ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವರ ಮುಂದೆ ಎಷ್ಟು ಸಮಯದವರೆಗೆ ನೈವೇದ್ಯ ಇಡಬೇಕು, ಯಾವ ರೀತಿಯ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು? ಇಲ್ಲಿದೆ ವಿವರ

ದೇವರ ಮುಂದೆ ಎಷ್ಟು ಸಮಯದವರೆಗೆ ನೈವೇದ್ಯ ಇಡಬೇಕು, ಯಾವ ರೀತಿಯ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು? ಇಲ್ಲಿದೆ ವಿವರ

ಹಿಂದೂ ಸಂಪ್ರದಾಯದಲ್ಲಿ ಪ್ರತಿ ದಿನ ದೇವರಿಗೆ ನೈವೇದ್ಯ ಇಡಲಾಗುತ್ತದೆ. ಆದರೆ ಎಷ್ಟೋ ಜನರಿಗೆ ದೇವರಿಗೆ ಯಾವ ರೀತಿ ನೈವೇದ್ಯ ಅರ್ಪಿಸಬೇಕೆಂದು ಗೊತ್ತಿಲ್ಲ. ದೇವರ ಮುಂದೆ ಎಷ್ಟು ಸಮಯದವರೆಗೆ ನೈವೇದ್ಯ ಇಡಬೇಕು, ಯಾವ ರೀತಿಯ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು? ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ದೇವರ ಮುಂದೆ ಎಷ್ಟು ಸಮಯದವರೆಗೂ ನೈವೇದ್ಯ ಇಡಬೇಕು, ಯಾವ ರೀತಿಯ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು? ಇಲ್ಲಿದೆ ವಿವರ
ದೇವರ ಮುಂದೆ ಎಷ್ಟು ಸಮಯದವರೆಗೂ ನೈವೇದ್ಯ ಇಡಬೇಕು, ಯಾವ ರೀತಿಯ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು? ಇಲ್ಲಿದೆ ವಿವರ (PC: Pixabay, ಧರಣಿ_ಮಧುರೆಡ್ಡಿ @Bhoothayi)

ದಿನ ಬೆಳಗಾದರೆ ದೇವರ ಫೋಟೋ ನೋಡಿ, ಕೈ ಮುಗಿದು, ಈ ದಿನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ದಿನವನ್ನು ಆರಂಭಿಸುತ್ತೇವೆ. ಹಾಗೇ ದೇವರಿಗೆ ಪೂಜೆ ಮಾಡಿ ನೈವೇದ್ಯ ಮಾಡಿದ ನಂತರವಷ್ಟೇ ನಾವು ಉಪಹಾರ ಸೇವಿಸುತ್ತೇವೆ. ಪೂಜೆ ಬಳಿಕ ದೇವರಿಗೆ ನೈವೇದ್ಯ ಸಲ್ಲಿಸುವುದು ಬಹಳ ಒಳ್ಳೆಯದು. ಖರ್ಜೂರ, ಬಾದಾಮಿ, ಹಾಲು, ತುಪ್ಪ ಸಕ್ಕರೆ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ನೈವೇದ್ಯವನ್ನು ದೇವರಿಗೆ ಅರ್ಪಿಸುತ್ತಾರೆ.

