Sankatahara Chaturthi: ವಿದ್ಯಾರ್ಥಿಗಳಿಗೆ ಉಪಯುಕ್ತ ಬುಧವಾರದ ಸಂಕಷ್ಟಹರ ಚತುರ್ಥಿ: ಈ ದಿನ ಏನು ಮಾಡಬೇಕು ತಿಳಿಯಿರಿ
Sankatahara Chaturthi 2024: ಈ ಬಾರಿ ಬಂದಿರುವ ಸಂಕಷ್ಟಹರ ಚತುರ್ಥಿಯಲ್ಲಿ ಕೆಲವು ವಿಶೇಷಗಳಿವೆ. ಗಣಪತಿಗೆ ಪ್ರಿಯವಾದ ಬುಧವಾರ ಬಂದಿದೆ ಹಾಗೂ ಈ ದಿನದಂದು ಚಿತ್ತ ನಕ್ಷತ್ರ ಇರುತ್ತದೆ. ಇಂದಿನ ಪೂಜೆಯಿಂದ ವಿದ್ಯಾರ್ಥಿಗಳಿಗೆ ಸ್ಥಿರವಾದ ಮನಸ್ಸು, ಆತ್ಮಸ್ಥೈರ್ಯ ದೊರೆಯುತ್ತದೆ. (ಲೇಖನ: ಎಚ್. ಸತೀಶ್, ಜ್ಯೋತಿಷಿ)

2024ರ ಫೆಬ್ರವರಿ 28ರಂದು (ಬುಧವಾರ) ಸಂಕಷ್ಟಹರ ಚತುರ್ಥಿ ಬಂದಿದೆ. ಈ ಬಾರಿ ಕೆಲವು ವಿಶೇಷಗಳಿವೆ. ಬುಧವಾರ ಕೂಡ ಗಣಪತಿಗೆ ಪ್ರಿಯವಾದ ದಿನ. ಮತ್ತೊಂದು ವಿಚಾರ ಏನಂದ್ರೆ ಈ ದಿನದಂದು ಚಿತ್ತ ನಕ್ಷತ್ರ ಇರುತ್ತದೆ. ಚಿತ್ತ ನಕ್ಷತ್ರವು ಕುಜನಿಗೆ ಸಂಬಂಧಿಸಿದ ನಕ್ಷತ್ರ. ಕುಜನ ಇಷ್ಟದೇವತೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಲಕ್ಷ್ಮೀನರಸಿಂಹಸ್ವಾಮಿ. ಈ ದಿನ ಚಂದ್ರನಿಗೆ ಅರ್ಘ್ಯ ನೀಡುತ್ತೇವೆ. ಆದ್ದರಿಂದ ಇಂದಿನ ಪೂಜೆಯಿಂದ ವಿದ್ಯಾರ್ಥಿಗಳಿಗೆ ಸ್ಥಿರವಾದ ಮನಸ್ಸು, ಆತ್ಮಸ್ಥೈರ್ಯ ದೊರೆಯುತ್ತದೆ.
ಚೌತಿಯು ರಾತ್ರಿ 12.44ರವರೆಗು ಇರುತ್ತದೆ. ಚಂದ್ರೋದಯವು ರಾತ್ರಿ 09.30ಕ್ಕೆ ಆಗಲಿದೆ. ಆದ್ದರಿಂದ ಆ ವೇಳೆಯಲ್ಲಿ ಚಂದ್ರನಿಗೆ ಅರ್ಘ್ಯವನ್ನು ನೀಡಬೇಕಾಗುತ್ತದೆ. 21 ಗರಿಕೆಗಳನ್ನು ತೆಗೆದುಕೊಂಡು ಗಣಪತಿಗೆ ಅರ್ಪಿಸಿದಲ್ಲಿ ಸಕಲ ಆಸೆಗಳು ನೆರವೇರುತ್ತವೆ. ಈ ವ್ರತವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಆರಂಭ ಮಾಡಬೇಕು. ಆ ನಂತರ ಪ್ರತಿ ತಿಂಗಳೂ ಈ ವ್ರತವನ್ನು ಆಚರಿಸಬಹುದು. ಇದನ್ನು ಜೀವಮಾನವಿಡೀ ಆಚರಿಸಬಹುದು. ಇಲ್ಲವಾದಲ್ಲಿ ಶ್ರಾವಣಮಾಸದಲ್ಲಿ ಆಚರಿಸುವುದು ಶ್ರೇಯಸ್ಕರ. 21ವರ್ಷಗಳ ಕಾಲ ಆಚರಿಸಿ ನಿಲ್ಲಸಬಹುದು. ಅನುಕೂಲವಿದ್ದಲ್ಲಿ ಉದ್ಯಾಪನೆಯನ್ನೂ ಮಾಡಬಹುದು. ಚಂದ್ರನಿಗೆ ಅರ್ಘ್ಯವನ್ನು ನೀಡದೇ ಹೋದಲ್ಲಿ ವ್ರತವು ಅಪೂರ್ಣವಾಗುತ್ತದೆ.
