ನರ್ಮದಾ ನದಿ ಅಷ್ಟೇಕೆ ಪವಿತ್ರ? ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು-hindu religion significance of narmada river who is pushkara why he blessed with lord shiva as power of water rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನರ್ಮದಾ ನದಿ ಅಷ್ಟೇಕೆ ಪವಿತ್ರ? ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು

ನರ್ಮದಾ ನದಿ ಅಷ್ಟೇಕೆ ಪವಿತ್ರ? ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು

Narmada River: ಗಂಗಾ ನದಿಯಷ್ಟೇ ನರ್ಮದಾ ನದಿಗೆ ಪ್ರಾಮುಖ್ಯತೆ ನೀಡಲಾಗಿದೆ. ಮೇ 1 ರಿಂದ ನರ್ಮದಾ ಪುಷ್ಕರ ಆರಂಭವಾಗಿದ್ದು ಮೇ 12 ವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಅನೇಕ ಭಕ್ತರು ನರ್ಮದೆಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ. ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು.

ನರ್ಮದಾ ನದಿ ಅಷ್ಟೇಕೆ ಪವಿತ್ರ? ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು
ನರ್ಮದಾ ನದಿ ಅಷ್ಟೇಕೆ ಪವಿತ್ರ? ಶಿವ ಪಾರ್ವತಿ ಬೆವರಿನಿಂದ ಹುಟ್ಟಿದ ನರ್ಮದೆ ಭೂಮಿಗೆ ಬಂದ ಕಥೆಯಿದು (PC: Unsplash)

ಭಾರತದಲ್ಲಿ ಗಂಗೆಯಷ್ಟೇ ಇನ್ನೂ ಕೆಲವು ನದಿಗಳು ಪ್ರಾಮುಖ್ಯತೆ ಪಡೆದಿವೆ. ಅವುಗಳನ್ನು ನರ್ಮದಾ ನದಿ ಕೂಡಾ ಒಂದು. ನರ್ಮದೆಯು ಶಿವ ಪಾರ್ವತಿಯರ ಬೆವರಿನಿಂದ ಜನಿಸಿದ ಕನ್ಯೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಮೇ 1 ರಿಂದ ನರ್ಮದಾ ಪುಷ್ಕರ ಆಚರಣೆ ಆರಂಭ ಆಗಿದ್ದು ಮೇ 12ರವರೆಗೂ ನಡೆಯುತ್ತದೆ. ಈ ಸಂದರ್ಭದಲ್ಲಿ ನರ್ಮದೆಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ನರ್ಮದೆಯ ಜನನ

ಹಿಂದೂ ಪುರಾಣಗಳಲ್ಲಿ ನರ್ಮದಾ ನದಿಗೆ ವಿಶೇಷ ಸ್ಥಾನವಿದೆ. ನರ್ಮದೆಯ ಕಥೆಯು ಸ್ಕಂದ, ಕೂರ್ಮ ಮತ್ತು ಮತ್ಸ್ಯ ಪುರಾಣಗಳಲ್ಲಿ ಕಂಡು ಬರುತ್ತದೆ. ಶಿವನ ದೇಹದಿಂದ ಹುಟ್ಟಿರುವುದರಿಂದ ಅಯೋನಿಜ ಎಂದೂ, ಶಿವನಿಗೆ ಹಿತವಾಗಿರುವುದರಿಂದ ನರ್ಮದೆ ಎಂದೂ, ಅಲೆಗಳೊಡನೆ ಹರಿಯುವುದರಿಂದ ದೇವನದಿ ಎಂದೂ ನರ್ಮದೆಯನ್ನು ಕರೆಯುತ್ತಾರೆ. ಇವುಗಳಲ್ಲದೆ ಪೂರ್ವ ಗಂಗಾ ಮತ್ತು ಸೋಮೋದ್ಭವ ಎಂದೂ ಅನೇಕ ಹೆಸರುಗಳಿವೆ. ನಾಗದೇವತೆಗಳಿಗೆ ಅವರ ರಾಜ್ಯವನ್ನು ಒದಗಿಸಿಕೊಡಲು ನರ್ಮದೆಯು ಪುರಕುತ್ಸು ಎಂಬ ರಾಜನನ್ನು ಆಕರ್ಷಿಸಿ ಅವನನ್ನು ನಾಗಲೋಕಕ್ಕೆ ಕಳಿಸಿದಳು ಎಂಬ ಕಥೆ ಕೂಡಾ ಜನಜನಿತವಾಗಿದೆ. ನರ್ಮದೆಯ ಹುಟ್ಟಿದ ನಂತರ, ಎಲ್ಲಾ ದೇವತೆಗಳು ಅವಳ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಮದುವೆಯಾಗಲು ಪ್ರಯತ್ನಿಸಿದರು. ನರ್ಮದೆಯು ಯಾರನ್ನು ಇಷ್ಟಪಡುವಳೋ ಆಕೆಗೆ ಕೊಟ್ಟು ಮದುವೆ ಮಾಡುವುದಾಗಿ ಶಿವನು ಹೇಳಿದ ಕಾರಣ ಇಂದ್ರ ಸೇರಿದಂತೆ ಎಲ್ಲಾ ದೇವತೆಗಳು ಅವಳನ್ನು ಪಡೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ.

