ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Astrology News: ನಮ್ಮ ಕಷ್ಟಗಳಿಗೆ ನಾವೇ ಕಾರಣ; ಸಮಸ್ಯೆಗಳಿಂದ ಪಾರಾಗಲು ಜ್ಯೋತಿಷ್ಯಶಾಸ್ತ್ರದಲ್ಲಿನ ಪರಿಹಾರ ತಿಳಿಯಿರಿ

Astrology News: ನಮ್ಮ ಕಷ್ಟಗಳಿಗೆ ನಾವೇ ಕಾರಣ; ಸಮಸ್ಯೆಗಳಿಂದ ಪಾರಾಗಲು ಜ್ಯೋತಿಷ್ಯಶಾಸ್ತ್ರದಲ್ಲಿನ ಪರಿಹಾರ ತಿಳಿಯಿರಿ

ಪ್ರತಿಯೊಬ್ಬರೂ ನಮಗೆ ತಿಳಿಯದಂತೆ ಅನೇಕ ತಪ್ಪು ಮಾಡುತ್ತೇವೆ. ಆದರೆ ಅದರಿಂದಾಗುವ ತೊಂದರೆಗಳು ಅಧಿಕ. ಮಾಡಿದ್ದುಣ್ಣೋ ಮಹಾರಾಯ ಎಂಬ ಕನ್ನಡದ ಗಾದೆಯಂತೆ ತಪ್ಪಿಗೆ ತಕ್ಕಂತೆ ಪ್ರತಿಫಲವನ್ನು ಪಡೆಯಲೇಬೇಕು. ನಮ್ಮ ಕಷ್ಟಕ್ಕೆ ನಾವೇ ಕಾರಣ. ಇದರಿಂದ ಪಾರಾಗಲು ಏನು ಮಾಡಬೇಕು, ಮನೆ ಹೇಗಿರಬೇಕು ಎಂಬುದರ ವಿವರ ಇಲ್ಲಿದೆ.

ಮನೆಯಲ್ಲಿನ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಪರಿಹಾರಗಳನ್ನು ತಿಳಿಯಿರಿ.
ಮನೆಯಲ್ಲಿನ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಪರಿಹಾರಗಳನ್ನು ತಿಳಿಯಿರಿ.

'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ವಾರ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ‘ನಮ್ಮ ಕಷ್ಟಕ್ಕೆ ನಾವೇ ಕಾರಣ’ ಎಂಬುದರ ಬಗ್ಗೆ ಬರೆದಿದ್ದಾರೆ.

ಮನೆಯಲ್ಲಿ ಋಣಾತ್ಮಕ ಶಕ್ತಿ ಮತ್ತು ಧನಾತ್ಮಕ ಶಕ್ತಿಗಳು ಇರುತ್ತವೆ. ಧನಾತ್ಮಕ ಶಕ್ತಿಯನ್ನು ನೈಸರ್ಗಿಕವಾಗಿ ಪಡೆಯಬಹುದು. ಹಾಗೆಯೇ ನಮ್ಮ ಪ್ರಯತ್ನದಿಂದಲೂ ಮನೆಯಲ್ಲಿರುವ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ನೈಸರ್ಗಿಕವಾಗಿ ಋಣಾತ್ಮಕ ಶಕ್ತಿಯು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತದೆ. ತಿಳಿದೊ ತಿಳಿದೆಯೋ ನಾವು ಮಾಡುವ ತಪ್ಪಿನಿಂದಾಗೆ ಋಣಾತ್ಮಕ ಶಕ್ತಿಯು ಹೆಚ್ಚಾಗುತ್ತದೆ.

