ಇಷ್ಟಸಿದ್ಧಿಗಾಗಿ ಯಂತ್ರ ಪೂಜೆ: ನೀವು ತಿಳಿಯಬೇಕಾದ ಅಪರೂಪದ ಮಾಹಿತಿ ಹೊತ್ತು ತರುವ ಹೊಸ ಸರಣಿ ಇಂದಿನಿಂದ ಆರಂಭ, ಸೂರ್ಯಯಂತ್ರದ ಮಹತ್ವ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಷ್ಟಸಿದ್ಧಿಗಾಗಿ ಯಂತ್ರ ಪೂಜೆ: ನೀವು ತಿಳಿಯಬೇಕಾದ ಅಪರೂಪದ ಮಾಹಿತಿ ಹೊತ್ತು ತರುವ ಹೊಸ ಸರಣಿ ಇಂದಿನಿಂದ ಆರಂಭ, ಸೂರ್ಯಯಂತ್ರದ ಮಹತ್ವ

ಇಷ್ಟಸಿದ್ಧಿಗಾಗಿ ಯಂತ್ರ ಪೂಜೆ: ನೀವು ತಿಳಿಯಬೇಕಾದ ಅಪರೂಪದ ಮಾಹಿತಿ ಹೊತ್ತು ತರುವ ಹೊಸ ಸರಣಿ ಇಂದಿನಿಂದ ಆರಂಭ, ಸೂರ್ಯಯಂತ್ರದ ಮಹತ್ವ

ಸೂರ್ಯ ಯಂತ್ರದ ಉಪಾಸನೆಯಿಂದ ಕುಟುಂಬದಲ್ಲಿನ ಮನಸ್ತಾಪವು ದೂರವಾಗುತ್ತದೆ. ಕುಟುಂಬದ ಹಿರಿಯರಿಗೆ ಸಂಬಂಧಿಸಿದ ಆಸ್ತಿಯ ವಿವಾದಕ್ಕೆ ಪರಿಹಾರ ದೊರೆಯುತ್ತದೆ. ಉತ್ತಮ ಆರೋಗ್ಯವನ್ನು ಪಡೆಯಬಹುದು. ಅನಗತ್ಯ ವಿವಾದಗಳಿಂದಲೂ ಮುಕ್ತಿ ಸಿಗುತ್ತದೆ. (ಬರಹ: ಸತೀಶ್, ಜ್ಯೋತಿಷಿ)

ಸೂರ್ಯ ಯಂತ್ರ
ಸೂರ್ಯ ಯಂತ್ರ (jiomart.com)

ನಮ್ಮ ನಿತ್ಯಜೀವನದಲ್ಲಿನ ಕಷ್ಟನಷ್ಟಗಳಿಂದ ದೂರವಾಗಲು ಪೂಜೆ-ಪುನಸ್ಕಾರ ಮತ್ತು ದಾನ-ಧರ್ಮಗಳನ್ನು ಅವಲಂಬಿಸುತ್ತೇವೆ. ಇದೇ ರೀತಿಯ ಮತ್ತೊಂದು ಕಷ್ಟ ಪರಿಹಾರ ಮಾರ್ಗ ಎಂದರೆ ಯಂತ್ರ. ಹಲವು ಬಗೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯಂತ್ರಗಳ ಪೂಜೆಯು ಪರಿಣಾಮಕಾರಿ ಮಾರ್ಗ. ಕೆಲವು ಯಂತ್ರಗಳನ್ನು ದೇವರ ಬಳಿ ಇಟ್ಟು ಪೂಜಿಸಬೇಕು. ಮತ್ತೆ ಕೆಲವು ಯಂತ್ರಗಳನ್ನು ಕುತ್ತಿಗೆಯಲ್ಲಿ ಅಥವಾ ನಮ್ಮ ರಟ್ಟೆಯಲ್ಲಿ ಧರಿಸಬೇಕು. ಕೆಲವು ಯಂತ್ರಗಳನ್ನು ಪರಿಪೂರ್ಣ ಅಳತೆಗಳುಳ್ಳ ರೇಖೆಗಳಿಂದ ರಚಿಸುತ್ತಾರೆ. ಇನ್ನು ಕೆಲವು ಯಂತ್ರಗಳನ್ನು ವರ್ಗಾಕಾರದ ಚೌಕದಲ್ಲಿ ನಿರ್ದಿಷ್ಟ ಮೂಲೆಗಳಲ್ಲಿ ನಿರ್ದಿಷ್ಠವಾದ ಸಂಖ್ಯೆಗಳನ್ನು ಬಳಸುತ್ತಾರೆ. ಈ ಎರಡು ಮಾದರಿಯ ಯಂತ್ರಗಳಲ್ಲಿ ಲೋಪವಿದ್ದಲ್ಲಿ ಪರಿಣಾಮಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಆದರೆ ದೇವರ ಬಳಿ ಇಟ್ಟು ಪೂಜಿಸುವ ದೋಷಪೂರಿತ ಯಂತ್ರಗಳಿಂದ ಶುಭಫಲಗಳು ದೊರೆಯುವುದಿಲ್ಲ. ತಾಯಿತದಲ್ಲಿ ಇರಿಸುವ ಯಂತ್ರವನ್ನು ರಟ್ಟೆಯಲ್ಲಿ ಧರಿಸಬಹುದು. ಕೆಲವು ತಾಯಿತಗಳಲ್ಲಿ ಅರಳಿ ಬೇರು, ಸೊಗದೆ ಬೇರು, ಬೇವು, ಗುಲಗಂಜಿ, ಬಿಳಿ ಸಾಸುವೆ, ಬಿಳಿಎಳ್ಳು, ಅಂಕೋಲದ ಕಡ್ಡಿ ಅಥವ ಬೇರುಗಳನ್ನು ಬಳಸುತ್ತಾರೆ.