ಭಾರತೀಯರ ದೃಷ್ಟಿಯಲ್ಲಿ ನದಿ ಎಂದರೆ ಕೇವಲ ಹರಿಯುವ ನೀರಲ್ಲ. ಬಾಯಾರಿಕೆಯನ್ನು ತಾಪವನ್ನು ನೀಗುವ ಜಲ ಮಾತ್ರವಲ್ಲ, ಜೀವ ನೀಡುವ ಶಕ್ತಿ. ಬದುಕು ನೀಡುವ ತಾಯಿ ಕೂಡ. ಅದಕ್ಕಾಗಿಯೇ ನಾವು ನದಿಯನ್ನು ದೇವತೆ ಎಂದು ಪೂಜಿಸುತ್ತೇವೆ. ಮನುಷ್ಯನಿಗೆ ಅನಾದಿ ಕಾಲದಿಂದಲೂ ತನ್ನ ತಲೆಮಾರುಗಳನ್ನು ಪೋಷಿಸುವ ನದಿಯ ಬಗ್ಗೆ ಕೃತಜ್ಞತೆ ಮಾತ್ರವಲ್ಲ, ಆರಾಧನೆಯ ಭಾವನೆಯೂ ಇದೆ. ಆದ್ದರಿಂದ ಆ ನದಿಯ ದಡದಲ್ಲಿ ಪಿತೃದೇವತೆಗಳ ಕಾರ್ಯ ಮಾಡುತ್ತಾನೆ.

ನರ್ಮದಾ ನದಿಯ ವೈಶಿಷ್ಟ್ಯ

ಮಧ್ಯ ಪ್ರದೇಶದ ಶಾಹ್‌ದೋಲ್ ಜಿಲ್ಲೆಯ ಅಮರ ಕಂಟಕ ಬೆಟ್ಟದ ನರ್ಮದಾ ಕುಂಡ ಎಂಬ ಒಂದು ಸಣ್ಣ ಕುಂಡದಿಂದ ಉಗಮಿಸುವ ನರ್ಮದಾ ನದಿ, ಬಯಲು ಸೀಮೆಯ ಮೂಲಕ ಬಂಡೆಗಳು, ಬೆಟ್ಟಗಳು ಮತ್ತು ಕಾಡುಗಳ ಮೂಲಕ ಹರಿಯುತ್ತದೆ. ಈ ನದಿ ಸಾಗುವ ಹಾದಿಯಲ್ಲಿರುವ ಪ್ರತಿಯೊಂದು ಕ್ಷೇತ್ರವು ಕೆಲವು ಪೌರಾಣಿಕ ಪಾತ್ರಗಳೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ. ಮಾಂಧಾತ ಚಕ್ರವರ್ತಿ ತಪಸ್ಸು ಮಾಡಿದ ಮಾಂಧಾತ ದ್ವೀಪ, ಜಬಾಲಿಯ ಹೆಸರಿನ ಜಬಲ್ಪುರ, ಮಹರ್ಷಿ ಭೃಗು ತಪಸ್ಸು ಮಾಡಿದ ತಬ್ರೋಚ್ ಮುಂತಾದ ಸ್ಥಳಗಳು ಪುರಾಣ ಕಾಲದಲ್ಲಿದ್ದವು ಎನ್ನಲಾಗಿದೆ. ಈ ನದಿಯ ಮತ್ತೊಂದು ವೈಶಿಷ್ಟ್ಯವೆಂದರೆ ಶಿವಲಿಂಗವನ್ನು ಹೋಲುವ ಬಾಣಲಿಂಗಗಳು. ಇಷ್ಟೆಲ್ಲಾ ವಿಸ್ಮಯಗಳು ಇರುವ ಕಾರಣ ನರ್ಮದಾ ನದಿಯನ್ನು ನೋಡಿದರೆ ಸಾಕು ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ನರ್ಮದಾ ನದಿಯ ದಡದಲ್ಲಿ ಸ್ನಾನ, ದಾನ, ಯಾಗಗಳನ್ನು ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ.

