ಹೆಬ್ಬೆರಳಿನ ಗಾತ್ರ ತಿಳಿಸಲಿವೆ ನಮ್ಮ ವಿಚಾರ; ವಿಶಾಲವಾದ ಹೆಬ್ಬೆರಳು ಇರುವವರ ಗುಣ ಸ್ವಭಾವ ಹೀಗಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳು ಸಮತಟ್ಟಾಗಿದ್ದರೆ ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)
ಕೆಲವರ ಅಂಗುಷ್ಟವು ಸಾಮಾನ್ಯಕ್ಕಿಂತ ವಿಶಾಲವಾಗಿರುತ್ತದೆ. ಇವರ ಜೀವನ ಸಹ ವಿಶೇಷವಾಗಿರುತ್ತದೆ. ಇವರಲ್ಲಿ ಆಕ್ರಮಣಶಾಲಿ ಗುಣವು ಕಂಡುಬರುತ್ತದೆ. ಕುಟುಂಬದ ಹಿರಿಯರಲ್ಲದೆ ಬೇರೆಯವರಿಗೂ ಹೆಚ್ಚಿನ ಗೌರವ ನೀಡುವರು. ಕೇವಲ ಸ್ವಂತ ವಿಚಾರವಲ್ಲದೆ ಬೇರೆ ಯಾರ ವಿಚಾರವೇ ಆದರೂ ಅನ್ಯಾಯ ನಡೆದ ಪಕ್ಷದಲ್ಲಿ ಹೋರಾಟಕ್ಕೆ ಸಜ್ಜಾಗುವರು. ಇವರನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ತಮ್ಮ ಹಿಂಬಾಲಕರಿಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾಗುತ್ತಾರೆ.
ಬಡಕುಟುಂಬದಲ್ಲಿ ಜನಿಸಿದರೂ ಕ್ರಮೇಣ ಸಿರಿವಂತಿಕೆ ಪಡೆಯುತ್ತಾರೆ
ಈ ಜನರು ಬಡ ಕುಟುಂಬದಲ್ಲಿ ಜನಿಸಿದರೂ ಕ್ರಮೇಣವಾಗಿ ಸಿರಿವಂತಿಕೆ ಲಭಿಸುತ್ತದೆ. ಸ್ವಂತ ಪ್ರಯತ್ನದಿಂದ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ಆದರೂ ಸಹ ಸುತ್ತಮುತ್ತಲಿನ ಪರಿಸರವನ್ನು ಸುಲಭವಾಗಿ ಬಳಸಿಕೊಳ್ಳಬಲ್ಲಿರಿ. ಯಾವುದೇ ಕ್ಷಣದಲ್ಲಿಯೂ ಬೇರೆಯವರಲ್ಲಿ ಸಹಾಯವನ್ನು ಬೇಡುವುದಿಲ್ಲ. ತಾನಾಗಿಯೇ ಒದಗಿ ಬರುವ ಸಹಾಯವನ್ನು ಸಹ ತಿರಸ್ಕರಿಸುತ್ತಾರೆ. ಇವರ ಆಕ್ರಮಣಶಾಲಿ ವ್ಯಕ್ತಿತ್ವವು ವಿರೋಧಿಗಳನ್ನು ಬೆಚ್ಚಿ ಬೀಳಿಸುತ್ತದೆ.
ಕಷ್ಟ ಅನಿಸಿದಲ್ಲಿ ಸತತ ಪ್ರಯತ್ನದಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಬೇರೆಯವರ ಅನುಭವದಿಂದ ಪಾಠ ಕಲಿಯುವ ಇವರು ಎಲ್ಲರಿಗೂ ಪ್ರೇರಣೆಯಾಗಿ ನಿಲ್ಲುತ್ತಾರೆ. ತಮ್ಮ ಸಾಧನೆ ಎಷ್ಟೇ ಇದ್ದರೂ ಅಹಂಕಾರ ಪಡದ ಜನರಿವರು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಾರೆ. ಜನಾನುರಾಗಿ ಆಗಿ ಬಾಳುತ್ತಾರೆ. ಇವರ ಸಾಧನೆಯ ಬೆನ್ನ ಹಿಂದೆ ಇರುವ ಎಲ್ಲರನ್ನು ನೆನೆಯುವ ಒಳ್ಳೆಯ ಮನಸ್ಸು ಇವರಲ್ಲಿರುತ್ತದೆ.
