ಅಂಕುಡೊಂಕಾದ ಬೆರಳು ತಿಳಿಸುತ್ತದೆ ನಿಮ್ಮೊಳಗಿನ ಇಷ್ಟ ಕಷ್ಟ; ಪ್ರತಿ ಬೆರಳಿನ ಹಿಂದಿರುವ ಗುಣ ಲಕ್ಷಣಗಳು ಹೀಗಿವೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳ ಆಕಾರದ ಮೇಲೂ ವ್ಯಕ್ತಿಯ ಗುಣ ಲಕ್ಷಣಗಳನ್ನು ಹೇಳಲಾಗುತ್ತದೆ. ಪ್ರತಿ ಬೆರಳಿನ ಆಕಾರದ ಮೇಲೆ ವ್ಯಕ್ತಿಯ ಭವಿಷ್ಯ ಏನು ಎಂದು ಹೇಳುತ್ತಾರೆ. ಹಾಗಾದರೆ ಬೆರಳುಗಳು ಅಂಕುಡೊಂಕಾಗಿದ್ದರೆ ಅದರ ಅರ್ಥವೇನು? ಆ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ತಿಳಿಯಲು ಮುಂದೆ ಓದಿ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಎಲ್ಲರ ಕೈಬೆರಳುಗಳು ಒಂದೇ ರೀತಿ ಇರುವುದಿಲ್ಲ. ಎಲ್ಲಾ ಬೆರಳುಗಳು ನೇರವಾಗಿದ್ದರೆ ಜೀವನದಲ್ಲಿನ ತೊಂದರೆಗಳು ಬಹು ಕಡಿಮೆ. ಇಂತಹವರ ಜೀವನದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರು ಅಡಚಣೆ ಕಾಣದೆ ಸುಗಮವಾಗಿ ನಡೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಇವರಿಗೆ ನಷ್ಟವಿರುವುದಿಲ್ಲ. ಇವರ ಜೊತೆಗೂಡಿ ಬೇರೆಯವರು ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಅವರಿಗೂ ಸಹ ಶುಭಫಲಗಳು ದೊರೆಯುತ್ತವೆ. ಬೇರೆಯವರ ಪ್ರಭಾವಕ್ಕೆ ಸುಲಭವಾಗಿ ಇವರು ಬಲಿಯಾಗುವುದಿಲ್ಲ. ಇವರ ನಿರ್ಣಯಗಳೇ ಕುಟುಂಬದ ವಿಚಾರದಲ್ಲಿ ಅಂತಿಮವಾಗುತ್ತದೆ. ಆದರೆ ಕುಟುಂಬದ ಹೆಚ್ಚಿನ ಜವಾಬ್ದಾರಿ ಇವರದಾಗುವ ಕಾರಣ ದುಡಿಮೆಯಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಇವರು ಸಂಪಾದಿಸಿದ ಹಣವನ್ನು ಬೇರೆಯವರಿಗಾಗಿ ಖರ್ಚು ಮಾಡುವರು. ಸಮಾಜದಲ್ಲಿ ಉತ್ತಮ ಸ್ಥಾನಮಾನ ಲಭಿಸುತ್ತದೆ. ಸಮಾಜದಲ್ಲಿ ಇವರಿಗೆ ವಿಶೇಷವಾದ ಗೌರವ ಲಭಿಸುತ್ತದೆ. ಆದರೆ ಹಣಕಾಸಿನ ವ್ಯವಹಾರದಲ್ಲಿ ಮಾತ್ರ ಎಚ್ಚರಿಕೆಯ ತಂತ್ರವನ್ನು ಅನುಸರಿಸಬೇಕು. ಬೇರೆಯವರ ಕಷ್ಟಕಾಲಕ್ಕೆ ಎಂದು ನೀಡಿದ ಹಣವು ಮರಳಿಬಾರದು. ತಮ್ಮದೇ ಆದ ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಾರೆ. ಇವರಿಗೆ ಸ್ಥಿರಾಸ್ಥಿ ಮಾಡುವ ಆಸೆ ಇರುವುದಿಲ್ಲ. ಆದರೆ ಒಂದಕ್ಕಿಂತಲೂ ಹೆಚ್ಚು ಸ್ವಂತ ಮನೆ ಇವರಿಗಿರುತ್ತದೆ. ಐಷಾರಾಮಿ ಜೀವನವನ್ನು ನಡೆಸಲು ಇವರು ಇಷ್ಟಪಡುವುದಿಲ್ಲ.
