ತೋರು ಬೆರಳಿಗೆ ಸಮವಿರುವಂತೆ ಹೆಬ್ಬೆರಳು ಹೊಂದಿರುವವರ ಸ್ವಭಾವ ಹೇಗಿರುತ್ತದೆ; ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಹೇಳಲಾಗಿದೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳು, ತೋರು ಬೆರಳಿಗೆ ಸಮವಾಗಿರುವಂತೆ ಇರುವವರ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)

ಹೆಬ್ಬೆರಳು ಸಾಮಾನ್ಯಕ್ಕಿಂತ ದಪ್ಪವಾಗಿರುತ್ತದೆ. ಗುರುಬೆರಳು (ತೋರು ಬೆರಳು) ಸರಿ ಸಮಾನವಾಗಿ ಇರುವಂತೆ ಕಾಣುತ್ತದೆ. ಇಂತಹವರು ಸಮಾಜದಲ್ಲಿ ಅತಿ ಮುಖ್ಯವಾದ ಸ್ಥಾನವನ್ನು ಗಳಿಸುತ್ತಾರೆ. ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡಲು ಇವರ ಮನಸ್ಸು ಒಪ್ಪುವುದಿಲ್ಲ. ಮನಸ್ಸಿನಲ್ಲಿ ಇರುವುದು ಒಂದು ಆಡುವ ಮಾತು ಒಂದು ಎನ್ನುವ ಗುಂಪಿಗೆ ಸೇರುವುದಿಲ್ಲ. ಒಮ್ಮೆ ಇವರು ಯಾವುದೇ ವಿಚಾರದಲ್ಲಿ ಭರವಸೆ ನೀಡಿದರೆ ಆಪತ್ತನ್ನು ಲೆಕ್ಕಿಸದೆ ಮಾತನ್ನು ಉಳಿಸಿಕೊಳ್ಳುತ್ತಾರೆ.
ಬಾಲ್ಯದಲ್ಲಿ ಕಷ್ಟಪಟ್ಟು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ
ಇಂಥ ಜನರಿಗೆ ಅಧಿಕಾರದ ಆಸೆ ಇರುವುದಿಲ್ಲ. ಆದರೆ ತಾನಾಗಿಯೇ ಅದನ್ನು ತಿರಸ್ಕರಿಸುವುದಿಲ್ಲ. ಆಪತ್ತಿನಲ್ಲಿರುವವರಿಗೆ ಸಾವಾಗಿಯೇ ಸಹಾಯ ಸಹಕಾರ ನೀಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕಷ್ಟದ ಜೀವನವನ್ನು ಅನುಭವಿಸಿರುತ್ತಾರೆ. ಆತ್ಮೀಯರ ಸಹಾಯದಿಂದ ಮತ್ತು ಆತ್ಮಬಲದಿಂದ ಜೀವನದಲ್ಲಿ ಪ್ರಗತಿ ಕಾಣುತ್ತಾರೆ. ಉತ್ತಮ ವಿದ್ಯೆ ಇರುತ್ತದೆ. ಆದರೆ ಇವರಲ್ಲಿರುವ ಬುದ್ಧಿ ಶಕ್ತಿಯೇ ಹೆಚ್ಚಾಗಿರುತ್ತದೆ. ಸಮಾಜದಲ್ಲಿ ಬಹಳ ಜನಪ್ರಿಯತೆ ಗಳಿಸುತ್ತಾರೆ.
ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ರಾಜಕೀಯ ವ್ಯಕ್ತಿಗಳು ಸಹ ಇವರ ಸ್ನೇಹಕ್ಕೆ ಹಾತೊರೆಯುತ್ತಾರೆ. ಒಮ್ಮೆ ಮನಸ್ಸಿನಲ್ಲಿ ನಿರ್ಧರಿಸಿದರೆ ಅಪಾಯವನ್ನೂ ಲೆಕ್ಕಿಸದೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ತಮ್ಮಲ್ಲಿರುವ ಆಸ್ತಿಯ ಬಹುಪಾಲು ಬಡವರಿಗಾಗಿ ಮೀಸಲು ಇರುತ್ತಾರೆ. ಸಾಮಾನ್ಯವಾಗಿ ಇವರು ಯಾವುದೇ ತಪ್ಪನ್ನು ಮಾಡುವುದಿಲ್ಲ. ಹಾಗೆಯೇ ತಪ್ಪು ಮಾಡಿದವರನ್ನು ಶಿಕ್ಷಿಸದೆ ವಿಶ್ವಾಸದಿಂದ ಸರಿಪಡಿಸುತ್ತಾರೆ.
ಸರಳ ಜೀವನ ಇಷ್ಟಪಡುತ್ತಾರೆ
ವಿವಾಹದ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಮನೆಯ ಹಿರಿಯರು ನಿರ್ಧರಿಸಿದ ವ್ಯಕ್ತಿಯೊಂದಿಗೆ ವಿವಾಹವಾಗುವರು. ಸರಳ ಜೀವನವನ್ನು ನಡೆಸಲು ಸದಾ ಪ್ರಯತ್ನಿಸುತ್ತಾರೆ. ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ದಾನ ಧರ್ಮದ ಕೆಲಸ ಮಾಡುವ ಹಂಬಲವಿರುತ್ತದೆ. ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಸಂಗಾತಿಯ ಸಲಹೆ ಸೂಚನೆಯನ್ನು ಪಡೆಯುತ್ತಾರೆ. ಸರಳ ವ್ಯಕ್ತಿತ್ವ ಇರುವ ಇವರ ಮುಖದಲ್ಲಿ ವಿಶೇಷ ತೇಜಸ್ಸು ತುಂಬಿರುತ್ತದೆ. ಇವರಿಗೆ ವಿಶಾಲವಾದ ಮನಸ್ಸಿರುತ್ತದೆ. ಸಾಧ್ಯವಾದಷ್ಟು ಸತ್ಯ ಹೇಳಲು ಪ್ರಯತ್ನಿಸುತ್ತಾರೆ. ಇವರಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ.
