ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಸ್ವಯಂವರದ ಕಥೆ, ಮದುವೆ ಆಗಲು ನಿರ್ಧರಿಸಿದ್ದ ಮಹರ್ಷಿ ನಾರದ; ಮುಂದೇನಾಯ್ತು?-hindu mythology narada maharshi swayamvara story which mentioned in shiva purana religious news in kannada sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಸ್ವಯಂವರದ ಕಥೆ, ಮದುವೆ ಆಗಲು ನಿರ್ಧರಿಸಿದ್ದ ಮಹರ್ಷಿ ನಾರದ; ಮುಂದೇನಾಯ್ತು?

ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಸ್ವಯಂವರದ ಕಥೆ, ಮದುವೆ ಆಗಲು ನಿರ್ಧರಿಸಿದ್ದ ಮಹರ್ಷಿ ನಾರದ; ಮುಂದೇನಾಯ್ತು?

ಹಿಂದೂಗಳ 18 ಪುರಾಣಗಳಲ್ಲಿ ಶಿವ ಪುರಾಣ ಕೂಡಾ ಒಂದು. ಶಿವ ಪುರಾಣವನ್ನು 12 ಸಂಹಿತೆಗಳನ್ನಾಗಿ ವಿಂಗಡಿಸಲಾಗಿದೆ. ಇದರಲ್ಲಿ ನಾರದರ ಕುರಿತು ಅನೇಕ ಕಥೆಗಳಿವೆ. ಅವುಗಳಲ್ಲಿ ನಾರದರು ಮದುವೆ ಆಗಲು ಬಯಸಿ ಸ್ವಯಂವರಕ್ಕೆ ಹೋದ ಕಥೆಯೂ ಇದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಸ್ವಯಂವರದ ಕಥೆ, ಮದುವೆ ಆಗಲು ನಿರ್ಧರಿಸಿದ್ದ ಮಹರ್ಷಿ ನಾರದ; ಮುಂದೇನಾಯ್ತು?
ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಸ್ವಯಂವರದ ಕಥೆ, ಮದುವೆ ಆಗಲು ನಿರ್ಧರಿಸಿದ್ದ ಮಹರ್ಷಿ ನಾರದ; ಮುಂದೇನಾಯ್ತು?

ಶಿವ ಪುರಾಣವನ್ನು ಶಿವ ಮಹಾಪುರಾಣ ಎಂದೂ ಕರೆಯುತ್ತೇವೆ. ಇದು ಸಂಪೂರ್ಣವಾಗಿ ಶಿವನಿಗೆ ಸಮರ್ಪಿತವಾದ ಪುರಾಣವಾಗಿದೆ. ಇದರ ಮೂಲ ಸ್ವರೂಪವನ್ನು ಶೈವ ಪುರಾಣ ಎಂದು ಪರಿಚಯಿಸಲಾಗಿದೆ. ಶಿವ ಮಹಾ ಪುರಾಣವನ್ನು ವೇದವ್ಯಾಸರು ರಚಿಸಿದರು. ಶಿವ ಪುರಾಣವು ಹಿಂದುಗಳ 18 ಪುರಾಣಗಳಲ್ಲಿ ಒಂದಾಗಿದೆ. ಈ ಪುರಾಣವು ಶಿವ ಮತ್ತು ಪಾರ್ವತಿಯರ ಕುರಿತ ವಿಚಾರಗಳಿವೆ. ಶಿವ ಪುರಾಣವನ್ನು 12 ಸಂಹಿತೆಗಳನ್ನಾಗಿ ವಿಂಗಡಿಸಲಾಗಿದೆ.

