ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪೌರಾಣಿಕ ಕಥೆಗಳು: ವಿದುರನ ಮನೆಯಲ್ಲಿ ಬಾಳೆಸಿಪ್ಪೆ ತಿಂದು ರುಚಿಯಾಗಿದೆ ಎಂದ ಶ್ರೀಕೃಷ್ಣ; ದೇವರಿಗೆ ಭಕ್ತಿ ಬೇಕು, ಆಡಂಬರವಲ್ಲ

ಪೌರಾಣಿಕ ಕಥೆಗಳು: ವಿದುರನ ಮನೆಯಲ್ಲಿ ಬಾಳೆಸಿಪ್ಪೆ ತಿಂದು ರುಚಿಯಾಗಿದೆ ಎಂದ ಶ್ರೀಕೃಷ್ಣ; ದೇವರಿಗೆ ಭಕ್ತಿ ಬೇಕು, ಆಡಂಬರವಲ್ಲ

'ಬಾಳೆಸಿಪ್ಪೆ ಕಹಿಯೇ ಇರಬಹುದು. ಆದರೆ ಪ್ರೀತಿಯಿಂದ ಕೊಟ್ಟರೆ ಅದನ್ನು ನಾನು ಸ್ವೀಕರಿಸುತ್ತೇನೆ. ನನಗೆ ಭಕ್ತಿ ಮುಖ್ಯವೇ ಹೊರತು ಆಡಂಬರವಲ್ಲ. ನೀನು ನನಗೆ ಬಾಳೆಸಿಪ್ಪೆ ಕೊಟ್ಟಿದ್ದಕ್ಕೆ ಕಿಂಚಿತ್ತೂ ಪಶ್ಚಾತ್ತಾಪ ಪಡಬೇಕಿಲ್ಲ. ಅದನ್ನು ನಾನು ಇಷ್ಪಪಟ್ಟು ಸ್ವೀಕರಿಸಿದ್ದೇನೆ. ಈ ಪ್ರಸಂಗವು ಭಕ್ತರಿಗೆ ಒಂದು ಸಂದೇಶ' ಎಂದ ಶ್ರೀಕೃಷ್ಣ.

ವಿದುರನ ಮನೆಯಲ್ಲಿ ಬಾಳೆಸಿಪ್ಪೆ ತಿಂದು ರುಚಿಯಾಗಿದೆ ಎಂದ ಶ್ರೀಕೃಷ್ಣ
ವಿದುರನ ಮನೆಯಲ್ಲಿ ಬಾಳೆಸಿಪ್ಪೆ ತಿಂದು ರುಚಿಯಾಗಿದೆ ಎಂದ ಶ್ರೀಕೃಷ್ಣ (naadopaasana.wordpress.com)

ಮಹಾಭಾರತದಲ್ಲಿ ಪರೋಕ್ಷವಾಗಿ ಹಲವು ಘಟನೆಗಳಿಗೆ, ಹಲವು ಬೆಳವಣಿಗೆಗಳಿಗೆ, ಕಥೆಯ ಮುನ್ನಡೆಗೆ ಕಾರಣವಾಗುವವನು ವಿದುರ. ಸಾಕ್ಷಾತ್ ಭಗವಂತನೇ ಆಗಿದ್ದ ಶ್ರೀಕೃಷ್ಣನಿಗೂ ವಿದುರನ ಬಗ್ಗೆ ವಿಶೇಷ ಅಭಿಮಾನವಿತ್ತು. ಸತ್ಯದ ಪರವಾಗಿದ್ದ, ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದ, ನಿಷ್ಠುರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ, ಯಾರನ್ನೂ ಓಲೈಸಲು ಹಾತೊರೆಯದ ವಿದುರನ ವ್ಯಕ್ತಿತ್ವ ಶ್ರೀಕೃಷ್ಣನಿಗೆ ಹಿಡಿಸಿತ್ತು. ಇದರ ಜೊತೆಗೆ ವಿದುರನು ಶ್ರೀಕೃಷ್ಣನ ಅಂತರಂಗ ಭಕ್ತನೂ ಆಗಿದ್ದ.

