ನಿಮ್ಮ ಗಂಡು ಮಗುವಿಗೆ 'ಅ,ಆ' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹುಡುಕುತ್ತಿದ್ದೀರಾ? ಇಲ್ಲಿವೆ ಅರ್ಥಪೂರ್ಣ ಆಕರ್ಷಕ ಹೆಸರುಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಗಂಡು ಮಗುವಿಗೆ 'ಅ,ಆ' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹುಡುಕುತ್ತಿದ್ದೀರಾ? ಇಲ್ಲಿವೆ ಅರ್ಥಪೂರ್ಣ ಆಕರ್ಷಕ ಹೆಸರುಗಳು

ನಿಮ್ಮ ಗಂಡು ಮಗುವಿಗೆ 'ಅ,ಆ' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹುಡುಕುತ್ತಿದ್ದೀರಾ? ಇಲ್ಲಿವೆ ಅರ್ಥಪೂರ್ಣ ಆಕರ್ಷಕ ಹೆಸರುಗಳು

ಮಕ್ಕಳಿಗೆ ಹೆಸರಿಡುವುದು ಎಂದರೆ ಮನೆಮಂದಿಗೆಲ್ಲ ಸಂತೋಷವೇ. ಆದರೆ ಎಲ್ಲರಿಗೂ ಮೆಚ್ಚುಗೆಯಾಗುವ ಅರ್ಥಪೂರ್ಣ ಮತ್ತು ಟ್ರೆಂಡಿ ಹೆಸರು ಹುಡುಕುವುದು ಅಷ್ಟೇ ಕಷ್ಟವೂ ಹೌದು. ನೀವು ನಿಮ್ಮ ಮಗನಿಗೆ ‘ಅ’ ಅಥವಾ ‘ಆ’ಅಕ್ಷರದಿಂದ ಹೆಸರು ಹುಡುಕುತ್ತಿದ್ದರೆ ಇಲ್ಲಿದೆ ಒಂದಿಷ್ಟು ಅರ್ಥಪೂರ್ಣ ಆಕರ್ಷಕ ಹೆಸರುಗಳ ಪಟ್ಟಿ.

ನಿಮ್ಮ ಗಂಡು ಮಗುವಿಗೆ 'ಅ,ಆ' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹುಡುಕುತ್ತಿದ್ದೀರಾ? ಇಲ್ಲಿವೆ ಅರ್ಥಪೂರ್ಣ ಆಕರ್ಷಕ ಹೆಸರುಗಳು
ನಿಮ್ಮ ಗಂಡು ಮಗುವಿಗೆ 'ಅ,ಆ' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹುಡುಕುತ್ತಿದ್ದೀರಾ? ಇಲ್ಲಿವೆ ಅರ್ಥಪೂರ್ಣ ಆಕರ್ಷಕ ಹೆಸರುಗಳು (PC: Pixabay)

ಮನೆಗೆ ಮಗು ಬಂತೆಂದರೆ ಎಲ್ಲರಿಗೂ ಸಂತೋಷ. ಮಗುವಿಗೆ ಹೆಸರಿಡುವ ಸಂಭ್ರಮದಲ್ಲಿ ಗೂಗಲ್‌ನಲ್ಲಿ ಹುಡುಕುವುದು, ಆಪ್ತರಿಗೆ ಹೆಸರು ಸೂಚಿಸುವಂತೆ ಮನವಿ ಮಾಡಲಾಗುತ್ತದೆ. ಮೊದಲೆಲ್ಲಾ ಮನೆಯ ಹಿರಿಯರ ಹೆಸರು ಅಥವಾ ಮನೆದೇವರ ಹೆಸರುಗಳನ್ನು ಇಡಲಾಗುತ್ತಿತ್ತು. ಈಗ ಹಾಗಲ್ಲ, ಮಗುವಿಗೆ ಇಡುವ ಹೆಸರು ಹೊಸ ಹೆಸರಾಗಿರಬೇಕು ಜೊತೆಗೆ ಟ್ರೆಂಡಿಯೂ ಆಗಿರಬೇಕು ಎನ್ನುವುದು ಈಗಿನ ಪೋಷಕರ ಆಸೆ.