ನಿಧಾನವಾದರೂ ತಮ್ಮ ಕುಟುಂಬ ವರ್ಗಕ್ಕೆ ಬೇಕಾದ ಸಂಪೂರ್ಣ ಅನುಕೂಲಗಳನ್ನು ಕಲ್ಪಿಸುತ್ತಾರೆ. ಇವರಿಗೆ ಅನೇಕ ಅಗೋಚರ ವಿಚಾರಗಳು ತಿಳಿದಿರುತ್ತದೆ. ಇಂತಹವರು ವೇದ ಜೋತಿಷ್ಯಗಳಲ್ಲಿ ಹೆಚ್ಚಿನ ನಂಬಿಕೆ ಇಟ್ಟಿರುತ್ತಾರೆ. ಅದರ ಅಧ್ಯಯನವನ್ನು ಸಹಮಾಡಲು ಇಚ್ಚಿಸುತ್ತಾರೆ. ಅಧಿಕಾರಿಗಳಾದರೂ ಇವರಲ್ಲಿ ಗರ್ವದ ಗುಣ ಇರುವುದಿಲ್ಲ. ನಷ್ಟದಲ್ಲಿ ಇರುವ ಉದ್ಯಮನ್ನು ಲಾಭದ ಕಡೆ ನಡೆಸುವ ಚಾಣಾಕ್ಷತೆ ಇವರಲ್ಲಿ ಇರುತ್ತದೆ. ಜನರಿಗೆ ಬುದ್ಧಿವಾದ ಹೇಳುವುದರಲ್ಲಿ ಇವರು ಮೊದಲಿಗರು. ಕಷ್ಟ ವನ್ನು ಲೆಕ್ಕಿಸದೆ ಜೀವನದಲ್ಲಿ ಮುಂದುವರೆಯುತ್ತಾರೆ.
ಸಂಘಸಂಸ್ಥೆಗಳನ್ನು ಆರಂಭಿಸುತ್ತಾರೆ
ಮಕ್ಕಳ ಜೀವನಕ್ಕೆ ಉತ್ತಮ ಬುನಾದಿ ಹಾಕುವರು. ಬೇರೆಯವರ ಸಹಾಯವಿಲ್ಲದೆ ನಿಮ್ಮ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಿಸಬಲ್ಲರು. ಇಳಿ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಒಳ್ಳೆಯದಾದರೂ ಅವರಿಗೆ ತೊಂದರೆಯಾಗಬಹುದೆಂಬ ಭಾವನೆಯಿಂದ ದೂರ ಉಳಿಯುವಿರಿ. ಸ್ವತಂತ್ರವಾಗಿ ಜೀವನ ನಡೆಸಬೇಕೆಂಬ ಹಟ ಇರುತ್ತದೆ. ವಂಶಾಧಾರಿತ ಉದ್ಯೋಗ ಅಥವಾ ವ್ಯಾಪಾರದ ಸಹಾಯದಿಂದ ಉತ್ತಮ ಹಣ ಗಳಿಸುವರು. ಕೆಲವೊಮ್ಮೆ ಇವರಲ್ಲಿ ಚಂಚಲದ ಬುದ್ಧಿ ಕಾಣಬಹುದು. ಧಾರ್ಮಿಕ ಕೇಂದ್ರಗಳು, ದಾಂಪತ್ಯ ಸಲಹಾ ಕೇಂದ್ರದಂತಹ ಸೇವಾ ನಿರತ ಸಂಸ್ಥೆಗಳ ಆಡಳಿತ ದೊರೆಯುತ್ತದೆ. ಸಣ್ಣಪುಟ್ಟ ವಾಹನಗಳು ಇದ್ದರೂ ಐಷಾರಾಮಿ ವಾಹನವನ್ನು ಕೊಳ್ಳುವ ಆಸೆ ಇವರಲ್ಲಿ ಇರುತ್ತದೆ.
ಬೇರೆಯವರ ತಪ್ಪನ್ನು ತಮ್ಮದೆಂದು ಒಪ್ಪಿಕೊಳ್ಳುವ ಧೈರ್ಯವಿರುತ್ತದೆ. ಮಧ್ಯ ವಯಸ್ಸು ದಾಟಿದ ನಂತರ ಉದ್ಯೋಗ ಮಾಡಲು ಇಷ್ಟಪಡುವುದಿಲ್ಲ. ಆನಂತರ ಜನಸೇವೆ ಮಾಡುವ ಆಸೆಯಿಂದ ಸಂಘ ಸಂಸ್ಥೆಗಳನ್ನು ಆರಂಭಿಸುತ್ತಾರೆ. ವಿಶೇಷ ಕಲಾ ಪ್ರೌಢಿಮೆ ಇವರಲ್ಲಿ ಇರುತ್ತದೆ. ಇವರಿಗೆ ದೊರೆಯದ ಅನುಕೂಲತೆಗಳನ್ನು ಬೇರೆಯವರಿಗೆ ದೊರೆಯುವಂತೆ ಮಾಡುತ್ತಾರೆ. ನೆರೆಹೊರೆಯ ಮನಸ್ಸಿನಲ್ಲಿ ಉತ್ತಮ ಸ್ಥಾನವಿರುತ್ತದೆ. ಇವರ ಜೀವನದ ಕೊನೆಯ ದಿನದವರೆಗೂ ಯಾವುದಾದರೂ ಒಂದು ವಿಷಯದ ಅಧ್ಯಯನದಲ್ಲಿ ಮುಳುಗಿರುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
