ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಿಮಾಲಯದಲ್ಲಿದೆ ಭಗವಾನ್‌ ವಿಷ್ಣು ನಿರ್ಮಿಸಿದ ನಿಗೂಢ ಸಿದ್ಧಾಶ್ರಮ; ಸಾಧನೆ ಮಾಡಿದ ಪುರುಷರಿಗಷ್ಟೇ ಇಲ್ಲಿ ಪ್ರವೇಶ

ಹಿಮಾಲಯದಲ್ಲಿದೆ ಭಗವಾನ್‌ ವಿಷ್ಣು ನಿರ್ಮಿಸಿದ ನಿಗೂಢ ಸಿದ್ಧಾಶ್ರಮ; ಸಾಧನೆ ಮಾಡಿದ ಪುರುಷರಿಗಷ್ಟೇ ಇಲ್ಲಿ ಪ್ರವೇಶ

Siddhashrama: ಕೈಲಾಸ ಪರ್ವತ ಮಾನಸ ಸರೋವರದ ನಡುವೆ ಸಾವಿರಾರು ಅಡಿಗಳಷ್ಟು ಕೆಳಗಿರುವ ಹಿಮಾಲಯದ ಆಳದಲ್ಲಿರುವ ನಿಗೂಢ ಸಿದ್ಧಾಶ್ರಮದಲ್ಲಿ ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ಇಲ್ಲಿ ಸಾಧನೆ ಮಾಡಿದ ಯೋಗಿಗಳಿಗಷ್ಟೇ ಪ್ರವೇಶ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಹಿಮಾಲಯದಲ್ಲಿದೆ ಭಗವಾನ್‌ ವಿಷ್ಣು ನಿರ್ಮಿಸಿದ ನಿಗೂಢ ಸಿದ್ಧಾಶ್ರಮ; ಸಾಧನೆ ಮಾಡಿದ ಪುರುಷರಿಗಷ್ಟೇ ಇಲ್ಲಿ ಪ್ರವೇಶ
ಹಿಮಾಲಯದಲ್ಲಿದೆ ಭಗವಾನ್‌ ವಿಷ್ಣು ನಿರ್ಮಿಸಿದ ನಿಗೂಢ ಸಿದ್ಧಾಶ್ರಮ; ಸಾಧನೆ ಮಾಡಿದ ಪುರುಷರಿಗಷ್ಟೇ ಇಲ್ಲಿ ಪ್ರವೇಶ

ಪ್ರಪಂಚದಲ್ಲಿ ನಮಗೆ ತಿಳಿದಿರುವ, ತಿಳಿಯದಿರುವ ಬಹಳಷ್ಟು ನಿಗೂಢ ಸ್ಥಳಗಳಿವೆ. ಅದರಲ್ಲಿ ಎಷ್ಟೋ ಸ್ಥಳಗಳಿಗೆ ಸಾಮಾನ್ಯ ಮನುಷ್ಯರು ಹೋಗಲಾವುದಿಲ್ಲ ಅಂಥ ಪ್ರದೇಶಗಳಲ್ಲಿ ಹಿಮಾಲದಯದಲ್ಲಿರುವ ಸಿದ್ಧಾಶ್ರಮ ಕೂಡಾ ಒಂದು. ಇದು ಪರಶಿವನಿಗೆ ಸಂಬಂಧಿಸಿದ ಸ್ಥಳವಾಗಿದೆ. ಇದನ್ನು ಗ್ಯಾನ್‌ಗಂಜ್‌ ಎಂದೂ ಕರೆಯುತ್ತಾರೆ.

ಶಿವನ ಮಹಿಮೆಗೆ ಕೊನೆಯೇ ಇಲ್ಲ. ನಂಬಿದ ಭಕ್ತರಿಗೆ ಶಿವ ಸಕಲ ಸುಖ, ಸಂತೋಷ ಕೊಡುತ್ತಾನೆ. ಮುಕ್ತಿ ನೀಡುತ್ತಾನೆ. ಅವನ ಭಕ್ತರಿಗೆ ಜೀವನದಲ್ಲಿ ಎಂದಿಗೂ ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಶಿವನು ಸ್ವತಃ ಯೋಗಿಯಾಗಿದ್ದಾನೆ ಸನಾತನ ಗ್ರಂಥಗಳಲ್ಲಿ, ಭಗವಾನ್ ಶಿವನನ್ನು ಮೊದಲ ಮತ್ತು ಅತ್ಯುತ್ತಮ ಯೋಗಿ ಎಂದು ಕರೆಯಲಾಗುತ್ತದೆ. ಶಿವನು ಹೆಚ್ಚಿನ ಸಮಯ ಧ್ಯಾನ ಮಾಡುತ್ತಾನೆ. ಇದಕ್ಕಾಗಿ ಹಿಮಾಲಯವನ್ನೇ ತಮ್ಮ ವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ವಿಜ್ಞಾನಿಗಳಿಗೂ ಸವಾಲು ಎನಿಸಿದ ಸ್ಥಳ

