ಸೃಷ್ಟಿಯ ಉಗಮ, ಪರಶುರಾಮ ಅವತರಿಸಿದ ದಿನ; ಅಕ್ಷಯ ತೃತಿಯ ದಿನಕ್ಕೆ ಅಷ್ಟು ಮಹತ್ವ ಬರಲು ಪುರಾಣದ ಈ ಘಟನೆಗಳೇ ಕಾರಣ
Akshaya Tritiya 2024: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಕ್ಷಯ ತೃತೀಯ ದಿನದಂದು ಎಲ್ಲಾ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ದಿನವಾಗಿದೆ. ಹೊಸ ಉದ್ಯಮ, ಮದುವೆ, ಹೂಡಿಕೆ, ಯಾವುದೇ ಹೊಸ ವಸ್ತುಗಳ ಖರೀದಿ ಮುಂತಾದ ಮಹತ್ವದ ಕೆಲಸಗಳಿಗೆ ಈ ದಿನವು ಬಹಳ ಪ್ರಶಸ್ತವಾಗಿದೆ. ಈ ದಿನಕ್ಕೆ ಅಷ್ಟೊಂದು ಮಹತ್ವ ಬರಲು ಪುರಾಣದ ಘಟನೆಗಳೇ ಕಾರಣ.
Akshaya Tritiya 2024: ಹಿಂದೂ ಪಂಚಾಗದ ಪ್ರಕಾರ ವರ್ಷದ ಕೆಲವು ದಿನಗಳನ್ನು ಬಹಳ ಶುಭವೆಂದು ನಂಬಲಾಗಿದೆ. ಪೂರ್ತಿ ದಿನವೇ ಶುಭ ಮುಹೂರ್ತದ ದಿನ ಎಂದು ಹೇಳಲಾಗುತ್ತದೆ. ಅಕ್ಷಯ ತೃತಿಯಾವನ್ನು ಬಹಳ ಮಂಗಳಕರವಾದ ದಿನವೆಂದು ಕರೆಯಲಾಗುತ್ತದೆ. ಈ ಹಿಂದೂ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಆ ದಿನದಂದು ಪ್ರಾರಂಭಿಸುವ ಎಲ್ಲ ಕೆಲಸಗಳು ಶುಭವನ್ನೇ ತರುತ್ತದೆ ಎಂಬ ನಂಬಿಕೆ ಇದೆ.
ಹಿಂದೂ ಮಾಸವಾದ ವೈಶಾಖ ಶುಕ್ಲದ ಮೂರನೇ ದಿನ ಅಂದರೆ ತೃತಿಯಾ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಅಕ್ಷಯ ತೃತಿಯಾ ಅಥವಾ ಅಖಾ ತೀಜ್, ಅಕ್ಷಯ ತದಿಗೆ ಎಂದೂ ಕರೆಯಲಾಗುತ್ತದೆ. ಈ ವರ್ಷ ಅಕ್ಷಯ ತೃತಿಯವನ್ನು ಮೇ 10 ರಂದು ಆಚರಿಸಲಾಗುತ್ತಿದೆ. ಅಕ್ಷಯ ಎಂದರೆ ಎಂದೂ ಕಡಿಮೆಯಾಗದ ಸಂಪತ್ತು ಎಂದು ಅರ್ಥ. ಅಕ್ಷಯ ತೃತಿಯದಂದು ಮನೆಯಲ್ಲಿ ಸಂತೋಷ ಮತ್ತು ಶಾಂತಿ ಶಾಶ್ವತವಾಗಿ ನೆಲೆಸಲಿ, ಸುಖ, ಸಮೃದ್ಧಿ ಯಾವಾಗಲೂ ನೆಲೆಸಲಿ ಎಂದು ಪೂಜಿಸಲಾಗುತ್ತದೆ. ನಮ್ಮ ಹಿಂದಿನ ಕಾಲದಿಂದಲೂ ಈ ಮಂಗಳಕರ ದಿನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಪುರಾಣಗಳಲ್ಲಿ ಈ ದಿನದಂದು ಹಲವಾರು ಮಹತ್ತರ ಘಟನೆಗಳು ಘಟಿಸಿದವು ಎಂದು ಹೇಳಲಾಗಿದೆ.