ತಪಸ್ಸಿಗೆ ಹೊರಟ ನಾರದ ಮುನಿಗಳು

ಶಿವಪುರಾಣದಲ್ಲಿ ಉಲ್ಲೇಖವಾಗಿರುವ ನಾರದರ ಕಥೆ ಇದು. ಒಮ್ಮೆ ನಾರದರು ತಪಸ್ಸು ಮಾಡಬೇಕೆಂದು ನಿರ್ಧರಿಸಿ ಯೋಗ್ಯವಾದ ಸ್ಥಳವನ್ನು ಆಯ್ಕೆ ಮಾಡುವಲ್ಲಿ ನಿರತರಾಗುತ್ತಾರೆ. ಪರ್ವತದ ತಪ್ಪಲಿನಲ್ಲಿ ಸೊಗಸಾದ ಗುಹೆಯೊಂದು ಕಂಡುಬರುತ್ತದೆ. ಇದರ ಬಳಿಗೆ ಗಂಗಾ ನದಿಯು ರಭಸದಿಂದ ಹರಿಯುತ್ತಿರುತ್ತದೆ. ಈ ನದಿಯ ದಡದಲ್ಲಿ ಒಂದು ಆಶ್ರಮ ಇರುತ್ತದೆ. ಈ ಆಶ್ರಮದಲ್ಲಿ ನಾರದ ಮಹರ್ಷಿಗಳು ತಪಸ್ಸನ್ನು ಆಚರಿಸಲು ನಿರ್ಧರಿಸುತ್ತಾರೆ. ಆ ಕ್ಷಣದಿಂದಲೇ ಕಠಿಣವಾದ ತಪಸ್ಸನ್ನು ಆಚರಿಸಲು ಆರಂಭಿಸುತ್ತಾರೆ. ಇದನ್ನು ಅರಿತ ದೇವೇಂದ್ರನು ಆತಂಕಕ್ಕೆ ಒಳಗಾಗುತ್ತಾನೆ. ನಾರದರು ತನ್ನ ಸಾಮ್ರಾಜ್ಯವನ್ನು ಕಬಳಿಸಿಕೊಳ್ಳಲು ತಪಸ್ಸನ್ನು ಆಚರಿಸುತ್ತಿರಬಹುದೆಂಬ ಭಯ ಇಂದ್ರನಿಗೆ ಉಂಟಾಗುತ್ತದೆ.

ಆ ಸಂದರ್ಭದಲ್ಲಿ ಸುರ ರಾಜನಾದ ಮನ್ಮಥ ಇಂದ್ರನ ಸಹಾಯಕ್ಕೆ ಬರುತ್ತಾನೆ. ಇದರ ಪರಿವಿಲ್ಲದೆ ನಾರದರು ಶಿವನನ್ನು ಕುರಿತು ತಪಸ್ಸು ಆಚರಿಸುತ್ತಾರೆ. ಮನ್ಮಥನು ತನ್ನ ಸ್ನೇಹಿತನಾದ ವಸಂತನ ಜೊತೆಯಲ್ಲಿ ನಾರದರ ತಪಸ್ಸಿಗೆ ಭಂಗ ತರಲು ಆಗಮಿಸುತ್ತಾನೆ. ಆದರೆ ಇಬ್ಬರೂ ನಾರದರ ಏಕಾಗ್ರತೆಗೆ ಭಂಗ ತರಲು ವಿಫಲರಾಗುತ್ತಾರೆ. ಇದಕ್ಕೆ ಕಾರಣ ಆ ಸ್ಥಳದಲ್ಲಿನ ಅಪಾರ ಶಕ್ತಿ. ಇದೇ ಸ್ಥಳದಲ್ಲಿ ಸಾಕ್ಷಾತ್ ಪರಶಿವನು ಒಮ್ಮೆ ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಡುತ್ತಾನೆ. ಆದರೆ ರತಿದೇವಿಯ ಸಹಾಯದಿಂದ ಮತ್ತು ದೈವಭಕ್ತಿಯಿಂದ ಮನ್ಮಥನು ಬದುಕಿ ಉಳಿಯುತ್ತಾನೆ.

