ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭ; ಬುಧವಾರದಿಂದ ಆಫ್‌ಲೈನ್‌ ನೋಂದಣಿ ಶುರು

ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭ; ಬುಧವಾರದಿಂದ ಆಫ್‌ಲೈನ್‌ ನೋಂದಣಿ ಶುರು

Char Dham Yatra: ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭವಾಗುತ್ತಿದೆ. ಬುಧವಾರದಿಂದ ಆಫ್‌ಲೈನ್‌ ನೋಂದಣಿ ಶುರು ಆಗಲಿದೆ. ಯಾತ್ರೆಗೆ ಹೋಗಲು ಬಯಸುವ ಭಕ್ತರು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದವರು ಆಫ್‌ಲೈನ್‌ನಲ್ಲಿ ರಿಜಿಸ್ಟರ್‌ ಮಾಡಿಸಿ ಯಾತ್ರೆ ಪ್ರಾರಂಭಿಸಬಹುದು.

ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭ
ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭ (PC: Unsplash)

ಪ್ರತಿ ಹಿಂದೂಗಳಿಗೂ ತಮ್ಮ ಜೀವನದಲ್ಲಿ ಕೆಲವೊಂದು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬೇಕೆಂಬ ಆಸೆ ಇರುತ್ತದೆ. ಅದೇ ರೀತಿ ವರ್ಷಕ್ಕೆ ಒಮ್ಮೆ ಬರುವ ಚಾರ್‌ಧಾಮ್‌ ಯಾತ್ರೆಗೂ ಅನೇಕ ಹಿಂದೂಗಳು ಆಗಮಿಸುತ್ತಾರೆ. ಈ ಬಾರಿ ಮೇ 10 ಅಕ್ಷಯ ತೃತೀಯ ದಿನದಂದು ಚಾರ್‌ಧಾಮ್‌ ಯಾತ್ರೆ ಆರಂಭವಾಗುತ್ತಿದ್ದು, ಭಕ್ತರಿಗಾಗಿ ಆಫ್‌ಲೈನ್‌ ನೋಂದಣಿ ಆರಂಭವಾಗಿದೆ.

ಚಾರ್‌ಧಾಮ್‌, ಹೆಸರೇ ಸೂಚಿಸುವಂತೆ ಉತ್ತರಾಖಂಡದ ಗಂಗೋತ್ರಿ, ಯಮುನೋತ್ರಿ, ಕೇದರಾನಾಥ್‌ ಹಾಗೂ ಬದರೀನಾಥ್‌ ಸೇರಿದಂತೆ 4 ಪವಿತ್ರ ಸ್ಥಳಗಳ ದರ್ಶನ ಮಾಡಬಹುದು. ಚಾರ್‌ಧಾಮ್‌ ಯಾತ್ರೆ ಮಾಡುವವರು ತಿಳಿದೋ, ತಿಳಿಯದೆಯೋ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾರೆ. ಆಯಸ್ಸು ವೃದ್ಧಿಯಾಗುತ್ತದೆ, ಜನನ ಮತ್ತು ಮರಣ ಚಕ್ರದಿಂದ ಮುಕ್ತಿಯನ್ನು ಪಡೆಯುತ್ತಾರೆ, ಆಧ್ಯಾತ್ಮಿಕ ಜ್ಞಾನ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಪ್ರತಿ ವರ್ಷವೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಯಾತ್ರೆ ಕೈಗೊಳ್ಳುತ್ತಾರೆ. ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಲು ಸಾಧ್ಯವಾಗದವರು ಇದೀಗ ಆಫ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮೇ 10ರಂದು ಭಕ್ತರ ದರ್ಶನಕ್ಕಾಗಿ ತೆರೆಯುವ ದೇವಸ್ಥಾನ

ಕೇದಾರನಾಥ, ಗಂಗೋತ್ರಿ , ಯಮುನೋತ್ರಿ ದೇವಾಲಯ ಮೇ 10 ರಂದು ತೆರೆಯಲಿದೆ, ಆದರೆ ಕೇದಾರನಾಥ ದೇವಾಲಯವನ್ನು ಇದೇ ವರ್ಷ ನವೆಂಬರ್‌ 2ಕ್ಕೆ ಮುಚ್ಚಿದರೆ ಗಂಗೋತ್ರಿ ಹಾಗೂ ಯಮುನೋತ್ರಿಯನ್ನು ನವೆಂಬರ್‌ 3ಕ್ಕೆ ಮುಚ್ಚಲಾಗುವುದು. ಬದರಿನಾಥ ಯಾತ್ರೆಯು ಮೇ 12 ರಿಂದ ಆರಂಭವಾದರೆ, ನವೆಂಬರ್‌ 9 ರಂದು ಕೊನೆಗೊಳ್ಳುತ್ತದೆ. ದೇವಾಲಯದ ಬಾಗಿಲು ಭಕ್ತರಿಗೆ ಮಾತ್ರ ಮುಚ್ಚಲಾಗುವುದು, ಉಳಿದಂತೆ ಪ್ರತಿದಿನ ಇಲ್ಲಿ ಪೂಜೆ, ಪುನಸ್ಕಾರ ನೆರವೇರಲಿದೆ.