ಪುಷ್ಕರ ಯಾರು?

ತುಂದಿಲ ( ಪುಷ್ಕರ) ಎಂಬ ಋಷಿಯು ಶಿವನನ್ನು ಕುರಿತು ಕಠಿಣ ತಪಸ್ಸನ್ನು ಆಚರಿಸುತ್ತಾನೆ. ಆತನ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೋ ಕೇಳು ಎಂದು ಕೇಳುತ್ತಾನೆ. ನಿನ್ನಲ್ಲಿ ನನಗೆ ಶಾಶ್ವತ ಸ್ಥಾನ ದೊರೆಯುವಂತೆ ಅನುಗ್ರಹಿಸುವುದಾಗಿ ವರ ಕೇಳುತ್ತಾನೆ. ಅವನ ಭಕ್ತಿಗೆ ಮೆಚ್ಚುವ ಶಿವನು ತನ್ನ ಜಲಶಕ್ತಿಯ ಪ್ರತಿನಿಧಿಯಾಗಲು ಆಶೀರ್ವದಿಸುತ್ತಾನೆ. ಈ ನಡುವೆ ಬ್ರಹ್ಮನಿಗೆ ತನ್ನ ಸೃಷ್ಠಿಯನ್ನು ಪೋಷಿಸಲು ಜಲಶಕ್ತಿಯ ಅಗತ್ಯ ಒದಗಿಬರುತ್ತದೆ. ಹಾಗಾಗಿ ಪುಷ್ಕರನನ್ನು ತನ್ನೊಂದಿಗೆ ಇರಲು ಆಹ್ವಾನಿಸಿದನು. ಶಿವನ ಕೃಪೆಯಿಂದ ಪುಷ್ಕರನು ಬ್ರಹ್ಮನ ಬಳಿಗೆ ಹೋಗಿ ಸೃಷ್ಟಿಗೆ ಸಹಾಯ ಮಾಡಿದನು. ಬ್ರಹ್ಮನ ಕೆಲಸ ಮುಗಿದಾಗ ಪುಷ್ಕರನನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. ಆದ್ದರಿಂದ ಪುಷ್ಕರನು ಬ್ರಹ್ಮನೊಂದಿಗೆ ಉಳಿದನು. ಬೃಹಸ್ಪತಿಯು ತನ್ನ ಜಲಶಕ್ತಿಯಿಂದ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ವಿಮೋಚನೆಗೊಳಿಸಬಲ್ಲ ಪುಷ್ಕರನನ್ನು ತನ್ನೊಂದಿಗೆ ಕಳುಹಿಸುವಂತೆ ಬ್ರಹ್ಮನನ್ನು ವಿನಂತಿಸಿದನು. ಪುಷ್ಕರನನ್ನು ಶಾಶ್ವತವಾಗಿ ಬಿಟ್ಟುಕೊಡಲು ಇಷ್ಟಪಡದ ಬ್ರಹ್ಮನು ಉಪಾಯವೊಂದನ್ನು ಸೂಚಿಸುತ್ತಾನೆ.

ಗುರುವು ಒಂದು ವರ್ಷದಲ್ಲಿ ಯಾವ ರಾಶಿಗೆ ಪ್ರವೇಶಿಸುವನೋ ಆ ದಿನದಿಂದ 12 ದಿನಗಳವರೆಗೆ ಒಂದು ನದಿಯಲ್ಲಿ ಇರುವಂತೆ ಸೂಚಿಸುತ್ತಾನೆ. ಹಾಗೇ 12 ನದಿಗಳಿಗೆ ಒಂದೊಂದು ನದಿಗಳನ್ನು ನಿಯೋಜಿಸುತ್ತಾನೆ. ಗಂಗಾ ನದಿ (ಮೇಷ), ನರ್ಮದಾ (ವೃಷಭ), ಸರಸ್ವತಿ (ಮಿಥುನ), ಯಮುನಾ (ಕರ್ಕಾಟಕ), ಗೋದಾವರಿ (ಸಿಂಹ), ಕೃಷ್ಣ (ಕನ್ಯಾರಾಶಿ), ಕಾವೇರಿ (ತುಲಾ), ಭೀಮ/ತಾಮ್ರಪರ್ದಿ (ವೃಶ್ಚಿಕ), ತಪತಿ/ಬ್ರಹ್ಮಪುತ್ರ (ಧನು ರಾಶಿ). , ತುಂಗಭದ್ರ (ಮಕರ), ಸಿಂಧು (ಕುಂಭ), ಪ್ರಾಣಹಿತ (ಮೀನ).