ನೈವೇದ್ಯ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು

ಬೆಳಗ್ಗೆ ಪೂಜೆ ನಂತರ ನೈವೇದ್ಯ ಅರ್ಪಿಸಿದವರೆ ಕೆಲವರು ಮರುದಿನದವರೆಗೂ ಅದನ್ನು ತೆಗೆಯುವುದಿಲ್ಲ. ಅದರಲ್ಲೂ ಕೆಲವೊಮ್ಮೆ ನೈವೇದ್ಯಕ್ಕೆ ಹಾಲನ್ನು ಇಟ್ಟು ಅದನ್ನು ತೆಗೆಯದೆ ಊರಗೆ ಹೋಗುವುದೋ, ಅಥವಾ ಬೇರೆ ಕಾರಣಗಳಿಂದ 4-5 ದಿನ ದೇವರ ಕೋಣೆ ಕಡೆ ತಲೆ ಹಾಕುವುದಿಲ್ಲ. ಆಗ ದೇವರ ಮುಂದೆ ಇಟ್ಟ ನೈವೇದ್ಯ ಕೆಟ್ಟು ವಾಸನೆ ಬರುತ್ತದೆ. ಆದರೆ ಈ ರೀತಿ ಮಾಡುವುದು ತಪ್ಪು. ದೇವರಿಗೆ ಯಾವ ರೀತಿಯ ನೈವೇದ್ಯ ಇಡಬೇಕು. ಇಟ್ಟ ನೈವೇದ್ಯವನ್ನು ಎಷ್ಟು ಸಮಯದೊಳಗೆ ತೆಗೆಯಬೇಕು. ಯಾವ ಪಾತ್ರೆಯಲ್ಲಿ ನೈವೇದ್ಯ ಅರ್ಪಿಸಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

  • ಸಿಹಿ ಪದಾರ್ಥಗಳನ್ನು ಹೊರತುಪಡಿಸಿ ಕೆಲವರು ಪುಳಿಯೋಗರೆ, ಚಿತ್ರಾನ್ನ, ಮೊಸರನ್ನ, ಚಕ್ಕುಲಿ, ಉಸಲಿ ಸೇರಿದಂತೆ ಇನ್ನಿತರ ಖಾರವಾದ ತಿಂಡಿಗಳನ್ನು ಕೂಡಾ ದೇವರಿಗೆ ನೈವೇದ್ಯ ಇಡುತ್ತಾರೆ. ಈ ರೀತಿಯ ನೈವೇದ್ಯ ತಯಾರಿಸುವಾಗ ಖಾರದ ಪುಡಿ, ಉಪ್ಪು, ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ತುಪ್ಪವನ್ನು ಹೆಚ್ಚಾಗಿ ಬಳಸಬೇಕು.-
  • ದೇವರಿಗೆ ನೈವೇದ್ಯ ಅರ್ಪಿಸುವಾಗ ಸ್ಟೀಲ್ ಪಾತ್ರೆಗಳನ್ನು ಬಳಸಬಾರದು. ಅಲ್ಯುಮಿನಿಯಂ, ಕಬ್ಬಿಣದ ಪಾತ್ರೆಗಳನ್ನೂ ಬಳಸುವುದು ನಿಷಿದ್ಧ. ಅದರ ಬದಲಿಗೆ ಬೆಳ್ಳಿ, ಹಿತ್ತಾಳೆ ಅಥವಾ ಚಿನ್ನದ ಬಟ್ಟಲು ಅಥವಾ ಪ್ಲೇಟ್‌ಗಳನ್ನು ಬಳಸಬಹುದು. ಮಣ್ಣಿನ ಬಟ್ಟಲುಗಳನ್ನು ಕೂಡಾ ಬಳಸಬಹುದು. ಇವೆಲ್ಲಕ್ಕಿಂತ ಬಾಳೆ ಎಲೆ ಬಹಳ ಶ್ರೇಷ್ಠವಾದದ್ದು.
  • ಅನ್ನ, ಕೋಸಂಬರಿಯಂಥ ನೈವೇದ್ಯವನ್ನು ಅರ್ಪಿಸುವಾಗ ಉಪ್ಪನ್ನು ಬಳಸಬಾರದು, ಉಪ್ಪು ಬಳಸಿ ತಯಾರಿಸಿದ ನೈವೇದ್ಯವನ್ನು ದೇವರಿಗೆ ಅರ್ಪಿಸಬಾರದು. ನೈವೇದ್ಯ ತಯಾರಿಸುವಾಗ ಸ್ವಚ್ಛತೆ ಬಹಳ ಮುಖ್ಯ. ಜೊತೆಗೆ ಭಕ್ತಿಯೂ ಇರಬೇಕು. 

