ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಂಕಣ ಬಲ ಕೂಡಿ ಬರಲು, ರಾಹು, ಕುಜ ದೋಷಕ್ಕೆ ಪರಿಹಾರ ಕಾತ್ಯಾಯಿನಿ ವ್ರತ; ಯಾರು, ಯಾವ ದಿನ ಈ ವ್ರತ ಮಾಡಬೇಕು?

ಕಂಕಣ ಬಲ ಕೂಡಿ ಬರಲು, ರಾಹು, ಕುಜ ದೋಷಕ್ಕೆ ಪರಿಹಾರ ಕಾತ್ಯಾಯಿನಿ ವ್ರತ; ಯಾರು, ಯಾವ ದಿನ ಈ ವ್ರತ ಮಾಡಬೇಕು?

ಕುಂಡಲಿಯಲ್ಲಿನ ದೋಷಗಳಿಗೆ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಅದೇ ರೀತಿ ಕಂಕಣ ಬಲ ಕೂಡಿ ಬರಲು, ರಾಹು, ಕುಜ ದೋಷಕ್ಕೆ ಕಾತ್ಯಾಯಿನಿ ವ್ರತ ಮಾಡುವುದರಿಂದ ಪರಿಹಾರಿ ದೊರೆಯುತ್ತದೆ. ಯಾರು, ಯಾವ ದಿನ ಈ ವ್ರತ ಮಾಡಬೇಕು? ವ್ರತದ ನಿಮಗಳೇನು ನೋಡೋಣ.

ಕಂಕಣ ಬಲ ಕೂಡಿ ಬರಲು, ರಾಹು, ಕುಜ ದೋಷಕ್ಕೆ ಪರಿಹಾರ ಕಾತ್ಯಾಯಿನಿ ವ್ರತ; ಯಾರು, ಯಾವ ದಿನ ಈ ವ್ರತ ಮಾಡಬೇಕು?
ಕಂಕಣ ಬಲ ಕೂಡಿ ಬರಲು, ರಾಹು, ಕುಜ ದೋಷಕ್ಕೆ ಪರಿಹಾರ ಕಾತ್ಯಾಯಿನಿ ವ್ರತ; ಯಾರು, ಯಾವ ದಿನ ಈ ವ್ರತ ಮಾಡಬೇಕು? (PC: Pixabay, Unsplash)

ಎಲ್ಲರ ಜೀವನದಲ್ಲೂ ಮದುವೆ ಮಹತ್ತರವಾದ ಘಟ್ಟ. ಕೆಲವರಿಗೆ ಕಂಕಣ ಬಲ ಸುಲಭವಾಗಿ ಕೂಡಿಬಂದರೆ ಇನ್ನು ಕೆಲವರಿಗೆ ಅದು ಕಷ್ಟಸಾಧ್ಯವಾಗಿರುತ್ತದೆ. ಕೆಲವೊಮ್ಮೆ ಜಾತಕದಲ್ಲಿರುವ ದೊಷಗಳಿಂದ ಕೂಡಿಬಂದ ವಿವಾಹ ಸಂಬಂಧಗಳೂ ದೂರವಾಗುತ್ತದೆ. ಶ್ರೀ ಕಾತ್ಯಾಯಿನಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದರ ಮೂಲಕ ಈ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು. ದುರ್ಗೆಯ 6ನೇ ಅವತಾರವೇ ಕಾತ್ಯಾಯಿನಿ.

ಕಾತ್ಯಾಯಿನಿ ವ್ರತವನ್ನು ಆಚರಿಸುವುದು ಹೇಗೆ? ಯಾರು ಈ ವ್ರತವನ್ನು ಮಾಡಬಹುದು? ವ್ರತಾಚರಣೆಯ ನಿಯಮಗಳೇನು ಈ ಎಲ್ಲಾ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರವಾಗಿ ತಿಳಿಸಿದ್ದಾರೆ.

ಕಾತ್ಯಾಯಿನಿ ವ್ರತವನ್ನು ಯಾರು ಮಾಡಬಹುದು?

ಕಾತ್ಯಾಯಿನಿ ವ್ರತವನ್ನು ಮದುವೆಯಾಗದ ಯುವತಿಯರು, ಮದುವೆ ನಿಶ್ಚಯವಾಗಿ ನಂತರ ಮದುವೆ ರದ್ದಾದವರು, ಹೊಸದಾಗಿ ಮದುವೆಯಾದವರು ಮಾಡಬಹುದು. ಮದುವೆಯಾಗಿ ನಂತರ ವಿಚ್ಛೇದನ ಪಡೆದು ಕೊಂಡವರು, ಮದುವೆಯ ಪ್ರಯತ್ನದಲ್ಲಿ ಆಗಾಗ್ಗೆ ವಿಫಲರಾದವರು, ಸೂಕ್ತ ವರನ ಹುಡುಕಾಟದಲ್ಲಿರುವವರು, ಸೂಕ್ತವಾದ ಸಂಬಂಧವನ್ನು ಹುಡುಕುತ್ತಿರುವವರು ಈ ಎಲ್ಲರೂ ಈ ವ್ರತವನ್ನು ಮಾಡಬಹುದು. ಜೊತೆಗೆ ಜಾತಕದಲ್ಲಿ ಕುಜ ದೋಷ ಇರುವವರು ಸಹ ಈ ವ್ರತವನ್ನು ಮಾಡಬಹುದು. ರಾಹು ಮಹಾದಶ, ಕುಜ ಮಹಾದಶಾ, ಅಂತರದಶಾ, ವಿದಶಾ ಇರುವವರು ಈ ಆಚರಣೆ ಮಾಡಬಹುದು.

