ಅಶ್ವಿನಿ ಕುಮಾರರೆಂದರೆ ಯಾರು, ಸದಾ ಕಾಲ ಇವರು ಅಸ್ತು ಎಂದು ವರ ಕೊಡುವುದೇಕೆ? ಇಲ್ಲಿದೆ ಮಾಹಿತಿ
ಅಶ್ವಿನಿ ಕುಮಾರರು ಸದಾ ಜನರ ಒಳಿತನ್ನು ಬಯಸುತ್ತಾರೆ. ತಮ್ಮನ್ನು ನಂಬಿದವರನ್ನು ಸರಿ ದಾರಿಯಲ್ಲಿ ನಡೆಸಲು ಪ್ರಯತ್ನಿಸುತ್ತಾರೆ. ಆದೇ ಕಾರಣಕ್ಕೆ ಇವರು ಸದಾ, ಅಸ್ತು ಎನ್ನುತ್ತಾರೆ. ಈ ಅಶ್ವಿನಿ ಕುಮಾರರೆಂದರೆ ಯಾರು? ಇವರ ಬಗ್ಗೆ ವಿವರ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡಬೇಕು, ಅಪ್ಪಿ ತಪ್ಪಿ ಅಪಶಕುನದ ಮಾತುಗಳನ್ನು ಆಡಿದರೆ ಅಶ್ವಿನಿ ದೇವತೆಗಳು ಅದೇ ರೀತಿ ಅಗುವಂತೆ ಅಸ್ತು ಎನ್ನುತ್ತಾರೆಂದು ಹಿರಿಯರು ಆಗ್ಗಾಗ್ಗೆ ಹೇಳುವ ಮಾತುಗಳನ್ನು ಕೇಳಿರುತ್ತೇವೆ. ಹಾಗಾದರೆ ಯಾರು ಈ ಅಶ್ವಿನಿ ದೇವತೆಗಳು ಯಾರು? ಇಲ್ಲಿದೆ ಒಂದಿಷ್ಟು ಮಾಹಿತಿ.
ಸೂರ್ಯನ ಪುತ್ರರೇ ಅಶ್ವಿನಿ ದೇವತೆಗಳು
ಅಶ್ವಿನಿ ಕುಮಾರರು ದೇವ ವೈದ್ಯರು. ಇವರ ತಂದೆ ಸಾಕ್ಷಾತ್ ಸೂರ್ಯ ದೇವ. ತಾಯಿ ಸಂಜ್ಞಾದೇವಿ. ಚ್ಯವನಮಹರ್ಷಿ ಎಂಬ ಋಷಿಗಳೊಬ್ಬರು ಇರುತ್ತಾರೆ. ಅಶ್ವಿನಿಕುಮಾರರು ಇವರಿಗೆ ತಾರುಣ್ಯವನ್ನು ನೀಡುತ್ತಾರೆ. ಅದರೊಂದಿಗೆ ಜಗತ್ತೇ ಬೆರಗಾಗುವಂತಹ ಸೌಂದರ್ಯವನ್ನು ನೀಡುತ್ತಾರೆ. ಇದರಿಂದ ಚ್ಯವನ ಮಹರ್ಷಿಗಳು ಸಂತೋಷ ವ್ಯಕ್ತಪಡಿಸುತ್ತಾರೆ. ಯಾವುದಾದರೂ ಒಂದು ರೀತಿಯಲ್ಲಿ ಅವರು ಮಾಡಿರುವ ಉಪಕಾರಕ್ಕೆ ತಕ್ಕಂತೆ ಪ್ರತ್ಯುಪಕಾರ ಮಾಡಬೇಕೆಂದು ಕಾಯುತ್ತಾರೆ. ಇದೇ ವೇಳೆಗೆ ಶರ್ಯಾತಿ ಎಂಬ ಮಹಾರಾಜನು ದೊಡ್ಡ ಯಾಗವೊಂದನ್ನು ಆರಂಭಿಸುತ್ತಾನೆ.