ಮಹತ್ತರ ಘಟನೆಗಳು ಜರುಗಿದ ದಿನ
ಅಕ್ಷಯ ತೃತಿಯದಂದು ಇರುವ ಸಾಮಾನ್ಯ ಪದ್ಧತಿಯೆಂದರೆ ಆ ದಿನ ಚಿನ್ನವನ್ನು ಖರೀದಿಸಲಾಗುತ್ತದೆ. ಈ ದಿನ ಹಣ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದೆಂದು ಎಂದು ನಂಬಲಾಗಿದೆ. ಧಾರ್ಮಿಕ ಕಾರ್ಯ, ದೇವಸ್ಥಾನಕ್ಕೆ ಭೇಟಿ ನೀಡುವುದು ಮುಂತಾದ ಕಾರ್ಯಗಳನ್ನು ಮಾಡುವುದರಿಂದ ವರ್ಷಪೂರ್ತಿ ಶುಭವಾಗಲಿದೆ ಎಂಬ ನಂಬಿಕೆ ಇದೆ. ಪುರಾಣ–ಪುಣ್ಯ ಕಥೆಗಳ ಪ್ರಕಾರ ಅಕ್ಷಯ ತೃತಿಯ ಶುಭ ದಿನದಂದು ಅನೇಕ ಮಹತ್ತರ ಘಟನೆಗಳು ಘಟಿಸಿದವು ಎಂದು ಹೇಳಲಾಗಿದೆ, ಅವು ಯಾವವು ತಿಳಿಯಲು ಮುಂದೆ ಓದಿ
* ಪರಶುರಾಮ ಅವತಾರ: ಈ ದಿನ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಪರಶುರಾಮನು ಅವತರಿಸಿದ ದಿನವಾಗಿದೆ. ಹಾಗಾಗಿ ಅಕ್ಷಯ ತೃತಿಯದಂದು ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದು ಪರಶುರಾಮನು ವಿಷ್ಣುವಿನ ಪರಮ ಭಕ್ತನಾದ ಜಮದಗ್ನಿ ಮತ್ತು ರೇಣುಕಾ ದೇವಿಯ ಪುತ್ರನಾಗಿ ಜನಿಸಿದನು.
* ದ್ರೌಪದಿಗೆ ಸೂರ್ಯನು ಅಕ್ಷಯ ಪಾತ್ರೆ ನೀಡಿದ ದಿನ: ಅಕ್ಷಯ ತೃತಿಯ ದಿನದಂದು ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವನು ದ್ರೌಪದಿ ಮತ್ತು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ದಯಪಾಲಿಸಿದನು. ಆ ಪಾತ್ರೆಯು ಅನಿಯಮಿತ ಆಹಾರವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು.
* ಸೃಷ್ಟಿ ಮತ್ತು ಯುಗದ ಪ್ರಾರಂಭ: ಈ ದಿನದಂದೇ ಬ್ರಹ್ಮ ದೇವನು ಬ್ರಹ್ಮಾಂಡವನ್ನು ಸೃಷ್ಟಿಸಿದನು. ಮತ್ತು ನಾಲ್ಕು ಯುಗಗಳಾದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ರಚಿಸಿದನು.
* ಗಂಗಾ ನದಿಯ ಉಗಮ: ಪವಿತ್ರವಾದ ಗಂಗೆಯು ದೇವಲೋಕದಿಂದ ಭೌತಿಕ ಜಗತ್ತಾದ ಭೂಮಿಯ ಮೇಲೆ ಅವತರಿಸಿದಳು. ಜಟಾಧಾರಿಯಾದ ಶಿವನು ತನ್ನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಕಳುಹಿಸಿದನು. ಅಕ್ಷಯ ತೃತಿಯ ದಿನದಂದೇ ಗಂಗಾ ಮಾತೆಯು ಗಂಗೋತ್ರಿ ಧಾಮದಲ್ಲಿ ಉದ್ಭವಿಸಿದಳು. ಗಂಗೆಯು ಪಾವನ ಗಂಗಾ ನದಿಯಾಗಿ ಹರಿದಳು.