ತಾನೇ ಪರಾಕ್ರಮಿ ಎಂದು ಮೆರೆಯುವ ನಾರದ

ಪರಮೇಶ್ವರನ ದಯೆಯಿಂದ ನಾರದರು ತಪಸ್ಸನ್ನು ಪೂರ್ಣಗೊಳಿಸುತ್ತಾರೆ. ಆದರೆ ತನ್ನ ಮಹಿಮೆಯಿಂದಲೇ ಮನ್ಮಥನು ಸೋತನು ಎಂಬ ಭಾವನೆ ನಾರದರಲ್ಲಿ ಮೂಡುತ್ತದೆ. ಕೈಲಾಸಕ್ಕೆ ತೆರಳಿದ ನಾರದರು ನಡೆದ ವೃತ್ತಾಂತವನ್ನು ಶಿವನಿಗೆ ತಿಳಿಸುತ್ತಾನೆ. ಆಗ ಶಿವನು ಈ ವಿಚಾರವನ್ನು ಯಾರೊಬ್ಬರಿಗೂ ತಿಳಿಸದೆ ಮೌನವಾಗಿರುವಂತೆ ತಿಳಿಸುತ್ತಾರೆ. ನೀನು ವಿಷ್ಣುಭಕ್ತನಾದ್ದರಿಂದ ನಿನ್ನಮೇಲೆ ನನಗೆ ಪ್ರೀತಿ ವಿಶ್ವಾಸ ಇದೆ ಎಂದು ಶಿವನು ಹೇಳುತ್ತಾನೆ. ಆದರೆ ಶಿವನ ಬುದ್ಧಿವಾದವೂ ನಾರದನ ಮನಸ್ಸಿಗೆ ಅರ್ಥವಾಗುವುದಿಲ್ಲ. ನಂತರ ನಾರದ ಮಹರ್ಷಿಗಳು ಬ್ರಹ್ಮಲೋಕಕ್ಕೆ ತೆರಳುತ್ತಾರೆ. ತನ್ನ ಸಾಮರ್ಥ್ಯದಿಂದ ಮನ್ಮಥನನ್ನು ಸೋಲಿಸಿದ ವಿಷಯವನ್ನು ತಿಳಿಸುತ್ತಾನೆ. ಆದರೆ ನಿಜವಾದ ವಿಚಾರ ಬ್ರಹ್ಮನಿಗೆ ಅರ್ಥವಾಗುತ್ತದೆ. ಆದ್ದರಿಂದ ನಾರದರಿಗೆ ದುಡುಕದಿರುವಂತೆ ಬುದ್ಧಿವಾದ ಹೇಳುತ್ತಾರೆ. ಆದರೆ ನಾರದರಿಗೆ ಇದಾವ ವಿಚಾರವೂ ಅರ್ಥವಾಗುವುದಿಲ್ಲ.

ನಾರದರು ವೈಕುಂಠಕ್ಕೆ ತೆರಳುತ್ತಾರೆ. ಭಗವಾನ್ ವಿಷ್ಣುವಿಗೆ ತನ್ನ ತಪಸ್ಸಿನ ಮಹಿಮೆಯಿಂದ ಮನ್ಮಥನನ್ನು ಸೋಲಿಸಿದ ಪರಿಯನ್ನು ತಿಳಿಸುತ್ತಾರೆ. ವಿಷ್ಣುವು ನಾರದರನ್ನು ಹೊಗಳುತ್ತಾರೆ. ಇದರಿಂದಾಗಿ ನಾರದರು ಇನ್ನಷ್ಟು ಖುಷಿಯಾಗುತ್ತಾರೆ. ಆದರೆ ತನ್ನ ಜ್ಞಾನದೃಷ್ಠಿಯಿಂದ ನಿಜಾಂಶವನ್ನು ತಿಳಿಯುತ್ತಾನೆ. ಸ್ವಯಂ ವಿಷ್ಣುವೇ ಶಿವನನ್ನು ಪ್ರಾಥಿಸಿ ಶಿವನ ಮಾಯೆಯನ್ನು ಕೊನೆಗೊಳಿಸಲು ತಿಳಿಸುತ್ತಾನೆ. ಆದರೆ ಯಾರ ಮಾತನ್ನು ಕೇಳದ ನಾರದರು ತಾವೆ ದೊಡ್ಡವರೆಂಬ ಭಾವನೆಯಿಂದ ಹೊರ ನಡೆಯುತ್ತಾರೆ.