ಗ್ರಂಥಗಳ ಪ್ರಕಾರ ಶಿವನು ಕೈಲಾಸ ಪರ್ವತದಲ್ಲಿ ನೆಲೆಸಿದ್ದಾನೆ. ಈ ಹಿಮಾಲಯವು ತನ್ನ ರಹಸ್ಯಗಳಿಗಾಗಿ ಪ್ರಸಿದ್ಧವಾಗಿದೆ. ವಿಜ್ಞಾನಿಗಳಿಗೆ ಕೂಡಾ ಹಿಮಾಲಯದ ಎಷ್ಟೋ ನಿಗೂಢಗಳನ್ನು ಬಿಡಿಸಲು ಸಾಧ್ಯವಾಗಿಲ್ಲ. ಇಂಥಹ ಅನೇಕ ಸ್ಥಳಗಳು ಕೈಲಾಸ ಪರ್ವತ ಹಾಗೂ ಸುತ್ತಮುತ್ತ ಇವೆ. ಅವುಗಳಲ್ಲಿ ಒಂದು ಸಿದ್ಧಾಶ್ರಮ. ಸಿದ್ಧಾಶ್ರಮದಲ್ಲಿ ವಾಸಿಸುವ ಜನರು ಅಮರರು. ಅವರು ಸಾವೇ ಇರುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ. ಹಾಗೆಂದ ಮಾತ್ರಕ್ಕೆ ಈ ಸಿದ್ಧಾಶ್ರಮಕ್ಕೆ ಯಾರು ಬೇಕಾದರೂ ಹೋಗುವ ಹಾಗಿಲ್ಲ. ಸಾಧನೆ ಮಾಡಿದ ಪುರುಷರು ಮಾತ್ರ ಇಲ್ಲಿ ಜೀವಿಸುತ್ತಾರೆ.

ಧಾರ್ಮಿಕ ಗ್ರಂಥಗಳ ತಜ್ಞರ ಪ್ರಕಾರ ಸಿದ್ಧಾಶ್ರಮ ಹಿಮಾಲಯದಲ್ಲಿದ್ದರೂ ಇದುವರೆಗೂ ಸಾಮಾನ್ಯ ಜನರಿಗೆ ಅದು ಎಲ್ಲಿದೆ ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಏಕೆಂದರೆ ಸಿದ್ಧಾಶ್ರಮವನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ಉಪಗ್ರಹದ ಮೂಲಕವೂ ಸಿದ್ಧಾಶ್ರಮವನ್ನು ನೋಡಲಾಗುವುದಿಲ್ಲ. ಸನಾತನ ಗ್ರಂಥಗಳಲ್ಲಿ ಈ ಆಶ್ರಮದ ವಿವರಣೆಯಿದೆ. ಪ್ರಪಂಚದ ಸೃಷ್ಟಿಕರ್ತನಾದ ವಿಷ್ಣುವು ಸಿದ್ಧಾಶ್ರಮದಲ್ಲಿಯೇ ತಪಸ್ಸು ಮಾಡಿದನೆಂದು ಹೇಳಲಾಗುತ್ತದೆ. ಸ್ವರ್ಗದ ರಾಜ ಇಂದ್ರನಿಗೆ ಸಹಾಯ ಮಾಡಲು ವಿಷ್ಣುವು ವಾಮನ ಅವತಾರ ಎತ್ತಿದ ಸ್ಥಳವಿದು. ವಾಮನ ಅವತಾರ ತಾಳುವಾಗ, ಭಗವಾನ್ ವಿಷ್ಣುವು ತಪಸ್ಸಿಗಾಗಿ ಸಿದ್ಧಾಶ್ರಮದಲ್ಲಿ ತನ್ನ ಆಶ್ರಮ ನಿರ್ಮಿಸಿದನು. ಅಂದಿನಿಂದ ಸಿದ್ಧಾಶ್ರಮವು ಸಿದ್ಧಿ ಪಡೆದ ಯೋಗಿಗಳು ಮತ್ತು ಋಷಿಗಳ ತಪಸ್ಸಿನ ಸ್ಥಳವಾಗಿದೆ.

