ಗಂಗೆ ಭೂಮಿಗೆ ಬಂದಿದ್ದೇಕೆ? ಈ ಬಾರಿ ಗಂಗಾ ಸಪ್ತಮಿ ಯಾವಾಗ, ಪೂಜೆ ಮಾಡುವುದರಿಂದ ದೊರೆಯುವ ಫಲಗಳೇನು?
Ganga Saptami 2024: ವೈಶಾಖ ಮಾಸದ ಶುಕ್ಲಪಕ್ಷದ 7ನೇ ದಿನ ಗಂಗಾ ಸಪ್ತಮಿ ಆಚರಿಸಲಾಗುತ್ತದೆ. ಇದನ್ನು ಗಂಗಾ ಜಯಂತಿ ಎಂದೂ ಕರೆಯಲಾಗುತ್ತದೆ. ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡಿ ಧಾನ ಧರ್ಮಗಳನ್ನು ಮಾಡುವುದರಿಂದ ಪಾಪ ತೊಳೆಯುತ್ತದೆ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಗಂಗಾ ಸಪ್ತಮಿ 2024: ವೈಶಾಖ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ವಿಷ್ಣುವನ್ನು ಆರಾಧಿಸಲಾಗುತ್ತದೆ. ದಾನ, ಧರ್ಮ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ. ಹಾಗೇ ವೈಶಾಖ ಮಾಸದ ಶುಕ್ಲಪಕ್ಷದ 7ನೇ ದಿನದಂದು ಗಂಗಾ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 14, ಮಂಗಳವಾರ ಆಚರಿಸಲಾಗುತ್ತಿದೆ. ಗಂಗಾ ಸಪ್ತಮಿ ಆಚರಿಸುವುದು ಏಕೆ? ಶುಭ ಮುಹೂರ್ತ ಯಾವುದು ನೋಡೋಣ.
ವೈಶಾಖ ಮಾಸದ ಶುಕ್ಲ ಪಕ್ಷದ 7ನೇ ದಿನದಂದು ಗಂಗಾಯು ಭೂಮಿಗೆ ಇಳಿದಳು ಎಂದು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಭಗೀರಥ ರಾಜನ ಪೂರ್ವಜರಿಗೆ ಮೋಕ್ಷವನ್ನು ಒದಗಿಸಲು ಗಂಗಾ ಮಾತೆ ಭೂಮಿಗೆ ಇಳಿದಳು, ಆದ್ದರಿಂದ ಗಂಗಾ ಸಪ್ತಮಿ ತಿಥಿಯಂದು ಗಂಗಾ ಸ್ನಾನ ಮಾಡುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲವೂ ತೊಲಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಗಂಗಾ ಸ್ನಾನ ಮಾಡಿದವರಿಗೆ ಗಂಗೆಯ ಆಶೀರ್ವಾದವೂ ದೊರೆಯುತ್ತದೆ.
ಗಂಗಾ ಸಪ್ತಮಿಯ ದಿನದಂದು ಗಂಗಾ ಸ್ನಾನ ಮಾತ್ರವಲ್ಲದೆ ಈ ದಿನ ಉಪವಾಸ, ಪೂಜೆ ಹಾಗೂ ದಾನ ಮಾಡುವವರಿಗೆ ವಿಶೇಷ ಫಲಗಳು ದೊರೆಯುತ್ತದೆ. ಒಂದು ವೇಳೆ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಗಂಗಾಜಲವನ್ನು ತಾವು ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಬೆರೆಸಿ ಕೂಡಾ ಸ್ನಾನ ಮಾಡಬಹುದು. ಹೀಗೆ ಮಾಡಿದರೆ ಗಂಗೆಯಲ್ಲೇ ಮಿಂದ ಫಲ ದೊರೆಯುತ್ತದೆ.
ಪೌರಾಣಿಕ ಕಥೆ
ದಂತಕಥೆಯ ಪ್ರಕಾರ ರಾಜ ಭಗೀರಥನು ತನ್ನ 60,000 ಪೂರ್ವಜರಿಗೆ ಮೋಕ್ಷ ಕೊಡಿಸುವ ಸಲುವಾಗಿ ಬ್ರಹ್ಮನನ್ನು ಮೆಚ್ಚಿಸಲು ಕಠಿಣ ತಪಸ್ಸು ಮಾಡಿದನು. ಪರಿಣಾಮವಾಗಿ, ಗಂಗೆಯನ್ನು ಭೂಮಿಗೆ ತರಲು ಬ್ರಹ್ಮನು ಅವನಿಗೆ ವರವನ್ನು ನೀಡಿದನು. ಆದರೆ, ಗಂಗಾ ಮಾತೆಯ ಅಗಾಧವಾದ ತೂಕ ಮತ್ತು ಶಕ್ತಿಯು ಭೂಮಿಗೆ ಸಹಿಸಲಾಗದಷ್ಟು ಹೆಚ್ಚು ಎಂದು ಭಗೀರಥನಿಗೆ ಬ್ರಹ್ಮ ಎಚ್ಚರಿಸುತ್ತಾನೆ. ಇದನ್ನು ಬಗೆಹರಿಸಲು ಭಗೀರಥನು ಶಿವನನ್ನು ಪ್ರಾರ್ಥಿಸುತ್ತಾನೆ. ಭೂಮಿಯನ್ನು ತಲುಪುವ ಮೊದಲು, ತನ್ನ ಕೂದಲನ್ನು ದಾಟಲು ಮತ್ತು ತನ್ನ ವೇಗವನ್ನು ನಿಧಾನಗೊಳಿಸಲು ಗಂಗೆಯನ್ನು ಕೇಳಿಕೊಳ್ಳುತ್ತಾನೆ. ಭಗೀರಥನ ಭಕ್ತಿಯಿಂದ ಸಂತಸಗೊಂಡ ಶಿವನು ಅವನ ಆಸೆಯನ್ನು ಪೂರೈಸುತ್ತಾನೆ. ಅದರಂತೆ ಗಂಗೆಯು ಶಿವನ ಜಟೆಯಿಂದ ಭೂಮಿಗೆ ಇಳಿದು ಬಂದು ಭಗೀರಥನ ಪೂರ್ವಜರಿಗೆ ಮತ್ತು ಇತರರಿಗೆ ಮೋಕ್ಷ ನೀಡುತ್ತಾಳೆ. ಅದೇ ದಿನವನ್ನು ಗಂಗಾ ಸಪ್ತಮಿಯನ್ನಾಗಿ ಆಚರಿಸಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ, ಒಮ್ಮೆ ಜಾಹ್ನು ಋಷಿಯು ತಪಸ್ಸು ಮಾಡುವಾಗ ಗಂಗಾನದಿ ನೀರಿನ ಶಬ್ಧದಿಂದ ಏಕಾಗ್ರತೆ ಕಳೆದುಕೊಳ್ಳುತ್ತಾನೆ. ಪದೇ ಪದೆ ಮನಸ್ಸು ವಿಚಲಿತವಾಗುವ ಕಾರಣ ತನ್ನ ದೃಢತೆಯ ಬಲದಿಂದ ಗಂಗೆಯನ್ನು ಕುಡಿದು ನಂತರ ಬಲಭಾಗದ ಕಿವಿಯಿಂದ ಗಂಗೆಯನ್ನು ಭೂಮಿಯ ಮೇಲೆ ಹರಿಯಬಿಡುತ್ತಾನೆ. ಆ ದಿನವೇ ವೈಶಾಖ ಮಾಸದ ಶುಕ್ಲಪಕ್ಷದ 7ನೇ ದಿನ ಎಂದು ನಂಬಲಾಗಿದೆ. ಜಾಹ್ನು ಮಹರ್ಷಿಯ ಕಿವಿಯಿಂದ ಹೊರ ಬಂದ ಕಾರಣ, ಆತನ ಮಗಳೆಂದೂ, ಆಕೆಯ ಹೆಸರು ಜಾಹ್ನವಿ ಎಂದೂ ಕರೆಯಲಾಗುತ್ತದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಮನುಷ್ಯನು ನಿಧನ ಹೊಂದಿದ ನಂತರ ಮೋಕ್ಷ ದೊರೆಯುತ್ತದೆ ಎಂದು ಶುಕದೇವನು ರಾಜ ಪರೀಕ್ಷಿತನಿಗೆ ಹೇಳಿದ್ದಾಗಿ ಶ್ರೀಮದ್ ಭಗವದ್ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದಲೇ ಈ ದಿನ ಗಂಗಾಸ್ನಾನ, ಪೂಜೆ, ಉಪವಾಸ ಹಾಗೂ ದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ.
ಶುಭ ಮುಹೂರ್ತ
ಸನಾತನ ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಮೇ 14 ರಂದು ಮಧ್ಯರಾತ್ರಿ 02.50 ಕ್ಕೆ ಪ್ರಾರಂಭವಾಗಿ ಮರು ದಿನ, ಅಂದರೆ ಮೇ 15 ರಂದು ಬೆಳಗ್ಗೆ 04.19 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಮೇ 14, ಮಂಗಳವಾರ ಗಂಗಾ ಸಪ್ತಮಿ ಆಚರಿಸಲಾಗುವುದು. ಈ ದಿನ ಬೆಳಗ್ಗೆ 10.56 ರಿಂದ ಮಧ್ಯಾಹ್ನ 1.39 ರವರೆಗೆ ಗಂಗಾ ಸ್ನಾನಕ್ಕೆ ಶುಭ ಮುಹೂರ್ತವಿದೆ. ಈ ದಿನ ಗಂಗಾ ಸಹಸ್ರನಾಮ ಸ್ತೋತ್ರ ಮತ್ತು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಶುಭ ಫಲಗಳು ದೊರೆಯಲಿವೆ.
ಪಂಚಾಂಗ
ಸೂರ್ಯೋದಯ - ಬೆಳಗ್ಗೆ 05:31 ಬೆಳಗ್ಗೆ
ಸೂರ್ಯಾಸ್ತ - ಸಂಜೆ 07:04
ಬ್ರಹ್ಮ ಮುಹೂರ್ತ - ಬೆಳಗ್ಗೆ 04:07 ರಿಂದ 04:49 ವರೆಗೆ
ವಿಜಯ ಮುಹೂರ್ತ - ಮಧ್ಯಾಹ್ನ 02:33 ರಿಂದ 03:27 ರವರೆಗೆ
ಗೋಧೂಳಿ ಮುಹೂರ್ತ - ಸಂಜೆ 07:03 ರಿಂದ 07:24 ವರೆಗೆ
ನಿಶಿತಾ ಮುಹೂರ್ತ - ರಾತ್ರಿ 11:56 ರಿಂದ 12:38 ರವರೆಗೆ
ಗಂಗಾ ಸಪ್ತಮಿಯಂದು ವೃದ್ಧಿ ಯೋಗ ರೂಪುಗೊಳ್ಳುತ್ತಿದೆ. ಜೊತೆಗೆ ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗದ ಸಂಯೋಜನೆಯೂ ರೂಪುಗೊಳ್ಳುತ್ತಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಪೂಜೆಗೆ ಬಾಳೆಎಲೆ ಬಳಸುವುದೇಕೆ
ಭವಿಷ್ಯ, ಧಾರ್ಮಿಕ, ಆಧ್ಯಾತ್ಮಿಕ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