ಯಂತ್ರಗಳನ್ನು ರಚಿಸಲು ಸಾಮಾನ್ಯವಾಗಿ ಬೆಳ್ಳಿ ಅಥವಾ ತೆಳುವಾದ ತಾಮ್ರದ ಹಾಳೆಗಳಲ್ಲಿ ರಚಿಸುತ್ತಾರೆ. ಇದರಲ್ಲಿ ಗ್ರಹಗಳಿಗೆ ಸಂಬಂಧಿಸಿದ ಬೀಜಾಕ್ಷರಗಳು ಅಥವಾ ಆ ಗ್ರಹಗಳಿಗೆ ಸಂಬಂಧಿಸಿದ ದೇವತೆಗಳ ಬೀಜಾಕ್ಷಗಳನ್ನು ಬರೆದಿರುತ್ತಾರೆ. ಈ ಬೀಜಾಕ್ಷರಗಳು ಬಳಕೆಯಾಗುವ ಯಂತ್ರಗಳನ್ನು ಹುಷಾರಾಗಿ ರೂಪಿಸಬೇಕು. ಕೊಂಚ ತಪ್ಪಾದರೂ ತೊಂದರೆಗೆ ಒಳಗಾಗುವ ಸಂಭವ ಹೆಚ್ಚು. ಕಾರಣ ಯಾವುದೇ ಇರಲಿ, ಯಂತ್ರಗಳು ಮನೆಗೆ ಹೇಗಾದರೂ ಬಂದಿರಲಿ ಎಚ್ಚರದಿಂದ ನಿರ್ವಹಿಸಬೇಕು. ಯಂತ್ರಗಳನ್ನು ದೇವರ ಬಳಿ ಇಟ್ಟು ಪೂಜಿಸಬೇಕು. ವಿಧಿವಿತ್ತಾಗಿ ಯಂತ್ರಗಳನ್ನು ಪೂಜಿಸುವವರು ಸಂಬಂಧಿಸಿದ ಗ್ರಹಗಳು ಅಥವಾ ಆಯಾ ಯಂತ್ರಗಳಿಗೆ ಸಂಬಂಧಿಸಿದ ದೇವತೆಗಳ ಮಂತ್ರಗಳನ್ನು ನಿಯತವಾಗಿ ಪಾರಾಯಣ ಮಾಡಬೇಕು.

ಕೆಲ ಯಂತ್ರಗಳನ್ನು ಧರಿಸಲು ಸಹ ತಿಳಿದವರು ಸಲಹೆ ಮಾಡುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ನರಸಿಂಹಸ್ವಾಮಿ ಯಂತ್ರವನ್ನು ಹೇಳುತ್ತಾರೆ. ನರಸಿಂಹಸ್ವಾಮಿ ಯಂತ್ರವನ್ನು ಧರಿಸುವುದಾಗಲಿ ಅಥವಾ ಹತ್ತಿರದಲ್ಲಿ ಇರಿಸಿಕೊಳ್ಳುವುದಾಗಲಿ ತಪ್ಪು. ಇದನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸಬೇಕು. ಮಂತ್ರಗಳೊಂದಿಗೆ ಸ್ತುತಿಸಬೇಕು. ಮಂತ್ರಗಳನ್ನು ಸಹ ವಿಧಿವತ್ತಾಗಿ ಉಪದೇಶ ಪಡೆದು, ಸರಿಯಾಗಿ ಉಚ್ಚಿಸಬೇಕು. ಕೆಲವರು ಮನೆಗಳಲ್ಲಿ ಯಂತ್ರಗಳನ್ನು ಹೊಸದಾಗಿ ತಂದು ಅಥವಾ ಪಿತ್ರಾರ್ಜಿತವಾಗಿ ಇರುವ ಯಂತ್ರಗಳನ್ನು ಸಹ ಪೂಜಿಸುವಾಗ ಲೋಪಗಳನ್ನು ಮಾಡಿದ್ದರಿಂದ ಕೆಟ್ಟ ಫಲ ಪಡೆದ ಬಗ್ಗೆ ಉದಾಹರಣೆಗಳಿವೆ.

