ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ: ಉದ್ದ ಮೂಗನ್ನು ಹೊಂದಿರುವವರ ಗುಣ ಸ್ವಭಾವ ಹೇಗಿರುತ್ತದೆ?
ಉದ್ದ ಮೂಗು ಹೊಂದಿರುವವರು ಕುಟುಂಬದ ಹಿರಿಯರ ಪ್ರೀತಿ ದೊರೆತು ಸದಾ ಕಾಲ ಸಂತಸದಿಂದ ಬಾಳುತ್ತಾರೆ. ಇವರಿಗೆ ಕುಲ ಕಸುಬೊಂದು ವರವಾಗಿ ಪರಿಣಮಿಸಲಿದೆ. ಉತ್ತಮ ವಿದ್ಯಾಭ್ಯಾಸ ಪಡೆದಿರುತ್ತಾರೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಜನ್ಮ ದಿನಾಂಕ ಆಧರಿಸಿ ಭವಿಷ್ಯವನ್ನು ತಿಳಿಯಬಹುದು. ಆದರೆ ನಮ್ಮ ದೇಹದದಲ್ಲಿ ಕಣ್ಣು, ಕಿವಿ, ಮೂಗಿನ ಆಕಾರ ತಿಳಿದು ಆಯಾ ವ್ಯಕ್ತಿಗಳ ಸ್ವಭಾವವನ್ನೂ ತಿಳಿಯಬಹುದು. ಈ ಲೇಖನದಲ್ಲಿ ಮೂಗಿನ ಆಕಾರದಿಂದ ವ್ಯಕ್ತಿಗಳ ಗುಣ ಸ್ವಭಾವವನ್ನು ಹೇಗೆ ತಿಳಿಯಬಹುದು ಎಂದು ತಿಳಿಸಲಾಗಿದೆ.
ಮೂಗು ಸ್ವಲ್ಪ ಉದ್ದವಾಗಿದ್ದರೆ ಅಂತವರು ಸಾಮಾನ್ಯವಾಗಿ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಇವರದು ಹೆಂಗರುಳು ಎನ್ನಬಹುದು. ಚಿಕ್ಕ ವಯಸ್ಸಿನಲ್ಲಿ ತಮಗೆ ಇಷ್ಟವಾದಂತ ಅನುಕೂಲತೆಗಳನ್ನು ಪಡೆಯಲು ಯಶಸ್ವಿಯಾಗುತ್ತಾರೆ. ಇವರಿಗೆ ಎಲ್ಲರ ಪ್ರೀತಿ ವಿಶ್ವಾಸ ದೊರೆಯುತ್ತದೆ. ಚಿಕ್ಕ ವಯಸ್ಸಿನಲ್ಲಿ ತಮ್ಮ ಜೀವನವು ಹೇಗಿರಬೇಕೆಂದು ಯೋಚಿಸುವ ಗುಣವಿರುತ್ತದೆ. ಸುಲಭವಾಗಿ ಇವರ ಮನಸ್ಸನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಇವರ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೇರೆಯವರ ಮೇಲೆ ಅವಲಂಬಿತರಾಗದೆ ಅವರಿಂದ ಸ್ಪೂರ್ತಿ ಪಡೆಯುವುದು ಇವರ ವಿಶೇಷ ಗುಣಗಳಲ್ಲಿ ಒಂದು.
ಸದಾ ಕಾಲ ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸ ದೊರೆಯಲಿದೆ
ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸದಿಂದ ಸದಾ ಕಾಲ ಸಂತಸದಿಂದ ಬಾಳುತ್ತಾರೆ. ಕುಲ ಕಸುಬೊಂದು ಇವರಿಗೆ ವರವಾಗಿ ಪರಿಣಮಿಸಲಿದೆ. ಇವರಿಗೆ ಉತ್ತಮ ವಿದ್ಯಾಭ್ಯಾಸವಿರುತ್ತದೆ. ವಿದ್ಯಾಭ್ಯಾಸಕ್ಕೆ ತಕ್ಕಂತ ಉದ್ಯೋಗವೂ ದೊರೆಯುತ್ತದೆ. ಇವರ ಮನಸ್ಸನ್ನು ಸುಲಭವಾಗಿ ಬದಲಿಸಲು ಸಾಧ್ಯವಾಗುವುದಿಲ್ಲ. ಆದರೆ ಇವರಿಗೆ ಹಟದ ಗುಣ ಇರುವುದಿಲ್ಲ. ಬೇರೆಯವರೊಂದಿಗೆ ಅನುಸರಿಸಿಕೊಂಡು ನಡೆಯುವ ಗುಣವಿರುತ್ತದೆ. ಉತ್ತಮ ಆದಾಯ ಇರುತ್ತದೆ. ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಸಾಲದ ವ್ಯವಹಾರದಿಂದ ಸದಾ ಕಾಲ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಆತ್ಮೀಯರೊಂದಿಗೆ ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಸಿಹಿಯಾದ ಆಹಾರ ಪದಾರ್ಥವೆಂದರೆ ಬಲು ಇಷ್ಟ.
