ಶುಕ್ರವಾರ ಹೊರತುಪಡಿಸಿ ವಾರದ ಬೇರೆ ಯಾವ ದಿನಗಳು ಚಿನ್ನ ಖರೀದಿಸಬಹುದು? ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾದ ಆ ವಾರಗಳು ಯಾವುವು?
ಸಾಮಾನ್ಯವಾಗಿ ನಾವೆಲ್ಲರೂ ಶುಭ ದಿನ ನೋಡಿ ಚಿನ್ನ ಖರೀದಿಸುತ್ತೇವೆ. ಆದರೆ ವಾರದ ಕೆಲವು ನಿರ್ದಿಷ್ಟ ದಿನಗಳು ಚಿನ್ನ ಖರೀದಿಗೆ ಅದೃಷ್ಟದ ದಿನಗಳೆಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ. ಆ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟವು ಒಲಿದು ಬರುತ್ತದೆ ಎಂದು ಹೇಳಲಾಗದೆ. ಹಾಗಾದರೆ ಆ ದಿನಗಳು ಯಾವುವು ಇಲ್ಲಿದೆ ಓದಿ. (ಬರಹ: ಅರ್ಚನಾ ವಿ ಭಟ್)

ಬಂಗಾರವು ಎಲ್ಲರನ್ನೂ ತನ್ನತ್ತ ಸೆಳೆಯುವ ಒಂದು ಸೋಜಿಗದ ವಸ್ತು. ಜಗತ್ತಿನಲ್ಲಿ ಬಹುತೇಕ ಎಲ್ಲರಿಗೂ ಹಳದಿ ಲೋಹದ ಮೇಲೆ ವ್ಯಾಮೋಹ ಇದೆ. ಭಾರತದಲ್ಲಂತೂ ಚಿನ್ನ ಬರೀ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಧರಿಸುವ ಆಭರಣವಲ್ಲ. ಅದೊಂದು ಸುರಕ್ಷತೆಯ ಹೂಡಿಕೆ, ಮುಂದಿನ ಪೀಳಿಗೆಯವರಿಗೆ ಆಸ್ತಿ, ಹೆಣ್ಣು ಮಕ್ಕಳಿಗೆ ಗೌರವ ಹೆಚ್ಚಿಸುವ ವಸ್ತು ಹೀಗೆ ಅನೇಕ ರೂಪಗಳಲ್ಲಿ ಚಿನ್ನ ತನ್ನ ಉಪಸ್ಥಿತಿಯನ್ನು ತೋರಿಸಿದೆ.
ಚಿನ್ನ ಭಾವನಾತ್ಮಕವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಸಿದೆ. ಬಂಗಾರವು ಆರ್ಥಿಕ ಪ್ರಾಮುಖ್ಯತೆಯನ್ನು ಗಳಿಸಿದೆ. ಅದಕ್ಕಾಗಿಯೇ ಜನರು ಅದರ ಖರೀದಿಗೆ ಹೆಚ್ಚಿನ ಗಮನ ನೀಡುತ್ತಾರೆ. ಸಾಮಾನ್ಯವಾಗಿ ಚಿನ್ನವನ್ನು ದೀಪಾವಳಿ, ಅಕ್ಷಯ ತೃತಿಯದಂದು ಖರೀದಿಸುವುದನ್ನು ನಾವು ನೋಡಿದ್ದೇವೆ. ಆದರೆ ಉಳಿದ ದಿನಗಳಲ್ಲಿ ಖರೀದಿಸಬೇಕೆಂದಿದ್ದರೆ ಆಗ ಚಿನ್ನ ಖರೀದಿಗೆ ಸೂಕ್ತ ದಿನ ಯಾವುದು? ಎಂಬ ಪ್ರಶ್ನೆ ಹಲವರಲ್ಲಿ ಏಳುತ್ತದೆ. ಏಕೆಂದರೆ ಚಿನ್ನವನ್ನು ಶುಭ ದಿನಗಳಲ್ಲಿ ಖರೀದಿ ಮಾಡುವುದರಿಂದ ಅದೃಷ್ಟವು ಒಲಿದು ಬರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಮಾತ್ರವಲ್ಲ, ವಾರದ ಕೆಲವು ದಿನಗಳಲ್ಲಿ ಚಿನ್ನ ಖರೀದಿಸುವುದರಿಂದ ಅದೃಷ್ಟದ ದಿನಗಳು ಅರಸಿ ಬರುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಶಾಸ್ತ್ರದಲ್ಲಿ ಹೇಳಿದ ಮಂಗಳಕರವಾದ ದಿನಗಳು ಯಾವವು ತಿಳಿಯಲು ಮುಂದೆ ಓದಿ.
ಚಿನ್ನ ಖರೀದಿಗೆ ಮಂಗಳಕರ ದಿನಗಳು
ಸೋಮವಾರ
ಸೋಮವಾರವು ಚಂದ್ರನಿಗೆ ಸಮರ್ಪಿತವಾದ ವಾರವಾಗಿದೆ. ಚಂದ್ರ ಗ್ರಹವು ಪ್ರಗತಿ, ಶಾಂತಿ ಮತ್ತು ತೃಪ್ತಿಯನ್ನು ನೀಡುವ ಗ್ರಹವಾಗಿದೆ. ಚಂದ್ರನಿಗೆ ಸಂಬಂಧಿಸಿದ ಲೋಹ ಬೆಳ್ಳಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಆಶ್ಚರ್ಯದ ವಿಷಯವೆಂದರೆ ಚಿನ್ನವನ್ನು ಸೋಮವಾರದಂದು ಖರೀದಿಸಬಹುದಾಗಿದೆ. ಚಂದ್ರನು ಪ್ರಗತಿಯ ಸೂಚಿಸುವುದರಿಂದ ಆ ದಿನದಂದು ಚಿನ್ನ ಖರೀದಿಸಿದರೆ ಉತ್ತಮ ಪ್ರಗತಿ ಕಾಣಬಹುದು ಎಂಬ ನಂಬಿಕೆಯಿದೆ. ಹಾಗಾಗಿ ನೀವು ಚಿನ್ನ ಖರೀದಿಸಬೇಕೆಂದಿದ್ದರೆ ಸೋಮವಾರವನ್ನು ಪರಿಗಣಿಸಬಹುದು.
