ವಿಷ್ಣುವಿಗೆ ನಾರದ, ಶ್ರೀ ಕೃಷ್ಣನಿಗೆ ಗಾಂಧಾರಿಯ ಶಾಪ; ಪುರಾಣಗಳಲ್ಲಿ ಉಲ್ಲೇಖವಾಗಿರುವ ಶಾಪದ ಕಥೆಗಳಿವು
Hindu Religion: ಪುರಾಣಗಳಲ್ಲಿ ದೇವತೆಗಳು, ಋಷಿಗಳ ಶಾಪದ ಬಗ್ಗೆ ಅದೆಷ್ಟೋ ಕಥೆಗಳಿವೆ. ಒಬ್ಬರ ಮೇಲೆ ಕೋಪಗೊಂಡು ನೀಡುವ ಶಾಪದಿಂದ ಶಾಪಕ್ಕೆ ಗುರಿಯಾದವರು ಬಹಳ ಕಷ್ಟ ಪಡಬೇಕಾಯ್ತು. ವಿಷ್ಣುವಿಗೆ ನಾರದ, ಶ್ರೀ ಕೃಷ್ಣನಿಗೆ ಗಾಂಧಾರಿ ಸೇರಿದಂತೆ ಯಾರು ಯಾರಿಗೆ ಶಾಪ ನೀಡಿದರು ನೋಡೋಣ.
ಮತ್ತೊಬ್ಬರಿಗೆ ಮೋಸ ಮಾಡಿ ಅವರು ಶಪಿಸಿದರೆ ಖಂಡಿತ ಆ ಶಾಪ ತಪ್ಪು ಮಾಡಿದವರನ್ನು ಕಾಡುತ್ತದೆ ಎಂದು ಎಲ್ಲರೂ ಹೇಳುವುದನ್ನು ನಾವು ಕೇಳಿದ್ದೇವೆ. ಈ ಕಲಿಯುಗದಲ್ಲಿ ಅದೆಲ್ಲಾ ನಿಜವಾಗುತ್ತದೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ ಹಿಂದೂ ಪುರಾಣಗಳ ಪ್ರಕಾರ ದೇವರುಗಳು ಸಹ ಶಾಪವನ್ನು ಎದುರಿಸಬೇಕಾಗಿತ್ತು.
ಶಾಪದ ಪ್ರಭಾವದಿಂದ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಹಿಂದೆ, ಋಷಿಮುನಿಗಳು ಕೋಪಗೊಂಡಾಗ ದೇವತೆಗಳನ್ನು, ರಾಜರು, ಇತರರನ್ನು ಶಪಿಸುತ್ತಿದ್ದರು. ಶಾಪಕ್ಕೆ ಒಳಗಾದವರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಯಾವ ಮುನಿಗಳು ಯಾರನ್ನು ಶಪಿಸಿದರು. ಅವರು ಹೇಗೆ ಪರಿಣಾಮಗಳನ್ನು ಎದುರಿಸಿದರು ನೋಡೋಣ.
ಶಕುಂತಲೆಯನ್ನು ಶಪಿಸಿದ್ದ ದೂರ್ವಾಸ ಮುನಿ
ಪುರಾಣಗಳ ಪ್ರಕಾರ ದೂರ್ವಾಸ ಮಹರ್ಷಿಗೆ ಮುಕ್ಕೋಪಿ ಎಂಬ ಬಿರುದು ಇತ್ತು. ಆತನ ಕೋಪಕ್ಕೆ ದೇವತೆಗಳೂ ಹೆದರಿದ್ದರೆಂದು ಹೇಳಲಾಗುತ್ತದೆ. ಅಂತಹ ಋಷಿಯ ಕೋಪಕ್ಕೆ ಶಕುಂತಲೆ ಕೂಡಾ ಬಲಿಯಾದ್ದಳು. ಒಂದು ದಿನ ಋಷಿ ದೂರ್ವಾಸರು ಶಕುಂತಲೆಯ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಕೆ ರಾಜ ದುಷ್ಯಂತನ ಬಗ್ಗೆ ಯೋಚಿಸುತ್ತಾ ದೂರ್ವಾಸ ಋಷಿಯನ್ನು ನಿರ್ಲಕ್ಷಿಸಿದಳು. ಇದರಿಂದ ಕೋಪಗೊಂಡ ದೂರ್ವಾಸ ಋಷಿಯು ನೀನು ಯೋಚಿಸುತ್ತಿರುವ ವ್ಯಕ್ತಿ ಅವಳನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಶಾಕುಂತಲೆಗೆ ಶಪಿಸಿದರು. ಈ ಶಾಪ ಶಕುಂತಲೆಯ ಬದುಕನ್ನೇ ಬದಲಿಸಿತು. ಶಾಪದ ಪ್ರಭಾವದಿಂದಾಗಿ ರಾಜ ದುಷ್ಯಂತನಿಗೆ ಶಾಕುಂತಲೆಯನ್ನು ಗುರುತಿಸಲಾಗಲಿಲ್ಲ.