ಇವಿಷ್ಟೇ ಅಲ್ಲ, ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದೆ ಇರುವವರು ಕಾತ್ಯಾಯನಿ ವ್ರತವನ್ನು ಮಾಡಬಹುದು. ಜಾತಕದಲ್ಲಿ ರಾಹು ಮತ್ತು ಕೇತುವಿನ ದೋಷ ಇರುವವರು, ಚಕ್ರದಲ್ಲಿ ರಾಹು ಮತ್ತು ಕೇತು ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಈ ವ್ರತವನ್ನು ಪಾಲಿಸಬಹುದು. ಮಹಿಳೆಯ ಜಾತಕದ ಏಳನೇ ಮತ್ತು ಎಂಟನೇ ಮನೆಗಳಲ್ಲಿ ದೋಷಪೂರಿತ ಗ್ರಹಗಳಿದ್ದರೆ, ಮದುವೆಯ ಪ್ರಯತ್ನದಲ್ಲಿ ವಿಫಲರಾದವರು, ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಮದುವೆ ಮುಂದೂಡುವವರು ಇದನ್ನು ಮಾಡಬಹುದು ಎಂದು ಖ್ಯಾತ ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.

ಕಾತ್ಯಾಯಿನಿ ವ್ರತವನ್ನು ಆಚರಿಸುವ ನಿಯಮಗಳು

ಕಾತ್ಯಾಯಿನಿ ವ್ರತವನ್ನು ಮಂಗಳವಾರ ಮಾಡಬೇಕು. ಕೃತ್ತಿಕಾ ನಕ್ಷತ್ರ ಹಾಗೂ ಮಂಗಳವಾರ ಒಟ್ಟಿಗೆ ಬಂದರೆ ಅದು ಬಹಳ ಉತ್ತಮವಾದ ದಿನವಾಗಿರುತ್ತದೆ. ಮಂಗಳವಾರ ಕೃತಿಕಾ ನಕ್ಷತ್ರ ಮತ್ತು ಷಷ್ಠಿ ತಿಥಿ ಒಟ್ಟಿಗೆ ಬಂದರೆ ಅದು ತುಂಬಾ ಪ್ರಶಸ್ತವಾದ ದಿನವಾಗಿದೆ. ಈ ವ್ರತವನ್ನು ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಠಿ ಮತ್ತು ನಾಗ ಚೌತಿಯ ದಿನಗಳಲ್ಲಿ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ನವರಾತ್ರಿ ಸಮಯದಲ್ಲೂ ಈ ವ್ರತವನ್ನು ಮಾಡಬಹುದು. ದೇವಿಗೆ ಮಂಗಳಸೂತ್ರದಿಂದ ಅಲಂಕರಿಸಬೇಕು. ಶಕ್ತ್ಯಾನುಸಾರ ಚಿನ್ನ ಅಥವಾ ಅರಿಶಿನ ದಾರದ ಮಂಗಳಸೂತ್ರದಿಂದ ಅಲಂಕರಿಸಬಹುದು.

ದೇವಿಗೆ ನೈವೇದ್ಯ ಮಾಡಿ ವ್ರತವನ್ನು ಮುಗಿಸಿ, ವ್ರತದ ಕಥೆಯನ್ನು ಕೇಳಬೇಕು. ನಂತರ ಅಮ್ಮನವರಿಗೆ ಅಕ್ಷತೆಗಳನ್ನು ಹಾಕಬೇಕು. ಹಿರಿಯರಿಂದ ಆಶೀರ್ವಾದ ಪಡೆದು ಭೋಜನ ಮಾಡಬೇಕು. ಒಟ್ಟು 7 ಮಂಗಳವಾರಗಳನ್ನು ಇದೇ ರೀತಿ ಭಕ್ತಿಯಿಂದ ಆಚರಿಸಬೇಕು. ಮಧ್ಯೆ ಯಾವುದಾದರೂ ವಾರ ಅಡಚಣೆ ಉಂಟಾದರೆ ನಂತರ ಏಳು ದಿನಗಳನ್ನು ಪೂರೈಸಿ, 8ನೇ ಮಂಗಳವಾರದಂದು ಉದ್ಯಾಪನೆಯನ್ನು ಮಾಡಬೇಕು. ಉದ್ಯಾಪನೆಯ ದಿನ ಏಳು ಮುತ್ತೈದೆಯರನ್ನು ಕರೆದು ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆಯಬೇಕು. ಹಾಗೆ ಮಾಡಲು ಆಗದವರು ಬೆಳಗ್ಗೆ ಹಿರಿಯರ ಮನೆಗೆ ಹೋಗಿ, ಕುಂಕುಮ, ಅರಿಶಿನ ಕೊಡಬೇಕು. ಉದ್ಯಾಪನೆಯ ದಿನ ಏಳು ಮುತ್ತೈದೆಯರಿಗೆ 7 ಅಪ್ಪಗಳು, 7 ಕಬ್ಬು, 7 ರವಿಕೆಗಳನ್ನು ಕೊಟ್ಟು ಆಶೀರ್ವಾದ ಪಡೆಯಬೇಕು.

