಯುತ್ತಾರೆ. ಉತ್ತರಾಯಣದಲ್ಲಿ ಹಗಲು ದೀರ್ಘವಾಗಿರುತ್ತದೆ. ರಾತ್ರಿ ಸಮಯ ಕಡಿಮೆ. ಹಾಗಾಗಿ ಆ ಸಮಯದಲ್ಲಿ ಜಾತ್ರೆ, ಉತ್ಸವ, ಶುಭ ಕಾರ್ಯಗಳನ್ನು ನಡೆಸಲಾಗುತ್ತದೆ. 

ಈ ಸಮಯವನ್ನು ದೇವತಾರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಮಂಗಳಕರ ಅವಧಿ ಎಂದೂ ಹೇಳುತ್ತಾರೆ. ದಕ್ಷಿಣಾಯನದಲ್ಲಿ ಹಗಲು ಕಡಿಮೆ ಮತ್ತು ರಾತ್ರಿ ದೀರ್ಘವಾಗಿರುತ್ತದೆ. ಆದ್ದರಿಂದ ಈ 6 ತಿಂಗಳು ಶುಭ ಕಾರ್ಯಗಳಿಗಿಂತ ಪೂಜೆ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಚಾತುರ್ಮಾಸ ಆಚರಣೆಯೂ ಕೂಡಾ ದಕ್ಷಿಣಾಯಣದಲ್ಲೇ ಮಾಡಲಾಗುತ್ತದೆ. ದಕ್ಷಿಣಾಯನವನ್ನು ಪುಣ್ಯ ಗಳಿಸುವ ಕಾಲವೆಂದೂ ಹೇಳುತ್ತಾರೆ.

ಪಿತೃ ದೇವತಾರಾಧನೆ

ದಕ್ಷಿಣಾಯನದಲ್ಲಿ ಪಿತೃ ದೇವರುಗಳು ಭೂಮಿಗೆ ಬರುವ ಸಮಯ ಎಂದು ಹೇಳುತ್ತಾರೆ. ತಮ್ಮ ಮಕ್ಕಳಿಂದ ಉಪಹಾರಗಳನ್ನು ಪಡೆದು ಅವರನ್ನು ಹರಸುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ದಕ್ಷಿಣಾಯನವು ಪಿತೃಗಳ ಆರಾಧನೆಗೆ ಉತ್ತಮವಾಗಿದೆ. ಮಹಾಲಯ ಪಕ್ಷಗಳು ಕೂಡಾ ಈ ಸಮಯದಲ್ಲಿ ಪ್ರಾರಂಭವಾಗುತ್ತವೆ. ಪಿತೃ ದೇವರುಗಳು ಸಂತೃಪ್ತರಾದರೆ ಕುಟುಂಬ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ದಕ್ಷಿಣಾಯಣದಲ್ಲಿ ಪಾಪಗಳನ್ನೆಲ್ಲಾ ಕಳೆದುಕೊಳ್ಳಲು ಪುಣ್ಯ ನದಿಗಳ ಸ್ನಾನ ಮಾಡಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ಆಹಾರ, ಬಟ್ಟೆ ದಾನ ಮಾಡಲಾಗುತ್ತದೆ.

ಅನಾರೋಗ್ಯದ ಸಮಯ

ದಕ್ಷಿಣಾಯನದ ಸಮಯದಲ್ಲಿ ಭೂಮಿಯ ಮೇಲೆ ಸೂರ್ಯನ ಬೆಳಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಅದರ ಪರಿಣಾಮವಾಗಿ ಆರೋಗ್ಯ ಸಮಸ್ಯೆಗಳು ಕಾಡುವ ಸಮಯವಾಗಿದೆ. ಅದಕ್ಕಾಗಿಯೇ ದಕ್ಷಿಣಾಯನ ಕಾಲದಲ್ಲಿ ಬ್ರಹ್ಮಚರ್ಯ, ಉಪವಾಸ, ಉಪಾಸನೆ, ಪೂಜೆ, ವ್ರತಾಚರಣೆ ಹೆಸರಿನಲ್ಲಿ ಆರೋಗ್ಯ ವೃದ್ಧಿಯಾಗುವ ಹಲವು ನಿಯಮಗಳನ್ನು ಮಾಡಲಾಗಿದೆ. ಇವೆಲ್ಲವನ್ನು ಅನುಸರಿಸುವುದು ಕೇವಲ ಭಕ್ತಿಗಾಗಿ ಮಾತ್ರವಲ್ಲ. ಅದರ ಹಿಂದೆ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಉಪಾಯವೂ ಅಡಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲಾ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.