ದೀಪಕ್ಕಿದೆ ಅಜ್ಞಾನವನ್ನು ಹೋಗಲಾಡಿಸುವ ಶಕ್ತಿ; ದೀಪ ಬೆಳಗಿಸುವಾಗ ಈ ಅಂಶಗಳು ನಿಮಗೆ ನೆನಪಾಗಲಿ, ದೈವಿಕ ಶಕ್ತಿ ಮನೆ-ಮನ ತುಂಬಿಕೊಳ್ಳಲಿ
ದೀಪವನ್ನು ಬೆಳಗಿಸುವುದು ಅಂದರೆ ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸುವ, ದೈವಿಕ ಶಕ್ತಿಯನ್ನು ಆಹ್ವಾನಿಸುವ ಮತ್ತು ಶಾಂತಿಯುತ, ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವ ಪ್ರಬಲ ಸಂಕೇತ.ದೇವರಿಗೆ ಹಚ್ಚುವದೀಪವು ಬೆಳಕು ಹರಡುವಲ್ಲಿ ಮತ್ತು ಸಕಾರತ್ಮಕ ಶಕ್ತಿಯನ್ನು ಕರುಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ದೀಪವು ಭಾರತೀಯ ಸಂಪ್ರದಾಯದಲ್ಲಿ ಅಪಾರ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಂಕೇತಿಕ ಮಹತ್ವವನ್ನು ಹೊಂದಿದೆ. ಇದು ಬೆಳಕು, ಜ್ಞಾನ ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ದೀಪವನ್ನು ಬೆಳಗಿಸುವುದು ಅಂದರೆ ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸುವ, ದೈವಿಕ ಶಕ್ತಿಯನ್ನು ಆಹ್ವಾನಿಸುವ ಮತ್ತು ಶಾಂತಿಯುತ, ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವ ಪ್ರಬಲ ಸಂಕೇತವಾಗಿದೆ. ದೀಪಾವಳಿಯಂತಹ ಹಬ್ಬಗಳಾಗಲಿ, ಅಥವಾ ಯಾವುದೇ ಶುಭ ಸಮಾರಂಭ ಅಥವಾ ಪ್ರತಿದಿನ ದೇವರಿಗೆ ಹಚ್ಚುವ ದೀಪವು ಬೆಳಕನ್ನು ಹರಡುವಲ್ಲಿ ಮತ್ತು ಸಕಾರತ್ಮಕ ಶಕ್ತಿಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ದೀಪವನ್ನು ಬೆಳಗಿಸುವ ಕ್ರಿಯೆಯು ಶತಮಾನಗಳಿಂದಲೂ ಚಾಲ್ತಿಯಲ್ಲಿದೆ. ಪ್ರಾಚೀನ ನಾಗರೀಕತೆಗಳ ಹಿಂದಿನ ಕಾಲದಿಂದಲೂ ದೀಪವನ್ನು ಬೆಳಗಿಸುವುದು ಎಂದರೆ ಕತ್ತಲೆಯನ್ನು ಅಥವಾ ಅಜ್ಞಾನವನ್ನು ಹೋಗಲಾಡಿಸುವ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ದೀಪದ ಬೆಳಕನ್ನು ಅಜ್ಞಾನದ ಕತ್ತಲೆಯನ್ನು ತೆಗೆದುಹಾಕುವ ಜ್ಞಾನದ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಗ್ನಿದೇವನು ದೀಪದ ಜ್ವಾಲೆಯಲ್ಲಿ ವಾಸವಾಗಿರುತ್ತಾನೆ ಎಂದು ನಂಬಲಾಗಿದೆ.
