ರುದ್ರಾಭಿಷೇಕ ಎಂದರೇನು? ಶಿವನಿಗೆ ಇಷ್ಟವಾದ ರುದ್ರಾಭಿಷೇಕವನ್ನು ಮನೆಯಲ್ಲಿ ಮಾಡಬಹುದೇ, ಅನುಸರಿಸಬೇಕಾದ ನಿಯಮಗಳೇನು?
Rudrabhishekha: ಶಿವನಿಗೆ ರುದ್ರಾಭಿಷೇಕ ಬಹಳ ಪ್ರಿಯವಾದುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ರುದ್ರಾಭಿಷೇಕ ಮಾಡುತ್ತಾರೆ. ರುದ್ರಾಭಿಷೇಕ ಎಂದರೇನು? ಶಿವನಿಗೆ ಇಷ್ಟವಾದ ರುದ್ರಾಭಿಷೇಕವನ್ನು ಮನೆಯಲ್ಲಿ ಮಾಡಬಹುದೇ, ಅನುಸರಿಸಬೇಕಾದ ನಿಯಮಗಳೇನು? ಇಲ್ಲಿದೆ ಮಾಹಿತಿ.
ಶಿವನು ಅಭಿಷೇಕ ಪ್ರಿಯ, ಭಕ್ತರ ಕೋರಿಕೆಗಳನ್ನು ಕೂಡಲೇ ಈಡೇರಿಸುತ್ತಾನೆ. ಆದ್ದರಿಂದಲೇ ಭಕ್ತರು ಶಿವನ ಆಶೀರ್ವಾದ ಪಡೆಯಲು ಆತನ ಮೊರೆ ಹೋಗುತ್ತಾರೆ. ಆದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಲು ರುದ್ರಾಭಿಷೇಕ ಬಹಳ ಸೂಕ್ತ ಎಂದು ಖ್ಯಾತ ಆಧ್ಯಾತ್ಮಿಕ, ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಮನೆಯಲ್ಲೂ ರುದ್ರಾಭಿಷೇಕ ಮಾಡಬಹುದು
ರುದ್ರಾಭಿಷೇಕವನ್ನು ಯಾವುದೇ ದಿನ ದೇವಾಲಯಗಳಲ್ಲಿ, ಅಥವಾ ಶಿವ ದೇವಾಲಯಗಳಲ್ಲಿ ಅಥವಾ ಗೋಶಾಲೆಗಳಲ್ಲಿ ಮಾಡಬಹುದು. ಮನೆಯಲ್ಲಿ ಕೂಡಾ ಶಿವನಿಗೆ ಇಷ್ಟವಾದ ರುದ್ರಾಭಿಷೇಕ ಮಾಡಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಶೇಷ ದಿನಗಳಲ್ಲಿ ರುದ್ರಾಭಿಷೇಕ ಮಾಡುವುದರಿಂದ ತುಂಬಾ ಫಲ ಸಿಗುತ್ತದೆ. ವಾರ್ಷಿಕ ಮಹಾ ಶಿವರಾತ್ರಿ ದಿನ , ಮಾಸಿಕ ಶಿವರಾತ್ರಿ ದಿನ, ಶ್ರಾವಣ, ಕಾರ್ತಿಕ ಮಾಸ ಮುಂತಾದ ವಿಶೇಷ ತಿಂಗಳಲ್ಲಿ ರುದ್ರಾಭಿಷೇಕ ಮಾಡಬಹುದು. ಅಲ್ಲದೆ ಸೋಮವಾರ, ಏಕಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ ದಿನಗಳಲ್ಲಿ ರುದ್ರಾಭಿಷೇಕ ಮಾಡುವುದು ಅತ್ಯಂತ ವಿಶೇಷ. ರುದ್ರಾಭಿಷೇಕವನ್ನು ಎರಡು ರೀತಿ ಮಾಡಬಹುದು.
ರುದ್ರಾಭಿಷೇಕ ಎಂದರೇನು?