ಸ್ವಯಂವರದಲ್ಲಿ ಪಾಲ್ಗೊಂಡ ಮಹರ್ಷಿಗಳು

ಶಿವನ ಆಶಯದಂತೆ ವಿಷ್ಣುವು ನಾರದರು ತೆರಳುವ ಮಾರ್ಗದಲ್ಲಿ ವಿಶಾಲವಾದ ಅಷ್ಟೇ ಸುಂದರವಾದ ಪಟ್ಟಣವನ್ನು ನಿರ್ಮಿಸುತ್ತಾನೆ. ಎಲ್ಲಾ ಅನುಕೂಲಗಳಿದ್ದ ಆ ಪಟ್ಟಾಣವು ವೈಕುಂಠಕ್ಕಿಂತಲೂ ಸುಂದರವಾಗಿತ್ತು. ಅಲ್ಲಿನ ದೊರೆಯ ಹೆಸರು ಶೀಲನಿಧಿ. ಆತನು ತನ್ನ ಮಗಳಿಗಾಗಿ ಸ್ವಯಂವರವನ್ನು ಏರ್ಪಡಿಸಿರುತ್ತಾನೆ. ಮುನಿಶ್ರೇಷ್ಠರಾದ ನಾರದರು ಸ್ವಯಂವರದ ವಿಚಾರ ತಿಳಿದು ಕುತೂಹಲದಿಂದ ಅರಮನೆಯನ್ನು ಪ್ರವೇಶಿಸುತ್ತಾರೆ. ನಾರದರನ್ನು ಕಂಡ ಮಹಾರಾಜನು ಎಲ್ಲಾ ರೀತಿಯ ಗೌರವ ಮರ್ಯಾದೆಗಳೊಂದಿಗೆ ಅರಮನೆಯೊಳಗೆ ಆಹ್ವಾನಿಸಿ ರತ್ನ ಸಿಂಹಾಸನದಲ್ಲಿ ಕುಳ್ಳರಿಸುತ್ತಾನೆ. ಆ ಮಹಾರಾಜನಿಗೆ ಒಬ್ಬ ಮಗಳಿದ್ದಳು. ಅವಳ ಹೆಸರೇ ಶ್ರೀಮತಿ. ಭಯ ಭಕ್ತಿಗಳಿಂದ ಶ್ರೀಮತಿಯು ನಾರದರ ಕಾಲಿಗೆ ನಮಸ್ಕರಿಸುತ್ತಾಳೆ. ನೋಡಲು ಸುಂದರವಾಗಿರುವ ಶ್ರೀಮತಿಯನ್ನು ಕಂಡ ನಾರದರಿಗೆ ಆಶ್ಚರ್ಯವಾಗುತ್ತದೆ.

ರಾಜನು ನಾರದರನ್ನು ಕುರಿತು ಇವಳು ನನ್ನ ಮಗಳು, ಮದುವೆಯಾಗಲು ಬಯಸಿದ ಕಾರಣ ಅವಳಿಗಾಗಿ ಇಂದು ಸ್ವಯಂವರವನ್ನು ಏರ್ಪಡಿಸಿದ್ದೇನೆ. ಈ ಕಾರಣದಿಂದಾಗಿ ಇವಳ ಜನ್ಮ ಕುಂಡಲಿಯನ್ನು ನೋಡಿ ಇವಳಿಗೆ ಎಂತಹ ಪತಿ ಸಿಗುವನೆಂದು ತಿಳಿಸಬೇಕೆಂದು ಕೇಳುತ್ತಾನೆ. ಆಗ ನಾರದರ ಮನಸ್ಸಿಗೆ ಆಕೆಯನ್ನು ತಾವೇ ವರಿಸಬೇಕೆಂದು ಬಯಕೆ ಉಂಟಾಗುತ್ತದೆ. ಆದ್ದರಿಂದ ನಾರದರು ನಿನ್ನ ಮಗಳು ಮಹಾ ಅದೃಷ್ಟಶಾಲಿ. ಆದ್ದರಿಂದ ಮಹಾ ಪರಾಕ್ರಮಶಾಲಿಯು, ಮನ್ಮಥನನ್ನು ಸೋಲಿಸಿದವನು ಮತ್ತು ಸಾಕ್ಷಾತ್ ಪರಶಿವನಿಗೆ ಸರಿಸಮಾನವಾದವನು ಇವಳ ಪತಿ ಆಗುತ್ತಾನೆ ಎಂದು ಹೇಳುತ್ತಾರೆ. ಮೇಲೆ ತಿಳಿಸಿದ ಎಲ್ಲಾ ಗುಣಗಳು ತಮ್ಮಲ್ಲಿ ಇದೆ ಎಂಬ ಭಾವನೆ ನಾರದರಿಗೆ ಇರುತ್ತದೆ. ನಾರದರು ಅರಮನೆಯಿಂದ ಹೊರ ಬರುತ್ತಾರೆ. ನಾರದರ ಮನಸ್ಸಿನಲ್ಲಿ ಆ ಯುವತಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಇರುತ್ತದೆ. ನನ್ನನ್ನು ಈಕೆ ಒಪ್ಪಿಕೊಳ್ಳುವುದು ಖಂಡಿತ ಆದರೆ ತಪಸ್ವಿಯಾದ ನಾನು ಸ್ವಯಂವರದಲ್ಲಿ ಭಾಗವಹಿಸುವುದು ಹೇಗೆ ಎಂಬ ಯೋಚನೆಯೂ ಉಂಟಾಗುತ್ತದೆ.

