ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬ್ರಹ್ಮ ಕಮಲ ಎಂದರೇನು? ವರ್ಷಕ್ಕೆ ಒಂದೇ ಬಾರಿ ರಾತ್ರಿ ವೇಳೆ ಅರಳುವ ಈ ದೈವಿಕ ಹೂ ಸೃಷ್ಟಿಯಾದ ಕಥೆ ಇಲ್ಲಿದೆ

ಬ್ರಹ್ಮ ಕಮಲ ಎಂದರೇನು? ವರ್ಷಕ್ಕೆ ಒಂದೇ ಬಾರಿ ರಾತ್ರಿ ವೇಳೆ ಅರಳುವ ಈ ದೈವಿಕ ಹೂ ಸೃಷ್ಟಿಯಾದ ಕಥೆ ಇಲ್ಲಿದೆ

Brahma Kamala: ವರ್ಷಕ್ಕೆ ಒಂದು ಬಾರಿ ಅರಳುವ ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಕಥೆ ಕೂಡಾ ಇದೆ. ಬ್ರಹ್ಮ ಕಮಲ ಎಂದರೇನು? ವರ್ಷಕ್ಕೆ ಒಂದೇ ಬಾರಿ ರಾತ್ರಿ ವೇಳೆ ಅರಳುವ ಈ ದೈವಿಕ ಹೂ ಸೃಷ್ಟಿಯಾದ ಕಥೆ ಇಲ್ಲಿದೆ.

ಬ್ರಹ್ಮ ಕಮಲ ಎಂದರೇನು? ವರ್ಷಕ್ಕೆ ಒಂದೇ ಬಾರಿ ರಾತ್ರಿ ವೇಳೆ ಅರಳುವ ಈ ದೈವಿಕ ಹೂ ಸೃಷ್ಟಿಯಾದ ಕಥೆ ಇಲ್ಲಿದೆ
ಬ್ರಹ್ಮ ಕಮಲ ಎಂದರೇನು? ವರ್ಷಕ್ಕೆ ಒಂದೇ ಬಾರಿ ರಾತ್ರಿ ವೇಳೆ ಅರಳುವ ಈ ದೈವಿಕ ಹೂ ಸೃಷ್ಟಿಯಾದ ಕಥೆ ಇಲ್ಲಿದೆ (PC: ಜಾನಕಿ ರಾಘವ)

ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ಕೂಡಾ ದೇವರೆಂದು ಪೂಜಿಸಲಾಗುತ್ತದೆ. ಪ್ರಕೃತಿ ನಮಗೆ ನೀಡುತ್ತಿರುವ ಬಹಳಷ್ಟು ಹೂಗಳನ್ನು ದೇವರ ಪೂಜೆಗಾಗಿ ಬಳಸುತ್ತೇವೆ. ಕೆಲವೊಂದು ಹೂಗಳು ದೇವರ ಮುಡಿಗೇರಿದರೆ, ಕೆಲವೊಂದು ಪೂಜೆಗೆ ಬಳಸುವುದಕ್ಕಿಂತ ಗಿಡದಲ್ಲೇ ಇದ್ದರೆ ಚೆಂದ ಎನಿಸುತ್ತದೆ. ಅವುಗಳಲ್ಲಿ ಬ್ರಹ್ಮ ಕಮಲ ಕೂಡಾ ಒಂದು. ಇದು ಬಹಳ ಅಪರೂಪದ ಪುಷ್ಪ.

ಬ್ರಹ್ಮ ಕಮಲ ಎಂಬ ಹೆಸರು ಬಂದಿದ್ದು ಹೇಗೆ?