ಒಮ್ಮೆ ಶ್ರೀಕೃಷ್ಣನು ವಿದುರನ ಮನೆಗೆ ಬಂದ. ಆಗ ವಿದುರ ಮನೆಯಲ್ಲಿ ಇರಲಿಲ್ಲ. ವಿದುರಾಣಿಗೆ (ವಿದುರನ ಪತ್ನಿ) ಶ್ರೀಕೃಷ್ಣನನ್ನು ಕಂಡು ಅತ್ಯಂತ ಸಂತಸವಾಯಿತು. ಅವಳು ಕೃಷ್ಣನನ್ನು ಕುಳ್ಳಿರಿಸಿ, ಮೃದು ಮಾತುಗಳಿಂದ ಉಪಚರಿಸಿ ನೀರುಕೊಟ್ಟಳು. 'ಹಸಿವಾಗಿದೆ ತಾಯಿ, ತಿನ್ನಲು ಏನಾದರೂ ಕೊಡು' ಎಂದು ಶ್ರೀಕೃಷ್ಣನೇ ಬಾಯಿಬಿಟ್ಟು ಕೇಳಿದ. ಸ್ವಭಾವತಃ ಹೆಂಗಸರಲ್ಲಿ ಮಾತೃಹೃದಯ ಇರುತ್ತದೆ. ಯಾರೇ ಹಸಿವು ಎಂದರೂ ಅವರು ಕರಗುತ್ತಾರೆ. ಅಂಥದ್ದರಲ್ಲಿ ತನ್ನ ಪತಿಯ ಆರಾಧ್ಯ ದೈವ ಮನೆಗೆ ಬಂದು 'ಹಸಿವಾಗಿದೆ' ಎಂದು ವಿದುರಾಣಿ ಸುಮ್ಮನಿರುತ್ತಾಳೆಯೇ?

ವಿದುರಾಣಿ ತಕ್ಷಣ ಮನೆಯಲ್ಲಿ ಏನಿದೆ ನೋಡಿದಳು. ಬಾಳೆಹಣ್ಣು ಕಾಣಿಸಿತು. ಅದನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಶ್ರೀಕೃಷ್ಣನ ಹತ್ತಿರಕ್ಕೆ ಓಡಿಬಂದಳು. ಸಮೀಪದಲ್ಲಿಯೇ ಕುಳಿತು ಬಾಳೆಹಣ್ಣು ಸುಲಿದುಕೊಟ್ಟಳು. ಶ್ರೀಕೃಷ್ಣ 'ಆಹಾ, ಅದೆಷ್ಟು ರುಚಿಯಾಗಿದೆ. ಇಂಥದ್ದು ನಾನು ಎಲ್ಲಿಯೂ ತಿಂದೇ ಇರಲಿಲ್ಲ' ಎಂದು ಬಾಯಿ ಚಪ್ಪರಿಸಿ ತಿನ್ನಲು ಆರಂಭಿಸಿದ. 'ನನ್ನ ಪಟ್ಟಮಹಿಷಿಯರಾದ ರುಕ್ಮಿಣಿ, ಸತ್ಯಭಾಮೆಯರು ಕೊಡುವ ಊಟದಷ್ಟೇ ರುಚಿಯಿದೆ' ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ. ಭಗವಂತನನ್ನು ಕಂಡ, ಅವನಿಗೆ ನೈವೇದ್ಯ ಸಮರ್ಪಿಸಿದ ಖುಷಿಯಲ್ಲಿ ವಿದುರಾಣಿ ಅಕ್ಷರಶಃ ಮೈಮರೆತಿದ್ದಳು.