* ಸುಧಾಮನು ಕೃಷ್ಣನನ್ನು ಸಂಧಿಸಿದ ದಿನ: ಅಕ್ಷಯ ತೃತಿಯ ದಿನದಂದೇ ಶ್ರೀಕೃಷ್ಣನು ದ್ವಾರಕೆಗೆ ಮರಳಿದನು. ಈ ದಿನದಂದೇ ಕೃಷ್ಣ ಮತ್ತು ಅವನ ಪ್ರೀತಿಯ ಗೆಳೆಯ ಸುಧಾಮನು ಮತ್ತೆ ಒಂದಾದರು. ಆ ದಿನದಿಂದ ಸುಧಾಮನ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖ ಸಂಪತ್ತನ್ನು ಪಡೆದನು. ಸುಧಾಮನು ಕೃಷ್ಣನನ್ನು ಭೇಟಿಯಾಗಲು ಬಂದಾಗ ಅವನು ತನ್ನ ಮನೆಯಲ್ಲಿದ್ದ ಕೇವಲ ಅವಲಕ್ಕಿಯನ್ನು ಮಾತ್ರ ತಂದಿದ್ದನು. ಅವನ ಸತ್ಯ ಮತ್ತು ನಿಷ್ಠೆಯೇ ಕೃಷ್ಣನಿಗೆ ಸಂತೋಷವನ್ನು ನೀಡಿತು. ಕೃಷ್ಣನು ಸುಧಾಮನಿಗೆ ಸುಖ ಸಮೃದ್ಧಿಯನ್ನು ದಯಪಾಲಿಸಿದನು.
* ಅಕ್ಷಯ ತೃತಿಯ ದಿನದಂದೇ ಗಣಪತಿಯು ವೇದ ವ್ಯಾಸರ ಮಹಾಕಾವ್ಯ ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದನು.
* ಆದಿ ಶಂಕರಾಚಾರ್ಯರು ಈ ದಿನದಂದೇ ಕನಕಧಾರ ಸ್ತೋತ್ರವನ್ನು ರಚಿಸಿದರು.
* ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನು ಸಂಪತ್ತಿನ ಒಡೆಯನ ಸ್ಥಾನವನ್ನು ಅಲಂಕರಿಸಿದನು.
* ಅಕ್ಷಯ ತೃತಿಯ ದಿನದಂದೇ ಅನ್ನಪೂರ್ಣ ದೇವಿಯು ಅವತರಿಸಿದಳು.
* ಜಗತ್ಪ್ರಸಿದ್ಧ ಜಗನ್ನಾಥನ ರಥಯಾತ್ರೆಗಾಗಿ ಹೊಸ ರಥದ ನಿರ್ಮಾಣವು ಈ ದಿನದಿಂದ ಪ್ರಾರಂಭವಾಗುತ್ತದೆ. ಪುರಿಯ ಜಗನ್ನಾಥ ರಥಯಾತ್ರೆ ಉತ್ಸವದಲ್ಲಿ ಎಳೆಯುವ ರಥವನ್ನು ಕಟ್ಟಲು ಈ ಶುಭದಿನದಿಂದ ಪ್ರಾರಂಭಿಸುತ್ತಾರೆ. ಈ ರಥಯಾತ್ರೆಯಲ್ಲಿ ಜಗನ್ನಾಥನು ತನ್ನ ಒಡಹುಟ್ಟಿದವರಾದ ಬಲರಾಮ ಮತ್ತು ಸುಭದ್ರೆಯ ಜೊತೆ ವಿರಜಮಾನನಾಗಿ ಸಾಗುತ್ತಾನೆ. ಅಕ್ಷಯ ತೃತಿಯ ದಿನದಂದು ಚಂದನ ಯಾತ್ರೆಯೂ ನಡೆಯುತ್ತದೆ. ಅಂದು ಭಕ್ತರು ಚಂದನ ಮತ್ತು ಶ್ರೀಗಂಧದ ಲೇಪವನ್ನು ದೇವರುಗಳಿಗೆ ಅರ್ಪಿಸುತ್ತಾರೆ. ವಿಶೇಷವಾಗಿ ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.