ಶಿವನ ಉಗ್ರ ರೂಪವನ್ನು ರುದ್ರ ಎನ್ನುತ್ತಾರೆ. ಶಿವನು ಉಗ್ರ ಸ್ವರೂಪಿಯಾಗಿದ್ದಾಗ, ಅಂದರೆ ರುದ್ರನಾಗಿದ್ದಾಗ ಶಿವಲಿಂಗಕ್ಕೆ ನಿಯಮಾನುಸಾರ ಪವಿತ್ರ ಸ್ನಾನ ಅಥವಾ ಅಭಿಷೇಕ ಮಾಡಿದರೆ ಅವನು ಶಾಂತಮೂರ್ತನಾಗುತ್ತಾನೆ. ಇದನ್ನೇ ರುದ್ರಾಭಿಷೇಕ ಎಂದು ಕರೆಯಲಾಗುತ್ತದೆ. ರುದ್ರಾಭಿಷೇಕ ಶಿವನಿಗೆ ಬಹಳ ಪ್ರಿಯವಾದುದು. ಆಗ ಶಿವನು ಭಕ್ತರಿಗೆ ಬೇಡಿದ ವರಗಳನ್ನು ನೀಡುತ್ತಾನೆ.
ಶಿವನ ದೇವಸ್ಥಾನಕ್ಕೆ ಹೋಗಿ ಅಭಿಷೇಕದ ನಂತರ ಇತರರು ತಮ್ಮ ಗೋತ್ರ ನಾಮಗಳೊಂದಿಗೆ ತೀರ್ಥ ಪ್ರಸಾದಗಳನ್ನು ಸ್ವೀಕರಿಸುವುದು ಒಂದು ಪದ್ಧತಿಯಾಗಿದೆ. ಆದರೆ ಇದರಲ್ಲಿ ಮನಸ್ಸಿಗೆ ಸಮಾಧಾನ ದೊರೆಯುವುದಿಲ್ಲ. ಆದ್ದರಿಂದ, ಅನೇಕ ಜನರು ತಮ್ಮ ಮನೆಯಲ್ಲಿ ರುದ್ರಾಭಿಷೇಕ ಮಾಡಲು ಬಯಸುತ್ತಾರೆ. ಆದರೆ ಕೆಲವರು ಮನೆಯಲ್ಲಿ ರುದ್ರಾಭಿಷೇಕ ಮಾಡಬಾರದು ಎನ್ನುತ್ತಾರೆ. ಆದರೆ ಆ ರೀತಿ ನಿಯಮವೇನೂ ಇಲ್ಲ. ದೇವರನ್ನು ಪೂಜಿಸುವ ವಿಧಾನಗಳಲ್ಲಿ ರುದ್ರಾಭಿಷೇಕವೂ ಒಂದು. ಹಾಗಾಗಿ ಮನೆಯಲ್ಲಿ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಮನೆಯಲ್ಲಿ ಪ್ರತಿದಿನ ಅನೇಕ ಪೂಜೆಗಳನ್ನು ಮಾಡುತ್ತೇವೆ. ಹಾಗೇ ರುದ್ರಾಭಿಷೇಕವನ್ನೂ ಮಾಡಬಹುದು. ಆದರೆ ರುದ್ರಾಭಿಷೇಕ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಮುಖ್ಯವಷ್ಟೇ.
ರುದ್ರಾಭಿಷೇಕಕ್ಕೆ ಬೇಕಾದ ಸಾಮಗ್ರಿಗಳು
ಅರಿಶಿನ, ಕುಂಕುಮ, ಅಕ್ಷತೆ, ಧವಳಾಕ್ಷತೆಗಳು, ಆರತಿ ಕರ್ಪೂರ, ಶುದ್ದ ಶ್ರೀಗಂಧ, ಹೂವುಗಳು, ವೀಳ್ಯದೆಲೆಗಳು, ಬಾಳೆಹಣ್ಣು ಅಥವಾ ಇತರ ಹಣ್ಣುಗಳು, ತೆಂಗಿನಕಾಯಿ (ಕನಿಷ್ಠ ಎರಡು), ಹತ್ತಿ ಬಟ್ಟೆ, ಹತ್ತಿ ಯಜ್ಞೋಪವೀತ, ವಿಭೂತಿ , ಬಿಲ್ವಪತ್ರೆ , ಹಸುವಿನ ಹಾಲು, ಹಸುವಿನ ಮೊಸರು, ಹಸುವಿನ ತುಪ್ಪ, ಜೇನುತುಪ್ಪ, ಸಕ್ಕರೆ , ಗಂಗೋಧಕ ಅಥವಾ ನದಿ ನೀರು, ಮಾವಿನ ಎಲೆಗಳು, ಗಂಟೆ, ದೊಡ್ಡ ಪೀಠ, ಲೋಟಗಳು - 3, ಉದ್ಧರಣೆ ಅಥವಾ ಚಮಚ, ಸಣ್ಣ ಚಮಚಗಳು 3, ದೀಪ, ಬತ್ತಿಗಳು, ಎಳ್ಳೆಣ್ಣೆ, ನೈವೇದ್ಯ, ಬಿಂದಿಗೆಯಿಂದ ಅಭಿಷೇಕ ಮಾಡುವ ನೀರು, ಶಿವಲಿಂಗ ಮೂರ್ತಿ, ಒಂದು ಶುದ್ಧವಾದ ಟವೆಲ್, ಕುಂಕುಮ ಹೂವು, ಒಂದು ಪ್ಲೇಟ್, ಅಕ್ಕಿಯ ಸಣ್ಣ ತಟ್ಟೆ. , ಅಭಿಷೇಕ ನೀರಿನ ಪಾತ್ರೆ.
