Maha Shivaratri: ಶಿವಲಿಂಗದ ಪೂಜೆ ಮಾಡಲು ಪಾಲಿಸಬೇಕಾದ ವಿಧಿ-ವಿಧಾನಗಳು ಇಲ್ಲಿವೆ
Shivalinga pooja: ಮಹಾ ಶಿವರಾತ್ರಿಯಂದು ಮನೆಯಲ್ಲಿಯೇ ಶಿವಲಿಂಗದ ಪೂಜೆ ಮಾಡಲು ಇರುವ ವಿಧಿ-ವಿಧಾನಗಳನ್ನು ತಿಳಿಯಿರಿ. (ಲೇಖನ: ಎಚ್. ಸತೀಶ್, ಜ್ಯೋತಿಷಿ)
ಮಹಾ ಶಿವರಾತ್ರಿ ಬಂತು. ಮನೆಯಲ್ಲಿ ಮಾಡುವ ಶಿವಲಿಂಗದ ಪೂಜೆಯ ವಿಚಾರದ ಬಗ್ಗೆ ಹೆಚ್ಚಿನ ವಿಶೇಷವಾದ ವಿಧಿ ವಿಧಾನಗಳು ಇರುವುದಿಲ್ಲ. ಆದರೆ ಕೆಲವೊಂದು ವಿಚಾರಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. ದಿಕ್ಕನ್ನು ಆಧಾರವಾಗಿರಿಸಿಕೊಂಡು ದೇವರನ್ನು ಅಭಿಷೇಕಕ್ಕೆ ಇಡಬೇಕು. ಅಭಿಷೇಕವಾಗಲಿ ಅಥವಾ ಪೂಜೆಯಾಗಲಿ ಎರಡು ಶಿವಲಿಂಗಗಳನ್ನು ಇಟ್ಟುಕೊಳ್ಳಬಾರದು. ಸಾಲಿಗ್ರಾಮವನ್ನು ಸಮ ಸಂಖ್ಯೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಕು. ಅಂದರೆ ಎರಡು, ನಾಲ್ಕು ಅಥವಾ ಇನ್ನೂ ಹೆಚ್ಚು ಸಾಲಿಗ್ರಾಮವನ್ನು ಬಳಸಬಹುದು. ಆದರೆ ಎಲ್ಲಾ ಸಾಲಿಗ್ರಾಮಗಳು ಒಂದೇ ದೇವರಿಗೆ ಸಂಬಂಧಪಟ್ಟಿಬೇಕು ಎಂಬ ನಿಯಮವಿಲ್ಲ.
ಅಭಿಷೇಕ ಮಾಡುವ ವೇಳೆ ದೇವರ ವಿಗ್ರಹ ಮತ್ತು ಸಾಲಿಗ್ರಾಮಗಳು ಪೂಜೆ ಮಾಡುವವನಿಗೆ ಅಭಿಮುಖವಾಗಿರಬೇಕು. ಪಂಚಾಯತನ ಕ್ರಮದಲ್ಲಿ ಪೂಜೆ ಮಾಡುವವರು ಎರಡು ಸೂರ್ಯನ ವಿಗ್ರಹ ಅಥವಾ ಸೂರ್ಯನ ಚಕ್ರವನ್ನು ಇಡಬಾರದು. ಗಣೇಶ ಮತ್ತು ದುರ್ಗಾಮಾತೆಯ ವಿಗ್ರಹ ಅಥವಾ ಚಕ್ರಗಳು ಮೂರು ಇರಬಾರದು. ಪೂಜೆಗೆ ಬಳಸುವ ಯಾವುದೇ ವಿಗ್ರಹವುನಮ್ಮ ಮುಷ್ಟಿಯ ಒಳಗೆ ಮುಚ್ಚಿಟ್ಟುಕೊಳ್ಳುವಂತೆ ಇರಬೇಕು. ಭಿನ್ನವಾಗಿರುವ ವಿಗ್ರಹಗಳನ್ನಾಗಲಿ ಅಥವಾ ರೇಖೆಗಳಿರುವ ವಿಗ್ರಹವನ್ನಾಗಲಿ ಪೂಜೆಗೆ ಅಥವಾ ಅಭಿಷೇಕಕ್ಕೆ ಬಳಸಬಾರದು.