ದೀಪ ಬೆಳಗಿಸುವ ಮಹತ್ವ
ಪೂಜೆಗೆ ಕುಳಿತುಕೊಳ್ಳುವ ಮೊದಲು ಸಾಮಾನ್ಯವಾಗಿ ಎಣ್ಣೆ ದೀಪವನ್ನು ಬೆಳಗಿಸುತ್ತಾರೆ. ಮನೆಯ ದೇವರ ಕೋಣೆಯಲ್ಲಿ ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ದೇವರಿಗೆ ದೀಪವನ್ನಿಡುತ್ತಾರೆ. ದೀಪ ಬೆಳಗುವುದು ಆಧ್ಯಾತ್ಮಿಕ ಅಥವಾ ಧಾರ್ಮಿಕ ಪ್ರಕ್ರಿಯೆಯ ಸಂಕೇತವಾಗಿದೆ. ಇದು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂಬ ನಂಬಿಕೆ ಬೇರೂರಿದೆ. ದೀಪವನ್ನು ಬೆಳಗಿಸುವ ಕಾರಣವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ದೈವಿಕ ಶಕ್ತಿಯ ಉಪಸ್ಥಿತಿ: ಮನೆಗಳಲ್ಲಿ ಅಥವಾ ದೇವಾಲಯಗಳಲ್ಲಿ ದೀಪವನ್ನು ಬೆಳಗಿಸುವುದು ಎಂದರೆ ಅದು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿದೆ. ಬೆಳಗಿಸಿದ ದೀಪವನ್ನು ನಾವೇ ನಂದಿಸಬಾರದು ಎಂಬ ನಂಬಿಕೆಯೂ ಚಾಲ್ತಿಯಲ್ಲಿದೆ. ಯಾಕೆಂದರೆ ದೀಪ ಬೆಳಗುವಾಗ ದೈವಿಕ ಶಕ್ತಿ ಅಥವಾ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಬೆಳಗ್ಗೆ ಪೂಜೆ ಕುಳಿತಾಗ ದೀಪ ಬೆಳಗಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂದೂ ನಂಬಲಾಗಿದೆ. ಇದು ಸಕಾರಾತ್ಮಕ ಶಕ್ತಿಯನ್ನು ನಂಬುವ ವ್ಯಕ್ತಿಯನ್ನು ಭೌತಿಕ ಪ್ರಪಂಚದಿಂದ ಆಧ್ಯಾತ್ಮಿಕತೆ ಮತ್ತು ಮೋಕ್ಷದ ಕಡೆಗೆ ಕರೆದೊಯ್ಯುತ್ತದೆ ಎಂದು ನಂಬಲಾಗಿದೆ.
ಪವಿತ್ರ ಶಕ್ತಿ: ದೀಪದ ಬೆಳಕು ಮನೆ, ದೇವರ ಮನೆ ಅಥವಾ ದೇವಾಲಯದ ಪವಿತ್ರವಾದ ವಾತಾವರಣವನ್ನು ಬೆಳಗಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಇದು ಪ್ರಾರ್ಥನೆ ಮಾಡುವಾಗ ಏಕಾಗ್ರತೆಗೆ ಸಹಾಯ ಮಾಡುತ್ತದೆ. ದೀಪದ ಬೆಳಕಿನಲ್ಲಿ ಸಕಾರಾತ್ಮಕ ಶಕ್ತಿ ಅಡಗಿದೆ ಎಂಬ ನಂಬಿಕೆ ಇರುವುದರಿಂದ ದೀಪವನ್ನು ಪವಿತ್ರ ಶಕ್ತಿ ಎಂದೇ ಹೇಳಲಾಗುತ್ತದೆ.
