ಇಂದು ಮಾಸ ಶಿವರಾತ್ರಿ, ಕೊನೆಯ ಆಷಾಢ ಶುಕ್ರವಾರ: ಪರ ಶಿವನೊಂದಿಗೆ ಲಕ್ಷ್ಮೀದೇವಿಯನ್ನೂ ಒಲಿಸಿಕೊಳ್ಳಲು ಸುದಿನ -ದಿನ ವಿಶೇಷ
ಇಂದು ಶಿವನ ಭಕ್ತರು ಮಾಸ ಶಿವರಾತ್ರಿ ಆಚರಿಸುತ್ತಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿದಿನವೂ ಒಂದಲ್ಲಾ ಒಂದು ವಿಶೇಷ ಇದ್ದೇ ಇರುತ್ತದೆ. ಮಾಸ ಶಿವರಾತ್ರಿ ಹೊರತುಪಡಿಸಿ ಇಂದು ಯಾವ ವ್ರತ, ಹಬ್ಬಗಳನ್ನು ಆಚರಿಸಲಾಗುತ್ತಿದೆ ನೋಡೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ದಿನ ಒಂದಲ್ಲಾ ಒಂದು ವಿಶೇಷ ಇದ್ದೇ ಇರುತ್ತದೆ. ಆ ದಿನ ಪ್ರಮುಖ ಹಬ್ಬ ಹರಿದಿನಗಳು ಇದ್ದರಂತೂ ಅದರ ಆಚರಣೆಗೆ ಎಲ್ಲರೂ ಕಾಯುತ್ತಿರುತ್ತಾರೆ. ಇಂದು (ಆಗಸ್ಟ್ 2, ಶುಕ್ರವಾರ) ಏನು ವಿಶೇಷವಿದೆ? ಯಾವ ವ್ರತ, ಹಬ್ಬಗಳನ್ನು ಆಚರಣೆ ಮಾಡುತ್ತಿದ್ದೇವೆ ನೋಡೋಣ.
ಕೊನೆಯ ಆಷಾಢ ಶುಕ್ರವಾರ
ಜುಲೈ 6 ರಿಂದ ಆಷಾಢ ಆರಂಭವಾಗಿತ್ತು. ಆಷಾಢ ಮಾಸದಲ್ಲಿ ಮದುವೆ, ಗೃಹ ಪ್ರವೇಶಗಳಂಥ ಶುಭ ಕಾರ್ಯಗಳನ್ನು ಮಾಡದಿದ್ದರೂ ದೇವರ ಪೂಜೆಗೆ ಹೇಳಿ ಮಾಡಿಸಿದಂಥ ಮಾಸ. ಈ ಮಾಸದಲ್ಲಿ ವಿಶೇಷವಾಗಿ ಆಷಾಢ ಶುಕ್ರವಾರ ಆಚರಣೆ ಮಾಡಲಾಗುತ್ತದೆ. ಈಗಾಗಲೇ 3 ಆಷಾಢ ಶುಕ್ರವಾರಗಳು ಕಳೆದಿವೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಜುಲೈ 27 ರಂದು ಚಾಮುಂಡೇಶ್ವರಿ ವರ್ಧಂತಿ ಕೂಡಾ ಮಾಡಲಾಗಿದೆ. ಇಂದು ಕೊನೆಯ ಆಷಾಢ ಶುಕ್ರವಾರ. ಈ ದಿನ ಕೂಡಾ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರಗಳನ್ನು ಏರ್ಪಡಿಸಲಾಗಿದೆ. ಕೊನೆಯ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕಾಗಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಮಾಸ ಶಿವರಾತ್ರಿ
ಇಂದು ಶಿವನ ಭಕ್ತರು ಮಾಸ ಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ. ಹೆಸರೇ ಸೂಚಿಸುವಂತೆ ಇದು ಪ್ರತಿ ತಿಂಗಳು ಆಚರಿಸುವ ಶಿವರಾತ್ರಿ ಆದ್ದರಿಂದ ಇದನ್ನು ಮಾಸ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾಸ ಶಿವರಾತ್ರಿಯು ಬಹಳ ವಿಶೇಷವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷ ಚತುರ್ಥಿಯಂದು ಮಾಸ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಬರುತ್ತದೆ. ಈ ದಿನ ಶಿವ ಮತ್ತು ಪಾರ್ವತಿಯನ್ನು ಪೂಜಿಸಲಾಗುತ್ತದೆ. ಕೆಲವು ಭಕ್ತರು ಉಪವಾಸವಿದ್ದು ಮಾಸ ಶಿವರಾತ್ರಿಯನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವವರು ಕಾಮ, ಕ್ರೋಧ, ಲೋಭ, ಮೋಹ ಇತ್ಯಾದಿ ಬಂಧಗಳಿಂದ ಮುಕ್ತನಾಗುತ್ತಾರೆ ಎಂಬ ನಂಬಿಕೆ ಇದೆ.