ಸಾಮಾನ್ಯವಾಗಿ ಸ್ತ್ರೀಯರು ಗೌರವಿಸುವುದು ಸೌಂದರ್ಯವನ್ನು ಮಾತ್ರ. ಆದ್ದರಿಂದ ವಿಷ್ಣುವಿನ ಸೌಂದರ್ಯವನ್ನು ಪಡೆದರೆ ಶ್ರೀಮತಿಯು ತನ್ನನ್ನು ವರಿಸುವುದು ಖಂಡಿತ ಎಂಬ ಭಾವನೆ ನಾರದರಲ್ಲಿ ಮೂಡುತ್ತದೆ. ವಿಷ್ಣುಲೋಕಕ್ಕೆ ತೆರಳಿ ಭಗವಾನ್ ವಿಷ್ಣುವಿಗೆ ನಡೆದ ವಿಚಾರವನ್ನು ತಿಳಿಸುತ್ತಾನೆ. ನನಗೆ ಶ್ರೀಮತಿಯನ್ನು ವಿವಾಹವಾಗಬೇಕೆಂಬ ಆಸೆ ಉಂಟಾಗಿದೆ. ಮಹಾರಾಜರನಾದ ಕಾರಣ ಪ್ರಪಂಚದ ಸುತ್ತಮುತ್ತಲಿಂದ ಅನೇಕ ರಾಜಾಧಿರಾಜರು ಬರುತ್ತಾರೆ. ಆದರೆ ರಾಜ ಮಹಾರಾಜರ ಮಧ್ಯೆ ಶ್ರೀಮತಿಯು ನನ್ನನ್ನು ವರಿಸಬೇಕೆಂದರೆ ನನಗೆ ನಿನ್ನ ರೂಪವು ಬೇಕಾಗುತ್ತದೆ ಎಂದು ಕೇಳುತ್ತಾರೆ. ಆದ್ದರಿಂದ ದಯಮಾಡಿ ನಿನ್ನ ಸೌಂದರ್ಯವನ್ನು ನನಗೆ ನೀಡಿ ನಾನು ಜಯಿಸುವಂತೆ ಮಾಡಬೇಕೆಂದು ನಾರದರೂ ಕೇಳಿಕೊಳ್ಳುತ್ತಾರೆ. ಆಗ ಶ್ರೀಮನ್ನಾರಾಯಣನು ನೀವೆಲ್ಲೇ ಇದ್ದರೂ ನಾನು ನಿಮ್ಮ ಹಿಂದೆ ವೈದ್ಯನಂತೆ ಇರುತ್ತೇನೆ ಎಂದು ತಿಳಿಸುತ್ತಾನೆ. ನಾರಾಯಣನು ಮನದಲ್ಲಿ ಶ್ರೀಮತಿಗೆ ನಾರದರ ಮುಖವು ಕಪಿಯ ಮುಖದಂತೆ ಕಾಣಲಿ ಎಂದು ಹಾರೈಸಿ ಮುಗುಳ್ನಕ್ಕು ಸುಮ್ಮನಾಗುತ್ತಾನೆ. ಇದರಿಂದ ತೃಪ್ತಿಗೊಂಡ ನಾರದರು ಸ್ವಯಂವರ ನಡೆಯುತ್ತಿದ್ದ ಸ್ಥಾನಕ್ಕೆ ತೆರಳುತ್ತಾರೆ. ಆದರೆ ನಾರದರಿಗೆ ವಿಷ್ಣುವಿನ ಮನಸ್ಸಿನ ಆಂತರ್ಯವು ಅರ್ಥವಾಗುವುದೇ ಇಲ್ಲ. ಕೊನೆಗೆ ಸುರಸುಂದರ ಯುವಕರ ನಡುವೆ ನಾರದರು ಸಹ ಸ್ಪರ್ಧಿಯಾಗಿ ಸ್ವಯಂವರದ ಮಂಟಪವನ್ನು ಪ್ರವೇಶಿಸುತ್ತಾರೆ.