ದೇವರ ಹೆಸರೇ ಆದರೂ ಅದರಲ್ಲಿ ಹೊಸತನವನ್ನು ಹುಡುಕುತ್ತಾರೆ. ಮಕ್ಕಳಿಗೆ ಪುರಾಣದ ಪುಸ್ತಕಗಳಿಂದ ಪ್ರೇರಿತವಾದ ಹೆಸರುಗಳನ್ನು ಇಡುವುದು ಉತ್ತಮ ಯೋಚನೆಯಾಗಿದೆ. ನಿಮ್ಮ ಮುದ್ದು ಮಗುವಿಗೆ ಸರಿಯಾದ ಹೆಸರನ್ನು ಇಡುವುದು ಅಷ್ಟೇ ಮುಖ್ಯವಾಗಿದೆ. ನಿಮ್ಮ ಮಗನಿಗೆ ‘ಅ (A)’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹುಡುಕುತ್ತಿದ್ದರೆ ನಿಮಗೆ ಇಲ್ಲೊಂದಿಷ್ಟು ಸಲಹೆಗಳಿವೆ. ಅ ದಿಂದ ಪ್ರಾಂಭವಾಗುವ ಹೆಸರುಗಳ ಅರ್ಥವೂ ಇದರಲ್ಲಿದೆ. ನಿಮ್ಮ ಮುದ್ದು ಮಗನಿಗೆ ಅ ಅಕ್ಷರದಿಂದ ಇಡಬಹುದಾದ ಹಿಂದೂ ಹೆಸರುಗಳು ಇಲ್ಲಿವೆ.

ಆಕರ್ಷಕ ಹೆಸರುಗಳು

ಅರ್ಜುನ: ಈ ಹೆಸರು ಮಹಾಭಾರತವನ್ನು ನೆನಪಿಸುತ್ತದೆ. ಕೃಷ್ಣನಿಗೆ ಅತ್ಯಂತ ಪ್ರಿಯವಾದ ವ್ಯಕ್ತಿಯ ಹೆಸರು ಇದಾಗಿದೆ. ಶ್ರೇಷ್ಠ ಬಿಲ್ಲುಗಾರನೆಂಬ ಹೆಸರೂ ಇದೆ. ಅಂದರೆ ತೀಕ್ಷ್ಣ ಮತಿ, ಛಲಗಾರ ಎಂಬ ಅರ್ಥದ ಹೆಸರು ಇಡಬೇಕೆಂದುಕೊಂಡಿದ್ದರೆ ನಿಮ್ಮ ಮಗನಿಗೆ ಈ ಹೆಸರು ಸೂಕ್ತವಾಗಿದೆ.

ಅಭಿಷೇಕ: ಬಹಳಷ್ಟು ಪೋಷಕರ ನೆಚ್ಚನ ಹೆಸರಾಗಿದೆ. ಇದು ದೈವಿಕ ಆಚರಣೆಗೆ ಸಂಬಂಧಪಟ್ಟಿದೆ. ಇದು ದೇವರ ಪೂಜೆ ಮತ್ತು ಮಂಗಳ ಸ್ನಾನವನ್ನು ಸಂಕೇತಿಸುತ್ತದೆ. ಈ ಹೆಸರಿನ ವ್ಯಕ್ತಿಗಳು ಕಲೆ ಮತ್ತು ಪ್ರಕೃತಿ ಪ್ರೇಮಿಗಳಾಗಿರುತ್ತಾರೆ.

ಆದಿತ್ಯ: ಇದು ಜಗತ್ತಿಗೆ ಬೆಳಕು ನೀಡುವ ಸೂರ್ಯದೇವನ ಹೆಸರಾಗಿದೆ. ನಿಮ್ಮ ಮಗ ಸೂರ್ಯನಂತೆ ಬೆಳಗಬೇಕು ಎಂಬ ಆಸೆ ನಿಮ್ಮಲ್ಲಿದ್ದರೆ ಈ ಹೆಸರನ್ನು ಆಯ್ದುಕೊಳ್ಳಬಹುದು.

