ಶಿವಾಲಯದಲ್ಲಿ ನಂದೀಶ್ವರನ ಕೊಂಬುಗಳ ಮೂಲಕ ಶಿವನ ದರ್ಶನ ಮಾಡಲು ಕಾರಣವೇನು? ನಂದಿ ಭೂಮಿಗೆ ಬಂದಿದ್ದು ಏಕೆ?
Shiva Temple: ಶಿವನ ದೇವಸ್ಥಾನಕ್ಕೆ ಹೋದಾಗ ಅನೇಕ ಭಕ್ತರು ನಂದಿ ಕೊಂಬುಗಳ ಮೂಲಕ ಶಂಕರನ ದರ್ಶನ ಪಡೆಯುತ್ತಾರೆ. ಶಿವಾಲಯದಲ್ಲಿ ನಂದೀಶ್ವರನ ಕೊಂಬುಗಳ ಮೂಲಕ ಶಿವನ ದರ್ಶನ ಮಾಡಲು ಕಾರಣವೇನು? ನಂದಿ ಭೂಮಿಗೆ ಬಂದಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಹಿಂದೂಗಳು ಪ್ರತಿ ಸೋಮವಾರ ಶಿವನನ್ನು ಆರಾಧಿಸುತ್ತಾರೆ. ಕೆಲವರು ಮನೆಯಲ್ಲಿ ಶಿವನ ಪೂಜೆ ಮಾಡಿದರೆ ಕೆಲವರು ದೇವಸ್ಥಾನಕ್ಕೆ ತೆರಳುತ್ತಾರೆ. ಶಿವನ ದರ್ಶನ ಪಡೆಯಲು ಸೋಮವಾರವೇ ಆಗಬೇಕೆಂಬ ನಿಯಮವೇನಿಲ್ಲ. ಆದರೆ ಸೋಮವಾರ ಶಿವನಿಗೆ ಪ್ರಿಯವಾದ ದಿನವಾದ್ದರಿಂದ ಈ ದಿನ ಹೆಚ್ಚಿನ ಭಕ್ತರು ಶಿವಾಲಯಕ್ಕೆ ಹೋಗಿ ಬರುತ್ತಾರೆ.
ಶಿವನನ್ನು ದರ್ಶನ ಮಾಡುವ ಸೂಕ್ತ ವಿಧಾನ ಯಾವುದು?
ಇನ್ನು ದೇವಸ್ಥಾನದಲ್ಲಿ ಎಷ್ಟೋ ಭಕ್ತರು ಶಿವನನ್ನು ನೇರವಾಗಿ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ. ಆದರೆ ಶಿವನನ್ನು ದರ್ಶನ ಮಾಡುವ ಸರಿಯಾದ ವಿಧಾನ ಬೇರೆಯೇ ಇದೆ. ಎಲ್ಲಾ ಶಿವನ ದೇವಾಲಯದಲ್ಲಿ ಶಿವನ ಮೂರ್ತಿ ಎದುರಿಗೆ ನಂದಿ ವಿಗ್ರವಿರುತ್ತದೆ. ನಂದಿಯ ಕೊಂಬುಗಳ ಮಧ್ಯದಿಂದ ಶಿವನ ದರ್ಶನ ಮಾಡುವುದು ಬಹಳ ಶುಭ. ಇದಕ್ಕೆ ಕಾರಣ ಕೂಡಾ ಇದೆ. ನಂದಿಯು ಗೋಮಾತೆಯ ಪ್ರತಿರೂಪ, ವೃಷಭವು ಧರ್ಮದ ಮತ್ತೊಂದು ರೂಪವಾಗಿದೆ.
ಧರ್ಮಕ್ಕೆ ಸತ್ಯ, ಪರಿಶುದ್ಧತೆ, ತಪಸ್ಸು, ನಿಯಮ ಎಂದ ನಾಲ್ಕು ಕಾಲುಗಳಿವೆ. ಸತ್ಯ ಎಂದರೆ ಮನಸ್ಸು, ಆಲೋಚನೆ, ದೃಷ್ಟಿ ಮತ್ತು ಕ್ರಿಯೆಗಳು. ಪರಿಶುದ್ಧತೆ ಎಂದರೆ ಮನಸ್ಸು, ಆಲೋಚನೆ, ದೃಷ್ಟಿ ಮತ್ತು ಕ್ರಿಯೆಯಲ್ಲಿ ಶುದ್ಧತೆ, ತಪಸ್ಸು ಎಂದರೆ ಏಕಾಗ್ರತೆ, ನಿಯಮ ಎಂದರೆ ಪದ್ಧತಿಯನ್ನು ತಪ್ಪದೆ ಅನುಸರಿಸುವುದು ಎಂದರ್ಥ. ಇವುಗಳ ರೂಪವೇ ನಂದೀಶ್ವರ. ಹಾಗಾಗಿ ಮನುಷ್ಯನಲ್ಲಿರುವ ಮೃಗತ್ವವನ್ನು ಹೋಗಲಾಡಿಸಲು ಈ ನಾಲ್ಕು ವಿಚಾರಗಳ ಆಧಾರದ ಮೇಲೆ ನಡೆಯುವಂತೆ ಅನುಗ್ರಹಿಸಲು ಶಂಕರನನ್ನು ನಂದೀಶ್ವರನ ಕೊಂಬುಗಳ ನಡುವಿನಿಂದ ನಮಸ್ಕಾರ ಮಾಡಿ ಪ್ರಾರ್ಥಿಸಬೇಕು.