ನರ್ಮದಾ, ಭಾರತದ 5ನೇ ದೊಡ್ಡ ನದಿಯಾಗಿದೆ. ಪಶ್ಚಿಮದಲ್ಲಿ ಅತಿ ಉದ್ದವಾಗಿ ಹರಿಯುತ್ತದೆ. ಆದ್ದರಿಂದಲೇ ಇದನ್ನು ಮಹಾನದಿ ಎಂದೂ ಕರೆಯುತ್ತಾರೆ. ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹರಿಯುವ ಈ ನದಿ ಎರಡೂ ರಾಜ್ಯಗಳಿಗೆ ಅಪಾರ ಪ್ರಮಾಣದ ನೀರನ್ನು ಒದಗಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಆರ್ಥಿಕತೆ ಮತ್ತು ಸಾಮಾಜಿಕ ಜೀವನವನ್ನು ನರ್ಮದೆ ಇಲ್ಲದೆ ಕಲ್ಪಿಸಿಕೊಳ್ಳಲಾಗುವುದಿಲ್ಲ. ಸುಮಾರು ಒಂದು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ನರ್ಮದಾ ಜಲಾನಯನ ಪ್ರದೇಶವು ಅತ್ಯಂತ ವೈವಿಧ್ಯಮಯ ಮತ್ತು ಪುರಾತನವಾಗಿದೆ. ಸುಮಾರು 16 ಮಿಲಿಯನ್ ವರ್ಷಗಳ ಹಿಂದೆ, ಉತ್ತರ ಭಾರತ ಮತ್ತು ಈಗಿನ ಪರ್ಯಾಯ ದ್ವೀಪವು ಪ್ರತ್ಯೇಕವಾಗಿತ್ತು. ಅವುಗಳ ನಡುವೆ ರೂಪುಗೊಂಡ ಕಣಿವೆಯಲ್ಲಿ ನರ್ಮದೆ ಹರಿಯುತ್ತದೆ.

ನರ್ಮದಾ ಜಲಾನಯನ ಪ್ರದೇಶವು ಖನಿಜಗಳಿಂದ ಕೂಡಿರುವ ಮೆಕ್ಕಲು ಮಣ್ಣಿನಿಂದ ಸಮೃದ್ಧವಾಗಿದೆ. ಜಬಲ್ಪುರ್, ದಭೋಯ್, ಧರ್ಮಪುರಿ, ಹರ್ಧಾ ಮತ್ತು ಇತರ ನಗರಗಳು ಮತ್ತು ಪಟ್ಟಣಗಳು ​​ನರ್ಮದೆಯ ದಡದಲ್ಲಿವೆ. ನರ್ಮದೆಯ ಉದ್ದಕ್ಕೂ ಇರುವ ದೇಗುಲಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಬಹುದು.

ಅಮರ್ ಕಂಟಕ್

ಅಮರ್ ಕಂಟಕ್ ದಟ್ಟವಾದ ಕಾಡಿನಲ್ಲಿ ಕಂಡುಬರುವ ಅಪರೂಪದ ಪವಿತ್ರ ಸ್ಥಳವಾಗಿದೆ. ನರ್ಮದಾ ನದಿಯ ಜನ್ಮಸ್ಥಳ ಇದು. ವಿಂಧ್ಯಾ ಮತ್ತು ಸಾತ್ಪುರ ಪರ್ವತ ಶ್ರೇಣಿಗಳ ಜಂಕ್ಷನ್ ಆಗಿದೆ. ಇಲ್ಲಿನ ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ. ಇಲ್ಲಿ 600ಕ್ಕೂ ಹೆಚ್ಚು ಅಪರೂಪದ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಕಾಳಿದಾಸ, ಕಬೀರರಂತಹ ಮಹನೀಯರ ಇಷ್ಟವಾದ ಸ್ಥಳವಿದು. ಸಾವಿರಾರು ವರ್ಷಗಳ ಹಿಂದೆ ರಾಜ ಕಾಮದೇವ ನಿರ್ಮಿಸಿದ ತ್ರಿಮುಖಿ ದೇವಾಲಯ, ಜೈನ ಮಂದಿರ, ಶಂಕರಾಚಾರ್ಯ ಆಶ್ರಮ ಮುಂತಾದ ಅನೇಕ ಕಟ್ಟಡಗಳನ್ನು ಇಲ್ಲಿ ಕಾಣಬಹುದು.