ಅಸೀಮ್‌: ಇದು ಸಂಸ್ಕೃತ ಮೂಲದಿಂದ ಬಂದಿರುವ ಶಬ್ದವಾಗಿದೆ. ನಿಮ್ಮ ಮಗು ಮಹತ್ವಾಕಾಂಕ್ಷಿಯಾಗಿರಬೇಕು ಮತ್ತು ಸಮೃದ್ಧಿಯ ಜೀವನ ನಡೆಸಬೇಕು ಎಂದು ಬಯಸಿದರೆ ಈ ಹೆಸರು ಆಯ್ದುಕೊಳ್ಳಬಹುದು. ಇದು ಅನಂತ ಅಥವಾ ಕೊನೆಯಿಲ್ಲದ ಎಂಬ ಅರ್ಥವನ್ನು ಸಹ ಹೊಂದಿದೆ.

ಆಕಾಶ್‌: ಅಂತ್ಯವಿಲ್ಲದ ಆಗಸ ಅಥವಾ ವಿಶಾಲವಾದ ಈ ರೀತಿಯ ಹೆಸರು ಇಡುವ ಮನಸ್ಸಿದ್ದರೆ ಆಕಾಶ್‌ ಹೆಸರನ್ನು ಆಯ್ದುಕೊಳ್ಳಬಹುದು. ಮಳೆಯ ದೇವರಾದ ವರುಣನಿಗೆ ಸಂಬಂಧಿಸಿದ ಹೆಸರಾಗಿದೆ.

ಮಹಾಭಾರತ, ರಾಮಾಯಣದ ಪಾತ್ರದ ಹೆಸರುಗಳು

ಅಶ್ವತ್ಥಾಮ: ದೃಢಸಂಕಲ್ಪ, ನಿಷ್ಠೆ ಮತ್ತು ನಿರಂತರ ಹೋರಾಟದ ಗುಣ ಮುಂತಾದ ಅರ್ಥಗಳನ್ನು ನೀಡುವ ಹೆಸರಾಗಿದೆ. ಇದು ಮಹಾಭಾರತದಲ್ಲಿ ಬರುವ ಎರಡು ಪ್ರಮುಖ ಪಾತ್ರಗಳಾದ ಯುದ್ಧದಲ್ಲಿ ಧೈರ್ಯದಿಂದ ಹೋರಾಡುವ ಆನೆ ಮತ್ತು ದ್ರೋಣಾಚಾರ್ಯರ ಮಗನನ್ನು ನೆನಪಿಸುತ್ತದೆ.

ಅಶ್ವಥ್‌: ಇದು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುವ ಶಬ್ದವಾಗಿದೆ. ನಿಮ್ಮ ಮಗನಿಗೆ ಮಹಾವಿಷ್ಣುವಿನ ಹೆಸರಿಡಬೇಕು ಅಂದುಕೊಂಡಿದ್ದರೆ ಈ ಹೆಸರು ಆಯ್ದುಕೊಳ್ಳಬಹುದು. ಭಗವಾನ್‌ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷ (ಆಲದ ಮರ)ವನ್ನು ಸಹ ನೆನಪಿಸುತ್ತದೆ.

ಅಭಯ: ನಿಮ್ಮ ಮಗು ಯಾವುದೇ ಭಯವಿಲ್ಲದವನಾಗಬೇಕು ಅಂದರೆ ಧೈರ್ಯಶಾಲಿಯಾಗಬೇಕು ಎಂದು ಬಯಸಿದರೆ ಈ ಹೆಸರು ಹೆಚ್ಚು ಸೂಕ್ತವಾಗಿದೆ.

ಆನಂದ: ನಿಮ್ಮ ಮಗುವಿನ ಜೀವನಲ್ಲಿ ಸದಾ ಸಂತೋಷ ತುಂಬಿರಬೇಕು ಎಂದು ಬಯಸಿದ್ದರೆ ಈ ಹೆಸರು ಇಡಬಹುದು. ಇದು ಸಂತೋಷ, ತೃಪ್ತಿಯನ್ನು ಸೂಚಿಸುವ ಹೆಸರಾಗಿದೆ.