ಈ ದಿನ ಪೂರ್ತಿ ಚಿತ್ತ ನಕ್ಷತ್ರ ಇರುತ್ತದೆ. ವೃಗಶಿರಕ್ಕೆ ಕುಜನು ಅಧಿಪತಿ ಆಗುತ್ತದೆ. ಕುಜನಿಗೆ ಇಷ್ಟವಾದ ದೇವತೆ ಶ್ರೀಸುಭ್ರಹ್ಮಣ್ಯಸ್ವಾಮಿ ಮತ್ತು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ. ಆದ್ದರಿಂದ ಇಂದಿನ ಪೂಜೆಯಿಂದ ಸೋದರ ಮತ್ತು ಸೋದರಿಯರ ನಡುವಿನ ಕಲಹ ದೂರವಾಗುತ್ತದೆ. ಕೃಷಿಭೂಮಿಯ ವಿವಾದವು ದೂರವಾಗುತ್ತವೆ. ನರ ಮತ್ತು ರಕ್ತಕ್ಕೆ ಸಂಬಂಧಿಸಿದ ದೋಷದಿಂದಲೂ ಪರಿಹಾರ ಪಡೆಯಬಹುದು. ಬುಧವಾರವಾದ ಕಾರಣ ವಿದ್ಯಾರ್ಥಿಗಳಿಗೆ ವಿಶೇಷವಾದ ಫಲಗಳು ದೊರೆಯುತ್ತವೆ.
ಮಂಗಳಾರತಿ ಮಾಡುವ ವೇಳೆ ಈ ಮಂತ್ರವನ್ನು ಹೇಳಬೇಕು. ಇವುಗಳಲ್ಲಿ ಮೊದಲನೆಯದು ಚಿತ್ತ ನಕ್ಷತ್ರಕ್ಕೆ ಸಂಬಂಧಿಸಿದ್ದು. ಎರಡನೆ ಮಂತ್ರ ಶ್ರೀಸುಬ್ರಹ್ಮಣ್ಯಸ್ವಾಮಿಗೆ ಸಂಬಂಧಿಸಿದ್ದು. ಮೂರನೆ ಮಂತ್ರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಸಂಬಂಧಿಸಿದ್ದು.
- ತ್ವಷ್ಟಾ॒ ನಕ್ಷತ್ರ ಮ॒ಭ್ಯೇತಿ ಚಿ॒ತ್ರಾಮ್ ಸು॒ಭಗ್ಂ ಸಸಂಯುವ॒ತಿಗ್ಂ ರೋಚಮಾನಾಮ್
ನಿ॒ವೇ॒ಶಯ ನ್ನ॒ಮೃತಾ॒ ನ್ಮರ್ತ್ಯಾಗ್ಗ್॑ಶ್ಚ ರೂ॒ಪಾಣಿ ಪಿ॒ಗ್ಂ॒ಶನ್ ಭುವನಾನಿ॒ ವಿಶ್ವಾ
ತನ್ನ॒ಸ್ತ್ವಷ್ಟಾ॒ ತದು ಚಿ॒ತ್ರಾ ವಿಚಷ್ಟಾಮ್ ತನ್ನಕ್ಷತ್ರಂ ಭೂರಿ॒ದಾ ಅಸ್ತು॒ ಮಹ್ಯಮ್
ತನ್ನಃ ಪ್ರ॒ಜಾಂವೀ॒ರವತೀಗ್ಂ ಸನೋತು । ಗೋಭಿರ್ನೋ॒ ಅಶ್ವೈ॒ಸ್ಸಮನಕ್ತು ಯ॒ಜ್ಞಮ್
2. ಇಷ್ಟಾರ್ಥಸಿದ್ಧಿಪ್ರದಮೀಶಪುತ್ರಂ ಇಷ್ಟಾನ್ನದಂ ಭೂಸುರಕಾಮಧೇನುಮ್
ಗಂಗೋದ್ಭವಂ ಸರ್ವಜನಾನುಕೂಲಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ
3. ಸಂಸೃಷ್ಟಂ॒ ಧನಮು॒ಭಯಂ ಸ॒ಮಾಕೃತಮ॒ಸ್ಮಭ್ಯಂ ದತ್ತಾಂ॒ವರುಣಶ್ಚ ಮ॒ನ್ಯುಃ
ಭಿಯಂ॒ ದಧಾನಾ॒ ಹೃದಯೇಷು॒ ಶತ್ರವಃ॒ ಪರಾಜಿತಾಸೋ॒ ಅಪ॒ ನಿಲಯನ್ತಾಮ್
ಸಂಕಷ್ಟಹರ ಚತುರ್ಥಿಯ ಕತೆ
