ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಮಧ್ಯದ ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಮಧ್ಯದ ಬೆರಳಿನ ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್, ಜ್ಯೋತಿಷಿ)
ನಮ್ಮ ಕೈಯಲ್ಲಿರುವ ಮಧ್ಯದ ಬೆರಳನ್ನು ಶನಿಬೆರಳು ಎಂದು ಕರೆಯುತ್ತೇವೆ. ಈ ಬೆರಳಿನ ಅಕ್ಕಪಕ್ಕದಲ್ಲಿ ಸೂರ್ಯನ ಬೆರಳು ಮತ್ತು ಗುರುವಿನ ಬೆರಳುಗಳಿವೆ. ಅಂದರೆ ಶನಿಯ ಬೆರಳನ್ನು ವಿಶ್ಲೇಷಣೆ ಮಾಡುವ ವೇಳೆ ಸೂರ್ಯನ ಬೆರಳು ಮತ್ತು ಗುರುವಿನ ಬೆರಳುಗಳು ಸಹ ಅಗತ್ಯವಾಗುತ್ತದೆ. ಶನಿಯು ಕರ್ಮಕಾರಕ ಅಂದರೆ ಉದ್ಯೋಗವನ್ನು ಸೂಚಿಸುತ್ತಾನೆ. ಯಾವುದೇ ಉದ್ಯೋಗವಾದರೂ ಅದರ ಬಗ್ಗೆ ಜ್ಞಾನವಿರಬೇಕು. ಹಾಗೆಯೇ ಆತ್ಮವಿಶ್ವಾಸ ಮತ್ತು ಅಧಿಕಾರಿಗಳ ಸಹಾಯವಿರಬೇಕು. ಜ್ಞಾನಕಾರಕ ಗುರು ಮತ್ತು ಆತ್ಮವಿಶ್ವಾಸ ನೀಡುವ ಮತ್ತು ಅಧಿಕಾರಿಗಳನ್ನು ಸೂಚಿಸುವ ರವಿಯು ಅಗತ್ಯವಾಗಿ ಸುಸ್ಥಿತಿಯಲ್ಲಿ ಇರಬೇಕು.
ಇದೇ ರೀತಿ ಶನಿಯು ಆಯುಷ್ಕಾರಕ ಅಂದರೆ ನಮ್ಮ ಆರೋಗ್ಯಕ್ಕೂ ಪರೋಕ್ಷ ಸಂಬಂಧವಿರುತ್ತದೆ. ಈ ರೀತಿಯಲ್ಲಿಯೂ ಶನಿಗೆ ಆರೋಗ್ಯ ಕಾರಕನಾದ ರವಿ ಮತ್ತು ಆರೋಗ್ಯವನ್ನು ಉಳಿಸುವ ಗುರುವಿನ ಸಹಕಾರ ಬೇಕಾಗುತ್ತದೆ. ಶನಿ ಬೆರಳು ಮಧ್ಯಮವಾಗಿದ್ದಲ್ಲಿ ಸುಲಭಮಾರ್ಗದಲ್ಲಿ ಜೀವನವನ್ನು ನಡೆಸುತ್ತಾರೆ. ಇವರು ಸಮಾಜದ ಕಟ್ಟುಪಾಡುಗಳನ್ನು ಗೌರವಿಸುತ್ತಾರೆ. ಇವರಿಗೆ ವಹಿಸುವ ಕೆಲಸ ಕಾರ್ಯಗಳು ಚಿಕ್ಕದಾಗಲಿ ಅಥವ ದೊಡ್ಡದಾಗಲಿ ಒಂದೇ ಭಾವನೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಧಾರ್ಮಿಕವಾದಿಗಳು ಹೌದು .ಈ ಕಾರಣದಿಂದಾಗಿ ಇವರ ಮೇಲೆ ಎಲ್ಲರ ನಂಬಿಕೆ ಇರುತ್ತದೆ. ಆದರೆ ಇವರು ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ.
ಶನಿಯ ಬೆರಳು ಸಾಮಾನ್ಯ ಅಳತೆಗಿಂತ ಉದ್ದವಾಗಿದ್ದರೆ, ಇವರು ಒಂದು ರೀತಿಯ ವಿಚಿತ್ರ ಸ್ವಭಾವವನ್ನು ಹೊಂದಿರುತ್ತಾರೆ. ಯಾರನ್ನೂ ಇವರು ಸುಲಭವಾಗಿ ನಂಬುವುದಿಲ್ಲ. ಕುಟುಂಬದವರ ಮೇಲು ಸಂದೇಹವನ್ನೇ ಹೊಂದಿರುತ್ತಾರೆ. ಮಾಡಲೇಬೇಕಾದ ಕೆಲಸ ಕಾರ್ಯಗಳನ್ನು ಸಹ ಅಂಜಿಕೆಯಿಂದಲೇ ಆರಂಭಿಸುತ್ತಾರೆ. ಆದ್ದರಿಂದ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸು ಇವರಿಗೆ ದೊರೆಯುವುದಿಲ್ಲ. ಸಣ್ಣ ಪುಟ್ಟ ಕೆಲಸಗಳಾದರು ಬೇರೆಯವರ ಮೇಲೆ ಅವಲಂಬಿತರಾಗುತ್ತಾರೆ.