ಸೂರ್ಯನು ಉದಯಿಸುವ 30 ನಿಮಿಷದ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಬೇಕು. ಮನೆಯ ಕಸವನ್ನು ಮನೆಯ ಒಳಭಾಗದಿಂದ ಮುಂಬಾಗಿಲ ಕಡೆಗೆ ಗುಡಿಸಿ ಹೊರ ಹಾಕಬೇಕು. ಇದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಯು ಹೊರಹೋಗುತ್ತದೆ. ಕೆಲವರು ಮನೆಯ ಬಾಗಿಲಿನಿಂದ ಮನೆಯ ಒಳಗೆ ಕಸವನ್ನು ಗುಡಿಸುತ್ತಾರೆ. ಆಗ ಹೊರಗಿರುವ ಋಣಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ.

ಒಂಟಿ ದೀಪವನ್ನು ಹೊತ್ತಿಸಿದರೆ ಸಮಸ್ಯೆಯಾಗುತ್ತಾ?

ಕಸವನ್ನು ಗುಡಿಸಿದ ನಂತರ ಪೊರಕೆಯನ್ನು ಮನೆಯ ಒಳಗೆ ಇಡಬಾರದು. ಕೆಲವರ ಸಂಪ್ರದಾಯದ ಪ್ರಕಾರ ಕುಟುಂಬದಲ್ಲಿ ಯಾರಾದರೂ ಅಸುನೀಗಿದಾಗ ದಿನನಿತ್ಯದ ಕರ್ಮವನ್ನು ಮಾಡಿ ಮನೆಗೆ ಹಿಂತಿರುಗುವವರೆಗೂ ಮನೆಯ ಒಳಗೆ ಪೊರಕೆ ಮತ್ತು ಮೊರವನ್ನು ನಿಲ್ಲಿಸಿರುತ್ತಾರೆ. ಮನೆಗೆ ಬಂದನಂತರ ಪೊರಕೆ ಮತ್ತು ಮೊರವನ್ನು ಸರಿಯಾಗಿ ಇಡುತ್ತಾರೆ. ಹಾಗೆಯೇ ಒಂಟಿ ದೀಪವನ್ನು ಹೊತ್ತಿಸಬಾರದು ಎಂದು ಹೇಳುತ್ತಾರೆ. ಆದರೆ ಅಪರ ಕ್ರಿಯೆಮಾಡಿದ ನಂತರ ಬಾಯಿಯಿಂದ ಗಾಳಿ ಊದಿ ದೀಪವನ್ನು ಆರಿಸುತ್ತಾರೆ. ಅಂದರೆ ಈ ಚಟುವಟಿಕೆಗಳಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತದೆ. ದಿನ ನಿತ್ಯ ಕಸ ಗುಡಿಸಿದ ನಂತರ ಪೊರಕೆಯನ್ನು ಮನೆಯ ಹೊರಗೆ ನಿಲ್ಲಿಸದೆ ಮಲಗಿಸಬೇಕು. ಪೂರ್ವ ಅಥವ ಉತ್ತರ ದಿಕ್ಕಿನಲ್ಲಿ ಪೊರಕೆ ಮತ್ತು ಮೊರವನ್ನು ಇಡಬಾರದು.

ಮನೆಯಲ್ಲಿರುವ ದೇವರ ಕೋಣೆಯಲ್ಲಿ ಸದ್ದು ಗದ್ದಲ ಇರಬಾರದು. ಈ ಕಾರಣದಲ್ಲಿಯೇ ಧಾರ್ಮಿಕ ಕೇಂದ್ರಗಳಲ್ಲಿ ಮೌನವಾಗಿರಲು ಸೂಚಿಸುತ್ತಾರೆ. ಅನಾವಶ್ಯಕ ಸದ್ದು ಗದ್ದಲ ಇದ್ದೆಡೆ ದೇವರಕೋಣೆ ಇದ್ದಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತದೆ.

