ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Satyanarayana Swamy Pooja: ಸತ್ಯನಾರಾಯಣ ಸ್ವಾಮಿ ಯಾವ ದೇವರ ರೂಪ? ಈ ಪೂಜೆಯನ್ನು ಯಾವಾಗ ಮಾಡಬೇಕು, ವ್ರತದ ಮಹತ್ವವೇನು?

Satyanarayana swamy pooja: ಸತ್ಯನಾರಾಯಣ ಸ್ವಾಮಿ ಯಾವ ದೇವರ ರೂಪ? ಈ ಪೂಜೆಯನ್ನು ಯಾವಾಗ ಮಾಡಬೇಕು, ವ್ರತದ ಮಹತ್ವವೇನು?

Satyanarayana swamy: ಮದುವೆ, ನಾಮಕರಣ, ಗೃಹ ಪ್ರವೇಶದಂಥ ಶುಭ ಸಮಯದಲ್ಲಿ ಬಹಳಷ್ಟು ಜನರು ಸತ್ಯನಾರಾಯಣ ವ್ರತ ಮಾಡುತ್ತಾರೆ. ವಿಶೇಷವಾಗಿ ಹುಣ್ಣಿಮೆಯಂದು ದೇವಸ್ಥಾನಗಳಲ್ಲಿ ಕೂಡಾ ಪೂಜೆ ಮಾಡಲಾಗುತ್ತದೆ. ಸತ್ಯನಾರಾಯಣ ಸ್ವಾಮಿ ಯಾವ ದೇವರ ರೂಪ? ಈ ಪೂಜೆಯನ್ನು ಯಾವಾಗ ಮಾಡಬೇಕು, ವ್ರತದ ಮಹತ್ವವೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸತ್ಯನಾರಾಯಣ ಸ್ವಾಮಿ ಯಾರು? ಈ ಪೂಜೆಯನ್ನು ಯಾವಾಗ ಮಾಡಬೇಕು?
ಸತ್ಯನಾರಾಯಣ ಸ್ವಾಮಿ ಯಾರು? ಈ ಪೂಜೆಯನ್ನು ಯಾವಾಗ ಮಾಡಬೇಕು? (PC: LadyHitler @SunShiine0001)

ಸತ್ಯನಾರಾಯಣ ಸ್ವಾಮಿ ಪೂಜೆ: ಹಿಂದೂ ಸಂಪ್ರದಾಯದಲ್ಲಿ ಅನೇಕ ಪೂಜೆ, ವ್ರತಾಚರಣೆಗಳಿವೆ. ಯಾರ ಜೀವನದಲ್ಲಿ ಏನೇ ಕಷ್ಟ ಎದುರಾದರೂ ಅದು ನಿವಾರಣೆ ಆಗಲು ದೇವರ ಅನುಗ್ರಹ ಬೇಕೇ ಬೇಕು. ಹಾಗೇ ಕೆಲವೊಂದು ಪೂಜೆಗಳನ್ನು ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುತ್ತದೆ. ಅವುಗಳಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಕೂಡಾ ಒಂದು. ಸಾಮಾನ್ಯವಾಗಿ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಸ್ವಾಮಿ ಪೂಜೆ ಆಚರಿಸಲಾಗುತ್ತದೆ.

ಸತ್ಯನಾರಾಯಣ ಪೂಜೆ ಆಚರಿಸಲು ಶುಭ ಸಮಯ ಯಾವುದು?

ಮನೆ ಗೃಹಪ್ರವೇಶದ ಸಮಯದಲ್ಲಿ ಹಿಂದೂಗಳು ತಪ್ಪದೆ ಸತ್ಯನಾರಾಯಣ ಪೂಜೆ ಮಾಡುತ್ತಾರೆ. ಮದುವೆ ನಂತರ ನವದಂಪತಿಯನ್ನು ಕೂರಿಸಿ ಸತ್ಯನಾರಾಯಣ ಪೂಜೆ ಮಾಡಲಾಗುತ್ತದೆ. ಮಕ್ಕಳ ನಾಮಕರಣ ಸಮಾರಂಭದಲ್ಲಿ ಕೂಡಾ ಸತ್ಯನಾರಾಯಣ ವ್ರತ ಮಾಡಲಾಗುತ್ತದೆ. ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದು. ಆದರೆ ಏಕಾದಶಿ ತಿಥಿ ಹಾಗೂ ಹುಣ್ಣಿಮೆ, ಸತ್ಯನಾರಾಯಣ ಪೂಜೆ ಮಾಡಲು ಸೂಕ್ತ ಸಮಯ. ಪ್ರತಿ ಹುಣ್ಣಿಮೆಯಂದು ಬಹುತೇಕ ದೇವಸ್ಥಾನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗುತ್ತದೆ.

ಸತ್ಯನಾರಾಯಣ ಯಾರು? ಪೂಜೆಯ ಮಹತ್ವವೇನು?