ಶುದ್ಧತೆಯ ಸಂಕೇತ: ಹಲವಾರು ವಿಧದ ದೀಪಗಳು ಲಭ್ಯವಿರುವುದರಿಂದ ಜನರು ತಮಗಿಷ್ಟವಾದ ದೀಪಗಳಿಂದ ದೇವರಿಗೆ ದೀಪ ಬೆಳಗುತ್ತಾರೆ. ಇವುಗಳಲ್ಲಿ ಮಣ್ಣಿನ ದೀಪ, ಹಿತ್ತಾಳೆ ಅಥವಾ ಬೆಳ್ಳಿ ದೀಪಗಳನ್ನು ಬೆಳಗಿಸುತ್ತಾರೆ. ಜೇಡಿಮಣ್ಣಿನ ದೀಪ ಹಾಗೂ ಹಿತ್ತಾಳೆ ದೀಪವು ಶುದ್ಧತೆಗೆ ಸಂಬಂಧಿಸಿವೆ. ದೀಪಗಳನ್ನು ಬೆಳಗಿಸುವುದು ಎಂದರೆ ಯಾವುದೇ ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಹಬ್ಬಗಳಲ್ಲಿ ದೀಪ ಬೆಳಗಿಸುವುದು: ಹಿಂದೂ ಧರ್ಮದಲ್ಲಿ ದೀಪಾವಳಿ ಸೇರಿದಂತೆ ಇತರೆ ಹಬ್ಬ ಮತ್ತು ಸಮಾರಂಭಗಳಲ್ಲಿ ದೀಪ ಬೆಳಗಿಸುವುದು ದೈವಿಕ ಶಕ್ತಿಯನ್ನು ಆಹ್ವಾನಿಸುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕೆಟ್ಟ ಕಾರ್ಯಗಳು ನಡೆಯದಂತೆ ನೋಡಿಕೊಳ್ಳುತ್ತದೆ ಎಂದು ನಂಬಲಾಗಿದೆ. ಹಬ್ಬದ ಸಮಯದಲ್ಲಿ ದೀಪಗಳನ್ನು ಬೆಳಗಿಸುವುದು ಕೇವಲ ಬೆಳಕಿನ ಮೂಲವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಶುದ್ಧತೆಯ ಸಂಕೇತವಾಗಿದೆ ಮತ್ತು ಸಕಾರಾತ್ಮಕತೆ ಹಾಗೂ ಜ್ಞಾನೋದಯದ ಸಂಕೇತವೂ ಹೌದು. ಹಬ್ಬ ಹರಿದಿನಗಳಲ್ಲಿ ದೀಪ ಬೆಳಗುವುದು ಕತ್ತಲೆಯ ಮೇಲಿನ ವಿಜಯದ ಸಂಕೇತವಾಗಿದೆ.
ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ: ಏಕಾಗ್ರತೆ ಮತ್ತು ಧ್ಯಾನ ಮಾಡುವಾಗ ದ್ವೀಪದ ಜ್ವಾಲೆಯು ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ಮಂದಿ ತಮ್ಮ ಮನಸ್ಸಿನಲ್ಲಿರುವ ಯಾವುದೇ ಆಲೋಚನೆಗಳನ್ನು ದೂರ ಮಾಡಲು ದೀಪದ ಜ್ವಾಲೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಬಯಸುತ್ತಾರೆ. ದೀಪದ ಜ್ವಾಲೆಯನ್ನು ನೋಡುವುದರಿಂದ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ದೀಪ ಬೆಳಗಿಸುವಾಗ ಸಕಾರಾತ್ಮಕತೆ ಹರಡುವುದರಿಂದ ಯಾವುದೇ ಹೊಸ ಕೆಲಸ ಕೈಗೊಳ್ಳುವ ಮುನ್ನ ದೀಪ ಬೆಳಗಿಸುವುದು ಉತ್ತಮ.
ದೀಪಾವಳಿ: ದೀಪಾವಳಿ, ಹೆಸರೇ ಹೇಳುವಂತೆ ಇದು ದೀಪಗಳ ಹಬ್ಬ. ಇದಕ್ಕೆ ರಾಮಾಯಣ ಕಾಲದ ಪೌರಾಣಿಕ ಇತಿಹಾಸವಿದೆ. ಶ್ರೀರಾಮಚಂದ್ರನು ಅಯೋಧ್ಯೆಗೆ ಮರಳಿ ಬಂದಾಗ ಅಲ್ಲಿನ ಜನರೆಲ್ಲರೂ ರಾಜನನ್ನು ಸ್ವಾಗತಿಸಲು ದೀಪಗಳನ್ನು ಬೆಳಗಿಸಿದರಂತೆ. ಅಂದಿನಿಂದ ಪ್ರತಿ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವ ಕ್ರಮ ಚಾಲ್ತಿಗೆ ಬಂತು ಎನ್ನುವ ಪ್ರತೀತಿ ಇದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ: ದೀಪ ಬೆಳಗಿದ ನಂತರ ಉಳಿದ ಬತ್ತಿಯನ್ನು ಏನು ಮಾಡಬೇಕು?