ವನವಾಸದಲ್ಲಿದ್ದ ಧರ್ಮರಾಯನು ತನ್ನ ಕಷ್ಟಗಳ ನಿವಾರಣೆಗಾಗಿ ವ್ರತವೊಂದನ್ನು ಹೇಳಲು ಕೇಳಿದಾಗ ಶ್ರಿಕೃಷ್ಣನು ಸಂಕಷ್ಟಹರ ಚತುರ್ಥಿ ವ್ರತದ ಬಗ್ಗೆ ತಿಳಿಸುತ್ತಾನೆ. ಪಾರ್ವತಿಯು ಈಶ್ವರನನ್ನು ವರಿಸಲು ಬೇಕಾದ ವ್ರತದ ಬಗ್ಗೆ ತಿಳಿಯಲು ಕಠಿಣ ತಪಸ್ಸನ್ನು ಆಚರಿಸುತ್ತಾಳೆ. ಆಗ ಗಣನಾಧನು ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸಲ್ಲು ತಿಳಿಸುತ್ತಾನೆ. ಸೂರ್ಯೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ಸಂಜೆಯವರೆಗೂ ಉಪವಾಸ ಮಾಡಬೇಕೆಂದು ತಿಳಿಸುತ್ತಾನೆ. ಪೂಜಾ ಸ್ಥಳವನ್ನು ಶುಚಿಗೊಳಿಸಿ ಅಷ್ಟದಳ ಪದ್ಮವನ್ನು ಬರೆದು ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಿ ಕಲ್ಪೋಕ್ತಪ್ರಕಾರ ಪೂಜೆಯನ್ನು ಮಾಡಬೇಕು. ನೇವೇದ್ಯಕ್ಕಾಗಿ ಎಳ್ಳಿನಿಂದ ಮಾಡಿದ 21 ಮೋದಕಗಳನ್ನು ಅರ್ಪಿಸಬೇಕು.
ಈ ಪೂಜೆಯಿಂದ ಪಾರ್ವತಿಯ ವಿವಾಹ ನಡೆಯಿತೆಂದು ಹೇಳಲಾಗುತ್ತದೆ. ಸರಳವಾಗಿ ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಸಂಕಲ್ಪ ಮಾಡುವಾಗ 'ಸಂಕಷ್ಟಹರ ಗಣಪತಿ ಪ್ರಸಾದೇನ ವಿದ್ಯಾ ಆರೋಗ್ಯ ಪುತ್ರಲಾಭಾದಿ ಫಲ ಸಿಧ್ಯರ್ಥಂ ಮನಸಾಭಿಷ್ಟ ಸಕಲ ಫಲ ಸಿಧ್ಯಾರ್ಥಂ ಶೀ ಸಂಕಷ್ಟ್ ಅಹ ಗಣಪತಿ ಪೂಜಾನಿ ಕರೀಷ್ಯೆ' ಎಂದು ಹೇಳಬೇಕು. ಆ ನಂತರ ಕಲಶಪೂಜೆ, ಶಂಖಪೂಜೆ ಮಾಡಬೇಕು.
ಕೆಲವರು ಪ್ರತ್ಯೇಕವಾಗಿ ಮಹಾಗಣಪತಿ ಪೂಜೆ ಮಾಡುತ್ತಾರೆ. ಹಲವರು ನೇರವಾಗಿ ಸಂಕಷ್ಟಹರ ಚತುರ್ಥಿ ಪೂಜೆಯನ್ನು ಮಾಡುತ್ತಾರೆ. ಪಂಚಾಮೃತ ಸ್ನಾನದ ನಂತರ ಗಂಧ, ಪುಷ್ಪ, ಚಿನ್ನ, ರುದ್ರಾಕ್ಷಿ, ವಿಭೂತಿ, ಬಿಲ್ವಪತ್ರೆ ಮತ್ತು ಗರಿಕೆಯ ಅಭಿಷೇಕವನ್ನು ಮಾಡಬೇಕು. ರುಧ್ರ, ಚಮೆ, ಪುರುಷಸೂಕ್ತ, ಶ್ರೀಸೂಕ್ತದ ಮೂಲಕ ಅರ್ಚಿಸಬೇಕು. ಆನಂತರ ಆವರಣ ಪೂಜೆಯನ್ನು ಮಾಡಬೇಕು. ದೂಪ ದೀಪ ನಿವೇದನೆ ಉತ್ತರ ನೀರಾಜನ ಆದ ನಂತರ ಗಣಪತಿ ಸೂಕ್ತವನ್ನು ಮಂತ್ರಪುಷ್ಪವನ್ನಾಗಿ ಹೇಳಬೇಕು. ಚಂದ್ರನಿಗೆ ಅರ್ಘ್ಯನೀಡಿದ ನಂತರ ಉಪಾಯನದಾನ ನೀಡುವ ಮೂಲಕ ವ್ರತವನ್ನು ಮುಕ್ತಾಯ ಮಾಡಬೇಕು. ಪ್ರಸಾದ ರೂಪವಾಗಿ ಮೋದಕ ಮತ್ತು ಚಿಗುಲಿಯನ್ನು ನೀಡಬೇಕು.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
