ಶ್ರಾವಣ ಮಾಸ ಎಂದಿನಿಂದ ಆರಂಭ? ಈ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಯಾವುವು? ಇಲ್ಲಿದೆ ವಿವರ
ಇನ್ನು ಕೆಲವೇ ದಿನಗಳಲ್ಲಿ ಆಷಾಢ ಮುಗಿದು ಶ್ರಾವಣ ಆರಂಭವಾಗಲಿದೆ. ಶ್ರಾವಣದಲ್ಲಿ ಅನೇಕ ಸಾಲು ಸಾಲು ಹಬ್ಬಗಳಿವೆ. ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ ಸೇರಿದಂತೆ ಅನೇಕ ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ.

ಶ್ರಾವಣ ಮಾಸ 2024: ಆಷಾಢ ಮಾಸವು ಕೆಲವೇ ದಿನಗಳಲ್ಲಿ ಕೊನೆಗೊಂಡು ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಚಂದ್ರನು ಶ್ರವಣ ನಕ್ಷತ್ರಕ್ಕೆ ಪ್ರವೇಶಿಸುವ ಮಾಸವನ್ನು ಶ್ರಾವಣ ಎಂದು ಪರಿಗಣಿಸಲಾಗುತ್ತದೆ. ಶ್ರಾವಣವು ಹಿಂದೂ ಧರ್ಮದಲ್ಲಿ ಬಹಳ ಶುಭವಾದ ಮಾಸವಾಗಿದೆ.
ಸೂರ್ಯಮಾನ ಪಂಚಾಂಗದ ಪ್ರಕಾರ ಉತ್ತರ ಭಾರತದಲ್ಲಿ ಜುಲೈ 22 ರಿಂದ ಶ್ರಾವಣ ಮಾಸ ಆರಂಭವಾಗಿದೆ. ಆದರೆ ದಕ್ಷಿಣದಲ್ಲಿ ಚಂದ್ರನ ಕ್ಯಾಲೆಂಡರ್ ಅನ್ನು ಅನುಸರಿಸಲಾಗುತ್ತದೆ. ಇದರ ಪ್ರಕಾರ ಈ ವರ್ಷ ಆಗಸ್ಟ್ 5 ರಿಂದ ಶ್ರಾವಣ ಮಾಸ ಆರಂಭವಾಗಲಿದೆ. ಇದು ಶಿವನ ಪೂಜೆಗೆ ಶ್ರೇಷ್ಠವಾದ ಮಾಸವಾಗಿದೆ. ಅನೇಕ ವ್ರತಗಳು ಮತ್ತು ಪೂಜೆಗಳನ್ನು ಮಾಡಲು ಇದು ಸೂಕ್ತ ತಿಂಗಳು. ಶ್ರೀ ಮಹಾವಿಷ್ಣುವಿನ ಜನ್ಮ ನಕ್ಷತ್ರವೂ ಶ್ರವಣ ನಕ್ಷತ್ರದ ಕಾರಣದಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಶ್ರಾವಣದಲ್ಲಿ ಸೋಮವಾರ ಶಿವನ ಪೂಜೆ, ಮಂಗಳವಾರ ಮಂಗಳಗೌರಿ ವ್ರತ, ಶುಕ್ರವಾರ ವರಮಹಾಲಕ್ಷ್ಮಿ ವ್ರತ, ಶನಿವಾರ ವೆಂಕಟೇಶ್ವರನ ಪೂಜೆ ಮಾಡಲಾಗುತ್ತದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಈ ನಾಲ್ಕೂ ದಿನಗಳು ಪ್ರಮುಖವಾಗಿದೆ.
ಶ್ರಾವಣ ಮಾಸದ ಪ್ರಮುಖ ಹಬ್ಬಗಳು
ಮಂಗಳಗೌರಿ ವ್ರತ
ಪತಿಗೆ ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ನೀಡುವಂತೆ ಹೆಂಗಳೆಯರು ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸುತ್ತಾರೆ. ಶ್ರಾವಣ ಮಾಸದ ಎಲ್ಲಾ ನಾಲ್ಕು ಮಂಗಳವಾರಗಳಂದು ಮಂಗಳ ಗೌರಿಯನ್ನು ಪೂಜಿಸಲಾಗುತ್ತದೆ . ಪಾರ್ವತಿ ದೇವಿಯ ಇನ್ನೊಂದು ಹೆಸರೇ ಮಂಗಳ ಗೌರಿ. ಕೆಲವೆಡೆ ನವ ದಂಪತಿಗಳು ಈ ವ್ರತವನ್ನು ಕಡ್ಡಾಯವಾಗಿ ಆಚರಿಸಬೇಕು. ಮಂಗಳಗೌರಿ ವ್ರತದ ಬಗ್ಗೆ ಶ್ರೀಕೃಷ್ಣನೇ ದ್ರೌಪದಿಗೆ ವಿವರಿಸಿದನೆಂದು ಪುರಾಣಗಳು ಹೇಳುತ್ತವೆ.