ಅಮೃತ: ಕ್ಷೇಮ ಮತ್ತು ಅಮರತ್ವಕ್ಕೆ ಸಂಬಂಧಿಸಿದ ಹೆಸರು ಇದಾಗಿದೆ. ಅಮರತ್ವಕ್ಕಾಗಿ ಸಮುದ್ರ ಮಂಥನ ನಡೆದ ಕಥೆಯನ್ನು ಈ ಹೆಸರು ನೆನಪಿಸುತ್ತದೆ. ಅಮೃತವೆಂದರೆ ಮಕರಂದ ಎಂದೂ ಅರ್ಥವಿದೆ. ಸಿಹಿಯಾದ ಮತ್ತು ಉತ್ಸಾಹ, ಚೇತನ ಹೊಂದಿರುವ ವ್ಯಕ್ತಿ ಎನ್ನುವ ಅರ್ಥದಲ್ಲೂ ಸಹ ಈ ಹೆಸರನ್ನು ಆಯ್ದುಕೊಳ್ಳಬಹುದು.

ಆಯುಷ್‌: ನಿಮ್ಮ ಮಗನ ಜೀವನದಲ್ಲಿ ಉತ್ತಮ ಆರೋಗ್ಯ, ಚೈತನ್ಯ ತುಂಬಿ ದೀರ್ಘಾಯುಷ್ಯವನ್ನು ಹೊಂದಿರಲಿ ಎಂದು ಸೂಚಿಸುವ ಹೆಸರು ಇಡುವ ಆಸೆಯಿದ್ದರೆ ಈ ಹೆಸರನ್ನು ಆಯ್ದುಕೊಳ್ಳಬಹುದು. ಆಯುಷ್‌ ಇದು ಸಂಸ್ಕೃತದಿಂದ ಬಂದ ಶಬ್ದವಾಗಿದೆ.

ಸಂಸ್ಕೃತ ಮೂಲದಿಂದ ಬಂದ ಹೆಸರು

ಅರ್ಣವ: ಇದು ಸಂಸ್ಕೃತದ ಶಬ್ದವಾಗಿದೆ. ನಿಮ್ಮ ಮಗನಿಗೆ ವಿಶಾಲವಾದ ಸಾಗರ, ಸಮುದ್ರ ಎಂಬ ಅರ್ಥದ ಹೆಸರಿಡಬೇಕೆಂದಿದ್ದರೆ ಈ ಹೆಸರು ಆಯ್ದುಕೊಳ್ಳಿ.

ಆರ್ಯನ್‌: ಇದು ಗೌರವ, ಘನತೆ ಮತ್ತು ಉದಾತ್ತ ಭಾವನೆ ಸೂಚಿಸುವ ಹೆಸರಾಗಿದೆ. ಈ ಹೆಸರನ್ನು ಹೊಂದಿದವರು ವಿದ್ಯಾವಂತರು ಮತ್ತು ಜಗತ್ತನ್ನೇ ನೋಡುವ ವಿದ್ವಾಂಸರು ಎಂದು ಹೇಳಲಾಗುತ್ತದೆ.

ಅಜಯ: ಇದು ಬಹಳ ಹಿಂದಿನಿಂದ ಕೇಳಲ್ಪಟ್ಟ ಹೆಸರಾದರೂ ಇಂದಿಗೂ ಟ್ರೆಂಡಿಯಾಗಿದೆ. ಶ್ರೀಕೃಷ್ಣನ ಹೆಸರಾದ ಇದು ಎಲ್ಲವನ್ನೂ ಜಯಿಸಿ ಅಜೇಯನಾದವನು ಎಂಬ ಅರ್ಥವನ್ನು ನೀಡುತ್ತದೆ.