ಸತ್ಯನಾರಾಯಣ, ಭಗವಾನ್‌ ವಿಷ್ಣುವಿನ ಮತ್ತೊಂದು ಹೆಸರು. ವಿಷ್ಣುವಿನ ನಾರಾಯಣ ರೂಪ, ಸತ್ಯದ ಅವತಾರ ಎಂದು ನಂಬಲಾಗಿದೆ. ಒಟ್ಟಿನಲ್ಲಿ ಸತ್ಯ ನಾರಾಯಣ ಎಂದರೆ ಸತ್ಯದ ಸಾಕಾರ ಎಂದು ಅರ್ಥ. ಭೂಲೋಕದ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಂಡು ಶಾಂತಿಯಿಂದ ಬದುಕಲು ಯಾವುದಾದರೂ ದಾರಿ ಇದೆಯೇ ಎಂದು ನಾರದರು ವಿಷ್ಣುವಿನ ಬಳಿ ಕೇಳಿದಾಗ ಸ್ವತ: ವಿಷ್ಣುವು ಈ ಸತ್ಯನಾರಾಯಣ ಸ್ವಾಮಿ ಪೂಜೆಯ ವಿಧಿ ವಿಧಾನವನ್ನು ಅವರಿಗೆ ಬೋಧಿಸುತ್ತಾನೆ. ಅಂದಿನಿಂದ ಜನರು ಸ್ವಾಮಿಯ ವ್ರತವನ್ನು ಆಚರಿಸುತ್ತಿದ್ದಾರೆ.

ಸತ್ಯನಾರಾಯಣ ಪೂಜೆಗೆ ನಿರ್ದಿಷ್ಟ ಸಮಯವಿಲ್ಲ. ಆದರೆ ವಿಷ್ಣುವಿಗೆ ಹುಣ್ಣಿಮೆ ಪ್ರಿಯವಾದ ದಿನವಾದ್ದರಿಂದ ಆ ದಿನ ಪೂಜೆ ಮಾಡಿದರೆ ವಿಶೇಷ ಫಲಗಳು ದೊರೆಯುತ್ತದೆ. ಸತ್ಯನಾರಾಯಣ ಪೂಜೆ ಮಾಡಿದವರ ಮನಸ್ಸಿನ ಆಸೆ ಆಕಾಂಕ್ಷೆಗಳು ನೆರವೇರುತ್ತದೆ, ಆರಂಭಿಸುವ ಕೆಲಸಗಳು ಯಾವುದೇ ವಿಘ್ನವಿಲ್ಲದೆ ನೆರವೇರುತ್ತದೆ. ಪೂಜೆಯನ್ನು ಮನೆಯಲ್ಲಿ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ ಸದಾ ಧನಾತ್ಮಕತೆ ತುಂಬಿರುತ್ತದೆ. ಕುಟುಂಬದವರ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಪತಿ-ಪತ್ನಿ ಸೇರಿದಂತೆ ಕುಟುಂಬದ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಮನೆ ಸಮೃದ್ಧಿಯಿಂದ ಕೂಡಿರುತ್ತದೆ.

ಸತ್ಯನಾರಾಯಣ ಪೂಜೆ ಮಾಡುವುದು ಹೇಗೆ?

ನೀವು ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುವುದಾದರೆ ಸೂಕ್ತ ಪುರೋಹಿತರ ಬಳಿ ಮಾಡಿಸಿದರೆ ಸಂಪೂರ್ಣ ಫಲ ದೊರೆಯುತ್ತದೆ. ಏಕೆಂದರೆ ಪೂಜೆಯ ನಿಯಮಗಳಲ್ಲಿ ಯಾವುದೇ ಕಾರಣಕ್ಕೂ ತಪ್ಪು ಎಸಗಬಾರದು. ಸತ್ಯನಾರಾಯಣ ಪೂಜೆ ಮಾಡಿಸುವ ಮುನ್ನ ಮನೆಯನ್ನು ಶುಚಿಗೊಳಿಸಬೇಕು. ಪೂಜೆಗೂ ಕೆಲವು ದಿನಗಳ ಮುನ್ನ, ಪೂಜೆಯ ನಂತರದ ಕೆಲವು ದಿನಗಳವರೆಗೂ ಮಾಂಸಾಹಾರ ಸೇವನೆ ನಿಷಿದ್ಧ. ಆ ದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಮನೆಯನ್ನು ಶುಚಿಗೊಳಿಸಬೇಕು.

ಮಡಿ ಉಟ್ಟು ಸತ್ಯನಾರಾಯಣ ಪೀಠವನ್ನು ಬಾಳೆದಿಂಡು, ವಿವಿಧ ಹೂಗಳಿಂದ ಅಲಂಕರಿಸಬೇಕು. ಫೋಟೋಗೆ ಗಂಧ, ಕುಂಕುಮ ಇಟ್ಟು ಹೂಗಳಿಂದ ಅಲಂಕರಿಸಬೇಕು. ವಿಘ್ನ ನಿವಾರಕ ಗಣೇಶನ ಪೂಜೆ ಮಾಡುವ ಮೂಲಕ ವ್ರತವನ್ನು ಆರಂಭಿಸಬೇಕು. ನಂತರ ನವಗ್ರಹಗಳ ಪೂಜೆ ಮಾಡಬೇಕು. ಧೂಪ ದೀಪ, ಆರತಿ ನೈವೇದ್ಯದ ಮೂಲಕ ಸತ್ಯನಾರಾಯಣನನ್ನು ಪೂಜಿಸಬೇಕು. ನಂತರ ವ್ರತಕಥೆ ಕೇಳಬೇಕು. ಪುರೋಹಿತರಿಗೆ ದಾನ ನೀಡಬೇಕು. ಅಂದು ಮನೆಗೆ ಆಹ್ವಾನಿಸಿದ ಅತಿಥಿಗಳಿಗೆ ಸತ್ಯನಾರಾಯಣ ಪ್ರಸಾದ ನೀಡಿ, ಊಟ ಬಡಿಸಿ ನಂತರ ಮನೆಯವರು ಪ್ರಸಾದ ಸೇವಿಸಿ, ಊಟ ಮಾಡಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಭವಿಷ್ಯ, ಆಧಾತ್ಮದ ಸುದ್ದಿಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