ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Aries Sign: 2 ವರ್ಷಗಳ ನಂತರ ಮೇಷರಾಶಿಯವರಿಗೆ ಒಲಿದು ಬಂದ ಅದೃಷ್ಟ; ಯಾವ ರೀತಿ ಶುಭ ಫಲಗಳು ದೊರೆಯಲಿವೆ?

Aries Sign: 2 ವರ್ಷಗಳ ನಂತರ ಮೇಷರಾಶಿಯವರಿಗೆ ಒಲಿದು ಬಂದ ಅದೃಷ್ಟ; ಯಾವ ರೀತಿ ಶುಭ ಫಲಗಳು ದೊರೆಯಲಿವೆ?

Aries Sign: ಗ್ರಹಗಳ ರಾಶಿ ಬದಲಾವಣೆಯಿಂದ ದ್ವಾದಶ ರಾಶಿಗಳು ಶುಭ, ಅಶುಭ, ಮಿಶ್ರ ಫಲಗಳನ್ನು ಅನುಭವಿಸುತ್ತಾರೆ. ಸಾಡೇ ಸಾತಿ ಇದ್ದಲ್ಲಿ 7 ವರ್ಷಗಳ ಕಾಲ ಶನಿಯಿಂದ ಬಾಧೆಗೆ ಒಳಗಾಗುತ್ತಾರೆ. 2 ವರ್ಷಗಳಿಂದ ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಿದ್ದ ಮೇಷ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ.

2 ವರ್ಷಗಳ ನಂತರ ಮೇಷರಾಶಿಯವರಿಗೆ ಒಲಿದು ಬಂದ ಅದೃಷ್ಟ
2 ವರ್ಷಗಳ ನಂತರ ಮೇಷರಾಶಿಯವರಿಗೆ ಒಲಿದು ಬಂದ ಅದೃಷ್ಟ

ಮೇಷ ರಾಶಿ:  ಗ್ರಹಗಳು ಆಗ್ಗಾಗ್ಗೆ ರಾಶಿಗಳನ್ನು ಬದಲಿಸುತ್ತವೆ. ಹೀಗೆ ರಾಶಿಯನ್ನು ಬದಲಿಸುವುದರಿಂದ ಕೆಲವರಿಗೆ ಶುಭ ಹಾಗೂ ಇನ್ನೂ ಕೆಲವರಿಗೆ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ಇದೀಗ  2 ವರ್ಷಗಳ ನಂತರ ಮೇಷ ರಾಶಿಗೆ ಅದೃಷ್ಟ ಒಲಿದು ಬಂದಿದೆ.

2022 ರ ಏಪ್ರಿಲ್ ತಿಂಗಳ 13ನೇ ದಿನಾಂಕದಿಂದ ಮೇಷ ರಾಶಿಯಲ್ಲಿ ಜನಿಸಿದವರು ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಅನುಭವಿಸಿದ್ದಾರೆ. ಆದರೆ ಮೇಷ ರಾಶಿಯಾದರೂ ಮಿಥುನ, ಕನ್ಯಾ, ವೃಶ್ಚಿಕ ಮತ್ತು ಕುಂಭ ಲಗ್ನದಲ್ಲಿ ಜನಿಸಿದವರು ಕನಿಷ್ಠ ಪಕ್ಷ ಮಿಶ್ರಫಲಗಳನ್ನು ಗಳಿಸಿದ್ದಾರೆ. ಆದರೆ ಗಳಿಸಿದ ಹಣವನ್ನೆಲ್ಲಾ ಖರ್ಚು ಮಾಡಿ ತೊಂದರೆಗೆ ಒಳಗಾದವರೇ ಹೆಚ್ಚು. ಆದರೆ 2024ರ ಮೇ 1ರಿಂದ ಮೇಷ ರಾಶಿಯವರಿಗೆ ಅದೃಷ್ಟದ ಆಟ ಆರಂಭವಾಗುತ್ತದೆ. ಆದರೂ ಮೊದಲು ಪ್ರಸಕ್ತ ನಡೆಯುತ್ತಿರುವ ದಶಾಭುಕ್ತಿಯನ್ನುಪರಿಗಣಿಸಲೇಬೇಕು.

ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶ

ಒಂದು ವೇಳೆ ದಶಾನಾಥನು ಜನ್ಮ ಕುಂಡಲಿಯಲ್ಲಿ ಅಶುಭನಾಗಿದ್ದಲ್ಲಿ, ಸೂಕ್ತವಾದ ಪರಿಹಾರಗಳನ್ನು ಮಾಡಬೇಕು. ಜನ್ಮ ರಾಶಿ ಯಾವುದೇ ಆದರೂ ಜನ್ಮ ಲಗ್ನವು ಮೇಷವಾಗಿದ್ದರೆ ಅವರಿಗೂ ಸಾಧಾರಣ ಫಲಗಳು ದೊರೆಯುತ್ತವೆ. ಮೇಷ ರಾಶಿಗೆ ಗುರುವು ನವಮ ಭಾವದ ಅಧಿಪತಿ ಆಗುತ್ತಾನೆ. ಆದ್ದರಿಂದ ಮೇಷ ರಾಶಿಯವರಿಗೆ ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶಗಳು ದೊರೆಯುತ್ತವೆ. ಆದರೆ ದೊರೆವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಮನಸ್ಸಿರಬೇಕು. ಆತುರಕ್ಕೆ ಒಳಗಾಗದೆ ಸರಿಯಾದ ಮಾರ್ಗದಲ್ಲಿ ನಡೆದರೆ ಅನಿರೀಕ್ಷಿತ ಶುಭ ಫಲಗಳು ದೊರೆಯುತ್ತವೆ. ತಾವಾಗಿಯೇ ಅವಕಾಶಗಳನ್ನು ಹುಡುಕಿಕೊಂಡು ಹೋದಲ್ಲಿ ಖಂಡಿತ ದೊರೆಯುತ್ತದೆ.

ಗುರುವು ದ್ವಿತೀಯ ಭಾವದಲ್ಲಿ ನೆಲೆಸಿದ್ದಾನೆ. ಇದರಿಂದಾಗಿ ಆಡುವ ಮಾತಿನ ಮೇಲೆ ನಿಯಂತ್ರಣವಿರಬೇಕು. ಮಾತಿನಿಂದ ಜನರ ಮನಸ್ಸನ್ನು ಗೆದ್ದರೆ ಜೀವನದಲ್ಲಿ ಯಾವುದು ತೊಂದರೆ ಇರಲಾರದು. ಕುಟುಂಬದಲ್ಲಿನ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಶನಿಯು ಏಕಾದಶ ಭಾವದಲ್ಲಿ ಇರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ಅಂದರೆ ಈ ಬಾರಿ ಗುರು ಮತ್ತು ಶನಿ ಗ್ರಹಗಳಿಬ್ಬರೂ ಮೇಷ ರಾಶಿಯವರಿಗೆ ಉತ್ತಮ ವರಮಾನವನ್ನು ನೀಡುತ್ತಾರೆ. ಆದರೆ ನಷ್ಟದ ಭಾವದಲ್ಲಿರುವ ರಾಹು ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳಿಗೆ ಕಾರಣನಾಗುತ್ತಾನೆ. ಇದರಿಂದಾಗಿ ಮೇಷ ರಾಶಿಯವರು ಉತ್ತಮ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬಾರದು.

ಖರ್ಚು ವೆಚ್ಚದ ಮೇಲೆ ಹಿಡಿತ ಇರಲಿ

ಕೈಯಲ್ಲಿ ಹಣ ಇದೆ ಎಂಬ ಭಾವನೆಯಿಂದ ಹಣ ಖರ್ಚು ಮಾಡುವವರೇ ಹೆಚ್ಚು. ಇದು ಮೇಷ ರಾಶಿಯವರ ಋಣಾತ್ಮಕ ಭಾವನೆಯೂ ಹೌದು. ಈ ಬಾರಿ ಹಣವನ್ನು ಸಂಗ್ರಹಿಸುವ ಮನಸ್ಸು ಮಾಡಿದರೆ ಸಾಧ್ಯವಾಗುತ್ತದೆ. ಮೇಷರಾಶಿಯವರ ಮತ್ತೊಂದು ತಪ್ಪು ಅಭಿಪ್ರಾಯವೆಂದರೆ ಎಂದೋ ಬರುವ ಹಣವನ್ನು ನೆಚ್ಚಿಕೊಂಡು ಇಂದು ತಮ್ಮ ಇರುವ ಹಣವನ್ನೆಲ್ಲಾ ಖರ್ಚು ಮಾಡುವುದು. ಚುರುಕುತನ ಒಳ್ಳೆಯದು ಆದರೆ ಚುರುಕುತನದ ಜೊತೆ ಅತಿಯಾದ ಆಸೆ ಮತ್ತು ನಿರೀಕ್ಷೆ ಒಳ್ಳೆಯದಲ್ಲ. ಮುಖ್ಯವಾಗಿ ಸ್ತ್ರೀಯರು ಹಣಕಾಸಿನ ವಿಚಾರದಲ್ಲಿ ಈ ಬಾರಿ ಉತ್ತಮ ಯೋಜನೆಗಳನ್ನು ರೂಪಿಸುತ್ತಾರೆ.

ಬಹುದಿನಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಯು ಪರಿಹಾರಗೊಳ್ಳುತ್ತದೆ. ಆದರೆ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಹುದಿನದಿಂದ ನೀವು ನೀಡಿದ ಹಣವನ್ನು ಮರಳಿ ನೀಡಲು ಸತಾಯಿಸುತ್ತಿದ್ದ ಆತ್ಮೀಯರು ಮತ್ತು ಬಂಧು ಬಳಗದವರು ಈ ಬಾರಿ ಹಣವನ್ನು ಮರಳಿಸುತ್ತಾರೆ. ಮಿಥುನ, ಕನ್ಯಾ, ಧನಸ್ಸು ಮತ್ತು ಮೀನ ರಾಶಿಗಳಲ್ಲಿ ಜನಿಸಿದವರ ಜೊತೆಯಲ್ಲಿ ನಿಮ್ಮ ಹಣಕಾಸಿನ ವ್ಯವಹಾರವಿದ್ದಲ್ಲಿ ಅನಾವಶ್ಯಕವಾಗಿ ವಾದ ವಿವಾದಗಳು ಉಂಟಾಗುತ್ತದೆ. ಆದ್ದರಿಂದ ಅವರೊಂದಿಗೆ ಹಣಕಾಸಿನ ವ್ಯವಹಾರವನ್ನು ನಿಲ್ಲಿಸುವ ಸಾಧ್ಯತೆಗಳಿವೆ.

ದೂರವಾದ ಬಂಧುಗಳು ಮರಳಿ ಬರುತ್ತಾರೆ

ವಾಹನ ಚಾಲನೆ ಮಾಡುವ ವೇಳೆ, ಬಿದ್ದು ತೊಂದರೆಗೆ ಒಳಗಾಗುವುದು ಅಥವಾ ಓಡಾಡುವ ವೇಳೆ ಬೀಳುವುದು ತಲೆ ಸುತ್ತುವ ತೊಂದರೆ ಇವುಗಳಿಂದ ಬಳಲುತ್ತಿರುವವರಿಗೆ ಪರಿಹಾರ ದೊರೆಯುತ್ತದೆ. ನಿಮ್ಮ ಸರಿ ಸಮಾನರಾದ ಹಲವು ಸ್ನೇಹಿತರು ಅಥವಾ ಬಂಧುಗಳು ಹಳೆಯ ವಿವಾದಗಳನ್ನು ಮರೆತು ಮತ್ತೊಮ್ಮೆ ನಿಮ್ಮ ಪ್ರೀತಿ ವಿಶ್ವಾಸಕ್ಕಾಗಿ ಹಾತೊರೆಯುತ್ತಾರೆ. ವೃತ್ತಿಯಲ್ಲಿಯೂ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ತಂದೆ ಅಥವಾ ಕುಟುಂಬದ ಹಿರಿಯರ ಜೊತೆಯಲ್ಲಿ ಇದ್ದ ಮನಸ್ತಾಪ ಕೊನೆಗೊಂಡು ಅನುಕೂಲತೆಗಳು ಉಂಟಾಗುತ್ತವೆ. ವಂಶಕ್ಕೆ ಸಂಬಂಧಪಟ್ಟಂತೆ ಆಸ್ತಿ, ಹಣ ಅಥವಾ ಯಾವುದೇ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುತ್ತವೆ.

ಶ್ರೀ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಹೇಳಿಕೊಳ್ಳುವುದರಿಂದ ಮತ್ತು ಶ್ರೀ ದುರ್ಗಾ ಪೂಜೆಯನ್ನು ಮಾಡುವುದರಿಂದ ಹೆಚ್ಚಿನ ಫಲಗಳನ್ನು ಪಡೆಯಬಹುದು. ಒಟ್ಟಾರೆ ಮೇಷ ರಾಶಿಯವರು, ತಮಗೆ ದೊರೆವ ಅವಕಾಶಗಳನ್ನು ಪರಿಪಕ್ವವಾಗಿ ಬಳಸಿಕೊಳ್ಳಬೇಕು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).