ಅಶ್ವಿನ್‌: ನಿಮ್ಮ ಮಗ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದ್ದರೆ ಈ ಹೆಸರು ಇಡಬಹುದು. ಜೊತೆಗೆ ಇದು ಅಶ್ವಿನಿ ದೇವತೆಗಳನ್ನು ನೆನಪಿಸುತ್ತದೆ. ಜೀವನದಲ್ಲಿ ಬೆಳಕು ಮತ್ತು ಯಶಸ್ಸು ಹೊಂದಿರಲಿ ಎಂದು ಪ್ರತಿನಿಧಿಸುವ ಹೆಸರಾಗಿದೆ.

ಅಂಶುಲ್‌: ಬಹಳ ಅಪರೂಪದ ಹೆಸರಾಗಿದ್ದು ಆಕರ್ಷಕವಾಗಿದೆ. ಸಂಸ್ಕೃತದ ಶಬ್ದವಾದ ಇದು ಕಾಂತಿ ಅಥವಾ ಹೊಳಪು ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ಮಗನಿಗೆ ತೇಜಸ್ಸು, ಚೈತನ್ಯ, ಮತ್ತು ಶಕ್ತಿ ಈ ಅರ್ಥಗಳು ಬರುವ ಹೆಸರಡಬೇಕೆಂದಿದ್ದರೆ ಅಂಶುಲ್‌ ಹೆಸರು ಆಯ್ದುಕೊಳ್ಳಬಹುದು.

ಆತ್ಮನ್‌: ನಿಮಗೆ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವಿದ್ದರೆ ನಿಮ್ಮ ಮಗನಿಗೆ ಈ ಹೆಸರನ್ನು ಹಾಕಬಹುದು. ಆತ್ಮವಿಶ್ವಾಸ, ಆತ್ಮಾವಲೋಕನದಂತಹ ಆಳವಾದ ಅರ್ಥ ನೀಡುವ ಹೆಸರು ಇದಾಗಿದೆ.

ಅನಿರುದ್ಧ: ನಿಮ್ಮ ಮಗ ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ಹೊಂದಿರಲೇಬಾರದು ಎಂಬ ಅರ್ಥ ಬರುವ ಹೆಸರು ಹುಡುಕುತ್ತಿದ್ದರೆ ಅನಿರುದ್ಧ್‌ ಹೆಸರನ್ನು ಆಯ್ದುಕೊಳ್ಳಬಹುದು. ಇದು ಪರಿಶ್ರಮ, ಸೂಕ್ತ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿ ಎಂಬುದನ್ನು ಪ್ರತಿನಿಧಿಸುತ್ತದೆ.

ಅಂಶ್‌: ಚಿಕ್ಕ ಹೆಸರಾದರೂ, ಆಳವಾದ ಚಿಂತನೆ ಎಂಬುದು ಇದರ ಅರ್ಥವಾಗಿದೆ. ನಿಮ್ಮ ಮಗ ನಿಮ್ಮದೇ ಒಂದು ಭಾಗ ಎಂದು ಸೂಚಿಸುವ ಹೆಸರು ಹುಡುಕುತ್ತಿದ್ದರೆ ಈ ಹೆಸರು ಹೆಚ್ಚು ಸೂಕ್ತವಾಗಿದೆ.

ಅರುಣ: ಸೂರ್ಯ ದೇವನ ಇನ್ನೊಂದು ಹೆಸರು ಇದಾಗಿದೆ. ನಿಮ್ಮ ಮಗ ಸೂರ್ಯನಂತೆ ಪ್ರಕಾಶಿಸಬೇಕೆಂದಿದ್ದರೆ ಈ ಹೆಸರು ಆಯ್ದುಕೊಳ್ಳಬಹುದು.

ದೇವರ ಹೆಸರುಗಳು

ಅಥರ್ವ: ಪ್ರಥಮ ಪೂಜ್ಯ ದೇವರಾದ ಗಣಪತಿಯ ಹೆಸರು ಇದಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಕರಾವಳಿಯಲ್ಲಿ ಈ ಹೆಸರು ಹೆಚ್ಚು ಜನಪ್ರಿಯವಾಗಿದೆ. ನಿಮ್ಮ ಮಗನ ಜೀವನದಲ್ಲಿ ಶಾಂತಿ, ಪ್ರೀತಿ ಮತ್ತು ಆಧ್ಯಾತ್ಮದ ಒಲವು ಹೊಂದಿರಬೇಕು ಎಂದು ಬಯಸಿದರೆ ಈ ಹೆಸರನ್ನು ಆಯ್ದುಕೊಳ್ಳಿ.