ಅದೇ ಹೊತ್ತಿಗೆ ವಿದುರ ಮನೆಗೆ ಬಂದ. ಅಲ್ಲಿ ನಡೆಯುತ್ತಿರುವುದು ಕಂಡು ಹೌಹಾರಿದ ಗಟ್ಟಿಯಾಗಿ ಹೆಂಡತಿಯನ್ನು ಕರೆದ. 'ಅವಳಿಗೆ ತೊಂದರೆ ಕೊಡಬೇಡ' ಎಂದು ಶ್ರೀಕೃಷ್ಣ ಕಣ್ಸನ್ನೆ, ಕೈಸನ್ನೆ ಮಾಡಿದ್ದು ಪ್ರಯೋಜನಕ್ಕೆ ಬರಲಿಲ್ಲ. ವಿದುರನ ಧ್ವನಿಯಿಂದ ಎಚ್ಚೆತ್ತ ವಿದುರಾಣಿಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಾಯಿತು. 'ಅಯ್ಯೋ, ಭಗವಂತನೇ ಮನೆಗೆ ಬಂದಾಗ ನಾನು ಬಾಳೆಹಣ್ಣು ಸುಲಿದು, ಸಿಪ್ಪೆಯನ್ನು ಕೊಟ್ಟುಬಿಟ್ಟೆ. ನೀನು ನನಗೆ ಒಂದು ಮಾತನ್ನೂ ಹೇಳದೇ ಸಿಪ್ಪೆಯನ್ನೇ ರುಚಿಯಾಗಿದೆ ಎಂದು ತಿಂದುಬಿಟ್ಟೆ. ನನ್ನಿಂದ ಎಂಥ ಅಪರಾಧವಾಯಿತು' ಎಂದು ವಿದುರಾಣಿ ಪಶ್ಚಾತ್ತಾಪಪಟ್ಟುಕೊಂಡಳು. ಬಾಳೆಹಣ್ಣು ಕೊಟ್ಟಳು, ಅದನ್ನೂ ಶ್ರೀಕೃಷ್ಣ ಪ್ರೀತಿಯಿಂದ ಸ್ವೀಕರಿಸಿದ.

ನಂತರ ಶ್ರೀಕೃಷ್ಣನೇ ಅವಳಿಗೆ ಸಮಾಧಾನ ಮಾಡಿದೆ. 'ಅಮ್ಮಾ ವಿದುರಾಣಿ, ನೀನು ಕೊಟ್ಟ ಬಾಳೆಸಿಪ್ಪೆ ಸಾಮಾನ್ಯವಾದುದಲ್ಲ. ಆಹಾರದ ಸ್ವಾದ ಇರುವುದು ಪ್ರೀತಿಯಲ್ಲಿ. ಬಾಳೆಹಣ್ಣು ಸಿಹಿಯೇ ಇರಬಹುದು, ಆದರೆ ಭಕ್ತಿಯಿಲ್ಲದೆ ಕೊಟ್ಟರೆ ಅದನ್ನು ನಾನು ಸ್ವೀಕರಿಸುವುದಿಲ್ಲ. ಬಾಳೆಸಿಪ್ಪೆ ಕಹಿಯೇ ಇರಬಹುದು. ಆದರೆ ಪ್ರೀತಿಯಿಂದ ಕೊಟ್ಟರೆ ಅದನ್ನು ನಾನು ಸ್ವೀಕರಿಸುತ್ತೇನೆ. ನನಗೆ ಭಕ್ತಿ ಮುಖ್ಯವೇ ಹೊರತು ಆಡಂಬರವಲ್ಲ. ನೀನು ನನಗೆ ಬಾಳೆಸಿಪ್ಪೆ ಕೊಟ್ಟಿದ್ದಕ್ಕೆ ಕಿಂಚಿತ್ತೂ ಪಶ್ಚಾತ್ತಾಪ ಪಡಬೇಕಿಲ್ಲ. ಅದನ್ನು ನಾನು ಇಷ್ಪಪಟ್ಟು ಸ್ವೀಕರಿಸಿದ್ದೇನೆ. ಈ ಪ್ರಸಂಗವು ಭಕ್ತರಿಗೆ ಒಂದು ಸಂದೇಶ' ಎಂದ ಶ್ರೀಕೃಷ್ಣ.

ಭಗವಂತನ ಮಾತು ಕೇಳಿದ ವಿದುರ ಮತ್ತು ವಿದುರಾಣಿ ಭಾವುಕರಾಗಿ ಹನಿಗಣ್ಣಾದರು. 'ನಮ್ಮ ಮೇಲೆ ನಿನ್ನ ದಯೆ ಸದಾ ಹೀಗೆಯೇ ಇರಲಿ' ಎಂದು ಕೈಮುಗಿದರು.