ಓಂಕಾರೇಶ್ವರ

ಹಿಂದೂ ದೇಗುಲಗಳಲ್ಲಿ ಜ್ಯೋತಿರ್ಲಿಂಗಗಳ ಪ್ರಾಮುಖ್ಯತೆಯನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಇವುಗಳನ್ನು ನೋಡಿದರೆ ಜನ್ಮ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ಅವುಗಳಲ್ಲಿ ಒಂದು ನದಿಯ ದಂಡೆಯಲ್ಲಿದೆ, ಅದೇ ಓಂಕಾರೇಶ್ವರ. ಈ ಪ್ರದೇಶ ಓಂ ಆಕಾರದಿಂದಾಗಿ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ರಾಕ್ಷಸರನ್ನು ಶಿಕ್ಷಿಸಲು ಶಿವನು ಇಲ್ಲಿ ಓಂಕಾರೇಶ್ವರನಾಗಿ ಅವತರಿಸಿದನೆಂದು ಸ್ಥಳೀಯ ಐತಿಹ್ಯವಿದೆ. ಅದೇ ದ್ವೀಪದಲ್ಲಿ ಅಮಲೇಶ್ವರನ ಹೆಸರಿನಲ್ಲಿ ಇನ್ನೊಂದು ಶಿವನ ದೇವಾಲಯವಿದೆ. ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಇಲ್ಲಿ ಕಾಣಬಹುದು, ಅವರು ತಮ್ಮ ಗುರುಗಳಾದ ಗೋವಿಂದ ಭಗವತ್ಪಾದರನ್ನು ಭೇಟಿ ಆಗಿದ್ದು ಇದೇ ಸ್ಥಳದಲ್ಲಿ. ಈ ದ್ವೀಪದಿಂದ ಕೇವಲ 140 ಕಿಮೀ ದೂರದಲ್ಲಿ ಉಜ್ಜಯಿನಿಯಲ್ಲಿ ಮತ್ತೊಂದು ಜ್ಯೋತಿರ್ಲಿಂಗ ಕ್ಷೇತ್ರವಿದೆ.

ಜಬಲ್ಪುರ

ಪುರಾಣಗಳು, ರಾಜರು, ವಸಾಹತುಶಾಹಿ, ನಗರೀಕರಣ, ಭೌಗೋಳಿಕ ವೈವಿಧ್ಯತೆ ಸಬಂಧಿಸಿದಂತೆ ಜಬಲ್ಪುರವು ಬಹಳಷ್ಟು ಕೊಡುಗೆ ನೀಡಿದೆ. ಇಲ್ಲಿ ಮಾರ್ಬಲ್‌ ಕಲ್ಲುಗಳು, ಧುವಂದರ್ ಜಲಪಾತಗಳು, ಬೆಟ್ಟದ ಮೇಲೆ ನಿರ್ಮಿಸಲಾದ ಮದನ್ ಮಹಲ್ ಕೋಟೆ, ಕನ್ಹಾ ರಾಷ್ಟ್ರೀಯ ಉದ್ಯಾನವನ, ಬಾರ್ಲಿ ಅಣೆಕಟ್ಟು ಮುಂತಾದ ಅನೇಕ ಪ್ರವಾಸಿ ಸ್ಥಳಗಳಿವೆ. ಚೌಸತ್ ಯೋಗಿನಿ ದೇವಾಲಯವು 64 ಯೋಗಿನಿಯರನ್ನು ಪ್ರತಿಷ್ಠಾಪಿಸುವ ಅತೀಂದ್ರಿಯ ಸ್ಥಳವಾಗಿದೆ . ತ್ರಿಪುರ ಸುಂದರಿ ದೇವಸ್ಥಾನ ಮತ್ತು ತಾಲ್ ಐದಾ ಜೈನ ಮಂದಿರದಂತಹ ದೇವಾಲಯಗಳು ಜಬಲ್ಪುರದ ಬಹಳಷ್ಟು ಕಡೆ ಕಂಡುಬರುತ್ತವೆ. ವಿಶ್ವವಿಖ್ಯಾತ ಖಜರಾಹೊ ದೇವಾಲಯಗಳು ಇಲ್ಲಿಂದ ಕೇವಲ 250 ಕಿ.ಮೀ ದೂರದಲ್ಲಿದೆ.