ವಸುವಿಗೆ ಶಾಪ ನೀಡಿದ್ದ ವಸಿಷ್ಠ ಮಹರ್ಷಿಗಳು
ದೇವತೆಗಳಾದ ಅಷ್ಟ ವಸುಗಳಲ್ಲಿ ಒಬ್ಬಾತ, ವಸಿಷ್ಠ ಮಹರ್ಷಿಯ ಆಶ್ರಮದಲ್ಲಿದ್ದ ಹಸುವನ್ನು ಕದಿಯುತ್ತಾನೆ. ಇದರಿಂದ ಮಹರ್ಷಿಗೆ ಕೋಪ ಬರುತ್ತದೆ. ಮರ್ತ್ಯರಾಗಿ ಹುಟ್ಟುವಂತೆ ಶಾಪ ಕೊಟ್ಟು ಶಾಪ ವಿಮೋಚನೆಯ ಬಗ್ಗೆಯೂ ವಿವರಿಸುತ್ತಾರೆ. ಗಂಗೆ ರಾಜು ಶಂತನು ಪುತ್ರನಾಗಿ ಜನಿಸಿ ಮತ್ತೆ ಸ್ವರ್ಗಲೋಕಕ್ಕೆ ಬರುವಂತೆ ಶಾಪ ಪರಿಹಾರವನ್ನು ಹೇಳುತ್ತಾರೆ.
ಶ್ರೀಕೃಷ್ಣನಿಗೆ ಗಾಂಧಾರಿಯ ಶಾಪ
ಕುರುಕ್ಷೇತ್ರ ಯುದ್ಧದಲ್ಲಿ ತನ್ನ 100 ಮಂದಿ ಪುತ್ರರ ಸಾವಿಗೆ ಶ್ರೀಕೃಷ್ಣನೇ ಕಾರಣ ಎಂದು ಕೌರವರ ತಾಯಿ ಗಾಂಧಾರಿ ಕೋಪಗೊಳ್ಳುತ್ತಾಳೆ. ಯುದ್ಧಭೂಮಿಯಲ್ಲಿ ತನ್ನ ಪುತ್ರರ ಮೃತ ದೇಹಗಳನ್ನು ನೋಡಿದ ಅವಳು ನೋವಿನಿಂದ ಶ್ರೀಕೃಷ್ಣನನ್ನು ಶಪಿಸಿದಳು. ಅವನ ಕುಲವು ಪರಸ್ಪರ ಹೊಡೆದಾಡಿಕೊಂಡು ಸಾಯುವಂತೆ, ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವಂತೆ ಗಾಂಧಾರಿ ಶಾಪ ನೀಡಿದಳು. ಶ್ರೀಕೃಷ್ಣ ಗಾಂಧಾರಿಯ ಶಾಪವನ್ನು ಸ್ವೀಕರಿಸುತ್ತಾನೆ. ಅದರಂತೆ ಕೃಷ್ಣನ ವಂಶದ ಯಾದವರು ಪರಸ್ಪರ ಹೊಡೆದಾಡಿಕೊಂಡು ಸತ್ತರು. ಅಲ್ಲದೆ ಬೇಟೆಗಾರನ ಬಾಣಕ್ಕೆ ತಗುಲಿ ಶ್ರೀಕೃಷ್ಣ ಸಾಯುತ್ತಾನೆ.
ಅಶ್ವತ್ಥಾಮನಿಗೆ ಕೃಷ್ಣನ ಶಾಪ
ದ್ರೋಣಾಚಾರ್ಯರ ಮಗ ಅಶ್ವತ್ಥಾಮನು ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ. ಇದರಿಂದ ಕೋಪಗೊಂಡ ಕೃಷ್ಣ, 3000 ವರ್ಷಗಳ ಕಾಲ ಭೂಮಿಯ ಮೇಲೆ ನರಳುತ್ತಾ ಬದುಕುವಂತೆ ಅಶ್ವತ್ಥಾಮನನ್ನು ಶಪಿಸುತ್ತಾನೆ. ಇದೇ ಕಾರಣದಿಂದಲೇ ಅಶ್ವತ್ಥಾಮ ಭೂಮಿಯ ಮೇಲೆ ಇನ್ನೂ ಜೀವಂತವಾಗಿದ್ದಾನೆ ಎಂದು ಹೇಳಲಾಗುತ್ತದೆ.