ಸಾಮಾನ್ಯವಾಗಿ ಬ್ರಹ್ಮ ವಿಷ್ಣು ಮಹೇಶ್ವರರಿಗೆ ನೀಡುವ ಹವಿಸ್ಸಿನ ಒಂದು ಭಾಗವನ್ನು ಅಶ್ವಿನಿ ಕುಮಾರರಿಗೆ ನೀಡುವಂತೆ ಮಾಡುತ್ತಾರೆ. ಇವರು ನಂತರದ ದಿನಗಳಲ್ಲಿ ಪಾಂಡುವಿನ ಪತ್ನಿಯಾದ ಮಾದ್ರಿಯ ಗರ್ಭದಲ್ಲಿ ಜನ್ಮ ತಾಳುತ್ತಾರೆ. ಅವರೇ ನಕುಲ ಸಹದೇವರು. ಉಪಮನ್ಯು ಎಂಬ ಋಷಿ ಇರುತ್ತಾನೆ. ಅವನು ಒಮ್ಮೆ ತಿಳಿಯದಂತೆ ಎಕ್ಕದ ಎಲೆಯನ್ನು ತಿಂದುಬಿಡುತ್ತಾನೆ. ಆ ಕ್ಷಣದಲ್ಲಿ ಅವರ ಎರಡು ಕಣ್ಣುಗಳು ಕಾಣದಂತೆ ಆಗುತ್ತದೆ. ಆತನ ಗುರುವಾದ ಧೌಮ್ಯನ ಆದೇಶದಂತೆ ಅಶ್ವಿನಿ ಕುಮಾರರನ್ನು ಕುರಿತು ಪ್ರಾರ್ಥನೆ ಮಾಡುತ್ತಾರೆ. ಆಗ ಆ ಋಷಿಗೆ ದೃಷ್ಟಿ ಮರಳಿ ಬರುತ್ತದೆ.
ಆಯುರ್ವೇದಕ್ಕೂ ಮೂಲ ಅಶ್ವಿನಿ ದೇವತೆಗಳು
ಒಮ್ಮೆ ಸಂಜ್ಞಾದೇವಿಯು ಕುದುರೆಯ ಆಕಾರವನ್ನು ತಾಳುತ್ತಾಳೆ. ಆಗ ಸೂರ್ಯದೇವನು ಸಹ ಕುದುರೆಯ ಆಕಾರವನ್ನು ಹೊಂದುತ್ತಾನೆ. ಈ ಸಂದರ್ಭದಲ್ಲಿ ಜನಿಸಿದವರೇ ಈ ಅಶ್ವಿನಿ ದೇವತೆಗಳು. ದೇವತೆಗಳ ವೈದ್ಯರಾದ ಇವರು ಆಯುರ್ವೇದಕ್ಕೂ ಮೂಲ ಎನ್ನಲಾಗಿದೆ. ಇವರು ಸೂರ್ಯನ ಮಕ್ಕಳಾದ್ದರಿಂದ ಅತಿ ಸುಂದರರಾಗಿದ್ದರು. ಮತ್ತೊಂದು ವಿಚಾರವೆಂದರೆ ಇವರು ಬೇರೆ ಬೇರೆ ಆಗದೆ ಸದಾಕಾಲ ಒಂದಾಗಿಯೇ ಇರುತ್ತಿದ್ದರು. ಬಹುತೇಕ ಸಮಯದಲ್ಲಿ ಇವರು ದೇವಲೋಕದಲ್ಲಿ ಇರುತ್ತಿದ್ದರು. ಆದರೆ ಕೆಲವೊಮ್ಮೆ ಭೂಲೋಕಕ್ಕೆ ಬಂದು ಗಿರಿಗಳಲ್ಲಿ ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದರು. ಇದರಿಂದಾಗಿ ಭೂಲೋಕದಲ್ಲಿ ಉತ್ತಮ ಮಳೆ ಬರುತ್ತಿತ್ತು. ಹಲವೊಮ್ಮೆ ನೇಗಿಲನ್ನು ಹಿಡಿದು ತಾವಾಗಿಯೇ ಭೂ ಇಳುವಳಿ ಮಾಡುತ್ತಾರೆ. ಆಗ ಭೂಲೋಕದಲ್ಲಿ ಸತ್ವಪೂರ್ಣ ಆರೋಗ್ಯ ದೊರೆಯುತ್ತದೆ. ಪ್ರತ್ಯಕ್ಷವಾಗಿ ಕೆಲವೊಮ್ಮೆ ಪರೋಕ್ಷವಾಗಿ ಭೂಲೋಕೊದ ಜನಸಾಮಾನ್ಯರಿಗೆ ಅಶ್ವಿನಿ ದೇವತೆಗಳು ಸಹಾಯ ಮಾಡುತ್ತಾರೆ.