ಇದನ್ನೂ ಓದಿ: ಮನೆಯಲ್ಲಿ ಒಂದಕ್ಕಿಂದ ಹೆಚ್ಚು ತುಳಸಿ ಗಿಡ ನೆಡಬಹುದೇ?
ನಂದೀಶ್ವರನ ಕೊಂಬುಗಳ ನಡುವೆ ಲಿಂಗದ ರೂಪದಲ್ಲಿ ಶಂಕರನ ರೂಪವು ಸಂಪೂರ್ಣವಾಗಿ ಗೋಚರಿಸುತ್ತದೆ. ಆ ದರ್ಶನದ ವೇಳೆ ನಂದೀಶ್ವರನ ಕಿವಿಯಲ್ಲಿ ಮಾತನಾಡಿದರೆ ಆ ಪ್ರಾರ್ಥನೆ ಶಿವನಿಗೆ ಸುಲಭವಾಗಿ ತಲುಪುತ್ತದೆ, ಆಗ ಶಿವನು ಭಕ್ತರ ಆಸೆಗಳನ್ನು ಬೇಗ ಈಡೇರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಶಂಭು ತ್ರಿನೇತ್ರನಾದ ಕಾರಣ ಪ್ರತ್ಯಕ್ಷವಾಗಿ ದರ್ಶನ ಮಾಡಬಾರದು ಎಂದು ಹೇಳಲಾಗುತ್ತದೆ. ಇದನ್ನು ಶೃಂಗ ದರ್ಶನವೆಂದೂ ಕರೆಯುತ್ತಾರೆ. ಮೇಲಾಗಿ, ನಂದೀಶ್ವರನ ಕೊಂಬುಗಳ ನಡುವೆ ಪರಮೇಶ್ವರನನ್ನು ನೋಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಶಿವ ಪುರಾಣ ಹೇಳುತ್ತದೆ.
ನಂದಿ ಭೂಲೋಕಕ್ಕೆ ಬಂದಿದ್ದು ಏಕೆ
ಭೂಲೋಕದಲ್ಲಿ ಜನರ ಭಕ್ತರ ಕಂಡ ಶಿವನು ಖುಷಿಯಾಗುತ್ತಾನೆ. ಒಮ್ಮೆ ನಂದಿಯನ್ನು ಕರೆದು ಭೂಲೋಕಕ್ಕೆ ಹೋಗಿ ಜನರಿಗೆ ಒಂದು ಸಂದೇಶ ಮುಟ್ಟಿಸುವಂತೆ ತಿಳಿಸುತ್ತಾನೆ. ಪ್ರತಿದಿನವೂ ತಲೆಗೆ ಸ್ನಾನ ಮಾಡಿ ವಾರಕ್ಕೆ ಒಮ್ಮೆ ಊಟ ಮಾಡುವಂತೆ ಹೇಳಿ ಬಾ ಎನ್ನುತ್ತಾನೆ. ಭೂಮಿಗೆ ಬಂದ ನಂದಿಗೆ ಜನರ ಭಕ್ತಿಯನ್ನು ನೋಡಿ ನಾನು ಇಲ್ಲಿಗೆ ಬಂದ ಕಾರಣವನ್ನೇ ಮರೆಯುತ್ತಾನೆ.
ಕೆಲವು ದಿನಗಳ ನಂತರ ತಾನು ಸಂದೇಶ ಸಾರಲು ಇಲ್ಲಿಗೆ ಬಂದಿರುವ ವಿಚಾರ ನೆನಪಾಗುತ್ತದೆ. ಶಿವನ ಸಂದೇಶವನ್ನು ಜನರಿಗೆ ಹೇಳಿ ಕೈಲಾಸಕ್ಕೆ ಹೋಗುತ್ತಾನೆ. ನೀವು ಹೇಳಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ನಂದಿಯು ಶಿವನಿಗೆ ಹೇಳುತ್ತಾನೆ. ಏನು ಹೇಳಿದೆ ಎಂದು ಶಿವನು ಕೇಳುತ್ತಾನೆ. ಪ್ರತಿದಿನ ಭೋಜನ ಮಾಡಿ, ವಾರಕ್ಕೆ ಒಮ್ಮೆ ತಲೆಗೆ ಸ್ನಾನ ಮಾಡುವಂತೆ ಹೇಳಿದ್ದಾಗಿ ಹೇಳುತ್ತಾನೆ. ಆ ಮಾತನ್ನು ಕೇಳಿದ ಶಿವನು, ಪ್ರತಿದಿನ ಊಟ ಮಾಡುವುದು ಎಂದರೆ ಎಷ್ಟು ಬೆಳೆ ಬೆಳೆಯಬೇಕು. ಆ ಬೆಳೆಯನ್ನು ಬೆಳೆಯಲು ಮನುಷ್ಯನಿಗೆ ನೀನೇ ಸಹಾಯ ಮಾಡು ಎಂದು ಹೇಳುತ್ತಾನೆ. ಶಿವನ ಆದೇಶದ ಮೇರೆಗೆ ನಂದಿಯು ಅಂದಿನಿಂದ ಭೂಲೋಕಕ್ಕೆ ಬಂದು ರೈತನಿಗೆ ಸಹಾಯ ಮಾಡುತ್ತಿದ್ದಾನೆ ಎಂಬ ಕಥೆ ಜನಜನಿತವಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.