ಸಾಧನೆ ಮಾಡಿದ ಪುರುಷರಿಗಷ್ಟೇ ಇಲ್ಲಿಗೆ ಪ್ರವೇಶ

ಈ ಸ್ಥಳವು ಹಿಮಾಲಯದ ಮಡಿಲಲ್ಲಿದೆ, ಇದು ಶಿವನ ವಾಸಸ್ಥಾನವಾಗಿದೆ. ಸಿದ್ಧಾಶ್ರಮವು ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಸಮೀಪದಲ್ಲಿದೆ. ಕೈಲಾಸ ಪರ್ವತ ಮಾನಸ ಸರೋವರದಿಂದ ಸಾವಿರಾರು ಅಡಿಗಳಷ್ಟು ಕೆಳಗಿರುವ ಹಿಮಾಲಯದ ಆಳದಲ್ಲಿ ಈ ನಿಗೂಢ ಸಿದ್ಧಾಶ್ರಮವಿದೆ ಎಂದು ಹೇಳಲಾಗುತ್ತದೆ. ಸಿದ್ಧಾಶ್ರಮ ಎಂದರೆ ಸಾಧಕರು ಧ್ಯಾನ ಮಾಡುವ ಆಶ್ರಮ. ಇದನ್ನು ವಿಶ್ವಾಮಿತ್ರನ ಆಶ್ರಮ ಎಂದೂ ಕರೆಯುತ್ತಾರೆ. ಈ ಆಶ್ರಮವನ್ನು ಭಗವಾನ್ ವಿಷ್ಣುವಿನ ಆಜ್ಞೆಯ ಮೇರೆಗೆ ವಿಶ್ವಕರ್ಮನು ನಿರ್ಮಿಸಿದನು.

ಸಿದ್ಧಾಶ್ರಮದ ಬಗ್ಗೆ ಅನೇಕ ನಂಬಿಕೆಗಳಿವೆ. ಈ ಸುಂದರ ತಾಣ ನೋಡಲು ಕಮಲದ ಹೂವಿನ ಆಕಾರದಲ್ಲಿದೆ. ಸಾಧನೆ ಮಾಡಿದ ಪುರುಷರು ಮಾತ್ರ ಈ ಕ್ಷೇತ್ರಕ್ಕೆ ಬರಬಹುದು. ಸಾಮಾನ್ಯ ಜನರು ಯಾವುದೇ ತಂತ್ರದ ಮೂಲಕ ಸಿದ್ಧಾಶ್ರಮವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಈ ಸ್ಥಳದಲ್ಲಿ ಜನರು ಸಾಯುವುದಿಲ್ಲ, ಅವರು ಶಿವನಿಂದ ಅಮರತ್ವದ ಆಶೀರ್ವಾದವನ್ನು ಪಡೆಯುತ್ತಾರೆ. ಸಿದ್ಧಾಶ್ರಮದಲ್ಲಿ ಕೃಪಾಚಾರ್ಯ, ಗಂಗಾಪುತ್ರ, ವಿಶ್ವಾಮಿತ್ರ ಸೇರಿದಂತೆ ಮಹಾಮುನಿಗಳನ್ನು ನೇರ ರೂಪದಲ್ಲಿ ಕಾಣಬಹುದು. ಅವರೆಲ್ಲರೂ ಜೀವಂತ ರೂಪದಲ್ಲಿ ಇಂದಿಗೂ ಅಲ್ಲಿ ತಿರುಗುತ್ತಾರೆ. ಇಷ್ಟೇ ಅಲ್ಲ, ಇನ್ನೂ ಅನೇಕ ದೇವತೆಗಳು ಧ್ಯಾನಕ್ಕಾಗಿ ಸಿದ್ಧಾಶ್ರಮಕ್ಕೆ ಭೇಟಿ ನೀಡುತ್ತಾರೆ. ಕಣ್ಮನ ಸೆಳೆಯುವ ಮರಗಳು, ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು, ದೈವಿಕ ಹೂವುಗಳು, ಸಸ್ಯಗಳು ಇತ್ಯಾದಿಗಳು ಸಿದ್ಧಾಶ್ರಮದಲ್ಲಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.