ನಾಗರ ಪಂಚಮಿ
ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗರ ಪಂಚಮಿ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 9 ರಂದು ನಾಗರ ಪಂಚಮಿ ಆಚರಿಸಲಾಗುತ್ತಿದೆ. ಈ ದಿನ ಶಿವನಿಗೆ ಹಾಗೂ ನಾಗದೇವತೆಗೆ ಪೂಜೆ ಮಾಡಲಾಗುತ್ತದೆ.
ವರಮಹಾಲಕ್ಷ್ಮಿ ವ್ರತ
ಶ್ರಾವಣಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ವರಲಕ್ಷ್ಮಿ ವ್ರತವೂ ಪ್ರಮುಖವಾಗಿದೆ. ಈ ಬಾರಿ ಆಗಸ್ಟ್ 16 ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಪತಿ, ಮಕ್ಕಳಿಗೆ ದೀರ್ಘಾಯುಷ್ಯ, ಮನೆಯಲ್ಲಿ ಸಂಪತ್ತು, ಸಮೃದ್ಧಿ ಕರುಣಿಸಲು ಮಹಿಳೆಯರು ಲಕ್ಷ್ಮಿಯನ್ನು ಪೂಜಿಸುತ್ತಾರೆ.
ಶಿವನ ಆರಾಧನೆ
ಶ್ರಾವಣ ಮಾಸದಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಪ್ರತಿ ಸೋಮವಾರ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೇಕದಲ್ಲಿ ಪಾಲ್ಗೊಳ್ಳುತ್ತಾರೆ. ಶಿವನಿಗೆ ಇಷ್ಟವಾದ ಬಿಲ್ವಪತ್ರೆ ಮತ್ತು ಶಮಿಪತ್ರಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರೆ ಶಿವನ ಅನುಗ್ರಹ ದೊರೆಯುತ್ತದೆ ಎಂದು ನಂಬಲಾಗಿದೆ. ಕ್ಷೀರಸಾಗರದ ಮಂಥನದಲ್ಲಿ ಉದ್ಭವಿಸಿದ ವಿಷವನ್ನು ಶಿವ ಕುಡಿದಿದ್ದರಿಂದ ಅದರ ಪ್ರಭಾವದಿಂದ ಉರಿಯುತ್ತಿರುವ ಶಿವನನ್ನು ಸಮಾಧಾನಪಡಿಸಲು ಅಭಿಷೇಕವನ್ನು ಮಾಡಲಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದಲೇ ಶ್ರಾವಣ ಸೋಮವಾರದಂದು ನಿಯಮಿತವಾಗಿ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ.
ರಕ್ಷಾಬಂಧನ/ನೂಲು ಹುಣ್ಣಿಮೆ
ಸಹೋದರ, ಸಹೋದರಿಯರಿಗೆ ಬಹಳ ಮುಖ್ಯವಾದ ಹಬ್ಬ ರಕ್ಷಾಬಂಧನ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 19 ರಂದು ರಾಖಿ ಹಬ್ಬ ಆಚರಿಸಲಾಗುತ್ತಿದೆ.
ಕೃಷ್ಣ ಜನ್ಮಾಷ್ಠಮಿ
ಕೃಷ್ಣ ಜನಿಸಿದ ದಿನವನ್ನು ಪ್ರತಿ ವರ್ಷ ಕೃಷ್ಣ ಜನ್ಮಾಷ್ಠಮಿಯನ್ನಾಗಿ ಆಚರಿಸಲಾಗುತ್ತಿದೆ. ಜನ್ಮಾಷ್ಟಮಿಯನ್ನು ಹಿಂದೂ ಪಂಚಾಂಗದ ಭಾದ್ರಪದ ಮಾಸದಲ್ಲಿ ಕೃಷ್ಣ ಪಕ್ಷದ 8 ನೇ ದಿನದಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಆಗಸ್ಟ್ 26 ರಂದು ಗೋಕುಲಾಷ್ಠಮಿ ಆಚರಿಸಲಾಗುತ್ತಿದೆ.
ಇದನ್ನು ಹೊರತುಪಡಿಸಿ ಪುತ್ರಾದ ಏಕಾದಶಿ, ಶನಿ ತ್ರಯೋದಶಿ, ಹಯಗ್ರೀವ ಜಯಂತಿಯನ್ನು ಶ್ರಾವಣದಲ್ಲಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 3 ರಂದು ಅಮಾವಾಸ್ಯೆಯೊಂದಿಗೆ ಶ್ರಾವಣ ಮಾಸ ಕೊನೆಗೊಳ್ಳುತ್ತದೆ.