ನೇಮಾವರ್

ಇದು ಬಹಳ ಚಿಕ್ಕ ಊರು. ಆದರೆ ಪ್ರತಿ ಹೆಜ್ಜೆಯಲ್ಲೂ ಅಪರೂಪದ ದೇವಾಲಯಗಳಿವೆ. ಇಲ್ಲಿರುವ ಸಾವಿರ ವರ್ಷಗಳಷ್ಟು ಹಳೆಯದಾದ ಸಿದ್ಧನಾಥ ದೇವಾಲಯವು ವಾಸ್ತುಶಿಲ್ಪದ ಅತ್ಯದ್ಭುತ ತಾಣವಾಗಿದೆ. ಇದು ನಗರ ಪ್ರದೇಶಗಳಿಂದ ಊರ ಇರುವ ಕಾರಣ ಆಕ್ರಮಣಗಳಿಂದ ಉಳಿದುಕೊಂಡಿದೆ. ಈ ದೇವಾಲಯದಲ್ಲಿನ ಶಿಲ್ಪಕಲೆಗಳು ಬಹಳ ಆಕರ್ಷಕವಾಗಿದೆ.

ಪರಿಕ್ರಮ

ದೇವಸ್ಥಾನದ ಪ್ರದಕ್ಷಿಣೆ ಕೇಳಿದ್ದೇವೆ, ಗಿರಿ ಪ್ರದಕ್ಷಿಣೆ ಕೇಳಿದ್ದೇವೆ ಆದರೆ ನದಿಗೆ ಪ್ರದಕ್ಷಿಣೆ ಹಾಕುವ ಅದ್ಭುತ ಸಂಪ್ರದಾಯವೇ ನರ್ಮದಾ ಪರಿಕ್ರಮ. ಇದು ನರ್ಮದಾ ಸುತ್ತ ಸುಮಾರು 2,600 ಕಿಲೋಮೀಟರ್ ಪ್ರಯಾಣವಾಗಿದೆ. ನರ್ಮದೆಯು ಅರಬ್ಬೀ ಸಮುದ್ರವನ್ನು ಸಂಧಿಸುವ ಭರೂಚ್‌ನಿಂದ ಪ್ರಾರಂಭವಾಗಿ, ಅದು ಹುಟ್ಟುವ ಅಮರ್ ಕಂಟಕ್‌ನವರೆಗೆ ಹೋಗುತ್ತದೆ. ತದನಂತರ ಕರಾವಳಿಯನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ಮತ್ತೆ ಭರೂಚ್‌ಗೆ ಬರುತ್ತದೆ. ಇದು ಅಪರೂಪದ ಪ್ರಯಾಣವಾಗಿದ್ದು, ನೀವು ದಾರಿಯುದ್ದಕ್ಕೂ ದೇಗುಲಗಳಿಗೆ ಭೇಟಿ ನೀಡಬಹುದು, ಅವುಗಳಿಗೆ ಸಂಬಂಧಿಸಿದ ದಂತಕಥೆಗಳನ್ನು ಕೇಳಬಹುದು. ಮತ್ತು ಸ್ಥಳೀಯ ಸಂಪ್ರದಾಯಗಳನ್ನು ನೋಡಬಹುದು. ಸಾಧು ಸಂತರು ನೇರ ಪಾದಯಾತ್ರೆ ಮಾಡುತ್ತಾರೆ. ಅದು ಸಾಧ್ಯವಾಗದೆ ಇರುವವರಿಗೆ ಪ್ರವಾಸೋದ್ಯಮ ಇಲಾಖೆಯು ಸಾರಿಗೆ ವ್ಯವಸ್ಥೆ ಕಲ್ಪಿಸಿದೆ ಎಂದು ಖ್ಯಾತ ಅಧ್ಯಾತ್ಮಿಕ ಹಾಗೂ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.