ಬರಿಯ ನೆಲದ ಮೇಲೆ ಕುಳಿತು ಪೂಜೆಯನ್ನು ಮಾಡಬಾರದು. ಹಾಗೆಯೇ ಬಟ್ಟೆಯ ಮೇಲೆ ಕುಳಿತು ಪೂಜೆಯನ್ನು ಮಾಡಬಾರದು. ಒದ್ದೆಇರುವ ಪಂಚೆಯನ್ನು ಧರಿಸಿ ಪೂಜೆ ಮಾಡುವುದು ಅಥವಾ ಊಟ ಮಾಡುವುದು ತಪ್ಪು. ಮೇಲಿನ ಹೊದಿಕೆ ಇಲ್ಲದೆ ಊಟ ಅಥವ ಪೂಜೆ ಮಾಡುವುದು ತಪ್ಪು. ಯಾವುದೇ ಕಾರಣಕ್ಕೂ ನಿಂತು ಪೂಜೆಯನ್ನು ಮಾಡಬಾರದು. ಘಂಟಾನಾದದ ಬಗ್ಗೆ ಎಚ್ಚರಿಕೆ ಇರಬೇಕು. ಸಪಶ್ರುತಿ ಉಂಟುಮಾಡುವ ಗಂಟೆಯನ್ನು ಬಳಸಬಾರದು. ಘಂಟಾನಾದವು ಕರ್ಣಾನಂದವನ್ನು ಉಂಟುಮಾಡುವಂತಿರಬೇಕು. ಗಂಟೆಯ ಹಿಡಿಯನ್ನು ನಮ್ಮ ನಾಲ್ಕು ಬೆರಳುಗಳು ಸುತ್ತುವರೆದಿರಬೇಕು ಮತ್ತು ಹೆಬ್ಬೆಟ್ಟು ಆಕಾಶವನ್ನು ನೋಡುವಂತಿರಬೇಕು. 32 ಬಾರಿ ಘಂಟಾನಾದವನ್ನು ಮಾಡಬೇಕು.
ಪೂಜೆಗೆ ಬೇಕಾಗುವ ನೀರನ್ನು ಅಂದೇ ಶೇಖರಿಸಬೇಕು. ಆದರೆ ನದಿಯಿಂದ ತರುವ ನೀರಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಪೂಜೆಯನ್ನು ಆರಂಭಿಸುವ ಮುನ್ನ ಮನೆಯ ಹೊಸಿಲನ್ನು ಹೊರಗಡೆ ನಿಂತು ಸಾರಿಸಬೇಕು. ಹೊಸಿಲು ಮತ್ತು ಮುಂಬಾಗಿನ ಮೇಲ್ಭಾಗಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು. ಮನೆಯ ಬಾಗಿಲಿಗೆ ಗೆಜ್ಜೆ, ವಸ್ತ್ರವನ್ನು ಹಾಕಬಹುದು. ಆದರೆ ಯಾವುದೇ ಕಾರಣಕ್ಕೂ ಮನೆ ಬಾಗಿಲ ಚಿಲಕಕ್ಕೆ ಅಥವಾ ಮನೆ ಬಾಗಿಲ ಎದುರು ಹೂವನ್ನು ನೇತು ಹಾಕಬಾರದು. ಪೂಜೆ ಮಾಡುವ ವೇಳೆ ಮನಸ್ಸಿನಲ್ಲಿಯೂ ಕೆಟ್ಟ ಭಾವನೆ ಬರಬಾರದು. ಹಾಗೆಯೇ ಕೆಟ್ಟ ಮಾತುಗಳನ್ನು ಆಡಬಾರದು. ಪೂಜೆ ಮಾಡುವ ವೇಳೆ ಕುಟುಂಬದಲ್ಲಿರುವ ದಂಪತಿಗಳು ಜಗಳವಾಡಿದರೆ ಪೂಜೆಯಲ್ಲಿನ ಫಲಗಳು ದೊರೆಯುವುದೇ ಇಲ್ಲ. ದೇವರಿಗೆ ಪಾಧ್ಯ ಮತ್ತು ಅರ್ಘ್ಯವನ್ನು ನೀಡುವಾಗ ಬಲಗೈ ಮೇಲ್ಮುಖವಾಗಿರಿಸಿಕೊಂಡು ನೀಡಬೇಕು. ದೇವರಿಗೆ ನೀಡುವ ಅರ್ಘ್ಯದ ನೀರು ನಮ್ಮ ಹೆಬ್ಬೆಟ್ಟನ್ನು ಸೋಕಬಾರದು.