ಮಂಗಳವಾರ
ಮಂಗಳವಾರವನ್ನು ಮಂಗಳ ಗ್ರಹಕ್ಕೆ ಹೋಲಿಸಲಾಗುತ್ತದೆ. ಮಂಗಳವಾರದಂದು ಯಾರುಬೇಕಾದರೂ ಚಿನ್ನವನ್ನು ಖರೀದಿಸಬಹುದು. ಅದರಲ್ಲೂ ವಿಶೇಷವಾಗಿ ಜಾತಕದಲ್ಲಿ ಮಂಗಳನ ದೃಷ್ಟಿ ಕಡಿಮೆಯಿರುವ ವ್ಯಕ್ತಿಗಳಿಗೆ ಈ ದಿನವು ಹೆಚ್ಚು ಸೂಕ್ತವಾಗಿದೆ. ಮಂಗಳ ದೇವರನ್ನು ಮೆಚ್ಚಿಸುವುದರಿಂದ ಜೀವನದಲ್ಲಿ ಚೈತನ್ಯ, ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನಂಬಲಾಗಿದೆ. ಮಂಗಳ ಗ್ರಹಕ್ಕೆ ತಾಮ್ರದ ಬಣ್ಣ ಅಥವಾ ತಾಮ್ರ ಅದೃಷ್ಟವನ್ನು ತರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಬಂಗಾರವನ್ನು ಸಹ ಅದಕ್ಕೆ ಜೋಡಿಸಲಾಗಿದೆ. ಹಾಗಾಗಿ ಮಂಗಳವಾರ ಚಿನ್ನವನ್ನು ಖರೀದಿಸುವುದರಿಂದ ಬಹಳ ಶುಭ ಎಂದು ನಂಬಲಾಗಿದೆ.
ಗುರುವಾರ
ಗುರು ಗ್ರಹದ ಬಲವು ಕುಂಠಿತವಾಗಿದೆ ಅಥವಾ ಜೀವನದಲ್ಲಿ ಅಸಮತೋಲನೆ ಎದುರಾಗುತ್ತಿದೆ ಎಂದು ಅನಿಸಿದರೆ ಗುರುವಾರದಂದು ಹೂಡಿಕೆ ಮಾಡುವುದರಿಂದ ಅದೃಷ್ಟದ ಹಾದಿಗೆ ಮರಳಬಹುದು ಎಂದು ಹೇಳಲಾಗಿದೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಗುರುವಾರದಂದು ಚಿನ್ನ ಖರೀದಿಸುವುದರಿಂದ ಅದೃಷ್ಟ ದಿನಗಳು ಬರುತ್ತವೆ ಎಂಬ ನಂಬಿಕೆಯಿದೆ. ಗುರು ಗ್ರಹದ ಆಶೀರ್ವಾದಿಂದ ಸಮೃದ್ಧಿ ಮತ್ತು ಅದೃಷ್ಟ ಎರಡೂ ಹೆಚ್ಚಾಗುತ್ತದೆ ಎಂದು ಭಾವಿಸಲಾಗಿದೆ.
ಭಾನುವಾರ
ಭಾನುವಾರವು ಸೂರ್ಯದೇವನ ವಾರವಾಗಿದೆ. ಜಾತಕದಲ್ಲಿ ಸೂರ್ಯವನ್ನು ಬಲಪಡಿಸಲು ಚಿನ್ನದ ಆಭರಣಗಳನ್ನು ಧರಿಸಲು ಹೇಳುವುದನ್ನು ನೀವು ಕೇಳಿರಬಹುದು. ಹಾಗಾಗಿ ಚಿನ್ನ ಖರೀದಿಗೆ ಭಾನುವಾರ ಉತ್ತಮ ದಿನ ಎಂದು ಹೇಳಲಾಗಿದೆ. ಚಿನ್ನವು ಸೂರ್ಯ ಅಥವಾ ರವಿಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಅದನ್ನು ಧರಿಸುವುದರಿಂದ ನಿಮ್ಮ ದೇಹ ಮತ್ತು ಮನಸ್ಸನ್ನು ಬಲಪಡಿಸುತ್ತದೆ ಎಂಬ ನಂಬಿಕೆಯಿದೆ. ಅದು ಅದೃಷ್ಟವನ್ನು ತರುತ್ತದೆ. ಅದಕ್ಕಾಗಿ ಭಾನುವಾರದಂದು ಚಿನ್ನವನ್ನು ಖರೀದಿಸುವುದರಿಂದ ಜೀವನದಲ್ಲಿ ಅದೃಷ್ಟದ ದಿನಗಳನ್ನು ಕಾಣಬಹುದಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಬರಹ: ಅರ್ಚನಾ ವಿ ಭಟ್)