ಇದನ್ನೂ ಓದಿ: ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ

  • ನೈವೇದ್ಯ ಅರ್ಪಿಸುವಾಗ ಮೊದಲು ಇಷ್ಟದೇವತೆಯನ್ನು ಪ್ರಾರ್ಥಿಸಿ, ದೇವರ ಮುಂದೆ ನೆಲದ ಮೇಲೆ ಮಂಡಲವನ್ನು ಎಳೆಯಿರಿ. ನಂತರ ನೈವೇದ್ಯವನ್ನು ಹೊಂದಿರುವ ಬಾಳೆ ಎಲೆ/ ಅಥವಾ ತಟ್ಟೆಯನ್ನು ಈ ಮಂಡಲದ ಮೇಲೆ ಇಡಿ. ಬಾಳೆ ಎಲೆ ಆದರೆ, ಎಲೆಯ ಕಾಂಡವನ್ನು ದೇವರ ಕಡೆಗೆ ಮತ್ತು ಎಲೆಯ ತುದಿಯನ್ನು ನಿಮ್ಮ ಕಡೆಗೆ ಇರಿಸಿ.
  • ನೈವೇದ್ಯವನ್ನು ಅರ್ಪಿಸುವಾಗ, ಬಾಳೆ ಎಲೆ ಅಥವಾ ತಟ್ಟೆಯ ಸುತ್ತಲೂ ನೀರನ್ನು ಪ್ರದಕ್ಷಿಣಾಕಾರವಾಗಿ ಚಿಮುಕಿಸಬೇಕು ಇದನ್ನು ಇದನ್ನು ಮಂಡಲ ಬಿಡಿಸುವುದು ಎಂದು ಕರೆಯಲಾಗುತ್ತದೆ. ನೀರನ್ನು ಮತ್ತೆ ಅಪ್ರದಕ್ಷಿಣಾಕಾರವಾಗಿ ಚಿಮುಕಿಸಬಾರದು. ಇವೆಲ್ಲವನ್ನು ಮಾಡಲು ನಿಮಗೆ ಅರ್ಥವಾಗದಿದ್ದರೆ ಕೊನೆಯ ಪಕ್ಷ ನೈವೇದ್ಯದ ಮೇಲೆ 2 ತುಳಸಿ ಎಲೆಗಳಿಂದ ನೀರನ್ನು ಪ್ರೋಕ್ಷಿಸಬೇಕು.
  • ದೇವಸ್ಥಾನದಲ್ಲಾಗಲೀ, ಮನೆಯ ದೇವರ ಕೋಣೆಯಲ್ಲಾಗಲೀ ದೇವರ ಪ್ರಸಾದವನ್ನು ಹೆಚ್ಚು ಹೊತ್ತು ಬಿಡಬಾರದು. ದೇವರಿಗೆ ನೈವೇದ್ಯ ಇಟ್ಟ ಸುಮಾರು 10-15 ನಿಮಿಷಗಳ ನಂತರ ಅದನ್ನು ತೆಗೆಯಬೇಕು. ಇಲ್ಲದಿದ್ದರೆ ಮನೆಯೊಳಗೆ ನಕಾರಾತ್ಮಕ ಶಕ್ತಿ ಆವರಿಸುತ್ತದೆ ಎಂದು ನಂಬಲಾಗಿದೆ.
  • ದೇವರ ಮುಂದೆ ಇಟ್ಟ ಪ್ರಸಾದವನ್ನು ತೆಗೆದ ನಂತರ ಕುಟುಂಬದ ಸದಸ್ಯರೊಂದಿಗೆ ಅದನ್ನು ಹಂಚಿ ನೀವೂ ಸ್ವೀಕರಿಸಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.