ಇವರು ಅಧಿಕಾರಿಗಳು ಹೇಳುವ ಕೆಲಸವನ್ನಷ್ಟೇ ಮಾಡುತ್ತಾರೆ
ಉದ್ಯೋಗದಲ್ಲಿ ಕೇವಲ ಅಧಿಕಾರಿಗಳು ಹೇಳುವ ಕೆಲಸವನ್ನಷ್ಟೇ ಮಾಡುತ್ತಾರೆ. ಸ್ವಂತ ತೀರ್ಮಾನಗಳಿಂದ ಯಾವುದೇ ಜವಾಬ್ದಾರಿಯನ್ನು ಪೂರ್ಣಗೊಳಿಸುವುದಿಲ್ಲ. ಬಾಳ ಸಂಗಾತಿಯೊಂದಿಗೆ ಅನಗತ್ಯವಾದ ವಾದ ವಿವಾದವನ್ನು ಮಾಡುತ್ತಾರೆ. ಬಂಧು-ಬಳಗದವರನ್ನು ನಂಬುವಷ್ಟು ಸೋದರ ಸೋದರಿಯರನ್ನು ನಂಬುವುದಿಲ್ಲ. ಈ ಕಾರಣದಿಂದ ಕುಟುಂಬದಲ್ಲಿ ಸದಾ ಕಾಲ ಬಿಗುವಿನ ವಾತಾವರಣ ಇರುತ್ತದೆ.
ಇವರಿಗೆ ಕೋಪ ಬಂದಲ್ಲಿ ಬೇಗ ಶಾಂತರಾಗುವುದಿಲ್ಲ. ಇವರ ಕೋಪವನ್ನು ಕಡಿಮೆ ಮಾಡಲು ಇವರ ಮಕ್ಕಳೆ ಬರಬೇಕು. ಮಕ್ಕಳಲ್ಲಿಯೂ ಸಹ ಮಗನಿಗಿಂತ ಮಗಳ ಮೇಲೆ ಪ್ರೀತಿ ಹೆಚ್ಚು. ಆತ್ಮವಿಶ್ವಾಸ ಇಲ್ಲದ ಕಾರಣ ತಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಬೇರೆಯವರು ಮಾಡಬೇಕಾದ ಕೆಲಸ ಕಾರ್ಯದ ಹೊಣೆ ಇವರಿಗೆ ದೊರೆಯುತ್ತದೆ. ಶಾಂತಿ ಸಹನೆಯಿಂದ ವರ್ತಿಸಿದಲ್ಲಿ ಮಾತ್ರ ಇವರ ಜೀವನ ಸುಖಮಯವಾಗಿರುತ್ತದೆ.
ಶನಿ ಬೆರಳು ಸಾಮಾನ್ಯ ಅಳೆತೆಗಿಂತ ಚಿಕ್ಕದಾಗಿದ್ದಲ್ಲಿ ಅಂತಹವರ ಜೀವನ ಸಾಮಾನ್ಯ ಮಟ್ಟವಾಗಿರುತ್ತದೆ. ಇವರ ಮೊದಲ ಆದ್ಯತೆ ರುಚಿಕರವಾದ ಊಟ ಮತ್ತು ಸುಖಕರವಾದ ನಿದ್ದೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು ವಿಶ್ರಾಂತಿಯನ್ನು ತೆಗೆದುಕೊಳ್ಳುವುದನ್ನು ಮರೆಯುವುದಿಲ್ಲ. ಇವರಿಗೆ ಸೋಮಾರಿತನ ವಿರುವುದಿಲ್ಲ. ಆದರೆ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆತ್ಮಸ್ಥೈರ್ಯವಿರುವುದಿಲ್ಲ. ಬೇರೆಯವರ ಸಹಾಯವಿಲ್ಲದೆ ಇವರ ಜೀವನವು ಶೂನ್ಯವಾಗುತ್ತದೆ. ಆದರೆ ಬೆರಳು ತೋರಿಸಿದರೆ ಹಸ್ತ ನಿಂಗುವ ಬುದ್ಧಿ ಇವರಿಗೆ ಇರುತ್ತದೆ. ಬೇರೆಯವರ ಸಹಾಯದಿಂದ ಆರಂಭಿಸುವ ಕೆಲಸವನ್ನು ಏಕಾಂಗಿಯಾಗಿ ಪೂರ್ಣಗೊಳಿಸುತ್ತಾರೆ. ಇದಕ್ಕೆ ಕಾರಣ ಇವರ ಜೊತೆ ಸಹಕರಿಸುವ ವ್ಯಕ್ತಿ.
ಆರೋಗ್ಯದಲ್ಲಿ ಪದೇಪದೇ ತೊಂದರೆ ಕಂಡು ಬರುತ್ತದೆ. ಯೋಗ ಪ್ರಾಣಾಯಾಮದಂತಹ ದೈಹಿಕ ವ್ಯಾಯಾಮದಿಂದ ಮಾತ್ರ ಉತ್ತಮ ಆರೋಗ್ಯವನ್ನು ಗಳಿಸಲು ಸಾಧ್ಯ. ಕನಿಷ್ಠ ಪಕ್ಷ ಇವರು ವೇಗದ ನಡಿಗೆಯ ಅಭ್ಯಾಸ ಮಾಡಬೇಕು. ಇವರ ಹಿರಿಯ ಸೋದರ ಅಥವಾ ಹಿರಿಯ ಸೋದರಿಯ ಮೇಲೆ ಅಪರಿಮಿತವಾದ ಪ್ರೀತಿ ವಿಶ್ವಾಸ ಗೌರವವಿರುತ್ತದೆ. ಇವರ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಮಕ್ಕಳಿಗೆ ನೀಡಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನುನೀಡುತ್ತಾರೆ. ವಾಹನಗಳ ಮೇಲೆ ಅತಿಯಾದ ಪ್ರೀತಿ ಇರುತ್ತದೆ. ಆದ್ದರಿಂದ ಇವರ ಬಳಿ ಹಲವು ವಾಹನಗಳು ಇರುತ್ತವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)