ಜೀವನದಲ್ಲಿ ಉತ್ತಮ ಬದಲಾವಣೆಗಾಗಿ ಹೀಗೆ ಮಾಡಿ

ಮನೆಯಲ್ಲಿ ಕೆಟ್ಟುಹೋದ ಅಥವಾ ಉಪಯೋಗಿಸದ ಯಾವುದೇ ವಸ್ತು ಇದ್ದರು ಅದನ್ನು ಮನೆಯಿಂದ ಹೊರಗೆ ಸಾಗಿಸಬೇಕು. ಇಲ್ಲವಾದಲ್ಲಿ ಇದರಿಂದ ಕುಟುಂಬದ ಹಿಂದಿನ ವಿವಾದಗಳು ಮರುಕಳಿಸುತ್ತವೆ. ಹರಿದುಹೋದ ಓದಲು ಸಾಧ್ಯವಾಗದ ಪುಸ್ತಕಗಳಿಂದಲೂ ಇದೇ ರೀತಿಯ ತೊಂದರೆಗಳು ಉಂಟಾಗುತ್ತವೆ. ಆದರೆ ಕೆಟ್ಟುನಿಂತ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಬಳಸಿದಲ್ಲಿ ಜೀವನದಲ್ಲಿ ಉತ್ತಮ ಬದಲಾವಣೆಗಳು ಎದುರಾಗುತ್ತವೆ.

ಜೇಡರಬಲೆಯ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ತಾನೇ ಕಟ್ಟಿದ ಗೂಡಿನಲ್ಲಿ ಸಿಲುಕಿ ಜೇಡವು ಅಸಾಧ್ಯವಾದ ತೊಂದರೆಗೆ ಸಿಲುಕುತ್ತದೆ. ಆದ್ದರಿಂದ ಮನೆಯ ಒಳಗೆ ಜೇಡರಬಲೆ ಇದ್ದಲ್ಲಿ ಕುಟುಂಬದ ಕೆಲಸಕಾರ್ಯಗಳು ಸುಗಮವಾಗಿ ನಡೆಯಲಾರವು. ಮನೆಯ ಹೊರಗೆ ಜೇಡರಬಲೆ ಇದ್ದಲ್ಲಿ ದೂರದ ಸಂಬಂಧಿಕರು ಅಥವ ನೆರೆಹೊರೆಯವರಿಂದ ತೊಂದರೆ ಉಂಟಾಗುವ ಸಾಧ್ಯಗೆ ಹೆಚ್ಚು. ಅಲ್ಲದೆ ಸರಳವಾದ ಕೆಲಸವನ್ನು ಪೂರೈಸಲೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಸಾಲವೂ ಹೆಚ್ಚುವ ಸಾಧ್ಯತೆ ಇರುತ್ತದೆ.

ದೀಪಗಳಲ್ಲಿ ದೂಳು ಇರದಂತೆ ನೋಡಿಕೊಳ್ಳಬೇಕು. ಎಣ್ಣೆ ದೀಪವಾಗಲಿ ವಿಧ್ಯುತ್ ದೀಪವಾಗಲಿ ಇದೇ ಹಾದಿಯನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಒಂದು ಚಿಕ್ಕ ಬಟ್ಟಲಲ್ಲಿ ಕಲ್ಲು ಉಪ್ಪನ್ನು ಮನೆಯ ಒಳಗೆ ಇಡುವುದರಿಂದ ಈ ತೊಂದರೆಯಿಂದ ಪಾರಾಗಬಹುದು.

ಕೆಲವಮ್ಮೆ ಸೋದರರು ಅಥವ ಕುಟುಂಬದ ಇತರೆ ಸದಸ್ಯರು ಜಗಳವಾಡುವಂತೆ ಅಥವ ಹೊಡೆದಾಡುವಂತೆ ಭಾವಚಿತ್ರವನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಮನೆಯಲ್ಲಿ ಪ್ರದರ್ಶಿಸುತ್ತಾರೆ. ಇದರಿಂದ ಕುಟುಂಬದಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ಉತ್ತರದ ಗೋಡೆಗೆ ಕುಟುಂಬದ ಎಲ್ಲಾ ಸದಸ್ಯರಿರುವ ಭಾವಚಿತ್ರ ಹಾಕಿದಲ್ಲಿ ಕುಟುಂಬದಲ್ಲಿ ಒಮ್ಮತ ಮೂಡುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)