ರುದ್ರಾಭಿಷೇಕ ಮಾಡುವ ವಿಧಾನ
ಅಭಿಷೇಕದ ಸ್ಥಳವು ಸ್ವಲ್ಪ ವಿಶಾಲವಾಗಿರುವುದು ಅವಶ್ಯಕ. ಅಭಿಷೇಕ ಮಾಡುವವರು ಪೂರ್ವ ಅಥವಾ ಉತ್ತರದ ಗೋಡೆಗೆ ಅಭಿಮುಖವಾಗಿ ಕುಳಿತುಕೊಳ್ಳಬೇಕು. ಗೋಡೆಯ ಮೇಲೆ ದೇವರ ಚಿತ್ರಗಳಿದ್ದರೆ ಉತ್ತಮ. ಇಲ್ಲದಿದ್ದರೆ ಪೀಠದ ಮೇಲೆ ಬಟ್ಟೆಯನ್ನು ಹರಡಿ ಅದರ ಮೇಲೆ ದೇವರ ಫೋಟೋವನ್ನು ಗೋಡೆಗೆ ಒರಗಿಸಿ ಇಡಬೇಕು. ಒಂದು ಚಿಕ್ಕ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ವೀಳ್ಯದೆಲೆ ಇಟ್ಟು ಅದರ ಮೇಲೆ ಅರಿಶಿನ ಗಣಪತಿ ಇಟ್ಟು ಕುಂಕುಮ ಹಾಕಬೇಕು. ಒಂದು ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ ಉದ್ದರಣೆ ಇಟ್ಟು ಅದನ್ನು ಆಚಮನಕ್ಕೆ ಬಳಸಿ. ಒಂದು ಬಟ್ಟಲಿನಲ್ಲಿ 3 ಮಾವಿನ ಎಲೆಗಳನ್ನು ಹಾಕಿ ಅರ್ಧದಷ್ಟು ನೀರು ತುಂಬಿಸಿ, ಅಕ್ಷತೆ, ಶ್ರೀಗಂಧವನ್ನು ಸೇರಿಸಿ, ಮೂರು ಹೂವುಗಳನ್ನು ಸೇರಿಸಿ, ಮೂರು ಸ್ಥಳಗಳಲ್ಲಿ ಶ್ರೀಗಂಧವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿ.
ಅಭಿಷೇಕ ಮಾಡುವವರು ಕುಳಿತ ಸ್ಥಳದಿಂದ ಮಧ್ಯದಲ್ಲಿ ಮೇಲೇಳಬಾರದು. ಎಲ್ಲಾ ವ್ಯವಸ್ಥೆಗಳನ್ನು ಮೊದಲೇ ಮಾಡಿ ಕುಳಿತುಕೊಳ್ಳಬೇಕು. ಮಂತ್ರಗಳನ್ನು ಹೇಳುತ್ತಾ ಒಬ್ಬರ ನಂತರ ಒಬ್ಬರು ರುದ್ರಾಭಿಷೇಕ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ರುದ್ರಾಭಿಷೇಕದ ವಿಧಿ ವಿಧಾನ ನಿಮಗೆ ಗೊತ್ತಿಲ್ಲದಿದ್ದರೆ ಸೂಕ್ತ ಪುರೋಹಿತರೊಂದಿಗೆ ಚರ್ಚಿಸಿ ಅವರನ್ನು ಮನೆಗೆ ಕರೆಸಿ ಪೂಜೆ ಮಾಡಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.