ಅಂಕುಡೊಂಕಾದ ಬೆರಳುಗಳ ಗುಣ ಲಕ್ಷಣಗಳು
ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಅಂತರವು ಹೆಚ್ಚಾಗಿದ್ದಲ್ಲಿ ಅಥವಾ ಈ ಬೆರಳುಗಳಲ್ಲಿ ಯಾವುದಾದರೂ ಒಂದು ಬೆರಳು ಡೊಂಕಾಗಿದ್ದಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಇವರಿಗೆ ಸಾಮಾನ್ಯವಾಗಿ ಉಸಿರಿಗೆ ಸಂಬಂಧಿಸಿದ ದೋಷ ಇರುತ್ತದೆ. ಕುಟುಂಬದ ಹಿರಿಯರು ಯಾವುದೇ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಲಾರರು. ತಮ್ಮ ಚಿಕ್ಕ ವಯಸ್ಸಿನ ಕುಟುಂಬದ ಸದಸ್ಯರ ಮೇಲೆ ಇವರು ಅವಲಂಬಿತರಾಗಿರುತ್ತಾರೆ. ಮುಖ್ಯವಾಗಿ ಕುಟುಂಬದ ಹಿರಿಯ ಪುರುಷರು ತನ್ನ ಮಕ್ಕಳ ಮೇಲೆ ಅವಲಂಬಿತವಾಗುತ್ತಾರೆ. ಹಾಗೆಯೇ ಮಕ್ಕಳು ಸಹ ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಮಾಡಲಾರರು. ಬೇರೆಯವರ ಅಧೀನದಲ್ಲಿ ಕೆಲಸ ಮಾಡುವುದೆಂದರೆ ಇವರಿಗೆ ಇಷ್ಟವಾದ ವಿಚಾರ. ಇವರ ಬಳಿ ಹಣ ಇಲ್ಲದೆ ಹೋದರೂ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗುತ್ತಾರೆ.
ಇದನ್ನೂ ಓದಿ: ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ?
ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ನಡುವೆ ಅಂಕುಡೊಂಕುಗಳಿದ್ದಲ್ಲಿ ಸೋದರ ಅಥವಾ ಸೋದರಿಯರ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಇರುತ್ತವೆ. ಜೀವನದಲ್ಲಿ ಆರಂಭಿಸುವ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರು ಸುಲಭವಾಗಿಬೇರೆಯವರ ಸಲಹೆ ಸೂಚನೆಯನ್ನು ಪಾಲಿಸುತ್ತಾರೆ. ಇದರಿಂದಾಗಿ ಹಣಕಾಸಿನ ವಿಚಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಸಾಮಾನ್ಯವಾಗಿ ಇವರಿಗೆ ಮೂಳೆ ಅಥವಾ ಸ್ನಾಯುಗಳಲ್ಲಿ ಹೆಚ್ಚಿನ ನೋವು ಕಂಡು ಬರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಕುಟುಂಬದ ಆಸ್ತಿಯ ಹಂಚಿಕೆಯ ವಿಚಾರದಲ್ಲಿ ನಿಮ್ಮ ಮಧ್ಯಸ್ಥಿಕೆಯಿಂದ ಎಲ್ಲರಿಗೂ ನ್ಯಾಯ ದೊರೆಯುತ್ತದೆ. ತಮ್ಮ ತಪ್ಪನ್ನು ಮರೆಮಾಚಿ ಬೇರೆಯವರ ಜೀವನವನ್ನು ಸರಿಪಡಿಸುವುದರಲ್ಲಿ ಸಂತಸ ಕಾಣುತ್ತಾರೆ. ಇವರು ಸುಖ ಮತ್ತು ಸಂತೃಪ್ತಿಯ ಜೀವನವನ್ನು ನಡೆಸುತ್ತಾರೆ.
ಉಂಗುರದ ಬೆರಳು ಮತ್ತು ಕೊನೆಯ ಬೆರಳುಗಳು ಅಂಕುಡೊಂಕುಗಳಿದ್ದಲ್ಲಿ ಸೋದರ ಮಾವನ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಇವರಿಗೆ ನರಕ್ಕೆ ಸಂಬಂಧಿಸಿದ ದೋಷ ಉಂಟಾಗಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತಮಟ್ಟ ತಲುಪುತ್ತಾರೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಾರೆ. ಉತ್ತಮ ಆದಾಯ ಇದ್ದರೂ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಹಣದ ಕೊರತೆ ಸದಾ ಕಾಡುತ್ತದೆ. ಕುಟುಂಬದ ಹೆಣ್ಣು ಮಕ್ಕಳಿಗೆ ಉತ್ತಮ ಅನುಕೂಲತೆಗಳು ದೊರೆಯುತ್ತವೆ. ಸಾರಿಗೆ ವ್ಯವಸ್ಥೆಯಿಂದ ಉತ್ತಮ ಆದಾಯ ಗಳಿಸುತ್ತಾರೆ. ದೀರ್ಘಕಾಲದ ಪ್ರವಾಸವನ್ನು ಆಯೋಜಿಸಿ ಲಾಭಾಂಶವನ್ನು ಗಳಿಸುವರು. ಇವರಿಗೆ ದುಬಾರಿ ಬೆಲೆಯ ವಸ್ತುಗಳು ಉಡುಗೊರೆಯಾಗಿ ದೊರೆಯುತ್ತವೆ. ವಂಶದ ಆಸ್ತಿಯಲ್ಲಿ ಯಾವುದೇ ತೊಂದರೆ ಕಾಣಿಸದು. ವಂಶದ ಆಸ್ತಿ ಮತ್ತು ಹಣವು ಪ್ರಮಾಣದಲ್ಲಿ ಹಂಚಿಕೆಯಾಗುತ್ತದೆ. ಸಣ್ಣಪುಟ್ಟ ಉದ್ಯೋಗದಲ್ಲಿ ಇವರು ಸಂತಸವನ್ನು ಕಾಣುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).