Birth Horoscope: ಪಂಚ ಮಹಾಪುರುಷ ಯೋಗ ಸೇರಿದಂತೆ ಜಾತಕದಲ್ಲಿ ಕಂಡು ಬರುವ 3 ಪ್ರಮುಖ ಯೋಗಗಳಿವು
Birth Horoscope: ಬಾಲ್ಯದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು ಮುಂದೆ ಗಣ್ಯವ್ಯಕ್ತಿಯಾಗಿ ಹೆಸರು ಗಳಿಸಲು ಅವರ ಶ್ರಮ ಸಾಕಷ್ಟು ಇರುತ್ತದೆ. ಜೊತೆಗೆ ಅವರ ಜಾತಕದಲ್ಲಿ ಯೋಗ ಕೂಡಾ ಇರುತ್ತದೆ. ಪಂಚ ಮಹಾಪುರುಷ ಯೋಗ ಸೇರಿದಂತೆ ಜಾತಕದಲ್ಲಿ ಬೇರೆ ಯಾವ ಯೋಗಗಳಿವೆ?ಈ ಯೋಗದಿಂದ ವ್ಯಕ್ತಿ ಏನೆಲ್ಲಾ ಶುಭ ಫಲಗಳನ್ನು ಗಳಿಸಲಿದ್ದಾನೆ? ಇಲ್ಲಿದೆ ಮಾಹಿತಿ.
ಹುಟ್ಟಿನಿಂದ ಬದುಕಿನ ಕೊನೆಯ ಕ್ಷಣದವರೆಗೂ ಮನುಷ್ಯ ಒಂದಲ್ಲಾ ಒಂದು ರೀತಿ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಕೆಲವರಿಗೆ ಜೀವನವಿಡೀ ಕಷ್ಟ ಇದ್ದರೆ ಕೆಲವರು ಯಾವುದೇ ಕಷ್ಟವಿಲ್ಲದೆ ಸುಖ, ಸಂತೋಷದಿಂದ ಇರುತ್ತಾರೆ, ಇನ್ನೂ ಕೆಲವರಿಗೆ ಮಿಶ್ರ ಫಲ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇವೆಲ್ಲದಕ್ಕೂ ಗ್ರಹಗತಿಗಳು, ಜನ್ಮ ಕುಂಡಲಿಯಲ್ಲಿರುವ ದೋಷಗಳೇ ಕಾರಣ ಎಂದು ನಂಬಲಾಗಿದೆ.
ಯಾವುದೇ ಮಗು ಜನಿಸಿದಾಗ ಮಗು ಹುಟ್ಟಿದ ಸಮಯ, ಸ್ಥಳ, ದಿನಾಂಕವನ್ನು ಜ್ಯೋತಿಷಿಗಳ ಬಳಿ ತೋರಿಸಿ ಕುಂಡಲಿ ಬರೆಸಲಾಗುತ್ತದೆ. ಅದರಲ್ಲಿ ಮಗುವಿಗೆ ಏನಾದರೂ ದೋಷಗಳಿದ್ದರೆ ಅದಕ್ಕೆ ಪರಿಹಾರವನ್ನೂ ಸೂಚಿಸಲಾಗುತ್ತದೆ. ಆದರೆ ಕೆಲವರ ಜನ್ಮ ಜಾತಕದಲ್ಲಿ ಯೋಗ ಇರುತ್ತದೆ. ಈ ಯೋಗದಿಂದ ಅವರು ಜೀವನದಲ್ಲಿ ಖ್ಯಾತ ವ್ಯಕ್ತಿಗಳಾಗುತ್ತಾರೆ. ಹಣಕಾಸು, ವೃತ್ತಿ, ವೈಯಕ್ತಿಕ ಜೀವನದಲ್ಲಿ ಸಕಲ ವೈಭೋಗಳನ್ನು ಪಡೆಯುತ್ತಾರೆ. ಈ ರೀತಿಯ ಯೋಗಗಳು ಸಕಾರಾತ್ಮಕವಾಗಿದ್ದು ಜೀನನದುದ್ದಕ್ಕೂ ಸಕಾರಾತ್ಮಕ ಫಲಗಳೇ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿ ಎಂದು 3 ಯೋಗಗಳನ್ನು ಪರಿಗಣಿಸಲಾಗಿದೆ. ಆ ಯೋಗಗಳು ಯಾವುವು ನೋಡೋಣ.
ಗಜಕೇಸರಿ ಯೋಗ
ವೈದಿಕ ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ್ನು ಬಹಳ ಮಂಗಳಕರ ಯೋಗ ಎಂದು ಪರಿಗಣಿಸಲಾಗಿದೆ. ಗುರು ಮತ್ತು ಚಂದ್ರರು ಸಂಯೋಗದಲ್ಲಿರುವಾಗ ಕುಂಡಲಿಯಲ್ಲಿ ಗಜ ಕೇಸರಿ ಯೋಗವು ರೂಪುಗೊಳ್ಳುತ್ತದೆ. ಗುರುವು ಸಂಪತ್ತು, ಜ್ಞಾನ, ಖ್ಯಾತಿ, ಅದೃಷ್ಟವನ್ನು ಪ್ರತಿನಿಧಿಸುತ್ತಾನೆ. ಚಂದ್ರನು ಹೃದಯ, ಮೃದುತ್ವ, ಚಲನಶೀಲತೆ, ಸಂತೋಷ ಮತ್ತು ಸಮೃದ್ಧಿಕಾರಕ ಗ್ರಹವಾಗಿದೆ. ಈ ಯೋಗದಲ್ಲಿ ಗುರುವು ಲಗ್ನ ಅಥವಾ ಚಂದ್ರನಿಂದ ಕೇಂದ್ರದಲ್ಲಿರಬೇಕು. ಗಜ (ಆನೆ) ಕೇಸರಿ (ಸಿಂಹ) ಎರಡೂ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಪ್ರಾಣಿಗಳು. ಈ ಯೋಗ ಇರುವ ವ್ಯಕ್ತಿಯು ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತಾನೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಸ್ಥಾನಮಾನ ಗಳಿಸುತ್ತಾನೆ. ಗಜಕೇಸರಿ ಯೋಗ ಮಹಿಳೆಯರಿಗೆ ಬಹಳ ಶುಭ ಎಂದು ಪರಿಗಣಿಸಲಾಗಿದೆ.
ಪಂಚ ಮಹಾಪುರುಷ ಯೋಗ
ಪಂಚ ಮಹಾಪುರುಷ ಯೋಗವು ಹೆಸರೇ ಸೂಚಿಸುವಂತೆ ಗುರು, ಮಂಗಳ, ಬುಧ, ಶನಿ, ಶುಕ್ರ ಸೇರಿ 5 ಗ್ರಹಗಳ ವಿಶೇಷ ಸಂಯೋಜನೆಯಾಗಿದೆ. ಈ ಗ್ರಹಗಳು ಉತ್ಕೃಷ್ಟವಾಗಿದ್ದಾಗ ಅಥವಾ ತಮ್ಮದೇ ರಾಶಿಯಲ್ಲಿದ್ದಾಗ ಮತ್ತು ಲಗ್ನದಿಂದ 1, 4, 7 ಅಥವಾ 10 ನೇ ಮನೆಗಳಂತಹ ನಿರ್ದಿಷ್ಟ ಮನೆಗಳಲ್ಲಿ ಇದ್ದಾಗ ಪಂಚ ಮಹಾಪುರುಷ ಯೋಗ ಸಂಭವಿಸುತ್ತದೆ. ಈ ಅಪರೂಪದ ಯೋಗದಲ್ಲಿ ಹುಟ್ಟಿದ ವ್ಯಕ್ತಿಯು ಜೀವನದಲ್ಲಿ ಉನ್ನತ ಹುದ್ದೆಗೆ ಏರುತ್ತಾರೆ. ರಾಜಕೀಯ, ನ್ಯಾಯಾಧೀಶ, ಯಶಸ್ವಿ ಕೈಗಾರಿಕೋದ್ಯಮಿ, ಶ್ರೇಷ್ಠ ಕ್ರೀಡಾಪಟು ಅಥವಾ ಚಲನಚಿತ್ರ ಕಲಾವಿದ ಇತ್ಯಾದಿಯಾಗುವ ಮೂಲಕ ಸಮಾಜದ ಗಣ್ಯ ವ್ಯಕ್ತಿಯಾಗುತ್ತಾರೆ.
ರಾಜ ಯೋಗ
1, 4, 5, 7, 9 ಅಥವಾ 10ನೇ ಶುಭಸ್ಥಾನದಲ್ಲಿ ಆಯಾ ಗ್ರಹಗಳು ಸಂಪರ್ಕಿಸಿದಾಗ ರಾಜಯೋಗ ಉಂಟಾಗುತ್ತದೆ. ರಾಜಯೋಗವು ಜಾತಕದಲ್ಲಿ ಅತ್ಯಂತ ಧನಾತ್ಮಕ ಮನೆಗಳಾದ ಕೇಂದ್ರ ಮತ್ತು ತ್ರಿಕೋನಗಳ ಸಂಯೋಜನೆಯಾಗಿದೆ. ಈ ಯೋಗದಲ್ಲಿ ಜನಿಸಿದ ವ್ಯಕ್ತಿ ಕೂಡಾ ಜೀವನದಲ್ಲಿ ಸಕಲ, ಸುಖ, ಸಂತೋಷ ವೈಭೋಗದಿಂದ ಬದುಕುತ್ತಾರೆ. ಹೆಸರೇ ಸೂಚಿಸುವಂತೆ ವ್ಯಕ್ತಿಯು ರಾಜನಂತೆ ಬದುಕುತ್ತಾನೆ. ಜೀವನದಲ್ಲಿ ಇವರು ಯಾವುದೇ ರೀತಿ ಕಷ್ಟಪಡುವುದಿಲ್ಲ. ಈ ಯೋಗವನ್ನು ರೂಪಿಸುವ ಗ್ರಹಗಳು ಪೂರ್ಣ ಬಲವನ್ನು ಹೊಂದಿದ್ದರೆ ಆಯಾ ವ್ಯಕ್ತಿಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷ ಮತ್ತು ಯಶಸ್ವಿ ಜೀವನವನ್ನು ತಂದುಕೊಡುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.