ಚಾರ್‌ಧಾಮ್ ಯಾತ್ರೆಗೆ ಆಫ್‌ಲೈನ್ ನೋಂದಣಿ ಬುಧವಾರದಿಂದ ಪ್ರಾರಂಭವಾಗಲಿದೆ, ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗದ ಭಕ್ತರು ಆಫ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ಹರಿದ್ವಾರ ಮತ್ತು ರಿಷಿಕೇಶದಲ್ಲಿ ಆಫ್‌ಲೈನ್ ನೋಂದಣಿಗಳನ್ನು ಮಾಡಲಾಗುತ್ತದೆ. ಆಫ್‌ಲೈನ್ ನೋಂದಣಿ ಕೇಂದ್ರಗಳಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಹರಿದ್ವಾರದಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ಭಕ್ತರಿಗಾಗಿ 3 ನೋಂದಣಿ ಕೌಂಟರ್‌ಗಳನ್ನು ಸಿದ್ಧಪಡಿಸಲಾಗಿದೆ. ನೋಂದಣಿ ಸ್ಥಳಗಳಲ್ಲಿ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ರಿಷಿಕೇಶದಲ್ಲಿ ಬೆಳಗ್ಗೆ 5 ರಿಂದ ಆಫ್‌ಲೈನ್ ನೋಂದಣಿ

ಚಾರ್‌ಧಾಮ್ ಯಾತ್ರೆಗೆ ಆಫ್‌ಲೈನ್ ನೋಂದಣಿ ಬುಧವಾರ ಬೆಳಗ್ಗೆ 5 ಗಂಟೆಯಿಂದ ಆರಂಭವಾಗಲಿದೆ. ಒಂದು ದಿನದಲ್ಲಿ ಒಂದು ಧಾಮಕ್ಕೆ ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ನೋಂದಾವಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ರಿಷಿಕೇಶದಲ್ಲಿರುವ ಚಾರ್‌ಧಾಮ್‌ ನೋಂದಣಿ ಕೇಂದ್ರದಲ್ಲಿ ನೋಂದಣಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಖಾಸಗಿ ಏಜೆನ್ಸಿಯು ಯಾತ್ರಾರ್ಥಿಗಳಿಗಾಗಿ 8 ಕೌಂಟರ್‌ಗಳನ್ನು ಸ್ಥಾಪಿಸಿದ್ದು, ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೆ ನೋಂದಣಿ ಸೌಲಭ್ಯವಿದೆ. ನೋಂದಣಿ ಸಮಯದಲ್ಲಿ ಪ್ರಯಾಣಿಕರಿಗೆ QR ಕೋಡ್ ಸ್ಲಿಪ್ ಒದಗಿಸಲಾಗುವುದು, QR ಕೋಡ್ ಸ್ಕ್ಯಾನ್ ಮಾಡುವ ಮೂಲಕ, ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.

ಚಾರ್‌ಧಾಮ್‌ಗೆ ಹೋಗುವ ಭಕ್ತರು ಯಾತ್ರೆಗೆ ಮುನ್ನವೇ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಧಾಮಗಳಲ್ಲಿನ ಅವ್ಯವಸ್ಥೆ ತಪ್ಪಿಸಲು ಮತ್ತು ಭಕ್ತರಿಗೆ ಯಾತ್ರೆಯ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಸರ್ಕಾರವು ಹಲವು ವರ್ಷಗಳಿಂದ ನೋಂದಣಿ ವ್ಯವಸ್ಥೆ ಮಾಡುತ್ತಾ ಬಂದಿದೆ. ನೋಂದಣಿ ನಂತರ, ಪ್ರಯಾಣಕ್ಕೆ ಹೋಗುವ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಗಂಗೋತ್ರಿಯ ಹೀನಾ, ಯಮುನೋತ್ರಿಯ ಬಾರ್ಕೋಟ್, ಕೇದಾರನಾಥದ ಸೋನ್‌ ಪ್ರಯಾಗ್‌ ಮತ್ತು ಬದರಿನಾಥ ರಸ್ತೆಯಲ್ಲಿರುವ ಪಾಂಡುಕೇಶ್ವರದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.