ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅರ್ಘ್ಯ ಎಂದರೇನು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಏಕೆ; ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು?

ಅರ್ಘ್ಯ ಎಂದರೇನು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಏಕೆ; ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು?

Hindu Culture: ಪ್ರಾಚೀನ ಕಾಲದಿಂದಲೂ ಸೂರ್ಯದೇವನಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಬಹಳಷ್ಟು ಜನರು ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ಅರ್ಘ್ಯ ಎಂದರೇನು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಏಕೆ, ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಅರ್ಘ್ಯ ಎಂದರೇನು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಏಕೆ?
ಅರ್ಘ್ಯ ಎಂದರೇನು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಏಕೆ? (PC: Unsplash)

ಹಿಂದೂಗಳು ಪೂಜಿಸುವ ದೇವರಲ್ಲಿ ಸೂರ್ಯ ಕೂಡಾ ಪ್ರಮುಖ ಪಾತ್ರ ವಹಿಸುತ್ತಾನೆ. ಬೆಳಕಿಲ್ಲದೆ ಏನೂ ಇಲ್ಲ, ಯಾರೂ ಇಲ್ಲ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಎಷ್ಟೋ ಜನರು ಸೂರ್ಯನನ್ನು ನೋಡಿ ನಮಸ್ಕರಿಸುತ್ತಾರೆ. ಯೋಗ ಮಾಡುವವರು ಸೂರ್ಯ ನಮಸ್ಕಾರ ಮಾಡುತ್ತಾರೆ. ಪ್ರಾಚೀನ ಕಾಲದಿಂದಲೂ ಸೂರ್ಯ, ಚಂದ್ರ ಇಬ್ಬರಿಗೂ ಪೂಜ್ಯನೀಯ ಸ್ಥಾನ ನೀಡಲಾಗಿದೆ.

ಅರ್ಘ್ಯ ಎಂದರೇನು

ಮಹಾಭಾರತ ಮತ್ತು ರಾಮಾಯಣದಲ್ಲಿ ಸೂರ್ಯ ಮತ್ತು ಚಂದ್ರನ ಉಲ್ಲೇಖವಿದೆ. ರಾಮಾಯಣದಲ್ಲಿ ಶ್ರೀರಾಮನು ಸ್ವತಃ ಸೂರ್ಯನನ್ನು ಪೂಜಿಸಿದನು ಮತ್ತು ನೀರಿನಿಂದ ಅರ್ಘ್ಯವನ್ನು ಅರ್ಪಿಸಿದನು ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ, ಪಾಂಡವರ ತಾಯಿ ಕುಂತಿದೇವಿಯು ಸೂರ್ಯನ ಆಶೀರ್ವಾದದಿಂದ ಕರ್ಣನಿಗೆ ಜನ್ಮ ನೀಡಿದಳು. ಭಾನುವಾರ ಸೂರ್ಯನಿಗೆ ಮೀಸಲಾದ ದಿನ. ಆದರೂ ಅನೇಕರು ಪ್ರತಿದಿನ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಿಸುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಇದನ್ನು ಅರ್ಘ್ಯ ಅರ್ಪಿಸುವುದು ಎನ್ನುತ್ತಾರೆ. ಸೂರ್ಯನಿಗೆ ನೀರನ್ನು ಏಕೆ ಅರ್ಪಿಸುತ್ತಾರೆ? ಇದನ್ನು ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸುವುದು ಧಾರ್ಮಿಕ ಕ್ರಿಯೆ ಮಾತ್ರವಲ್ಲ, ಇದು ಆರೋಗ್ಯಕ್ಕೆ ಕೂಡಾ ಅನೇಕ ಪ್ರಯೋಜನಗಳನ್ನು ತರುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಸೂರ್ಯನನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಸೂರ್ಯನು ಜಾತಕದಲ್ಲಿ ಸಂತೋಷವಾಗಿದ್ದರೆ ಅದು ನಮ್ಮ ಜೀವನವನ್ನು ಸುಧಾರಿಸುತ್ತದೆ. ಆರೋಗ್ಯವನ್ನು ಕಾಪಾಡುತ್ತದೆ. ಸೂರ್ಯನಿಗೆ ನೀರನ್ನು ಒದಗಿಸುವ ಕೆಲವು ಪ್ರಮುಖ ಪ್ರಯೋಜನಗಳು ಇವು.

ಸೂರ್ಯನಿಗೆ ಅರ್ಘ್ಯ ಅರ್ಪಿಸಲು ಕಾರಣವೇನು?

ಬೆಳಗ್ಗೆ ಸೂರ್ಯನನ್ನು ನೋಡುತ್ತಾ ಅರ್ಘ್ಯವನ್ನು ಅರ್ಪಿಸುವುದರಿಂದ ನಮ್ಮ ಕಣ್ಣುಗಳು ಆರೋಗ್ಯವಾಗಿರುತ್ತವೆ. ಕಣ್ಣಿನ ಸಮಸ್ಯೆ ಇರುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಇಡೀ ದಿನ ನಿಮಗೆ ಒಳ್ಳೆದಾಗಬೇಕೆಂದರೆ ಸೂರ್ಯನಿಗೆ ನೀರು ಅರ್ಪಿಸಬೇಕು. ಹೀಗೆ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. ಸಕ್ರಿಯವಾಗಿ ಕೆಲಸ ಮಾಡಬಹುದು. ಇಡೀ ದಿನ ಲವಲವಿಕೆಯಿಂದ ಇರುವಿರಿ.