ದೇವತೆಗಳಲ್ಲಿ ಅಶ್ವಿನಿಕುಮಾರರೆ ಅತಿ ಚಿಕ್ಕವರು. ಇವರ ಬಳಿ ಸುವರ್ಣಯುತ ರಥವಿದೆ. ಕೆಲವೊಮ್ಮೆ ರಥಕ್ಕೆ ಹಂಸಗಳನ್ನು ಬಳಸುತ್ತಿದ್ದರು. ಕೆಲವು ಬಾರಿ ಗರುಡನನ್ನು ತಮ್ಮ ರಥವನ್ನು ಎಳೆಯಲು ಬಳಸುತ್ತಿದ್ದರು. ಇನ್ನೂ ಕೆಲವು ಬಾರಿ ಕತ್ತೆಗಳನ್ನು ಬಳಸುತ್ತಿದ್ದರು. ಈ ರೀತಿ ಸಮಯವನ್ನು ಆಧರಿಸಿ ಜನ ಸಾಮಾನ್ಯರ ಅಗತ್ಯತೆಗೆ ಅನುಕೂಲವಾಗುವಂತೆ ತಮ್ಮ ರೀತಿ ನೀತಿಯನ್ನು ಬದಲಿಸಿಕೊಳ್ಳುತ್ತಿದ್ದರು. ತಮ್ಮನ್ನು ನಂಬುವವರನ್ನು ಸರಿದಾರಿಯಲ್ಲಿ ನಡೆಸುವುದಕ್ಕೆ ಇವರು ತಮ್ಮ ಶಕ್ತಿಯನ್ನು ಬಳಸುತ್ತಿದ್ದರು.
ಅಶ್ವಿನಿ ದೇವತೆಗಳು ತಮ್ಮನ್ನು ನಂಬಿದವರನ್ನು ಸದಾ ಹರಸುತ್ತಾರೆ
ವಿಮದ ಎಂಬ ಋಷಿಯ ಮೇಲೆ ಅಶ್ವಿನಿಕುಮಾರರಿಗೆ ಅತಿ ಹೆಚ್ಚಿನ ಪ್ರೀತಿ ವಿಶ್ವಾಸವಿತ್ತು. ಇದೆ ರೀತಿ ಮೋದು ಎಂಬ ರಾಜನ ಮೇಲೆಯೂ ವಿಶೇಷವಾದಂತಹ ಪ್ರೀತಿ ಇತ್ತು. ದುರಾದೃಷ್ಟದಿಂದ ಇವನು ಪ್ರತಿಯೊಂದು ಯುದ್ಧದಲ್ಲಿಯೂ ಸೋತು ಹೋಗುತ್ತಿದ್ದನು. ಅವನು ಗೆಲ್ಲಲೆಂದೇ ಅಶ್ವಿನಿ ಕುಮಾರರು ಬಿಳಿ ಬಣ್ಣದ ಮೂರು ಕುದುರೆಗಳನ್ನು ಉಡುಗೊರೆಯನ್ನಾಗಿ ನೀಡುತ್ತಾರೆ. ಕುದುರೆಗಳ ಸಹಾಯದಿಂದ ಮೋದು ಯುದ್ಧಗಳಲ್ಲಿ ಜಯ ಗಳಿಸುತ್ತಾನೆ. ಅಶ್ವಿನಿಕುಮಾರರು ಕೇವಲ ಒಳ್ಳೆಯ ಮಾತು ಮತ್ತು ಸನ್ನಡತೆಯನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಇಂದಿಗೂ ನಾವು ಅವರಲ್ಲಿ ನಂಬಿಕೆ ಇಟ್ಟು ಸ್ಮರಿಸಿದಲ್ಲಿ ನಮಗೆ ಶುಭ ಫಲಗಳು ದೊರೆಯುತ್ತವೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).