ಬಾಲ್ಯದಲ್ಲಿ ಆರಂಭದಲ್ಲಿ ಶಾಂತಿ ಸಹಾಯದಿಂದ ವರ್ತಿಸಿದರೂ ದಿನ ಕಳೆದಂತೆ ಕೋಪಕ್ಕೆ ದಾಸರಾಗುತ್ತಾರೆ. ಕ್ರಮೇಣವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಾನು ತನ್ನದು ಎಂಬ ಭಾವನೆ ಮೂಡುತ್ತದೆ. ಇದರ ಜೊತೆ ಸ್ವಾರ್ಥದ ಭಾವನೆಯು ಇರುತ್ತದೆ. ಯಾವುದೇ ಒತ್ತಡಕ್ಕೆ ಮಣಿಯದೆ ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಗಮನ ನೀಡುತ್ತಾರೆ. ಇವರ ವಿದ್ಯಾಭ್ಯಾಸದ ಮಟ್ಟವು ಉನ್ನತವಾಗಿರುತ್ತದೆ. ಕೇವಲ ತಾವೊಬ್ಬರೇ ಅಭ್ಯಾಸ ಮಾಡುವುದಲ್ಲದೆ ಸಹಪಾಠಿಗಳಿಗೆ ಸಹಾಯ ಮಾಡುವರು. ವಿದೇಶಕ್ಕೆ ತರಳಬೇಕಾದ ಅವಕಾಶ ದೊರೆತರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಇವರಲ್ಲಿ ವಿಶೇಷವಾದ ದೇಶಾಭಿಮಾನವಿರುತ್ತದೆ.
ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ
ಕೆಲವರು ದೇಶ ಸೇವೆಯ ಕಾರಣಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಾರೆ. ಆರಂಭಿಸಿದ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಜಯಶಾಲಿ ಆಗುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವದ ಗುಣವು ತಾನಾಗಿಯೇ ಮೂಡುತ್ತದೆ. ಬೇರೊಬ್ಬರ ಮೇಲೆ ದಬ್ಬಾಳಿಕೆ ಮಾಡದೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವರು. ಕೈ ತುಂಬ ಹಣವಿದ್ದರೂ ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ. ಸಮಾಜದ ಒಳಿತಿಗಾಗಿ ಸ್ವಂತ ಸಂಘ ಸಂಸ್ಥೆಯನ್ನು ಆರಂಭಿಸುತ್ತಾರೆ. ಇವರ ವಿವಾಹವು ಸಹ ಇವರ ಇಚ್ಛೆಯಂತೆ ನಡೆಯುತ್ತದೆ. ಸಾಮಾನ್ಯವಾಗಿ ಇವರು ತಮಗೆ ಪರಿಚಯ ಇರುವವರೊಂದಿಗೆ ಅಥವಾ ಸಂಬಂಧಿಕರ ಜೊತೆಯಲ್ಲಿ ವಿವಾಹವಾಗುತ್ತಾರೆ. ಸಂಗಾತಿಯನ್ನು ಒಳ್ಳೆಯ ಸ್ನೇಹಿತರಂತೆ ಕಾಣುತ್ತಾರೆ.
ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುತ್ತಾರೆ. ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಸುಲಭವಾಗಿ ಯಾರನ್ನು ನಂಬುವುದಿಲ್ಲ. ವಂಶದ ಆಸ್ತಿಯು ಸಾಮಾನ್ಯವಾಗಿ ಕಾನೂನಿನ ಅಂಕೆಗೆ ಒಳಪಡುವುದು. ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುವ ಜವಾಬ್ದಾರಿ ದೊರೆಯುತ್ತವೆ. ಸಣ್ಣ ಬಂಡವಾಳದ ಉದ್ದಿಮೆಯನ್ನು ಆರಂಭಿಸಿ ಆತ್ಮೀಯರ ಸುಖ ಜೀವನಕ್ಕೆ ಕಾರಣರಾಗುವರು. ತಾವು ಸಂಪಾದಿಸಿದ ಹಣ ಮತ್ತು ಆಸ್ತಿಯ ಬಹುಪಾಲು ಸಂಗಾತಿ ಮತ್ತು ಮಕ್ಕಳಿಗೆ ನೀಡುವರು. ಸ್ವಂತ ಸಂಘ ಸಂಸ್ಥೆಯ ಆಡಳಿತವು ನಿಮಗೆ ದೊರೆಯುತ್ತದೆ. ಅನಾವಶ್ಯಕವಾಗಿ ಬೇರೆಯವರನ್ನು ಆಶಯಿಸುವುದಿಲ್ಲ. ಮಹಿಳೆಯರು ಸಂಘ ಸಂಸ್ಥೆಗಳಿಗೆ ಹಣಸಹಾಯ ಮಾಡುವರು. ಜನಸೇವೆಯಲ್ಲಿ ಪಾಲ್ಗೊಳ್ಳುವರು. ವಯೋಸಹಜ ತೊಂದರೆ ಬಿಟ್ಟಲ್ಲಿ ಆರೋಗ್ಯದ ವಿಚಾರದಲ್ಲಿ ಗಟ್ಟಿಗರು. ತಾವು ಸಂಪಾದಿಸಿದ ಕೀರ್ತಿ ಪ್ರತಿಷ್ಠೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ಆಡಂಬರದ ಜೀವನ ಇವರಿಗೆ ಇಷ್ಟವಾಗದು. ಇವರಿಗೆ ಸಂತೃಪ್ತಿಯ ಜೀವನ ಇರಲಿದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).