ಈ ದಿನ ಶಿವಾಲಯದಲ್ಲಿ ಅಥವಾ ಮನೆಯ ಪೂರ್ವ ದಿಕ್ಕಿನಲ್ಲಿ ಕುಳಿತು ಶಿವನ ಮಂತ್ರಗಳನ್ನು ಪಠಿಸುವುದರಿಂದ ವಿಶೇಷ ಫಲಿತಾಂಶ ದೊರೆಯುತ್ತದೆ ಎಂದು ನಂಬಲಾಗಿದೆ. ಮಾಸಿಕ ಶಿವರಾತ್ರಿ ಪೂಜೆಯ ನಂತರ ಅನ್ನದಾನ, ಬಡವರಿಗೆ ಸಹಾಯ ಮಾಡುವುದರಿಂದ ಶಿವನು ಸಂತುಷ್ಟನಾಗುತ್ತಾನೆ. ಅವರು ಮಾಡಿದ ಕರ್ಮಗಳೆಲ್ಲಾ ನಶಿಸುತ್ತವೆ, ಜೀವನದಲ್ಲಿ ಎಲ್ಲಾ ಸುಖ ಶಾಂತಿ ದೊರೆಯುತ್ತದೆ. ಈ ವ್ರತದ ಮಹಿಮೆಯಿಂದ ಭಕ್ತರು ದೀರ್ಘಾಯುಷ್ಯ, ಸಂಪತ್ತು, ಆರೋಗ್ಯ ಪಡೆದು ಸುಖ ಸಂತೋಷದಿಂದ ಬಾಳುತ್ತಾರೆ.
ಶಿವನನ್ನು ಹೇಗೆ ಪೂಜಿಸಬೇಕು?
ಮಾಸ ಶಿವರಾತ್ರಿಯಂದು ಕೆಲವೆಡೆ ಶಿವನೊಂದಿಗೆ ಪಾರ್ವತಿ, ಗಣೇಶ ಮತ್ತು ಸುಬ್ರಹ್ಮಣ್ಯರನ್ನು ಕೂಡಾ ಪೂಜಿಸಲಾಗುತ್ತದೆ. ಈ ವಿಶೇಷ ದಿನದಂದು ಶಿವನಿಗೆ ಹಾಲು, ಮೊಸರು, ಜೇನು ತುಪ್ಪ, ನೀರು, ಸಕ್ಕರೆ, ಗಂಗಾಜಲ, ಕಬ್ಬಿನ ರಸ ಇತ್ಯಾದಿಗಳಿಂದ ಅಭಿಷೇಕ ಮಾಡಿ. ಅಭಿಷೇಕದ ನಂತರ ಬಿಲ್ವಪತ್ರೆ ಮತ್ತು ದರ್ಭೆಯನ್ನು ಅರ್ಪಿಸಬೇಕು. ತೆಂಗಿನಕಾಯಿ ಇತ್ಯಾದಿಗಳನ್ನು ಶಿವನಿಗೆ ನೈವೇದ್ಯವಾಗಿ ಇಡಬೇಕು. ಮಾಸ ಶಿವರಾತ್ರಿಯಂದು ದಿನವಿಡೀ ಉಪವಾಸ ಮಾಡುವುದು ಮತ್ತು ಮಂತ್ರಗಳನ್ನು ಪಠಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.