ಸೂರ್ಯ ಯಂತ್ರ: ಬಾಂಧವ್ಯಕ್ಕೆ ಪೂರಕ

ಇಚ್ಛಿತ ಫಲಗಳಿಗಾಗಿ ಕೆಲವು ಯಂತ್ರಗಳನ್ನು ತಾಮ್ರ, ಬೆಳ್ಳಿ ಅಥವಾ ಹಿತ್ತಾಳೆ ತಗಡುಗಳಲ್ಲಿ ಬರೆದು ಸದಾಕಾಲವೂ ಹತ್ತಿರ ಇರಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ಕೆಲವರಿಗೆ ಜಾತಕದಲ್ಲಿ ಸೂರ್ಯನು ಶುಭಸ್ಥಾನದಲ್ಲಿ ಇದ್ದರೂ ಶತ್ರುಗ್ರಹಗಳ ದೃಷ್ಟಿ ಅಥವಾ ಯುತಿಯಿಂದ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಸೂರ್ಯನ ಯಂತ್ರವನ್ನು ಪೂಜಿಸುವುದು ಒಳ್ಳೆಯದು. ಸೂರ್ಯನ ಯಂತ್ರವನ್ನು ಗೆರೆಗಳಿಂದ, ಆಯ್ದ ಸಂಖ್ಯೆಗಳಿಂದ ಬರೆಯಬಹುದು. ಇದನ್ನು ತಮ್ಮ ಜೇಬಿನಲ್ಲಿ ಅಥವಾ ನಿತ್ಯ ಬಳಸುವ ಚೀಲದಲ್ಲಿ ಇರಿಸಿಕೊಳ್ಳಬಹುದು.

ಸೂರ್ಯನ ಯಂತ್ರವನ್ನು ಬೀಜಾಕ್ಷರಗಳಿಂದಲೂ ಬರೆಯಬಹುದಾಗಿದೆ. ಬೀಜಾಕ್ಷರಗಳಿಂದ ರಚಿಸಿದ ಯಂತ್ರವನ್ನು ದೇವರಗೂಡಿನಲ್ಲಿ ಇರಿಸಿಯೇ ಪೂಜಿಸಬೇಕು. ಮುಖ್ಯವಾಗಿ ಪ್ರತಿ ಭಾನುವಾರಗಳಂದು ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು. ನೈವೇದ್ಯವನ್ನಾಗಿ ರವೆ ಅಥವಾ ಗೋಧಿಯಿಂದ ತಯಾರಿಸಿದ ಪಾಯಸ ಅಥವಾ ಪೊಂಗಲ್ ಅರ್ಪಿಸಬಹುದು. ಕೆಂಪು ಹೂಗಳಿಂದ ಪೂಜಿಸುವುದನ್ನು ಮರೆಯಬಾರದು. ಈ ಯಂತ್ರದ ಬಳಕೆಯಿಂದ ಅನೇಕ ರೀತಿಯ ಲಾಭವಿದೆ.

ಸೂರ್ಯ ಯಂತ್ರ ಉಪಾಸನೆಯ ಫಲಗಳು

ಸೂರ್ಯ ಯಂತ್ರದ ಉಪಾಸನೆಯಿಂದ ಕುಟುಂಬದಲ್ಲಿನ ಮನಸ್ತಾಪವು ದೂರವಾಗುತ್ತದೆ. ಕುಟುಂಬದ ಹಿರಿಯರಿಗೆ ಸಂಬಂಧಿಸಿದ ಆಸ್ತಿಯ ವಿವಾದಕ್ಕೆ ಪರಿಹಾರ ದೊರೆಯುತ್ತದೆ. ಉತ್ತಮ ಆರೋಗ್ಯವನ್ನು ಪಡೆಯಬಹುದು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಅನಗತ್ಯ ವಿವಾದಗಳು ದೂರವಾಗುತ್ತವೆ. ಕಾನೂನುಬದ್ದಾತ್ಮಕ ವಿಚಾರಗಳಲ್ಲಿ ಜಯ ದೊರೆಯುತ್ತದೆ. ಕಣ್ಣಿಗೆ ಸಂಬಂಧಿಸಿದ ದೋಷಗಳಿಂದ ಪಾರಾಗಬಹುದು. ಉದ್ಯೋಗದಲ್ಲಿ ತಡವಾಗಿದ್ದ ಬಡ್ತಿ ದೊರೆಯುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಸಮಾಜದಲ್ಲಿ ಉನ್ನತ ಮಟ್ಟದ ಗೌರವ ದೊರೆಯುತ್ತದೆ.

(ಬರಹ: ಸತೀಶ್‌)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.