ಬ್ರಹ್ಮ ಕಮಲವು ವರ್ಷಕ್ಕೊಮ್ಮೆ ಅರಳುತ್ತದೆ. ಆದ್ದರಿಂದಲೇ ಈ ಹೂವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಂದೂ ಧರ್ಮದಲ್ಲಿ ಇದು ಬಹಳ ಪೌರಾಣಿಕ , ಧಾರ್ಮಿಕ ಮಹತ್ವವನ್ನು ಹೊಂದಿದೆ. ಬ್ರಹ್ಮ ಕಮಲ ಎಂದರೆ ಸೃಷ್ಟಿಕರ್ತ ಬ್ರಹ್ಮ ಧ್ಯಾನ ಮಾಡುತ್ತಾ ಕುಳಿತಿರುವ ಹೂವು. ಬ್ರಹ್ಮನು ವಿಷ್ಣುವಿನ ಹೊಕ್ಕುಳದಿಂದ ಹೊರ ಹೊಮ್ಮುವ ಕಮಲದಿಂದ ಜನಿಸಿದರಿಂದ ಈ ಕಮಲಕ್ಕೆ ಬ್ರಹ್ಮ ಕಮಲ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹೂವನ್ನು ದೇವರಂತೆ ಪರಿಗಣಿಸಲಾಗಿದೆ.

ವರ್ಷಕ್ಕೆ ಒಮ್ಮೆ ಮಾತ್ರ ಅರಳುವ ಅಪರೂಪದ ಹೂ ಇದು
ವರ್ಷಕ್ಕೆ ಒಮ್ಮೆ ಮಾತ್ರ ಅರಳುವ ಅಪರೂಪದ ಹೂ ಇದು

ಸುವಾಸನೆಯಿಂದ ಕೂಡಿದ ಅಪರೂಪದ ಪುಷ್ಪ

ಬಹ್ಮ ಕಮಲ ಬೆಳೆಸುವವರು ಬಹಳ ಕಡಿಮೆ. ಇದು ಹಿಮಾಲಯದಲ್ಲಿ ಕಂಡುಬರುವ ಅತ್ಯಂತ ಅಪರೂಪದ ಸಸ್ಯವಾಗಿದೆ. ಈ ಹೂವಿನ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಂಡಿರುವವರು ಗಿಡವನ್ನು ಮನೆಯಲ್ಲಿ ಬೆಳೆಸುತ್ತಾರೆ. ಉತ್ತರಾಖಂಡದಂತಹ ಶೀತ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಬ್ರಹ್ಮ ಕಮಲ ಗಿಡವನ್ನು ದಕ್ಷಿಣ ರಾಜ್ಯಗಳಲ್ಲಿ ಕೂಡಾ ಅನೇಕರು ಮನೆಯ ಹಿತ್ತಲಲ್ಲಿ ಬೆಳೆಸಿದ್ದಾರೆ. ಈ ಹೂವು ಬಹಳ ಸುವಾಸನೆಯಿಂದ ಕೂಡಿದೆ. ಒಮ್ಮೆ ಈ ಹೂವು ಅರಳಿದರೆ ಇಡೀ ಸುತ್ತಮುತ್ತಲಿನ ವಾತಾವರಣ ಕೂಡಾ ಸುವಾಸನೆಯಿಂದ ಕೂಡಿರುತ್ತದೆ. ಈ ಹೂವು ಅರಳುವಾಗ ನೀವು ಏನನ್ನಾದರೂ ಪ್ರಾರ್ಥಿಸಿದರೆ ಅದು ನೆರವೇರುತ್ತದೆ ಎಂಬ ನಂಬಿಕೆ ಕೂಡಾ ಭಕ್ತರಲ್ಲಿ ಮನೆ ಮಾಡಿದೆ.