ಸೂರ್ಯನು ಹೃದಯದ ಆರೋಗ್ಯದೊಂದಿಗೆ ಸಂಪರ್ಕ ಹೊಂದಿದ್ದಾನೆ. ಸೂರ್ಯನಿಗೆ ಅರ್ಘ್ಯ ಅರ್ಪಿಸಿ ನಿಯಮಿತವಾಗಿ ಪ್ರಾರ್ಥಿಸುವುದರಿಂದ ಹೃದಯವನ್ನು ಬಲಪಡಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ನಮ್ಮ ಕೌಟುಂಬಿಕ ಜೀವನದ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರುತ್ತಾನೆ. ನಿಯಮಿತ ಪೂಜೆಯು ಕೌಟುಂಬಿಕ ಕಲಹಗಳನ್ನು ಪರಿಹರಿಸುತ್ತದೆ.

ಸೂರ್ಯನಿಗೆ ನೀರು ಕೊಡುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳಗಿನ ಸೂರ್ಯನ ಬೆಳಕಿನಲ್ಲಿ ವಿಟಮಿನ್‌ ಡಿ ಇದ್ದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಮುಂಜಾನೆ ಸೂರ್ಯನನ್ನು ನೋಡುವುದು ಕಣ್ಣಿಗೆ ತುಂಬಾ ಒಳ್ಳೆಯದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ನೀರನ್ನು ಅರ್ಪಿಸುವುದರಿಂದ ಸೂರ್ಯನ ಮೆಚ್ಚುಗೆಗೆ ಪಾತ್ರರಾಗಬಹುದು.

ಅರ್ಘ್ಯವನ್ನು ಅರ್ಪಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲು ಶುದ್ಧ ತಾಮ್ರದ ಪಾತ್ರೆಯನ್ನು ಬಳಸಬೇಕು. ಗೌರವಾರ್ಥವಾಗಿ ಒಂದು ಹೂ, ಕುಂಕುಮ ಹಾಗೂ ಸ್ವಲ್ಪ ಅಕ್ಕಿಯನ್ನು ನೀರಿನಲ್ಲಿ ಇಡಬೇಕು. ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕಾಲುಗಳ ಮೇಲೆ ನೀರು ಬೀಳದಂತೆ ಅರ್ಘ್ಯವನ್ನು ಅರ್ಪಿಸಬೇಕು. ಸೂರ್ಯನಿಗೆ ಅರ್ಪಿಸಿದ ನೀರು ಪಾದದ ಮೇಲೆ ಬಿದ್ದರೆ, ಅದು ಅಗೌರವವೆಂದು ಪರಿಗಣಿಸಲಾಗುತ್ತದೆ. ಮೋಡ ಕವಿದಿದ್ದರೂ ಸೂರ್ಯ ಕಾಣದಿದ್ದರೂ ಪೂರ್ವಾಭಿಮುಖವಾಗಿ ನಿಂತು ಅರ್ಘ್ಯವನ್ನು ಅರ್ಪಿಸಬೇಕು.

ಸೂರ್ಯನಿಗೆ ನೀರನ್ನು ಅರ್ಪಿಸುವಾಗ ಪಠಿಸುವ ಅತ್ಯಂತ ಸಾಮಾನ್ಯವಾದ ವೇದ ಮಂತ್ರಗಳಲ್ಲಿ ಸೂರ್ಯ ಗಾಯತ್ರಿ ಮಂತ್ರವು ಒಂದಾಗಿದೆ. ನೀರನ್ನು ಅರ್ಪಿಸುವಾಗ "ಓಂ ಸೂರ್ಯಾಯ ನಮಃ" ಎಂಬ ಮಂತ್ರವನ್ನು ಕೂಡಾ ಪಠಿಸಬಹುದು. "ಓಂ ಹ್ರಾಂ ಹ್ರಾಂ ಹ್ರೌಂ ಸಃ ಸೂರ್ಯಾಯ ನಮಃ" ಎಂಬ ಸೂರ್ಯಬೀಜ ಮಂತ್ರವನ್ನೂ ಕೂಡಾ ಅರ್ಘ್ಯ ಅರ್ಪಿಸುವಾಗ ಹೇಳಬಹುದು. ಜೀವನದಲ್ಲಿ ಸೂರ್ಯನ ನಕಾರಾತ್ಮಕ ಪ್ರಭಾವವನ್ನು ತೊಡೆದುಹಾಕಲು ಈ ಮಂತ್ರವು ಉಪಯುಕ್ತವಾಗಿದೆ. ಸೂರ್ಯೋದಯದಲ್ಲಿ ನೀರನ್ನು ಅರ್ಪಿಸುವಾಗ ಆದಿತ್ಯನ 12 ನಾಮಗಳನ್ನು ಪಠಿಸುವುದರಿಂದ ಸೂರ್ಯನಿಗೆ ನಾವು ಗೌರವ ನೀಡಿದಂತೆ ಆಗುತ್ತದೆ ಎನ್ನುವುದು ನಂಬಿಕೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)