ನಾರದರ ರೂಪ ಕಂಡು ಹಾಸ್ಯ ಮಾಡುವ ಶಿವಗಣರು

ನಾರದರು ತಾನು ವಿಷ್ಣುವಿನಂತೆ ಕಾಣುವ ಕಾರಣ ಶ್ರೀಮತಿಯು ತಮ್ಮನ್ನೇ ವರಿಸುವಳು ಎಂಬ ಆತ್ಮವಿಶ್ವಾಸದಿಂದ ಒಳ ನಡೆಯುತ್ತಾರೆ. ಅಲ್ಲಿದ್ದ ಎಲ್ಲ ಜನರಿಗೂ ನಾರದರನ್ನು ಮಹರ್ಷಿಗಳಂತೆಯೇ ಕಾಣುತ್ತಾರೆ. ಆದರೆ ನಾರದರನ್ನು ಕಾಪಾಡಲು ಇಬ್ಬರು ಶಿವಗಣರು ಬಂದಿರುತ್ತಾರೆ. ಅವರಿಗೆ ನಾರದರ ನಿಜವಾದ ರೂಪವು ಕಾಣುತ್ತದೆ. ಅವರಿಬ್ಬರೂ ನಾರದನ್ನು ಹಾಸ್ಯ ಮಾಡ ತೊಡಗುತ್ತಾರೆ. ಖಂಡಿತವಾಗಿಯೂ ನಾರದರು ಶ್ರೀಮತಿಯ ಮನಸ್ಸನ್ನು ಗೆಲ್ಲುವುದೇ ಇಲ್ಲ ಎಂಬ ಮಾತನ್ನು ಆಡುತ್ತಾರೆ. ಒಂದು ರೀತಿಯ ಮೋಹಕ್ಕೆ ಒಳಗಾಗಿದ್ದ ನಾರದರು ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಇಲ್ಲ.

ಕಡೆಗೆ ರಾಜಕುಮಾರಿಯಾದ ಶ್ರೀಮತಿಯು ಕೈಯಲ್ಲಿ ಚಿನ್ನದ ಮಾಲೆಯನ್ನು ಹಿಡಿದುಕೊಂಡು ಸ್ವಯಂವರ ಮಂಟಪವನ್ನು ಪ್ರವೇಶಿಸುತ್ತಾಳೆ. ಆಕೆಯ ಮುಖದಲ್ಲಿ ಮಹಾಲಕ್ಷ್ಮಿಯ ಕಾಂತಿ ಇರುತ್ತದೆ. ಅನುರೂಪವಾದ ವರನನ್ನು ಹುಡುಕುತ್ತಾ ಶ್ರೀಮತಿಯು ಸ್ವಯಂವರ ಮಂಟಪಕ್ಕೆ ಆಗಮಿಸುತ್ತಾಳೆ. ವಿಷ್ಣುವಿನ ದೇಹವನ್ನು ಹೊಂದಿದ್ದರೂ, ಕಪಿಯ ಮುಖವನ್ನು ಹೊಂದಿರುವ ನಾರದರನ್ನು ಕಂಡು ಸಿಡಿಮಿಡಿಗೊಳ್ಳುತ್ತಾಳೆ. ಕೊನೆಗೆ ತನ್ನ ಮನಸ್ಸಿಗೆ ಒಪ್ಪಿದ ವರನನ್ನು ಕಾಣದೆ ಯಾರಿಗೂ ಮಾಲೆ ಹಾಕದೆ ಸುಮ್ಮನೆ ನಿಂತುಬಿಡುತ್ತಾಳೆ. ನಾರದರಿಗೆ ತಮ್ಮ ಮುಖವು ಕಪಿಯ ಮುಖದಂತೆ ಇರುವುದನ್ನು ತಿಳಿದು ಕೋಪಕ್ಕೆ ಒಳಗಾಗುತ್ತಾರೆ.

ಕೊನೆಗೆ ಇವರೆಲ್ಲರ ಮಧ್ಯೆ ಶ್ರೀಮತಿಗೆ ಶ್ರೀಮನ್ ನಾರಾಯಣನು ಗೋಚರನಾಗುತ್ತಾನೆ. ತಕ್ಷಣವೇ ಶ್ರೀಮತಿಯು ತನ್ನ ಕೈಯಲ್ಲಿದ್ದ ಸ್ವಯಂವರದ ಮಾಲೆಯನ್ನು ಭಗವಾನ್ ವಿಷ್ಣುವಿನ ಕೊರಳಿಗೆ ಹಾಕಿ ವಿಷ್ಣುವನ್ನು ಒಲಿಸಿಕೊಂಡು ವಿಷ್ಣುವೊಂದಿಗೆ ವಿಷ್ಣುಲೋಕಕ್ಕೆ ತೆರಳುತ್ತಾಳೆ. ತಾನೇ ದೊಡ್ಡವರೆಂಬ ಭಾವನೆ ಮತ್ತು ಅತಿಯಾದ ಊಹೆ ಯಾರಿಗೂ ಇರಬಾರದು ಎಂದು ಇದರಿಂದ ತಿಳಿದುಬರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.