ವಿಷ್ಣುವಿಗೆ ಭೃಗು ಆಚಾರ್ಯರ ಶಾಪ
ಮತ್ಸ್ಯ ಪುರಾಣದ ಪ್ರಕಾರ ದೇವತೆಗಳು ಮತ್ತು ಅಸುರರ ನಡುವೆ ಕ್ಷೀರ ಸಾಗರದ ಮಂಥನ ನಡೆಯಿತು. ಗುರು ಶುಕ್ರಾಚಾರ್ಯರು ಅಸುರರಿಗೆ ಸಹಾಯ ಮಾಡಲು ಶಿವನಿಂದ ಪ್ರಬಲವಾದ ಮಂತ್ರವನ್ನು ಕೋರಿದರು. ಅಸುರರು ರಕ್ಷಣೆಗಾಗಿ ಭೃಗು ಋಷಿಯ ಆಶ್ರಮದಲ್ಲಿದ್ದ ಸಮಯದಲ್ಲಿ ದೇವತೆಗಳು ಅವರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ಭೃಗು ಮಹರ್ಷಿಯ ಆಶ್ರಮದಲ್ಲಿದ್ದ ಅಸುರರು ತಮಗೆ ಸಹಾಯ ಮಾಡಲು ಅವರ ಪತ್ನಿಯನ್ನು ಆಶ್ರಯಿಸುವಂತೆ ಕೇಳಿಕೊಂಡರು. ಭಯಭೀತರಾದ ದೇವತೆಗಳು ಭಗವಾನ್ ವಿಷ್ಣುವಿನ ಸಹಾಯವನ್ನು ಕೇಳಿದರು. ಭೃಗು ಆಚಾರ್ಯರ ಪತ್ನಿಯ ಮೇಲೆ ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಬಳಸಿದನು. ಪರಿಣಾಮವಾಗಿ ಆಕೆಯ ತಲೆ ತುಂಡಾಯಿತು. ಅದನ್ನು ನೋಡಿದ ಭೃಗು ಋಷಿಯು ವಿಷ್ಣುವಿಗೆ ಭೂಮಿಯ ಮೇಲೆ ಅನೇಕ ಜನ್ಮಗಳನ್ನು ಪಡೆದು ಮಾನವನ ಕಷ್ಟಗಳನ್ನು ಸಹಿಸುವಂತೆ ಶಾಪ ನೀಡಿದರು.
ವಿಷ್ಣುವಿಗೆ ನಾರದನ ಶಾಪ
ತನ್ನ ಕೀಟಲೆಯ ಸ್ವಭಾವಕ್ಕೆ ಹೆಸರಾಗಿದ್ದ ನಾರದ ಋಷಿಯು ವಿಷ್ಣುವಿನ ಕೃತ್ಯದಿಂದ ಅವಮಾನಿತನಾದನು. ಒಂದು ದಿನ ನಾರದನು ರಾಜುಕುಮಾರಿಯೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದರು. ಅವಳನ್ನು ಒಲಿಸಿಕೊಳ್ಳಲು ವಿಷ್ಣುವಿನ ಸಹಾಯ ಕೇಳಿದರು. ನಾರದನಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡ ವಿಷ್ಣು ನಾರದನಿಗೆ ವಿಕಾರ ರೂಪ ನೀಡುತ್ತಾನೆ. ಇದರಿಂದ ಕೋಪಗೊಂಡ ನಾರದರು ಕೋಪದಿಂದ ವಿಷ್ಣುವಿಗೆ ಶಾಪ ನೀಡಿದನು. ರಾಮನ ಅವತಾರ ಎತ್ತಿ, ಸೀತಾದೇವಿಯಿಂದ ಬೇರ್ಪಟ್ಟು ನೋವು ಅನುಭವಿಸುವಂತೆ ಶಪಿಸಿದರು.
ಹೀಗೆ ಪುರಾಣಗಳಲ್ಲಿ ಎಷ್ಟೋ ಶಾಪಗಳ ಕಥೆಗಳು ಉಲ್ಲೇಖವಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.