ಅಖಿಲ: ಸಂಸ್ಕೃತ ಮೂಲದಿಂದ ಬಂದ ಹೆಸರಾಗಿದ್ದು ಸಂಪೂರ್ಣ ಅಥವಾ ಪರಿಪೂರ್ಣ ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ಮಗ ಜೀವನದಲ್ಲಿ ತೃಪ್ತಿ ಮತ್ತು ಸಂತೋಷವನ್ನು ಹೊಂದಿರಲಿ ಎಂದು ಬಯಸುತ್ತಿದ್ದರೆ ಈ ಹೆಸರನ್ನು ಆಯ್ದುಕೊಳ್ಳಬಹುದು.

ಅಧೃತ್: ವಿಶಿಷ್ಟವಾದ, ಅರ್ಥಪೂರ್ಣವಾದ ಹೊಸ ಹೆಸರು ಹುಡುಕುತ್ತಿದ್ದರೆ ಈ ಹೆಸರನ್ನು ಆರಿಸಿ. ಇದು ಶಕ್ತಿ ನೀಡುವವನು ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ಮಗ ಬೆಳೆದು ದೊಡ್ಡವನಾದ ಮೇಲೆ ಇಡೀ ಕುಟುಂಬದ ಶಕ್ತಿಯಾಗಬೇಕು ಎಂದು ಬಯಸಿದರ ಈ ಹೆಸರು ಹೆಚ್ಚು ಸೂಕ್ತವಾಗಿದೆ.

ಅನ್ಮೋಲ್: ಈ ಹೆಸರು ನಿಮಗೆ ನಿಮ್ಮ ಮಗ ಎಷ್ಟು ಅಮೂಲ್ಯ ಎನ್ನುವುದನ್ನು ತೋರಿಸುತ್ತದೆ. ಈ ಹೆಸರು ಎಲ್ಲಾ ಕೆಲಸದಲ್ಲೂ ಉತ್ತಮ ಮತ್ತು ಪರಿಪೂರ್ಣತೆಯನ್ನು ಸೂಚಿಸುತ್ತದೆ.

ಅಭಿರಾಮ: ಇದು ಶಿವನಿಗೆ ಸಂಬಂಧಿಸಿದ ಹೆಸರಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಭಾನುವಾರದಂದು ಜನಿಸಿದ ಗಂಡು ಮಗುವಿಗೆ ಈ ಹೆಸರನ್ನು ಇಡುತ್ತಾರೆ. ಇದು ಸುಂದರ, ಸಂತೋಷ ಮತ್ತು ತೃಪ್ತಿಯ ಗುಣಗಳನ್ನು ಪ್ರತಿನಿಧಿಸುತ್ತದೆ.

ಅನಂತ: ನಿಮ್ಮ ಕುಟುಂಬಕ್ಕೆ ಸರ್ಪ ದೋಷವಿದ್ದು, ಜ್ಯೋತಿಷ್ಯಿಗಳು ನಿಮಗೆ ಹುಟ್ಟುವ ಮಗುವಿಗೆ ಸರ್ಪಕ್ಕೆ ಸಂಬಂಧಿಸಿ ಹೆಸರು ಇಡಬೇಕು ಎಂದು ಸೂಚಿಸಿದ್ದರೆ ಅನಂತ ಹೆಸರನ್ನು ಆಯ್ದುಕೊಳ್ಳಬಹುದು. ಬಾಲಕೃಷ್ಣನನ್ನು ರಕ್ಷಿಸಿದ ಸರ್ಪದ ಹೆಸರು ಇದಾಗಿದೆ. ಪುರಾಣದ ಕಥೆಗಳಲ್ಲಿ ಬರುವ ಹೆಸರಾದರೂ ಇಂದಿನ ಕಾಲಕ್ಕೆ ಟ್ರೆಂಡಿಯಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.