ವ್ರತ ವಿಧಾನ

ಮೊದಲು ಗಣಪತಿಯನ್ನು ಅರಿಶಿನದಿಂದ ಪೂಜಿಸಬೇಕು. ನಂತರ ಅರಿಶಿನ ಲೇಪಿತ ಅಕ್ಕಿಯನ್ನು ಹಾಕಿ ಮತ್ತು ಅದರ ಮೇಲೆ ಕಲಶವನ್ನು ಇರಿಸಿ ಮತ್ತು ಕಲಶದಲ್ಲಿ ಅರ್ಧದಷ್ಟು ಪವಿತ್ರ ನೀರನ್ನು ಹಾಕಿರಿ. ಒಂದು ರೂಪಾಯಿಯನ್ನು ದೇವಿಯ ವಿಗ್ರಹ ಅಥವಾ ಪ್ರತಿಮೆಯ ರೂಪವಾಗಿ ಇಡಬೇಕು. ಮನೆಯ ಪೂರ್ವ ಭಾಗದಲ್ಲಿ ಈಶಾನ್ಯ ದಿಕ್ಕಿನಲ್ಲಿ, ಕೆಂಪು ಬಟ್ಟೆಯನ್ನು ಹಾಕಿ ಮತ್ತು ಅದರ ಮೇಲೆ ಅಕ್ಕಿ ಹರಡಬೇಕು. ಅಕ್ಕಿಯ ಮೇಲೆ ತಾಮ್ರ ಅಥವಾ ಹಿತ್ತಾಳೆಯ ಕಲಶ ಇಡಬೇಕು. ಅದರ ಮೇಲೆ ತೆಂಗಿನ ಕಾಯಿಯನ್ನು ಇಡಬೇಕು. ಕೆಂಪು ರವಿಕೆಯನ್ನು ಕಿರೀಟದಂತೆ ಕಾಯಿಯ ಮೇಲೆ ಇಡಬೇಕು. ಈ ವ್ರತದಲ್ಲಿ ಕೆಂಪು ಹೂವುಗಳನ್ನು ಬಳಸುವುದು ಉತ್ತಮವಾಗಿದೆ. ಷೋಡಶೋಪಚಾರ ಪೂಜೆಯನ್ನು ಆಚರಿಸಬೇಕು.

ವ್ರತಮಂಟಪದಲ್ಲಿ ಪಾರ್ವತಿ ಪರಮೇಶ್ವರರ ಫೋಟೋವನ್ನು ಸರಿಯಾದ ಜಾಗದಲ್ಲಿಡಬೇಕು. ಈ ವ್ರತವನ್ನು ಸಂಜೆ ಮಾಡಬೇಕು. ದಿನಪೂರ್ತಿ ಉಪವಾಸವಿರಬೇಕು. ಪೂಜೆಯ ನಂತರವೇ ಊಟ ಮಾಡಬೇಕು. ಉಪವಾಸದ ದಿನ ತಲೆ ಸ್ನಾನ ಮಾಡಬೇಕು. ಹಗಲಿನಲ್ಲಿ ಮಲಗಬೇಡಿ. ಕೊನೆಯ ವಾರದಲ್ಲಿ ಕನಿಷ್ಠ 7 ಕಾತ್ಯಾಯನಿ ವ್ರತ ಪುಸ್ತಕಗಳನ್ನು ದಕ್ಷಿಣೆ, ತಾಂಬೂಲಗಳೊಂದಿಗೆ ನೀಡಬೇಕು. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವದವರು ಉಪವಾಸ ವ್ರತ ಆಚರಿಸಿ ಏಳು ಜನ ಅವಿವಾಹಿತ ಕನ್ಯೆಯರಿಗೆ 7 ಪುಸ್ತಕಗಳನ್ನು ನೀಡಿ ಆಶೀರ್ವಾದ ಪಡೆಯಬೇಕು.

ಕಾತ್ಯಾಯಿನಿ ಮಹಾಮಾಯೇ, ಮಹಾಯೋಗಿನ್ಯಧೀಶ್ವರಿ |

ನಂದಗೋಪಸ್ತುತಂ ದೇವಿ, ಪತಿ ಮೇ ಕುರು ತೇ ನಮಃ ||

ಪೂಜೆಯ ಸಮಯದಲ್ಲಿ ಈ ಕಾತ್ಯಾಯಿನಿ ಮಂತ್ರವನ್ನು ಜಪಿಸಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.