ಹಿಮಾಲಯದಲ್ಲಿ ಹೆಚ್ಚಾಗಿ ಬೆಳೆಯುವ ಬ್ರಹ್ಮ ಕಮಲ

ಬ್ರಹ್ಮ ಕಮಲವನ್ನು ಹಿಮಾಲಯದ ದೈವಿಕ ಹೂ ಎಂದೂ ಕರೆಯಲಾಗುತ್ತದೆ. ಈ ಸಸ್ಯಗಳು ಹೆಚ್ಚಾಗಿ ಹಿಮಾಲಯದಲ್ಲಿ ಬೆಳೆಯುತ್ತದೆ. ಹಿಮಾಲಯದಲ್ಲಿ ಅರಳುವ ಬ್ರಹ್ಮ ಕಮಲವನ್ನು ನೋಡುವವರಿಗೆ ದೇವರ ಆಶೀರ್ವಾದ ದೊರೆಯುತ್ತದೆ. ಅವರು ಬಹಳ ಅದೃಷ್ಟವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಸುಮಾರು 3,500 ರಿಂದ 3,800 ಮೀಟರ್ ಎತ್ತರದಲ್ಲಿ ಬೆಳೆಯುವ ಬ್ರಹ್ಮಕಮಲ ಹೂವು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಾನ್ಸೂನ್ ಋತುವಿನಲ್ಲಿ ಆಗಸ್ಟ್‌ನಿಂದ ಸೆಪ್ಟೆಂಬರ್ ಮಧ್ಯದವರೆಗೆ ಅರಳುತ್ತದೆ. ಬ್ರಹ್ಮಕಮಲ ಹೂವು ಸಾಮಾನ್ಯವಾಗಿ ಸಂಜೆಯ ವೇಳೆ ಅರಳುತ್ತದೆ. ಒಂಟಿಹೂವು ರಾತ್ರಿ ಅರಳುತ್ತದೆ. ಹೂವು ಸಂಪೂರ್ಣವಾಗಿ ಅರಳಲು ಸುಮಾರು ಎರಡು ಗಂಟೆ ಸಮಯ ಬೇಕಾಗುತ್ತದೆ. ಸುಮಾರು 30 ಸೆಮೀ ವ್ಯಾಸ ಹೊಂದಿರುವ ಇದು ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಬ್ರಹ್ಮ ಕಮಲ ಹೂವನ್ನು ಹೇಮಕುಂಡ, ತುಂಗಾನಾಥ, ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಲ್ಲಿ ಶಿವನ ಪೂಜೆಗೆ ಬಳಸಲಾಗುತ್ತದೆ.

ಬದರಿನಾಥ, ಕೇದಾರನಾಥ ಶಿವನ ದೇವಾಲಯಗಳಲ್ಲಿ ಈ ಹೂವನ್ನು ಶಿವನ ಪೂಜೆಗೆ ಬಳಸಲಾಗುತ್ತದೆ
ಬದರಿನಾಥ, ಕೇದಾರನಾಥ ಶಿವನ ದೇವಾಲಯಗಳಲ್ಲಿ ಈ ಹೂವನ್ನು ಶಿವನ ಪೂಜೆಗೆ ಬಳಸಲಾಗುತ್ತದೆ

ಬ್ರಹ್ಮ ಕಮಲ ಹೂವಿಗೆ ಸಂಬಂಧಿಸಿದ ಕಥೆ

ಪಾರ್ವತಿ ಸೃಷ್ಟಿಸಿದ ಗಣೇಶನ ತಲೆಯನ್ನು ಶಿವ ಕತ್ತರಿಸಿದ ನಂತರ ಆತನಿಗೆ ಆನೆಯ ತಲೆಯನ್ನು ಜೋಡಿಸಲು ಸಹಾಯ ಮಾಡಲು ಸ್ವತಃ ಬ್ರಹ್ಮನು ಬ್ರಹ್ಮ ಕಮಲವನ್ನು ಸೃಷ್ಟಿಸಿದನು. ಈ ಹೂವಿನ ದಳಗಳಿಂದ ಹೊರತೆಗೆಯಲಾದ ಮಕರಂದವು ಗಣೇಶನಿಗೆ ಜೀವ ನೀಡಿತು ಎಂದು ಒಂದು ದಂತಕಥೆ ಹೇಳುತ್ತದೆ. ಮತ್ತೊಂದು ಕಥೆಯ ಪ್ರಕಾರ ವಿಷ್ಣುವು ಬ್ರಹ್ಮ ಕಮಲವನ್ನು ಸೃಷ್ಟಿಸಿ, ಲಕ್ಷ್ಮೀದೇವಿಯನ್ನು ರಾಕ್ಷಸನ ಹೊಡೆತದಿಂದ ರಕ್ಷಿಸಿದನು ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಧಾರ್ಮಿಕ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.