ಹೋಟೆಲ್ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ದಂಪತಿ ಜೊತೆ ಗೂಡಿ ಹೊಸ ವ್ಯಾಪಾರವನ್ನು ಆರಂಭಿಸಬಹುದು. ಖ್ಯಾತ ಸಂಸ್ಥೆಯಲ್ಲಿ ಇವರಿಗೆ ಉದ್ಯೋಗ ದೊರೆಯುತ್ತದೆ. ನಯ ವಿನಯದ ಮಾತುಕತೆಯಿಂದ ಸಹೋದ್ಯೋಗಿಗಳ ಮನಸ್ಸನ್ನು ಗೆಲ್ಲುತ್ತಾರೆ. ಕೆಲಸ ಕಾರ್ಯಗಳನ್ನು ಅವಧಿಗೆ ಮುನ್ನವೇ ಪೂರೈಸುವ ಕಾರಣ ಹಿರಿಯ ಅಧಿಕಾರಿಗಳ ಮೆಚ್ಚುಗೆ ಮತ್ತು ಸಹಕಾರವು ದೊರೆಯುತ್ತದೆ. ಬೇರೊಬ್ಬರ ಪ್ರಭಾವಕ್ಕೆ ಮಣಿದು ಉದ್ಯೋಗ ಬದಲಾಯಿಸುವುದಿಲ್ಲ. ಅತಿಯಾದ ಆಸೆ ತೋರದೆ ಇರುವುದರಿಂದ ಉದ್ಯೋಗದಲ್ಲೇ ಪ್ರಗತಿ ಸಾಧಿಸುತ್ತಾರೆ.
ವಿಶೇಷವಾದ ಕ್ಷಮಾಗುಣ ಇರುತ್ತದೆ
ಬಿಡುವಿನ ವೇಳೆಯಲ್ಲಿ ಹಣಕಾಸಿನ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಇಷ್ಟಪಟ್ಟವರ ಜೊತೆ ಮದುವೆ ಆಗುತ್ತದೆ. ವಿಶೇಷವಾದಂತಹ ಕ್ಷಮಾಗುಣ ಇರುವ ಕಾರಣ ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಇವರ ಮಕ್ಕಳು ಸಹ ಇವರ ರೀತಿ ನೀತಿಗಳನ್ನೇ ಅನುಸರಿಸುತ್ತಾರೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿ ನಾಯಕನ ಗುಣವನ್ನು ಬೆಳೆಸುತ್ತಾರೆ. ಅತಿಯಾಗಿ ಆಸೆ ಪಡದೆ ದೊರೆವ ಹಣದ ಹಣದಲ್ಲಿ ಉಳಿತಾಯ ಮಾಡಲು ಶಕ್ತರಾಗುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಇನ್ನಿತರ ದೈಹಿಕ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಾರೆ.
ಮಕ್ಕಳ ವಿವಾಹವಾದ ಮೇಲೆ ಹೊಸ ಬದುಕಿಗೆ ಹೊಂದಿಕೊಂಡು ನಡೆಯುತ್ತಾರೆ. ನದಿ ಮತ್ತು ಸಮುದ್ರದ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವ ಆಸಕ್ತಿ ಇರುತ್ತದೆ. ಒಂದಕ್ಕಿಂತಲೂ ಹೆಚ್ಚು ವಾಹನಗಳ ಬದಲಾಗಿ ಒಂದೇ ಒಂದು ಐಷಾರಾಮಿ ವಾಹನ ಕೊಳ್ಳುತ್ತಾರೆ. ಇದೇ ರೀತಿ ಐಷಾರಾಮಿ ಮನೆಯಲ್ಲಿ ಜೀವನ ನಡೆಸುವ ಆಸೆ ಈಡೇರುತ್ತದೆ. ಅವಶ್ಯಕತೆ ಇದ್ದಲ್ಲಿ ಇವರ ತಂದೆ ತಾಯಿ ಹಣದ ಸಹಾಯ ಮಾಡುತ್ತಾರೆ. ವಯಸ್ಸಿನ ಅಂತರವಿಲ್ಲದೆ ಸದಾ ಕಾಲ ಯಾವುದಾದರೂ ಒಂದು ಕೆಲಸ ಕಾರ್ಯದಲ್ಲಿ ತೊಡಗುತ್ತಾರೆ. ಮನಸ್ಸಿಗೆ ಇಷ್ಟವೆನಿಸುವ ಒಡವೆ ವಸ್ತ್ರಗಳಿಗೆ ಹೆಚ್ಚು ಹಣ ನೀಡುತ್ತಾರೆ. ಶಾಂತಿ ಸಂಧಾನವನ್ನು ಇಷ್ಟಪಡದ ಇವರು ವಿವಾದದ ವೇಳೆ ಮೌನಕ್ಕೆ ಶರಣಾಗುತ್ತಾರೆ. ಕಾದು ನೋಡುವ ತಂತ್ರ ಇವರಿಗೆ ನಿಜವಾದ ಅಸ್ತ್ರ ವಾಗುತ್ತದೆ. ಜೀವನದ ಕೊನೆಯ ದಿನಗಳವರೆಗೂ ಯಾರೊಬ್ಬರನ್ನೂ ಆಶ್ರಯಿಸದೆ ಸ್ವತಂತ್ಯ್ರವಾದ ಜೀವನ ನಡೆಸುತ್ತಾರೆ. ಬೇರೆಯವರ ಯಶಸ್ಸನ್ನು ಸಹ ಇವರು ಸಂಭ್ರಮಿಸುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).