ಅರಿಶಿನ, ಕುಂಕುಮ ಮತ್ತು ಗಂಧವನ್ನು ನಮ್ಮ ಅನಾಮಿಕ ಬೆರಳನ್ನು (ಉಂಗುರ ಬೆರಳು) ಉಪಯೋಗಿಸಿ ಹಚ್ಚಬೇಕು. ಅಕ್ಷತೆಯ ಕಾಳುಗಳು ಪೂರ್ಣವಾಗಿರಬೇಕು. ಅರ್ಧ ಮುರಿದ ಕಾಳುಗಳನ್ನು ಬಳಸಬಾರದು. ಸುಗಂಧವಿರುವ ಹೂಗಳನ್ನು ಮಾತ್ರ ಪೂಜಿಸಬೇಕು. ಕೊಳೆತ ದಳಗಳನ್ನು ಬೇರೆ ಮಾಡಿದ ಹೂಗಳನ್ನು ಪೂಜಿಸಬಾರದು.ತಾವರೆ ಹೂವು ಐದು ದಿನ, ಬಿಲ್ವಪತ್ರೆ ಹತ್ತು ದಿನ, ಗರಿಕೆ ಐದು ದಿನ ಮತ್ತು ತುಳಸಿ ಹತ್ತು ದಿನಗಳ ವರೆಗೂ ಶ್ರೇಷ್ಠವಾಗಿರುತ್ತದೆ. ತುಳಸಿ, ಗರಿಕೆ ಮತ್ತು ಬಿಲ್ವಪತ್ರೆಗಳನ್ನು ಭಾನುವಾರ, ಮಂಗಳವಾರ ಮತ್ತು ಶುಕ್ರವಾರಗಳಂದು ಶೇಖರಿಸಬಾರದು.
ಧ್ಯಾನ, ಶ್ಲೋಕಗಳು, ಮಂಗಳಾರತಿಯ ಮಂತ್ರಗಳು ಮತ್ತು ಮಂತ್ರ ಪುಷ್ಪಗಳಿಗೆ ಯಾವುದೇ ರೀತಿಯ ದೋಷಗಳು ಅಥವಾ ಭೇದಭಾವಗಳು ಉಂಟಾಗುವುದಿಲ್ಲ. ಆದರೆ ಸೂರ್ಯ ಮತ್ತು ಸರ್ಪ ದೇವತೆಗೆ ಸಂಬಂಧಿಸಿದ ಮಂತ್ರಗಳನ್ನು ಮಾತ್ರ ಸೂರ್ಯ ಮುಳುಗಿದ ನಂತರ ಹೇಳಿಕೊಳ್ಳಬಾರದು. ಆರತಿ ಮಾಡುವ ವೇಳೆ ದೇವರ ತಲೆಯಿಂದ ಹಿಡಿದು ಪಾದದವರೆಗೂ ಆರತಿಯನ್ನು ಬೆಳಗಬೇಕು. ಕೆಲವು ಶಿವಲಿಂಗಗಳಲ್ಲಿ ನೀರು ಅಡಕವಾಗಿರುತ್ತದೆ. ಆದ್ದರಿಂದ ಸೂಕ್ಷ್ಮವಾಗಿ ಪೂಜಿಸಬೇಕು. ಪಚ್ಚೆಲಿಂಗವನ್ನು ಪೂಜಿಸುವಾಗ ಲಿಂಗದ ಮೇಲೆ ಹೂಗಳು ನೀರಿನೊಂದಿಗೆ ಇರಲು ಬಿಡಬಾರದು. ಪೂಜಿಸುವ ವೇಳೆ ನೀರು ಉಳಿಯದಂತೆ ಶುಭ್ರವಾದ ಬಟ್ಟೆಯಿಂದ ಒರೆಸಿಬಿಡಬೇಕು. ಅಭಿಷೇಕದ ತೀರ್ಥವು ದೇವರ ಬಲ ಭಾಗಕ್ಕೆ ಬರುವಂತೆ ಲಿಂಗವನ್ನು ತಿರುಗಿಸಬೇಕು. ಗೋಪೂಜೆ ಮಾಡದೆ ಶಿವನ ಲಿಂಗಕ್ಕೆ ಪೂಜೆಯನ್ನು ಮಾಡಲೇಬಾರದು.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
ವಿಭಾಗ